ಇತ್ತೀಚೆಗೆ ರಾಜಕಾರಣಿಗಳು ಅಥವಾ ಅವರ ಮಕ್ಕಳು ಅಧಿಕಾರೀ ವರ್ಗದೊಂದಿಗೆ ಸಂಘರ್ಷಕ್ಕೆ ಇಳಿದ ಸುದ್ದಿಗಳು ಆಗಾಗ ಕೇಳಿಬರುತ್ತಿವೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಕೈಲಾಶ್ ವಿಜಯ ವರ್ಗೀಯ ಇವರ ಮಗ ಇಂದೋರ್ನ ಎಮ್ಎಲ್ಎಯೂ ಆಗಿರುವ ಆಕಾಶ್ ವಿಜಯ ವರ್ಗೀಯ, ಮುನಿಸಿಪಾಲಿಟಿ ಅಧಿಕಾರಿಯ ಮೇಲೆ ಬ್ಯಾಟ್ನಿಂದ ಹಲ್ಲೆ ಮಾಡಿದ ಪ್ರಕರಣವು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಈ ಘಟನೆಯನ್ನು ಖಂಡಿಸಿ ದುರಹಂಕಾರದ, ಸೊಕ್ಕಿನ ನಾಯಕರು ಬಿಜೆಪಿಗೆ ಬೇಡ, ಅಪರಾಧಿ ಯಾರ ಮಗ ಎನ್ನುವುದು ನನಗೆ ಮುಖ್ಯವಲ್ಲ, ಅಪರಾಧಿಯ ಮೇಲೆ ಸರಿಯಾದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅಥವಾ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ನಂತವರು ಅಧಿಕಾರೀ ವರ್ಗದೊಂದಿಗೆ ಸಂಘರ್ಷಕ್ಕೆ ಇಳಿಯುತ್ತಿರುವ ಸುದ್ದಿ ಮಾಮೂಲಿ. ಕೊಲ್ಕತ್ತಾ ಸರ್ಕಾರೀ ಆರ್ಸ್ಪತ್ರೆಯಲ್ಲಿ ಡ್ಯೂಟಿ ಡಾಕ್ಟರ್ ಒಬ್ಬರ ಮೇಲೆ ರೋಗಿಯ ಸಂಬಂಧಿಕರು ಆಕ್ರಮಣ ಮಾಡಿದ ವಿಚಾರವಾಗಿ ಇಡೀ ಪಶ್ಚಿಮ ಬಂಗಾಲದ ರಾಜ್ಯದ ವೈದ್ಯರುಗಳೆಲ್ಲಾ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ನಿಂತಿದ್ದರು. ಮಮತಾ ಮುಷ್ಕರ ನಿರತ ವೈದ್ಯರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದರೂ ವೈದ್ಯರು ಜಗ್ಗದೆ ಸತತ ಐದು ದಿನಗಳ ಕಾಲ ಮುಷ್ಕರ ಹೂಡಿದುದರಿಂದ, ವೈದ್ಯರಿಗೆ ರಾಷ್ಟ್ರವ್ಯಾಪೀ ಬೆಂಬಲ ದೊರಕಿದುದರಿಂದ ಕೊನೆಗೆ ಮಮತಾ ಬ್ಯಾನರ್ಜಿಯೇ ವೈದ್ಯರ ಬೇಡಿಕೆಗಳಿಗೆ ಶರಣಾಗಬೇಕಾಯಿತು. ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲರಿಗೆ ಅಧಿಕಾರೀ ವರ್ಗದೊಡಗಿನ ಸಂಘರ್ಷ ನಿತ್ಯದ ಕಾಯಕ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಹಾಗೂ ದೆಹಲಿಯ ಪೊಲಿಸ್ ಇವರೊಡನೆ ಕೇಜ್ರೀವಾಲ್ ನಿತ್ಯ ಬೀದಿ ಜಗಳ ಮಾಡುತ್ತಿದ್ದಾರೆ.
ಮೊನ್ನೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಇವರು ಪುತ್ತೂರಿನ ಸರಕಾರೀ ಆಸ್ಪತ್ರೆಯ ವೈದ್ಯೆ ಡಾ. ಅರ್ಚನಾ ಕರಿಕಳ ಇವರ ಮೇಲೆ ಸಾರ್ವಜನಿಕವಾಗಿ ಹರಿ ಹಾಯ್ದ ಪ್ರಕರಣದ ಹಿನ್ನೆಲೆಯಲ್ಲಿ ಮೇಲಿನ ವಿಚಾರವನ್ನು ಪ್ರಸ್ತಾಪಿಸಬೇಕಾಯಿತು. ಡಾ. ಅರ್ಚನಾ ಅವರು ಪುತ್ತೂರು ಪರಿಸರದಲ್ಲಿ ಜನಸ್ನೇಹಿ ವೈದ್ಯೆಯೆಂದೇ ಗುರುತಿಸಲ್ಪಟ್ಟವರು. ತಾನು ಕರೆದ ತಕ್ಷಣ ವೈದ್ಯೆ ಬರಲಿಲ್ಲವೆಂಬ ಕಾರಣವನ್ನು ಹಿಡಿದು ವೈದ್ಯೆಯನ್ನು ಅಧ್ಯಕ್ಷೆ ನಿಂದಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತಾನು ಬೇರೆ ರೋಗಿಯನ್ನು ನೋಡುತ್ತಿದ್ದುದರಿಂದ ತಕ್ಷಣ ಬರಲು ಸಾಧ್ಯವಾಗಿಲ್ಲ ಎಂದು ವೈದ್ಯೆ ಹೇಳಿದುದನ್ನೂ ಕಿವಿಗೆ ಹಾಕಿಕೊಳ್ಳದೆ, ವೈದ್ಯೆಯನ್ನು ಬೈದ ಅಧ್ಯಕ್ಷೆಯ ನಡವಳಿಕೆಗೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಜನಪ್ರತಿನಿಧಿಗಳು ಅಧಿಕಾರೀ ವರ್ಗದೊಡನೆ ಸಾರ್ವಜನಿಕವಾಗಿ ಸಂಘರ್ಷಕ್ಕಿಳಿಯುವುದು ಅವರ ಹುದ್ದೆಗೆ ಒಂದಿನಿತೂ ಶೋಭೆ ತರದು. ಸರಕಾರೀ ಅಧಿಕಾರಿಯೋರ್ವ ತಪ್ಪು ಮಾಡುತ್ತಿದ್ದರೆ ಅವರ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೇ ವಿನಹ ತಾನೇ ಅವರ ಮೇಲೆ ಏರಿ ಹೋಗುವುದು, ಜಬರ್ದಸ್ತಿ ಮಾಡುವುದು, ಹಲ್ಲೆ ಮಾಡುವುದು ಮುಂತಾದ ರೀತಿಯಲ್ಲಿ ವರ್ತಿಸಿದರೆ ವ್ಯವಸ್ಥೆ ಸರಿ ಹೋಗದು. ತಾವು ಅಧಿಕಾರಿಗಳೊಡನೆ ಕಟುವಾಗಿ ವರ್ತಿಸುತ್ತಿರುವ ಘಟನೆಗಳನ್ನು ತಮ್ಮ ಹಿಂಬಾಲಕರಿಂದ ವೀಡಿಯೋ ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದು ಎಳ್ಳಷ್ಟೂ ಸರಿಯಲ್ಲ.
ಈ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯವರು ಸ್ವತಃ ಪ್ರತಿನಿಧಿಸುತ್ತಿರುವ ಭಾಜಪ ಪಕ್ಷದ ಮೇಲ್ಮಟ್ಟದ ನಾಯಕರಾದ ವಾಜಪೇಯಿ, ಆಡ್ವಾಣಿ, ನರೇಂದ್ರ ಮೋದಿ ಮುಂತಾದವರ ವರ್ತನೆಯನ್ನು ನೋಡಿ ತನ್ನ ವರ್ತನೆಯನ್ನು ತಿದ್ದಿಕೊಳ್ಳುವ ಅವಶ್ಯಕತೆ ಇದೆ. ನರೇಂದ್ರ ಮೋದಿ 2014 ರಲ್ಲಿ ಪ್ರಧಾನ ಮಂತ್ರಿಯಾದಾಗ, ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಮನಮೋಹನ್ ಸಿಂಗ್ ಕಾಲಾವಧಿಯಲ್ಲಿ ಯಾವ ಅಧಿಕಾರಿಗಳು ಇದ್ದರೋ ಅವರನ್ನೇ ಮುಂದುವರಿಸಿದರು (ಸಾಮಾನ್ಯವಾಗಿ ಸರಕಾರ ಬದಲುವಾಗ ಕಚೇರಿಯ ಹಿಂದಿನ ಸಿಬ್ಬಂದಿಗಳನ್ನೆಲ್ಲಾ ಬೇರೆಡೆಗೆ ವರ್ಗಾಯಿಸಿ ಆಯಕಟ್ಟಿನ ಸ್ಥಳಗಳಿಗೆ ತಮಗೆ ಬೇಕಾದವರನ್ನೇ ಹಾಕಿಸಿಕೊಳ್ಳುವ ಪರಿಪಾಠ ಸರ್ವೇ ಸಾಮಾನ್ಯ). ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳನ್ನು ನಿಂದಿಸುವುದಾಗಲಿ, ದೂರುವುದಾಗಲೀ ಎಂದೂ ಮಾಡಿಲ್ಲ ನರೇಂದ್ರ ಮೋದಿ. ಬದಲಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಪ್ರೋತ್ಸಾಹ ಕೊಟ್ಟರು. ಅದೇ ಹಳೇ ಸಿಬ್ಬಂದಿಗಳೊಡನೆ ಪ್ರಧಾನ ಮಂತ್ರಿ ಕಾರ್ಯಾಲಯವಿಂದು ದೇಶದ ಅತೀ ಹೆಚ್ಚು ಜವಾಬ್ದಾರಿಯಿಂದ, ಚಟುವಟಿಕೆಯಿಂದ ನಡೆದುಕೊಳ್ಳುವ ಕಾರ್ಯಾಲಯವಾಗಿ ಪರಿವರ್ತಿತವಾಗಿದೆ.
ಬಿಜೆಪಿಯ ಸ್ಥಳೀಯ ನಾಯಕರು ಹಾಗೂ ಜನಪ್ರತಿನಿಧಿಗಳು ತಮ್ಮ ಪಕ್ಷದ ಮುಖ್ಯಸ್ಥರು ಪಾಲಿಸುತ್ತಿರುವ ಆದರ್ಶವನ್ನು ಪಾಲಿಸುವುದನ್ನು ಕಲಿಯಬೇಕಾಗಿದೆ. ಅಧಿಕಾರೀ ವರ್ಗದೊಂದಿಗೆ ಸಂಘರ್ಷಕ್ಕಿಳಿಯದೆ, ಅವರೊಡನೆ ಸಮನ್ವಯತೆಯನ್ನು ಸಾಧಿಸಿ ಅವರನ್ನು ಹೆಚ್ಚು ಕ್ರಿಯಾಶೀಲರನ್ನಾಗಿಸುವೆಡೆಗೆ ಪ್ರಯತ್ನವನ್ನು ಮಾಡುವುದು ಒಳಿತು. ಇಲ್ಲವಾದರೆ ಗೂಂಡಾ ರಾಜಕಾರಣಿಗಳಿಗೂ ಇವರಿಗೂ ವ್ಯತ್ಯಾಸವೇ ಇಲ್ಲದಂತಾಗುವುದು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಜನರು ಸ್ವಾಭಾವಿಕವಾಗಿ ಮೃದು ಭಾಷಿಕರು ಹಾಗೂ ಸೂಕ್ಷ್ಮ ಮನಃಸ್ಥಿತಿಯವರು. ಇಲ್ಲಿ ಸಾಮಾನ್ಯ ಜನರನ್ನಾಗಲೀ, ಅಧಿಕಾರಿಗಳನ್ನಾಗಲಿ ಬೈದು ಗದ್ದಲ ಎಬ್ಬಿಸಬೇಕಾದ ಆವಶ್ಯಕತೆ ಇಲ್ಲ. ಸೂಕ್ಷ್ಮವಾಗಿ ಹೇಳಿದರೂ ಅರ್ಥ ಮಾಡಿಕೊಳ್ಳುತ್ತಾರೆ. ಇದೆಲ್ಲಾ ಬಿಟ್ಟು ತಕ್ಷಣದ ಪ್ರಸಿದ್ಧಿಗೋಸ್ಕರ ಅಧಿಕಾರಿಗಳ ಮೇಲೆ ಸವಾರಿ ಮಾಡುವುದನ್ನು ದಕ್ಷಿಣ ಕನ್ನಡಿಗರು ಇಷ್ಟ ಪಡರು. ಇಲ್ಲಿ ಪ್ರಜ್ಞಾವಂತ ಮತದಾರರು ಇಂತಹ ನಾಯಕರಿಗೆ ನಿನ್ನೆ ಓಟ್ ಹಾಕಿದ್ದರೂ, ನಾಳೆ ಓಟ್ ಹಾಕದೆಯೂ ಇರಬಹುದು.
✍ ಗಣೇಶ್ ಭಟ್ ವಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.