ಲಂಡನ್: ಪಾಕಿಸ್ಥಾನದ ಸರ್ಕಾರಿ ಪ್ರಾಯೋಜಿತ “ಬೃಹತ್ ಮಟ್ಟದ ಭಯೋತ್ಪಾದನಾ ಉದ್ಯಮ”ವು ಅಲ್ಲಿನ ಸರ್ಕಾರವನ್ನು ಸಹಜವಾಗಿ ವರ್ತಿಸುವುದರಿಂದ ತಡೆಯುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಹೇಳಿದ್ದಾರೆ.
ಲಂಡನ್ನಿನ ಬಕಿಂಘಮ್ಶಿರೆಯಲ್ಲಿ ನಡೆದ ಯುಕೆ-ಇಂಡಿಯಾ ವೀಕ್ ಭಾಗವಾಗಿ ಜರುಗಿದ ಲೀಡರ್ಸ್ ಸಮಿತ್ ಅನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಜೈಶಂಕರ್ ಅವರು ಮಾತನಾಡಿದರು.
‘ಪಾಕಿಸ್ಥಾನ ಇಂದು ಮಾಡುತ್ತಿರುವ ಕೃತ್ಯಗಳಿಂದ ಯುಕೆ ಸೇರಿದಂತೆ ಇಡೀ ವಿಶ್ವದ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಅವರು, ಭಯೋತ್ಪಾದನೆಯನ್ನು ನೆರೆಯ ರಾಷ್ಟ್ರದ ವಿರುದ್ಧ ತನ್ನ ಅಸ್ತ್ರ ಎಂದು ಭಾವಿಸಿರುವ ಪಾಕಿಸ್ಥಾನ ತನ್ನ ಕೃಪಾಕಟಾಕ್ಷದೊಂದಿಗೆ ‘ಬೃಹತ್ ಭಯೋತ್ಪಾದನಾ ಉದ್ಯಮ’ವನ್ನು ಬೆಳೆಸಿದೆ. ಭಾರತ ಅದರ ಈ ಧೋರಣೆಯನ್ನು ಕಟುವಾಗಿ ಖಂಡಿಸಿದ್ದು, ವಿವಿಧ ದೇಶಗಳು ಕೂಡ ಇದೇ ಅಭಿಪ್ರಾಯಕ್ಕೆ ಬಂದಿವೆ ಎಂದಿದ್ದಾರೆ.
“ಪಾಕಿಸ್ಥಾನ ಸಹಜ ದೇಶವಾಗಿ ಮತ್ತು ಸಹಜ ನೆರೆಹೊರೆಯಾಗಿ ವರ್ತಿಸಲು ಸಿದ್ಧವಾಗಿದೆಯೇ ಎಂಬುದು ಈಗಿನ ದೊಡ್ಡ ಸಮಸ್ಯೆ ಎಂದು ನನಗನಿಸುತ್ತದೆ. ವಿಶ್ವದ ಯಾವುದೇ ಮೂಲೆಯಲ್ಲೂ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ದೇಶ ಇರಬಹುದು ಎಂದು ನನಗನಿಸುವುದಿಲ್ಲ, ಪಾಕಿಸ್ಥಾನದಲ್ಲಿ ಮಾತ್ರ ಇದೆ” ಎಂದಿದ್ದಾರೆ.
ತಾರತಮ್ಯರಹಿತ ವ್ಯಾಪಾರದ ಪರವಾಗಿ ಭಾರತವು ಪಾಕಿಸ್ಥಾನಕ್ಕೆ ಪರಮಾಪ್ತ ಸ್ಥಾನಮಾನವನ್ನು ನೀಡಿತ್ತು, ಆದರೆ ಪಾಕಿಸ್ಥಾನವು ಇದನ್ನು ಮುಂದುವರೆಸಲು ವಿಫಲವಾಗಿದೆ ಎಂದು ಮಾಜಿ ರಾಜತಾಂತ್ರಿಕರೂ ಆಗಿರುವ ಜೈಶಂಕರ್ ಹೇಳಿದ್ದಾರೆ.
“ಸಂಪರ್ಕವು ದಕ್ಷಿಣ ಏಷ್ಯಾದ ಹೃದಯ, ಆದರೆ ಪಾಕಿಸ್ಥಾನವು ಭಾರತದೊಂದಿಗಿನ ಸಂಪರ್ಕವನ್ನು ವಿರೋಧಿಸುತ್ತಿದೆ. ಭಯೋತ್ಪಾದನೆಯನ್ನು ಅಭ್ಯಾಸ ಮಾಡಿಕೊಂಡಿರುವ ಮತ್ತು ಸಹಜ ವ್ಯಾಪಾರವನ್ನು ನಿರ್ಲಕ್ಷ್ಯ ಮಾಡುತ್ತಿರುವ, ಸಂಕರ್ಪವನ್ನು ವಿರೋಧಿಸುತ್ತಿರುವ ದೇಶದೊಂದಿಗೆ ಕಾರ್ಯನಿರ್ವಹಿಸಲು ಭಾರತ ಹೇಗೆ ತಾನೇ ಮುಂದಾಗುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.