ಅನುರಕ್ತಿ, ಕೋಪ, ಹಮ್ಮುಗಳನ್ನು ತೊರೆದಾಗ ಧ್ಯಾನವೇ ನಮ್ಮ ಸಹಜ ಸ್ವಭಾವ ಆಗಿಬಿಡುತ್ತದೆ. ಆಗ ನಾವು ಧ್ಯಾನಕ್ಕೆ ಒಂದೆಡೆ ಕುಳಿತುಕೊಳ್ಳಬೇಕಾಗಿಲ್ಲ. ಇಡೀ ಜೀವನವೇ ಒಂದು ರೀತಿಯ ಧ್ಯಾನವಾಗುತ್ತದೆ. ಯೋಗ ಈ ಧೋರಣೆಗೆ ಸಹಕಾರಿ ಎನ್ನುತ್ತಾರೆ ಯೋಗ ಗುರು ಸದಾನಂದ ರಮಣ ಭಟ್ಕಳ.
1964 ರಲ್ಲಿ ಶ್ರೀ ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿ ಯೋಗಪಟು ಕೆಲಗೇರಿ ಹಾಗೂ ದೇಹದಾರ್ಢ್ಯ ಪಟು ಕೆ.ಜಿ. ನಾಡಗೀರ ಅವರಲ್ಲಿ ಶಿಷ್ಯತ್ವ ಸಂಪಾದಿಸಿದ ಗುರು ಸದಾನಂದ ಅವರಿಗೆ ಈಗ 76 ರ ಹರೆಯ. ಧಾರವಾಡದ ಮೂಲೆ ಮೂಲೆಗೆ ತೆರಳಿ ಕಳೆದ 5 ದಶಕಗಳಿಂದ ಯೋಗ ಪಾಠ ಉಚಿತವಾಗಿ ಮಾಡುತ್ತ ಬಂದವರು.
ಮೂಲತಃ ಕಾರವಾರದವರು. ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯದಿಂದ ಬಿ.ಎ. ಪದವಿ (1968) ಹಾಗೂ ಬಿ.ಕಾಂ. ಪದವಿ (1972). ಧಾರವಾಡದ ಎಲ್ಮೇಕಾ ಕಂಪೆನಿಯಲ್ಲಿ ಲೆಕ್ಕಾಧಿಕಾರಿಯಾಗಿ ಸುಧೀರ್ಘ ಸೇವೆ. ಸ್ವತಃ ಬಾಸ್ಕೇಟ್ ಬಾಲ್ ಆಟಗಾರರು ಕೂಡ.
ಪುಟಪರ್ತಿಯ ಶ್ರೀ ಸತ್ಯ ಸಾಯಿ ಆಶ್ರಮದ ಸಾಯಿ ಬಾಬಾ ಅವರ ನಿರ್ದೇಶನದಂತೆ ಸೇವಾವೃತಿಯಾಗಿ ಯೋಗ ಪಾಠ ಬೋಧಿಸಲು ನಿಂತ ಶಿಕ್ಷಕರು. ಮದಿಹಾಳದ ಚಿದಂಬರ ಮಠ ಹಾಗೂ ಕಾಮನಕಟ್ಟಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಅಟ್ಟದ ಮೇಲೆ ‘ಬಾಲ ವಿಕಾಸ’ ಕಾರ್ಯಕ್ರಮದಡಿ ಸಾವಿರಾರು ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ನೀಡಿದ ಯೋಗಗುರು.
ಹಿಂದುಳಿದ ಸಮುದಾಯಗಳ ಮಕ್ಕಳು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದ ಮಕ್ಕಳು, ವಿಶೇಷವಾಗಿ ಹೆಣ್ಣು ಮಕ್ಕಳಿಗೆ ನಿಯಮಿತವಾಗಿ ಯೋಗ ಶಿಬಿರಗಳನ್ನು ಆಯೋಜಿಸಿ, ಆತ್ಮ ಬಲ ತುಂಬುತ್ತ ಬಂದವರು ಸದಾನಂದ ಭಟ್ಕಳ. ರಾಯಾಪುರದ ಭಿಕ್ಷುಕರ ಪುನರ್ವಸತಿ ಕೇಂದ್ರ, ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ’ಸೌಮನಸ್ಯ’ದಲ್ಲಿ ಯೋಗ ಶಿಬಿರಗಳನ್ನು ಸಂಘಟಿಸಿ, ಜ್ಞಾನ ಯೋಗದ ಮೂಲಕ ಅರಿವಿನ ಮಾರ್ಗ ತೋರಿದವರು.
ನಾಯಕನ ಹೂಲಿ ಕಟ್ಟಿಯ ಸರ್ಕಾರಿ ಶಾಲೆ, ದೇವರ ಹುಬ್ಬಳ್ಳಿಯ ಸಿದ್ಧ ಶಿವಯೋಗಿಗಳ ಸಿದ್ಧಾರೂಢ ಮಠ, ನಿಗದಿ ಬಳಿಯ ಹಿರಿಯ ನಾಗರಿಕರ ಆನಂದಾಶ್ರಮಗಳಲ್ಲಿ ಪ್ರತಿ 4ನೇ ಶನಿವಾರ ಯೋಗ ಹಾಗೂ ಪ್ರಾಣಾಯಾಮದ ಮೂಲಕ ನೆಮ್ಮದಿ ಕಾಣಿಸಿದ ಯೋಗ ಗುರು.
ಲಂಬಾಣಿ ಜನಾಂಗದ ಮಕ್ಕಳಿಗಾಗಿ ಮೀಸಲಿರುವ ಸಮಾಜ ಕಲ್ಯಾಣ ಇಲಾಖೆ ಸುಪರ್ದಿಯ ಸೈದಾಪುರದ ವಸತಿ ಶಾಲೆ, ಬೆಳಗಾವಿ ನಾಕಾ ಬಳಿಯ ಬಾಲಾಪರಾಧಿ ’ರಿಮಾಂಡ್ ಹೋಂ’ ಶಾಲೆಯ ಮಕ್ಕಳಿಗೂ ಯೋಗ ತರಬೇತಿ ನೀಡಿ, ದುರ್ಮಾರ್ಗ ತ್ಯಜಿಸಿ, ಸಮಾಜದ ಮುಖ್ಯವಾಹಿನಿಗೆ ಆ ಮಕ್ಕಳೂ ಸಹ ಸೇರಿ, ಸ್ವಾಭಿಮಾನದ ಬದುಕು ನಡೆಸಲು ಪ್ರೇರೇಪಿಸಿದ ಗುರು, ಸದಾನಂದ ಭಟ್ಕಳ.
ಜ್ಞಾನ ಯೋಗ ಅರಿವಿನ ಮಾರ್ಗ. ಅದನ್ನು ಬುದ್ಧಿಯೋಗ ಅಂತಲೂ ಕರೆಯಬಹುದು. ಈ ಅಧ್ಯಯನ ಕೇವಲ ಶಾಸ್ತ್ರಜ್ಞಾನಕ್ಕಷ್ಟೇ ಸೀಮಿತವಾದದ್ದಲ್ಲ. ಹರಿತಗೊಳಿಸಲ್ಪಟ್ಟ ಮಹಾಮುನಿಗಳ ಬೋಧೆಯನ್ನು ಆಸಕ್ತಿಯಿಂದ ಅರ್ಹ ಗುರುಗಳ ಮುಖೇನ ಗಮನವಿಟ್ಟು ಕೇಳಿದ ಜ್ಞಾನ ಮತ್ತು ಈ ಬೋಧೆಯ ಧ್ಯಾನದಿಂದ ಅಂತಿಮವಾಗಿ ಹೊಂದುವ ಬಿಡುಗಡೆಯ ಸ್ಥಿತಿ. ಈ ಮಾರ್ಗ ಕತ್ತಿಯ ಅಲಗಿನಂತಹದು. ಯಾರಾದರೂ ಸರಿಯಾದ ಶಿಸ್ತಿನಿಂದ ಅನುಸರಿಸದೇ ಹೋದಲ್ಲಿ ಆತ ಅಹಂಕಾರಿಯಾಗುತ್ತಾನೆ. ಸಾಧುಜನರ ನಿರಂತರ ಸಾನಿಧ್ಯ ಮತ್ತು ನಿರ್ಮಮಕಾರದಿಂದ ಕೂಡಿದ ಧ್ಯಾನ ಮುಖ್ಯವಾದದ್ದು. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗವೇ ಹೊರತು ಕೇವಲ ದೈಹಿಕ ಆರೋಗ್ಯ ಅಥವಾ ರೋಗ ಉಪಶಮನದ ಮಾರ್ಗವಲ್ಲ ಎನ್ನುತ್ತಾರೆ ಯೋಗ ಗುರು ಸದಾನಂದ ಅವರು.
ಪತ್ನಿ ರೇಖಾ ಸದಾನಂದ, ಮಕ್ಕಳಾದ ಇಂ.ಗಿರೀಶ ಭಟ್ಕಳ ಹಾಗೂ ಶಿರೀಶ ಭಟ್ಕಳ ಸೇರಿದಂತೆ ಸಹಸ್ರಾರು ವಿದ್ಯಾರ್ಥಿಗಳ, ಗುರು ಬಂಧುಗಳ ಪ್ರೇರಣೆ ಯೋಗ ಮಾರ್ಗದ ಸಾಧನೆಗೆ ಕಾರಣ ಎನ್ನುತ್ತಾರೆ ಸದಾನಂದ ಭಟ್ಕಳ್ ಅವರು.
ಭಕ್ತಿಯು ಹೇಗೆ ಕೇವಲ ತುಟಿ ಅಲುಗಿಸುವ ಬರಿಪೂಜೆ ಅಲ್ಲವೋ, ಅದು ಕಾಯಾ ವಾಚಾ ಮನಸಾ ಮೂಡಿಬರುವ ಆತ್ಮ ಸಮರ್ಪಣೆಯೋ.. ಹಾಗೆ ಯೋಗವೂ ಕೂಡ. ವೈರಾಗ್ಯವಿರಬೇಕು. ಕರ್ಮ ಬಿಡದಿರಬೇಕು. ಈ ಎರಡೂ ಹಿತ ಬೆರೆಯೆ ಗರಿಮೆ ಬದುಕಿಗೆ ಬರಬಹುದು.. ಅದೇ ಯೋಗ.. ಇದೇ ಅಧ್ಯಾತ್ಮ..! ಆರೋಗ್ಯಯುತ ದೀರ್ಘಾಯುಷ್ಯದ ಗುಟ್ಟು..! ಈ ಬಾರಿ ಯೋಗ ವಿಶ್ವ ದಿನದ ಆಚರಣೆ ಧ್ಯೇಯ ‘ನಮೋ ನಮಃ ಯೋಗಾಯ’ ತುಂಬ ಅರ್ಥಪೂರ್ಣ.
– ಯೋಗ ಗುರು ಸದಾನಂದ ರಮಣ ಭಟ್ಕಳ, ಧಾರವಾಡ. (ಸಂಪರ್ಕ: 94802 18463)
ಯೋಗ ಗುರು ಸದಾನಂದ ಭಟ್ಕಳ್, ಕಳೆದ 50 ವರ್ಷಗಳಿಂದ ನನ್ನಂತಹ ಸಾವಿರಾರು ಜನರಿಗೆ ಯೋಗ-ಪ್ರಾಣಾಯಾಮ, ಸಮಾಜಮುಖಿ ಜೀವನ ಪದ್ಧತಿ ಬೋಧಿಸಿದವರು. ಅವರ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ಯೋಗ ಶಿಕ್ಷಕರಾಗಿದ್ದಾರೆ. ಅವರ ಸರಳತೆ ಮತ್ತು ಸಹಜ ಸ್ವಭಾವ, ಮಾರ್ಗದರ್ಶನ ಅನೇಕರಿಗೆ ನೆಮ್ಮದಿಯ ಬದುಕು ಕಟ್ಟಿಕೊಟ್ಟಿದೆ. ‘ಬಾಲ ವಿಕಾಸ’ದ ಮೂಲಕ ಸಾವಿರಾರು ಮಕ್ಕಳಿಗೆ ನೈತಿಕ ಮಾರ್ಗ ಮತ್ತು ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟವರು. ಇಂದಿಗೂ ಅವರು ಪ್ರಚಾರದಿಂದ ಮಾರು ದೂರ. ಎಲೆ ಮರೆಯ ಕಾಯಿ.
– ರೂಪಾ ಪ್ರಸಾದ ಹೊಂಗಲ, ಯೋಗ ಗುರು, ಶ್ರೀ ಸಾಯಿ ಯೋಗ ಕೇಂದ್ರ,
ವೆಂಕಟೇಶ್ವರ ದೇವಸ್ಥಾನ, ರೆಡ್ಡಿ ಕಾಲೋನಿ, ಧಾರವಾಡ. (ಸಂಪರ್ಕ: 94811 24519)
✍ ಹರ್ಷವರ್ಧನ ವಿ. ಶೀಲವಂತ, ಧಾರವಾಡ
ಚಿತ್ರಗಳು: ಕಲ್ಲೇಶ್ ಕಮ್ಮಾರ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.