ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ನಡುವೆ ಹೊಂದಾಣಿಕೆ ಇಲ್ಲದೇ ಹೋಗುತ್ತಿದ್ದರೆ ಬಿಜೆಪಿಗೆ ಅಭೂತಪೂರ್ವವಾದ ಯಶಸ್ಸನ್ನು ದಾಖಲಿಸುವುದು ಸಾಧ್ಯವಾಗುತ್ತಿರಲಿಲ್ಲ. ಅವರನ್ನು ಭಾರತೀಯ ರಾಜಕಾರಣದ ಅಸಾಧಾರಣ ಜೋಡಿ ಅಂತಲೇ ಕರೆಯಲಾಗುತ್ತದೆ. ಅವರ ಈ ಸೌಹಾರ್ದ ಸಂಬಂಧ ರಾತೋರಾತ್ರಿ ಬೆಳೆದು ಬಂದುದಲ್ಲ, ಹಲವಾರು ದಶಕಗಳಿಂದ ಬೆಳೆದು ಬಂದುದಾಗಿದೆ. ಮೋದಿಯವರ ಪ್ರಧಾನಿ ಹುದ್ದೆಯುದ್ದಕ್ಕೂ ಅವರ ಮ್ಯಾಜಿಕ್ ಪ್ರತಿಫಲನಗೊಂಡಿದೆ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಆಶ್ಚರ್ಯಕರವಾದ ದಿಗ್ವಿಜಯ ಸಿಗುವಂತೆ ಮಾಡಿದೆ.
ಈ ಅದ್ಭುತ ಸ್ನೇಹದ ಪಯಣವು ಆರಂಭಗೊಂಡಿದ್ದು 1982 ರಲ್ಲಿ, ಆಗ ಅಮಿತ್ ಶಾ ವಯಸ್ಸು ಕೇವಲ 17 ವರ್ಷ. ಆ ವೇಳೆ ತಮ್ಮ ಕಾಲೇಜು ದಿನಗಳಲ್ಲಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆಗ ಮೋದಿ ವಯಸ್ಸು 32 ವರ್ಷ, ಆರ್ ಎಸ್ ಎಸ್ ಪ್ರಚಾರಕರಾಗಿದ್ದರು, ತಮ್ಮ ನಗರದ ಯುವ ಚಟುವಟಿಕೆಗಳ ಉಸ್ತುವಾರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಇವರಿಬ್ಬರ ನಡುವಣ ಬಾಂಧವ್ಯ 37 ವರ್ಷಗಳದ್ದು. ಮೋದಿಯವರು 1984ರಲ್ಲಿ ಅಹ್ಮದಾಬಾದ್ ಜಿಲ್ಲಾ ಪ್ರಚಾರಕರಾದ ವೇಳೆ ಇಬ್ಬರು ತುಂಬಾ ಸನಿಹವಾದರು. ಸಂಘ ಪರಿವಾರದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ಶಾ ಅವರಿಗಿದ್ದ ತಾರ್ಕಿಕ ತಿಳುವಳಿಕೆ, ಸೈದ್ಧಾಂತಿಕ ಬದ್ಧತೆ ಮೋದಿಯವರನ್ನು ಬಲುವಾಗಿ ಆಕರ್ಷಿಸಿತು. ಆರ್ ಎಸ್ ಎಸ್ ಸರಸಂಘಚಾಲಕ ಬಾಲಾಸಾಹೇಬ್ ದಿಯೋರಸ್ ಅವರು ಮೋದಿಯವರನ್ನು ಬಿಜೆಪಿ ಸೇರುವಂತೆ ಸೂಚಿಸಿದ ಬಳಿಕ ಶಾ ಅವರಿಗೆ ಮತ್ತಷ್ಟು ಹತ್ತಿರವಾದರು. ಪ್ರಸ್ತಾಪಿತ ಪಾತ್ರದ ಬಗ್ಗೆ ನಿರ್ಣಯವನ್ನು ತೆಗೆದುಕೊಳ್ಳಲು ಮೋದಿ ಕೆಲವೇ ಕೆಲವು ಮಂದಿಯ ಬಳಿಕ ಸಲಹೆಯನ್ನು ಕೇಳಿದ್ದರು, ಅವರಲ್ಲಿ ಶಾ ಕೂಡ ಒಬ್ಬರಾಗಿದ್ದರು. ಶಾ ಅವರ ಪ್ರೋತ್ಸಾಹದ ಮೇರೆಗೇ ಮೋದಿ 1985 ರಲ್ಲಿ ಬಿಜೆಪಿ ಸೇರಿದರು. 1986ರಲ್ಲಿ ಶಾ ಬಿಜೆಪಿಗೆ ಸೇರ್ಪಡೆಯಾದರು. ಈ ವೇಳೆ ಮೋದಿ ಬಿಜೆಪಿ ಗುಜರಾತ್ ಘಟಕದ ಪೂರ್ಣಾವಧಿ ಸಂಘಟನಾ ಕಾರ್ಯದರ್ಶಿಯಾಗಿದ್ದರು ಮತ್ತು ಶಾ ನಿಪುಣತೆಯನ್ನು ಅರಿತುಕೊಂಡು ಅವರಿಗೆ ಚುನಾವಣೆಯ ಸಂದರ್ಭಗಳಲ್ಲಿ ಬೂತುಗಳ ನಿರ್ವಹಣೆ ಇತ್ಯಾದಿ ಕಾರ್ಯಗಳ ಜವಾಬ್ದಾರಿಯನ್ನು ನೀಡುತ್ತಿದ್ದರು.
1995ರ ವೇಳೆಗೆ, ಶಾ ಮತ್ತು ಮೋದಿ ನಿಕಟತೆ ರಾಜ್ಯ ರಾಜಕೀಯದಲ್ಲಿ ಮಹತ್ವದ ಪಾತ್ರವನ್ನೇ ನಿಭಾಯಿಸಿತು. ಬಿಜೆಪಿ 1995ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಸೋಲಿಸಿತು. ಆದರೂ ಆ ವೇಳೆ ಕಾಂಗ್ರೆಸ್ ಗುಜರಾತಿನ ಶಕ್ತಿಶಾಲಿ ಪಕ್ಷ ಎನಿಸಿಕೊಂಡಿತ್ತು. ಆದರೆ ಈ ಜೋಡಿ ಜನಾದೇಶ ಬಿಜೆಪಿ ಪರ ಬರುವಂತೆ ಮಾಡುವಲ್ಲಿ ಯಶಸ್ವಿಯಾದರು. ಈ ವೇಳೆ ಅವರು ಒಟ್ಟಾಗಿ ತಂತ್ರಗಾರಿಕೆಯನ್ನು ಹೆಣೆದರು, ಕಾಂಗ್ರೆಸ್ಸಿಗಿದ್ದ ಗ್ರಾಮೀಣ ಗುಜರಾತ್, ಕ್ರೀಡಾ ಮಂಡಳಿ, ಪ್ರಭಾವಿ ಕಾರ್ಪೋರೇಟ್ ಮೇಲಿನ ಪ್ರಭಾವದ ಸವಾಲನ್ನು ಎದುರಿಸಿದರು.
ರಾಜಕೀಯ ಮೈತ್ರಿಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಅವರ ಗಾಢ ಸ್ನೇಹ ಗಡಿಯನ್ನೂ ದಾಟಿತು. 1996ರಲ್ಲಿ ಮೋದಿ ಮಾಜಿ ಗುಜರಾತ್ ಸಿಎಂ ಕೇಶೂಭಾಯ್ ಪಟೇಲ್ ಜೊತೆಗಿನ ಸಂಬಂಧವನ್ನು ಪಡೆದುಕೊಂಡರು, ಶಾ ಅವರೊಂದಿಗೇ ಇದ್ದರು, 1997ರಲ್ಲಿ, ಚುನಾವಣೆಯಲ್ಲಿ ಶಾ ಅವರಿಗೆ ಟಿಕೆಟ್ ದೊರಕುವಂತೆ ಮೋದಿ ಪ್ರಯತ್ನ ಮಾಡಿದರು ಮತ್ತು ಯಶಸ್ವಿಯಾದರು. ಇದರಿಂದ ಶಾ ಶಾಸಕನಾದರು. 1998ರ ಚುನಾವಣೆಯಲ್ಲೂ ಅವರು ಶಾಸಕರಾಗಿ ಗೆದ್ದು ಬಂದರು.
2001ರಲ್ಲಿ ಮೋದಿ ಗುಜರಾತ್ ಸಿಎಂ ಆಗಿ ಆರಿಸಿ ಬಂದರು, ಅಮಿತ್ ಶಾ ಗುಜರಾತಿನ ಪ್ರಭಾವಿ ರಾಜಕಾರಣಿಯಾಗಿ ರೂಪುಗೊಂಡರು. ಮೋದಿ ಸರ್ಕಾರದಲ್ಲಿ ಅವರಿಗೆ ಗೃಹ, ಕಾನೂನು ಮತ್ತು ಸುವ್ಯವಸ್ಥೆ, ಗ್ರಾಮ ರಕ್ಷಕ್ ದಳ, ಬಂಧೀಖಾನೆ, ನಾಗರಿಕ ರಕ್ಷಣೆ, ಅಬಕಾರಿ, ಸಾರಿಗೆ, ಗಡಿ ಭದ್ರತೆ ಹೀಗೆ ಹಲವಾರು ಖಾತೆಗಳನ್ನು ನೀಡಲಾಯಿತು. ಎಲ್ಲಾ ಸಿಎಂಗಳು ಗೃಹ ಖಾತೆ ಮೇಲೆ ದೊಡ್ಡ ಮಟ್ಟದಲ್ಲಿ ನಿಯಂತ್ರಣ ಹೊಂದಲು ಬಯಸುತ್ತಾರೆ, ಆದರೆ ಇಲ್ಲಿ ಮೋದಿಯವರಿಗೆ ಶಾ ಮೇಲೆ ಪರಿಪೂರ್ಣ ಭರವಸೆ ಇತ್ತು. ತಮ್ಮ ರಾಜಕೀಯ ವಿರೋಧಿಗಳನ್ನು ಇವರು ಒಟ್ಟಾಗಿಯೇ ಸೈಡ್ ಲೈನ್ ಮಾಡಿದರು.
2014ರ ಲೋಕಸಭಾ ಚುನಾವಣೆಗೂ ಮುನ್ನ, ಶಾ ಅವರನ್ನು ಯುಪಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು. ಮೋದಿ ಅಲೆ ಜೊತೆಗೆ ಶಾ ಅವರ ಮಾರ್ಗದರ್ಶನ ಮತ್ತು ಪ್ರಚಾರದ ಫಲವಾಗಿ ಅಲ್ಲಿನ 80 ಲೋಕಸಭಾ ಕ್ಷೇತ್ರಗಳ ಪೈಕಿ 73 ಸ್ಥಾನ ಬಿಜೆಪಿ ಪಾಲಾಯಿತು. ಯುಪಿ ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲೂ ಬಿಜೆಪಿಯನ್ನು ಅಧಿಕಾರಕ್ಕೇರಿಸಲು ಶಾ ಅವಿರತ ಪರಿಶ್ರಮ ಪಟ್ಟರು. ಇದರ ಫಲವಾಗಿಯೇ ಹಿರಿಯ ಪಕ್ಷ ಕಾಂಗ್ರೆಸ್ 44 ಸ್ಥಾನಗಳಿಗೆ ಇಳಿಯಿತು. ಇದು ಅದರ ಸಾರ್ವಕಾಲೀಕ ಕುಸಿತವಾಗಿತ್ತು. ಬಿಜೆಪಿ ಸ್ಪಷ್ಟ ಬಹುಮತ ಪಡೆದು ದಾಖಲೆ ಬರೆಯಿತು. ಇಲ್ಲಿಂದ ಶಾ ಅವರನ್ನು ‘ಆಧುನಿಕ ಚಾಣಾಕ್ಯ’ ಮತ್ತು ಮಾಸ್ಟರ್ ಸ್ಟ್ರ್ಯಾಟಜಿಸ್ಟ್ ಎಂದು ಜನರು ಕೊಂಡಾಡಿದರು. ಈ ಅಭೂತಪೂರ್ವ ಗೆಲುವಿಗೂ ಮೋದಿ ಮತ್ತು ಶಾ ನಡುವಣ ಅಸಾಧಾರಣ ಗೆಳೆತನ ಕಾರಣವಾಗಿತ್ತು. ಮೋದಿ ಪ್ರಧಾನಿಯಾದ ಬಳಿಕ ಶಾ ಅವರನ್ನು ಬಿಜೆಪಿಯ ರಾಷ್ಟ್ರಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಅಲ್ಲಿಂದ ಇಬ್ಬರೂ ಹೆಗಲಿಗೆ ಹೆಗಲು ಕೊಟ್ಟು ದುಡಿದರು ಮತ್ತು ಅವರ ಪರಿಶ್ರಮದ ಫಲ ಅಭೂತಪೂರ್ವವಾಗಿತ್ತು. ಹೀಗಾಗಿ ಶಾ ಅವರನ್ನು 2016 ರಲ್ಲೂ ರಾಷ್ಟ್ರಾಧ್ಯಕ್ಷರಾಗಿ ಮರು ಆಯ್ಕೆ ಮಾಡಲಾಯಿತು. ಇವರಿಬ್ಬರ ಜೋಡಿ ಮೈತ್ರಿ ಮೂಲಕ ಅಥವಾ ಸ್ವತಂತ್ರವಾಗಿ ಬಿಜೆಪಿಗೆ 14 ರಾಜ್ಯಗಳನ್ನು ನೀಡಿತು. ಸಾರ್ವಜನಿಕ-ನೀತಿ ಮತ್ತು ಆಡಳಿತದಲ್ಲಿ ಮೋದಿ ಶಾ ಅವರ ಸಲಹೆಯನ್ನು ಪಡೆದು ಒಂದು ತಂಡವಾಗಿ ಕಾರ್ಯನಿರ್ವಹಿಸಿದರು.
ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಒಟ್ಟಿಗೆ ಕಾರ್ಯನಿರ್ವಹಣೆ ಮಾಡಿದ್ದು ಭಾರತೀಯ ರಾಜಕೀಯದ ಚಿತ್ರಣವನ್ನು ಬದಲಾಯಿಸಿತು. ಮೋದಿ ಓರ್ವ ದಾರ್ಶನಿಕ ಮತ್ತು ಅಮಿತ್ ಶಾ ಅನುಷ್ಠಾನಗಾರ ಎಂದು ಆಗಾಗ ಹೇಳಲಾಗುತ್ತದೆ. ಸ್ನೇಹಕ್ಕೂ ಮಿಗಿಲಾಗಿ ಅಮಿತ್ ಶಾ ಅವರು ಮೋದಿಯನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಈ ವರ್ಷಗಳಲ್ಲಿ, ಶಾ ಅವರು ಮೋದಿಯವರ ನಿಷ್ಠಾವಂತ ಅನುಯಾಯಿ. ಶಾ ಅವರ ಕ್ಷಿಪ್ರ ಕಲಿಕಾ ಕೌಶಲ್ಯ ಮೋದಿ ಸರ್ಕಾರಕ್ಕೆ ಸಾಕಷ್ಟು ಪ್ರಯೋಜನವನ್ನು ತಂದುಕೊಟ್ಟಿದೆ. ಇವರ ಸ್ನೇಹ ಸರ್ಕಾರದ ಮೊದಲ ಅವಧಿಯನ್ನು ಯಶಸ್ವಿಗೊಳಿಸಿದ್ದು ಮಾತ್ರವಲ್ಲ, ಎರಡನೇಯ ಅವಧಿಗೂ ಅಭೂತಪೂರ್ವ ಯಶಸ್ಸನ್ನು ದಾಖಲಿಸಿದೆ. ಮೋದಿ ಅವರ ದೂರದೃಷ್ಟಿ ಅರ್ಥ ಮಾಡಿಕೊಳ್ಳುವುದು ಆಡಳಿತ ಮತ್ತು ರಾಜಕೀಯವನ್ನು ಮೀರಿದ್ದು. ಹೀಗಾಗಿಯೇ ಮೋದಿ ಸರ್ಕಾರಕ್ಕೆ ಅಮಿತ್ ಶಾ ಅತ್ಯಗತ್ಯ ಎನಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.