
ಮಾರ್ಚ್ 7 ರಾಷ್ಟ್ರೀಯ ಧಾನ್ಯಗಳ ದಿನ. ಈ ಸಂದರ್ಭದಲ್ಲಿ ಒಂದು ಆಸಕ್ತಿದಾಯಕ ಕಥೆಯೊಂದನ್ನು ಈ ಲೇಖನದ ಮೂಲಕ ಹಂಚಿಕೊಳ್ಳುತ್ತೇವೆ. ಅದುವೇ ಕೆಲ್ಲಾಗ್ಸ್ ಕಂಪನಿಯು 1994ರಲ್ಲಿ ಭಾರತೀಯ ಉಪಾಹಾರ ಮಾರುಕಟ್ಟೆಗೆ ಲಗ್ಗೆಯಿಟ್ಟ ಕಥೆ, “ಕಾರ್ನ್ಫ್ಲೇಕ್ಸ್ ಕ್ರಾಂತಿ” ಆರಂಭಿಕ ವಿಫಲತೆಯನ್ನು ಹೇಗೆ ಎದುರಿಸಿತು ಎಂಬುದರ ಕಥೆ!
1994ರಲ್ಲಿ, ಆರ್ಥಿಕ ಸುಧಾರಣೆಯ ನಂತರ ಭಾರತದ ಮಧ್ಯಮ ವರ್ಗದ ದೊಡ್ಡ ಮಾರುಕಟ್ಟೆಯ ಮೇಲೆ ವಿಶ್ವದ ಅತಿದೊಡ್ಡ ಬ್ರೇಕ್ಫಾಸ್ಟ್ ಸೀರಿಯಲ್ ಕಂಪನಿ ಕೆಲ್ಲಾಗ್ಸ್ ಕಣ್ಣು ಹಾಯಿಸಿತು ಮತ್ತು $65 ಮಿಲಿಯನ್ ಮಹತ್ವಾಕಾಂಕ್ಷೆಯೊಂದಿಗೆ ಭಾರತಕ್ಕೆ ಲಗ್ಗೆ ಇಟ್ಟಿತು. ಮುಂಬೈನಲ್ಲಿ ತನ್ನ ಮೊದಲ ಫ್ಯಾಕ್ಟರಿಯನ್ನು ತೆರೆದು, ಕಾರ್ನ್ಫ್ಲೇಕ್ಸ್, ವೀಟ್ ಫ್ಲೇಕ್ಸ್ ಮತ್ತು ಬಾಸ್ಮತಿ ರೈಸ್ ಫ್ಲೇಕ್ಸ್ ಅನ್ನು ಬಿಡುಗಡೆ ಮಾಡಿತು. ಭಾರತದ 95 ಕೋಟಿ ಜನಸಂಖ್ಯೆಯಲ್ಲಿ ಕೇವಲ 2% ಮಾರುಕಟ್ಟೆ ಪಾಲನ್ನು ಪಡೆದರೆ ಅದು ಅಮೆರಿಕದ ಇಡೀ ಮಾರುಕಟ್ಟೆಗಿಂತ ದೊಡ್ಡದಾಗುತ್ತದೆ ಎಂದು ಕಂಪನಿಯು ಲೆಕ್ಕಹಾಕಿತು. ತನ್ನ ಉತ್ಪನ್ನಗಳನ್ನು “ಆರೋಗ್ಯಕರ, ಸೂಪರ್ ಕ್ರಿಸ್ಪಿ ಮತ್ತು ಕೋಲ್ಡ್ ಮಿಲ್ಕ್ನೊಂದಿಗೆ ಸರಳವಾಗಿ ತಿನ್ನಬಹುದಾದ ಉಪಾಹಾರ” ಎಂದು ಪ್ರಚಾರ ಮಾಡಿತು.
ಕೆಲ್ಲಾಗ್ಸ್ ಟ್ಯಾಗ್ಲೈನ್: “ಜಾಗೋ ಜೈಸೆ ಭೀ, ಲೋ ಕೆಲ್ಲಾಗ್ಸ್ ಹೀ” (ನೀವು ದಿನವನ್ನು ಹೇಗೆ ಬೇಕಾದರೂ ಆರಂಭಿಸಿ ಆದರೆ ಕೆಲ್ಲಾಗ್ಸ್ನೊಂದಿಗೆ ಆರಂಭಿಸಿ)! ಎಂದಿತು. ಆದರೆ ಬಿಸಿ ಉಪಾಹಾರ, ಹಬೆಯಾಡುವ ಪೋಹಾ, ಇಡ್ಲಿಗಳು, ದೋಸೆಗಳು ಮತ್ತು ಪರಾಟಗಳಿಗೆ ಹೊಂದಿಕೊಂಡ ದೇಶ ಕೆಲ್ಲಾಗ್ಸ್ನ ತಣ್ಣನೆಯ ಉಪಹಾರಗಳನ್ನು ಹೇಗೆ ತಾನೆ ಜೀರ್ಣಿಸಿಕೊಂಡಿತು? ತಣ್ಣನೆಯ ಹಾಲಿನೊಂದಿಗೆ “ತಿನ್ನಲು ಸಿದ್ಧ” ಧಾನ್ಯ ಆಧಾರಿತ ಉತ್ಪನ್ನವನ್ನು ಬಹುದೊಡ್ಡ ಭರವಸೆಯೊಂದಿಗೆ ಕೆಲ್ಲಾಗ್ಸ್ ತೇಲಿಬಿಟ್ಟಿತ್ತು. ಆರಂಭಿಕ ಟ್ರೆಂಡ್, ಅದ್ಧೂರಿ ಆರಂಭ ಮತ್ತು ಜಾಗತಿಕ ಗುಣಮಟ್ಟದೊಂದಿಗೆ ಕೆಲ್ಲಾಕ್ಸ್ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿತು. ಆದರೆ ಇದಕ್ಕೆ ದೊರೆತ ಜನರ ಪ್ರತಿಕ್ರಿಯೆ ಮಾತ್ರ ಕಠಿಣ ಸತ್ಯವೊಂದನ್ನು ಬಹಿರಂಗಪಡಿಸಿತು. ಭಾರತೀಯರು ಎಂದಿಗೂ ವಿದೇಶದಿಂದ ಉಪಾಹಾರ ಕಲ್ಪನೆಗಳನ್ನು ಖರೀದಿಸುವುದಿಲ್ಲ ಎಂಬ ಸತ್ಯದ ಅರಿವು ಕೆಲ್ಲಾಗ್ಸ್ಗೆ ಆಯಿತು.
ಉಪಾಹಾರವು ಭಾರತೀಯ ಆಹಾರ ಪದ್ಧತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಅಷ್ಟು ಸುಲಭಕ್ಕೆ ಭಾರತೀಯರು ತಮ್ಮ ಉಪಹಾರವನ್ನು ಬದಲಿಸುವುದಿಲ್ಲ ಎಂಬುದು ಸಾಬೀತಾಯಿತು. ಹೀಗಾಗಿ ಕ್ರಾಂತಿ ಮಾಡುವ ಭರವಸೆಯಿಲ್ಲದ್ದ ಕೆಲ್ಲಾಕ್ಸ್ಗೆ ಆರಂಭಿಕ ಹಿನ್ನಡೆ ಉಂಟಾಯಿತು.
ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುತ್ತಿದ್ದರೂ ಮತ್ತು ಗಮನಾರ್ಹ ತಾಂತ್ರಿಕ ಮತ್ತು ನಿರ್ವಹಣಾ ಸಂಪನ್ಮೂಲಗಳನ್ನು ಬಳಸುತ್ತಿದ್ದರೂ, ಭಾರತೀಯ ಮಾರುಕಟ್ಟೆಯಲ್ಲಿ ಕೆಲ್ಲಾಗ್ನ ಮಾರಾಟವು ಕುಸಿಯುತ್ತಿತ್ತು. 1995 ರ ಹೊತ್ತಿಗೆ, ಮಾರಾಟವಾದ ಪ್ರತಿ 100 ಪ್ಯಾಕೆಟ್ಗಳಿಗೆ ಕೇವಲ ಎರಡನ್ನು ಮಾತ್ರ ನಿಯಮಿತ ಗ್ರಾಹಕರು ಖರೀದಿಸುತ್ತಿದ್ದರು ಎಂದು ಅಂದಾಜಿಸಲಾಗಿದೆ, ಉಳಿದವು ಮೊದಲ ಬಾರಿಯ ಗ್ರಾಹಕರಿಂದ ಖರೀದಿಸಲ್ಪಡುತ್ತಿತ್ತು.
ಕೆಲ್ಲಾಗ್ಸ್ನ ಆರಂಭಿಕ ವಿಫಲತೆಗೆ ಮುಖ್ಯ ಕಾರಣ ಭಾರತೀಯರ ಆಹಾರ ಮತ್ತು ಸಾಂಸ್ಕೃತಿಕ ಅಭ್ಯಾಸಗಳು. ತಣ್ಣನೆಯ ಹಾಲಿನೊಂದಿಗೆ ಬೆರೆಸಿ ಮೃದುವಾದ ಧಾನ್ಯವನ್ನು ತಿನ್ನುವುದು ಭಾರತೀಯರಿಗೆ ಪಥ್ಯವಾಗಲಿಲ್ಲ, ಭಾರತೀಯರು ಬಿಸಿ ಹಾಲನ್ನು ಆದ್ಯತೆಯಾಗಿಸಿಕೊಂಡವರು. ಪರಿಣಾಮವಾಗಿ, ಕೆಲ್ಲಾಗ್ಸ್ನಂತಹ ಅಂತರರಾಷ್ಟ್ರೀಯ ಉಪಹಾರ ಧಾನ್ಯದ ಬ್ರ್ಯಾಂಡ್ಗಳು ಸಹ ತಮ್ಮ ಜಾಹೀರಾತು ಮತ್ತು ಪ್ರಚಾರ ಅಭಿಯಾನಗಳ ಹೊರತಾಗಿಯೂ ಹಿನ್ನಡೆಯನ್ನು ಎದುರಿಸಿದವು.
ಮತ್ತೊಂದೆಡೆ ಕೆಲ್ಲಾಗ್ನ ಜಾಹೀರಾತುಗಳು ಕೂಡ ಖಳನಾಯಕನಾದವು. ಅವರು ಭಾರತದ ಉಪಹಾರ ಸಂಸ್ಕೃತಿಯ ಮೇಲೆ ದಾಳಿ ಮಾಡಿದ್ದರು, ಭಾರತದ ಉಪಹಾರವನ್ನು ತುಂಬಾ “ಹೆವಿ” ಎಂದು ಕರೆದರು ಮತ್ತು ಪರಾಠಾ ಮತ್ತು ಉಪ್ಮಾದಂತಹ ಸಾಂಪ್ರದಾಯಿಕ ಉಪಹಾರಗಳನ್ನು ಸೇವಿಸಿದ ನಂತರ ಸೋಮಾರಿತನ ಉಂಟಾಗುತ್ತದೆ ಎಂಬಂತೆ ಬಿಂಬಿಸಿ ಜಾಹೀರಾತುಗಳನ್ನು ತೇಲಿಬಿಟ್ಟರು. ತಣ್ಣನೆಯ ಹಾಲು ಮತ್ತು ಕುರುಕಲು ತಿಂಡಿಗಳ ಪಾಶ್ಚಿಮಾತ್ಯ ಧಾನ್ಯ ಸಂಯೋಜನೆಯನ್ನು “ಆಧುನಿಕ ಮತ್ತು ಆರೋಗ್ಯಕರ” ಎಂದು ಬಿಂಬಿಸಲು ಪ್ರಯತ್ನಿಸಿದರು. ಭಾರತೀಯ ತಾಯಂದಿರು ಇದಕ್ಕೆ ವಿರುದ್ಧ ನಿಂತುಕೊಂಡರು, ಭಾರತೀಯ ಮಾಧ್ಯಮಗಳು ಇದನ್ನು ಸಾಂಸ್ಕೃತಿಕ ದುರಹಂಕಾರ ಎಂದು ಕರೆದವು.
ಈ ಅಂತರರಾಷ್ಟ್ರೀಯ ಧಾನ್ಯ ಆಧಾರಿತ ಆಹಾರ ಕಂಪನಿಯು ಈಗಲೂ ಭಾರತದಲ್ಲಿ ಮುಖ್ಯವಾಗಿ ಸೀಮಿತ ನಗರ ಮಾರುಕಟ್ಟೆಗಳಲ್ಲಿ ಬದುಕುಳಿಯಲು ಸಾಧ್ಯವಾಗಿದೆ. ವಿಶೇಷವಾಗಿ ಮಕ್ಕಳಿಗಾಗಿ ತಯಾರಿಸಿದ ಸಿಹಿ, ವರ್ಣರಂಜಿತ ಧಾನ್ಯಗಳು ಮತ್ತು ಸಣ್ಣ ಗಾತ್ರದ ಉತ್ಪನ್ನ ಪ್ಯಾಕ್ಗಳ ಮೂಲಕ ಇನ್ನೂ ಅಸ್ತಿತ್ವದಲ್ಲಿದೆ. ಆದರೆ, ಅವು ಎಷ್ಟೇ ಆಕರ್ಷಕವಾಗಿ ಕಾಣುತ್ತಿದ್ದರೂ, ವರ್ಣರಂಜಿತ ಆಹಾರಗಳು ಮಕ್ಕಳಿಗೆ ಆರೋಗ್ಯಕರವಲ್ಲ. ಮಕ್ಕಳು ಆರೋಗ್ಯಕರವೆಂದು ಭಾವಿಸಿ ತಿನ್ನುವ ಕೆಂಪು, ನೀಲಿ ಮತ್ತು ಪ್ರಕಾಶಮಾನವಾದ ಬಣ್ಣದ ಉಪಹಾರ ಧಾನ್ಯಗಳು ಅವರ ಬೌದ್ಧಿಕ ಬೆಳವಣಿಗೆಯನ್ನು ನಿಧಾನಗೊಳಿಸಬಹುದು. ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ವರ್ಣರಂಜಿತ ಮಿಠಾಯಿಗಳಿಂದ ರುಚಿಕರವಾದ ತಿಂಡಿಗಳವರೆಗೆ – ಕೃತಕ ಬಣ್ಣಗಳನ್ನು ಬಳಸುವ ಯಾವುದೇ ವರ್ಣರಂಜಿತ ಆಹಾರವು ಮಗುವಿನ ನಡವಳಿಕೆಯನ್ನು ಬದಲಾಯಿಸಬಹುದು. ಅದಕ್ಕಾಗಿಯೇ ಇಂದಿಗೂ, ಭಾರತೀಯ ಉಪಹಾರಗಳಲ್ಲಿ 90 ಪ್ರತಿಶತಕ್ಕಿಂತ ಹೆಚ್ಚು ಪೋಹಾ ಮತ್ತು ಉಪ್ಮಾದಂತಹ ಮನೆಯಲ್ಲಿ ತಯಾರಿಸಿದ ಸಾಂಪ್ರದಾಯಿಕ ಆಹಾರಗಳು ಇರುತ್ತವೆ.
ಭಾರತೀಯ ಕುಟುಂಬಗಳಲ್ಲಿ, ಸಾಂಪ್ರದಾಯಿಕ ಖಾರದ ಉಪಹಾರಗಳು ಈಗಲೂ ತಿನ್ನಲು ಸಿದ್ಧವಾದ (RTE) ಧಾನ್ಯಗಳು ಮತ್ತು ತಿಂಡಿಗಳಿಗಿಂತ ಹೆಚ್ಚು ಜನಪ್ರಿಯವಾಗಿವೆ. ಆದರೆ, ಪ್ರಸ್ತುತ, ಬ್ಲಿಂಕಿಟ್, ಜೆಪ್ಟೊ ಮತ್ತು ಸ್ವಿಗ್ಗಿ ಇನ್ಸ್ಟಾಮಾರ್ಟ್ನಂತಹ ತ್ವರಿತ-ವಿತರಣಾ ವೇದಿಕೆಗಳು ನಗರ ಪ್ರದೇಶಗಳಲ್ಲಿ ಕಾರ್ನ್ಫ್ಲೇಕ್ಗಳು, ಚೋಕೋಸ್, ಮ್ಯೂಸ್ಲಿ ಮತ್ತು ಓಟ್-ಆಧಾರಿತ ಧಾನ್ಯಗಳಂತಹ ಸಿದ್ಧ-ತಿನ್ನುವ (RTE) ಧಾನ್ಯಗಳ ಬಳಕೆಯನ್ನು ಬಹಳವಾಗಿ ಹೆಚ್ಚಿಸಿವೆ. ಕಾರ್ನ್ಫ್ಲೇಕ್ಗಳು ಕಡಿಮೆ ಕೊಬ್ಬು ಮತ್ತು ಕ್ಯಾಲೊರಿಗಳನ್ನು ಹೊಂದಿದ್ದರೂ, ಅವು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿವೆ ಎಂದು ಪರೀಕ್ಷೆಗಳು ತೋರಿಸಿವೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟಗಳು ನಿಯಮಿತವಾಗಿ ಏರುತ್ತಿದ್ದರೆ, ಅದು ಹೃದಯ ಕಾಯಿಲೆ ಮತ್ತು ನರಗಳ ಹಾನಿಯಂತಹ ಮಧುಮೇಹ ಸಂಬಂಧಿತ ತೊಡಕುಗಳಿಗೆ ಕಾರಣವಾಗಬಹುದು.
10-15 ನಿಮಿಷಗಳಲ್ಲಿ ತಯಾರಿಸಲ್ಪಡುವ ತಿನಿಸುಗಳಯ ದುಡಿಯುವ ಕುಟುಂಬಗಳು ಮತ್ತು ಯುವಜನರಲ್ಲಿ ವಿಶೇಷವಾಗಿ ಜನಪ್ರಿಯಗೊಳಿಸಿದೆ. ಹೀಗಾಗಿ ಡೆಲಿವರಿ ಪ್ಲಾರ್ಟ್ಫಾರ್ಮ್ಗಳು 2024-25ರಲ್ಲಿ RTE ಧಾನ್ಯಗಳ ಮಾರಾಟಕ್ಕೆ 30-40% ಕೊಡುಗೆ ನೀಡಿವೆ. ಇದರ ಪರಿಣಾಮವಾಗಿ, ಧಾನ್ಯಗಳು ಅವುಗಳ ಅನುಕೂಲತೆ ಮತ್ತು ತಕ್ಷಣದ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯದಿಂದಾಗಿ ನಗರಗಳಲ್ಲಿ “ತಿಂಡಿ” ಅಥವಾ ತ್ವರಿತ ಉಪಹಾರ ಆಯ್ಕೆಯಾಗಿ ಗುರುತಿಸಲ್ಪಟ್ಟಿವೆ. ಪರಿಣಾಮವಾಗಿ, ಭಾರತೀಯ ಉಪಹಾರ ಧಾನ್ಯ ಮಾರುಕಟ್ಟೆ (ವಿಶೇಷವಾಗಿ RTE) 2026 ಕ್ಕೆ ಬಲವಾದ ಬೆಳವಣಿಗೆಯ ಮುನ್ಸೂಚನೆಗಳನ್ನು ತೋರಿಸುತ್ತಿದೆ, ಒಟ್ಟು ಮಾರುಕಟ್ಟೆ ಮೌಲ್ಯವು 2025 ರಲ್ಲಿ USD 5.14 ಶತಕೋಟಿಯಿಂದ (CAGR 6.08%) 2030 ರ ವೇಳೆಗೆ USD 7.32 ಶತಕೋಟಿ ತಲುಪುವ ನಿರೀಕ್ಷೆಯಿದೆ.
ಅದೇನೇ ಇದ್ದರೂ, ಪೋಹಾ, ಉಪ್ಮಾ, ಇಡ್ಲಿ ಮತ್ತು ಪರಾಠಾದಂತಹ ಸಾಂಪ್ರದಾಯಿಕ ಖಾರದ ಉಪಹಾರ ಭಕ್ಷ್ಯಗಳು ಈಗಲೂ ಭಾರತೀಯರ ಆದ್ಯತೆಯಾಗಿದೆ. ಏಕೆಂದರೆ ಅವು ಭಾರತೀಯ ಸಂಸ್ಕೃತಿ, ಅಭಿರುಚಿಗಳು ಮತ್ತು ಸಾಮಾಜಿಕ ಪದ್ಧತಿಗಳೊಂದಿಗೆ ಆಳವಾಗಿ ಹೆಣೆದುಕೊಂಡಿವೆ. ಈ ಭಕ್ಷ್ಯಗಳು ಬೆಚ್ಚಗಿನ, ಮಸಾಲೆಯುಕ್ತ ಮತ್ತು ಪೌಷ್ಟಿಕವಾಗಿದ್ದು, ಕುಟುಂಬಗಳು ಒಟ್ಟಿಗೆ ತಿನ್ನುವ ಅಭ್ಯಾಸವನ್ನು ಅವು ಬೆಳೆಸುತ್ತವೆ. ಅಕ್ಕಿ, ಬೇಳೆ ಮತ್ತು ತರಕಾರಿಗಳಿಂದ ತಯಾರಿಸಲಾದ ಈ ಭಕ್ಷ್ಯಗಳು ಅಗ್ಗವಾಗಿವೆ ಮತ್ತು ಸುಲಭವಾಗಿ ಲಭ್ಯವಿರುತ್ತವೆ ಮತ್ತು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಧಾನ್ಯಗಳಿಂದ ತಯಾರಿಸಲ್ಪಟ್ಟ ಸಿದ್ಧ ಆಹಾರಗಳು ಹೆಚ್ಚಿನ ಬೆಲೆ, ಸಿಹಿ, ಬಣ್ಣ ಮತ್ತು ಸಕ್ಕರೆಯ ಉಪಸ್ಥಿತಿಯಿಂದಾಗಿ ಮಧುಮೇಹ ಮತ್ತು ಬೊಜ್ಜನ್ನು ಸೃಷ್ಟಿಸುತ್ತಿದೆ. ಶುದ್ಧ ಧಾನ್ಯಗಳನ್ನು ಮನೆಯಲ್ಲೇ ಬೇಯಿಸಿ ತಿಂದರೆ ಅದು ಆರೋಗ್ಯಕ್ಕೆ ಪೂರಕವಾಗುತ್ತವೆ, ಆದರೆ ಅದನ್ನು ಚಿತ್ರ ವಿಚಿತ್ರವಾಗಿ ಮಾರುಕಟ್ಟೆಗೆ ತೇಲಿಬಿಟ್ಟರೆ ಅದು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


