News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಬರವ ಮೆಟ್ಟಿ ನಿಲ್ಲಲು ಇಲ್ಲಿ ಸಿದ್ಧವಾಗುತ್ತಿದೆ ಕಾರ್ಯಯೋಜನೆ…!

ನೀರಿಲ್ಲ… ನೀರಿಲ್ಲ… ಬರ… ಬರ.. ಎನ್ನುವ ಮಾತಿಗಿಂತ ನೀರಾಗುವ, ನೀರಾಗುವಂತೆ ಮಾಡುವ ಹೆಜ್ಜೆ ಏನು ಎಂಬುದರ ಕಡೆಗೆ ಈಗ ಬೆಳಕು ಹರಿಸಲೇಬೇಕಾದ ಕಾಲ ಬಂದಿದೆ. ಸವಾಲುಗಳನ್ನು  ಮೆಟ್ಟಿ ನಿಲ್ಲುವ ಕಾರ್ಯಯೋಜನೆಗಳು ಬೇಕಾಗಿದೆ. ಅಂತಹದ್ದೊಂದು ಪ್ರಯೋಗ ಪಡ್ರೆ ಗ್ರಾಮದಲ್ಲಿ  ಆರಂಭವಾಗಿದೆ.  ಪಡ್ರೆ ಎನ್ನುವುದು  ಕಾಸರಗೋಡು ಜಿಲ್ಲೆಯ ಪೆರ್ಲದ ಬಳಿಯ ಪುಟ್ಟ ಗ್ರಾಮ. ದಕ್ಷಿಣ ಕನ್ನಡ ಜಿಲ್ಲೆಯ ಪಾಣಾಜೆಯ ಗಡಿಭಾಗ.

ನೀರಿನ ಬಗ್ಗೆ, ಪಡ್ರೆ ಗ್ರಾಮದ ನೀರಿನ ಸ್ಥಿತಿಯ ಬಗ್ಗೆ ಮಾತನಾಡುವಾಗ ಜಲತಜ್ಞ ಶ್ರೀಪಡ್ರೆ ಹೇಳುವುದು  ಹೀಗೆ, ” ಪಡ್ರೆ ತೋಡು ಬತ್ತಿದೆ, ಆದರೆ ಪಡ್ರೆವಾಸಿಗಳ ಜೀವನೋತ್ಸಾಹ ಇನಿತೂ ಬತ್ತಿಲ್ಲ” ಹೀಗಾಗಿ ನಾವು ಅಂದರೆ ಈ ಗ್ರಾಮದ ಎಲ್ಲರೂ ಸೇರಿ ಒಂದೆರಡು ವರ್ಷದಲ್ಲಿ  ನೀರು ಮಾಡುತ್ತೇವೆ, ನೀರು ಪಡೆಯುತ್ತೇವೆ ಎಂಬ ವಿಶ್ವಾಸ ಇದೆ ಎನ್ನುತ್ತಾರೆ.

ಪಡ್ರೆಯಲ್ಲಿ ಈ ವರ್ಷ ಶತಮಾನದಲ್ಲೇ ಕಂಡರಿಯದ ಅಭೂತಪೂರ್ವ ಬರ. ಈ ಹಿಂದಿನ ಅಭೂತಪೂರ್ವ ಕ್ಷಾಮದ ವರ್ಷ 1983 ರನ್ನು ಬಹಳ ಹಿಂದೆ ಹಾಕಿದ ಸ್ಥಿತಿ ಈ ವರ್ಷದ್ದು. ಪಡ್ರೆಯ ತೋಡು – ಕೆರೆ – ಬಾವಿಗಳು ಈ ವರೆಗೆ ಬತ್ತದಷ್ಟು ಬತ್ತಿದ್ದು ಸತ್ಯ. ಆದರೆ, ನಮ್ಮ, ಪಡ್ರೆವಾಸಿಗಳ, ಉತ್ಸಾಹ ಬತ್ತಿಲ್ಲ. ಮತ್ತೆ ಸುಸ್ಥಿತಿಗೆ, ನೀರನೆಮ್ಮದಿಗೆ ನಾವು ಬೇಗನೆ ಮರಳುತ್ತೇವೆ ಎನ್ನುವ ವಿಶ್ವಾಸವನ್ನು  ಶ್ರೀಪಡ್ರೆ ವ್ಯಕ್ತಪಡಿಸುತ್ತಾರೆ.

ಕಳೆದ ವಾರ ಪಡ್ರೆ ಗ್ರಾಮದ ಜಲಸಮಸ್ಯೆ ಹಾಗೂ ಪರಿಹಾರಕ್ಕಾಗಿ ತೋಡಿನಲ್ಲಿ  ನಡೆದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಂದರೆ ತೋಡಿನಲ್ಲಿ ಜಲ ಬತ್ತಲು ಕಾರಣಗಳ ಬಗ್ಗೆ ಮಾಹಿತಿ ಪಡೆದಾಗ ಕಟ್ಟಗಳ ಪುನರ್ ನಿರ್ಮಾಣವೇ ಪರಿಹಾರ ಎಂಬುದು ಅರಿವಾಗಿತ್ತು. ಆ ನಂತರ ಕಾರ್ಯಯೋಜನೆ ಸಿದ್ಧ ಮಾಡಿದ್ದಾರೆ. ಮನೆಗಳಲ್ಲಿ, ಹೊಳೆಯ ಬದಿಗಳಲ್ಲಿ, ತೋಡಿನಲ್ಲಿ, ಕಟ್ಟದಲ್ಲಿ ಕುಳಿತು ಎಲ್ಲರೂ ಒಂದಾಗಿ ಊರಿನ ಜಲಸಮಸ್ಯೆ ಪರಿಹಾರಕ್ಕೆ ಮಾರ್ಗೋಪಾಯ ಕಂಡುಕೊಂಡರು. ಇದಕ್ಕಾಗಿಯೇ ಒಂದು ಶೀರ್ಷಿಕೆ ಇರಿಸಿಕೊಂಡರು ” ನೀರ ನೆಮ್ಮದಿಯತ್ತ ಪಡ್ರೆ” – ಕಾರ್ಯಯೋಜನೆ ಎಂದೇ ಕಾರ್ಯ ಆರಂಭಿಸಿದರು. ಇದರ ಮೊದಲ ಸಾಲು ಹೀಗಿದೆ, ” ನಮ್ಮ ತೋಡು, ಕೆರೆ ಬಾವಿಗಳ , ಕುಡಿನೀರಿನ ವ್ಯವಸ್ಥೆಯ ಸುಸ್ಥಿತಿ ಅಥವಾ ಅವನತಿ – ಇವೆರಡೂ ನಮ್ಮೆಲ್ಲರ ಕೈಗಳಲ್ಲಿವೆ – ನೆನಪಿಡಿ. ನಮಗೆ ಸಿಗುವ ಮಳೆ ಕಮ್ಮಿಯಲ್ಲ. ಎಕರೆಯ ಮೇಲೆ ಒಂದು ಕೋಟಿ ನಲುವತ್ತು ಲಕ್ಷ ಲೀಟರ್! “.

ಇಲ್ಲಿಂದಲೇ ಕಾರ್ಯಯೋಜನೆ ಶುರು

ಹೀಗಿದೆ ಆ ಯೋಜನೆಯ ಹಂತ ಹಂತದ ಪಾಯಿಂಟ್

⭕  2019 ರ ಅಂತ್ಯದಲ್ಲಿ, ಹಿಂಗಾರು ಮಳೆಯ ನಂತರ ಸ್ವರ್ಗ ಮತ್ತು ಪಡ್ಪು – ಪೊಯ್ಯೆ ತೋಡುಗಳಲ್ಲಿ ಬಹುಕಾಲದಿಂದ ಕಟ್ಟ ಕಟ್ಟುತ್ತಿದ್ದ ಜಾಗಗಳಲ್ಲಿ ಪುನಃ ಕಟ್ಟಗಳ ರಚನೆ.

⭕ 2019 ರ ಕೊನೆಗೆ ಬಹುಕಾಲದಿಂದ ಕಟ್ಟದ ಕಟ್ಟವೊಂದರ ಪುನರ್ನಿರ್ಮಾಣವನ್ನು ಉತ್ಸವೋಪಾದಿಯಲ್ಲಿ ನಡೆಸಿ ಸರಣಿ ಕಟ್ಟ ನಿರ್ಮಾಣದ ಮಹಾಕಾರ್ಯದ ಉದ್ಘಾಟನೆ.

⭕  ಇದೇ ಸಾಲಿನಲ್ಲಿ ದರ್ಖಾಸ್ತು, ಗುಡ್ಡ ಪ್ರದೇಶ ಅಥವಾ ಇತರೆಡೆ ಇರುವ ಚಿಕ್ಕ ಹಿಡುವಳಿದಾರರ ಪೈಕಿ ನೀರಿಂಗಿಸಲು ತಯಾರಾಗಿ ಮುಂದೆ ಬರುವ ಮನೆಗಳ ಗುಂಪುಗಳಿಗೆ ತೆರೆದ ಬಾವಿಗಳಲ್ಲಿ ನೀರು ಹೆಚ್ಚಿಸಲು ಬೇಕಾದ ಕಾಮಗಾರಿಯ ಬಗ್ಗೆ ಮಾರ್ಗದರ್ಶನ.

⭕  ಇದೇ ಸಾಲಿನಲ್ಲಿ ತಂತಮ್ಮ ಜಮೀನುಗಳಿಂದ ವ್ಯರ್ಥವಾಗಿ ಹರಿದು ತೋಡು ಸೇರುವ ನೀರನ್ನು ಇಂಗಿಸಿ ತಂತಮ್ಮ ಜಲಮೂಲಗಳಲ್ಲಿ ನೀರಿನ ಲಭ್ಯತೆ ಹೆಚ್ಚಿಸ ಬಯಸುವವರಿಗೆ ಮಾಹಿತಿ ನೀಡಿಕೆ.

⭕  2010 ರಲ್ಲಿ ಮೇಲೆ ತಿಳಿಸಿದ ಎರಡೂ ತೋಡುಗಳ ಇಕ್ಕೆಲದ ಗುಡ್ಡಗಳಿಂದ ಮಳೆ ಬಂದಾಗ ಕೆಳಗಿಳಿಯುವ ಮಳೆನೀರನ್ನು ಗುಡ್ಡಗಳ ಮೇಲ್ಭಾಗಗಳಲ್ಲೇ ಅಲ್ಲಲ್ಲೇ ತಡೆದು ಇಂಗಿಸುವ ಬಗ್ಗೆ ಪ್ಲಾನಿಂಗ್ ಮತ್ತು ಕಾಮಗಾರಿ.

⭕  ನೀರಾವರಿ ಮತ್ತು ಮನೆಬಳಕೆಯಲ್ಲಿ ನೀರಿನ ಪೋಲು ಮತ್ತು ಅತಿಬಳಕೆ ಆಗದಂತೆ ಕಟ್ಟುನಿಟ್ಟಾದ ಸ್ವನಿಯಂತ್ರಣ ಹೆಜ್ಜೆಗಳ ಸ್ವೀಕಾರ.

⭕  ನೀರಾವರಿಯ ಆರಂಭದಲ್ಲಿ ಕೆರೆ – ತೋಡು-ಬಾವಿಗಳಂತಹ ಮೇಲುಸ್ತರದ ಜಲಧರ ಪ್ರದೇಶದ ನೀರನ್ನಷ್ಟೇ ಬಳಸಿ ಇದು ಮುಗಿದ ನಂತರ ಮಾತ್ರ ಕೊಳವೆಬಾವಿಗಳ ಬಳಕೆ.

⭕  ಕೊಳವೆಬಾವಿಗಳ ಮರುಪೂರಣಕ್ಕೆ ಕ್ರಮ.

⭕  ಕಾಲಕ್ರಮದಲ್ಲಿ ತೋಡುಗಳ ಪಕ್ಕದಿಂದ ಆರಂಭವಾಗಿವ ಜಲಸಂರಕ್ಷಣೆ,ಜಲಮರುಪೂರಣ ಮತ್ತು ಇವುಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಗ್ರಾಮದ ಇತರೆಡೆಗಳಿಗೆ ವಿಸ್ತರಣೆ.

⭕  ದೊಡ್ಡ ಪ್ರದೇಶಕ್ಕೆ ನೀರು ಊಜಿಕೊಡುವ, ಹಿಂದಿನ ಕಾಲದಲ್ಲಿ ನೀರಿನ ಸುಸ್ಥಿತಿಗೆ ಆಧಾರವಾಗಿದ್ದ ಜಲಮೂಲಗಳ ಬಗ್ಗೆ ಅಧ್ಯಯನ ಮತ್ತು ಅವುಗಳ ಪುನರುಜ್ಜೀವನ ಯತ್ನ.

⭕  ಶಾಲೆಗಳಲ್ಲಿ ಜಲಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು – ರಜಾಕಾಲದಲ್ಲಿ ವಿದ್ಯಾರ್ಥಿಗಳಿಗೆ ನೀರಿನ ಅರಿವು ಹುಟ್ಟಿಸಲು ಅಧ್ಯಯನ ಯಾತ್ರೆ.

⭕  ಮೇಲಿನ ಎಲ್ಲಾ ಕಾರ್ಯಕ್ರಮಗಳಿಗೆ ಸಮುದಾಯದ ದೊಡ್ಡ ಭಾಗದಿಂದ ಸಹಕಾರ ಸಿಕ್ಕಿ ನೀರಿನ ಅತಿಬಳಕೆ ತಡೆದು ’ತೋಟಕ್ಕೆ ಅತ್ಯವಶ್ಯವಾಗಿರುವಷ್ಟೇ ನೀರುಣಿಸುವ’ ಶಿಸ್ತು ಪಾಲಿಸಿದರೆ ಎರಡೇ ಎರಡು ಮಳೆಗಾಲಾನಂತರ ನಮ್ಮ ಮೇನಿನ ಎರಡೂ ತೋಡುಗಳು ವರ್ಷವಿಡೀ ಹರಿಯುವಂತಾಗಬಹುದು.

ಕೊನೆಗೊಂದು ಟಪ್ಸ್ ಕೊಡುತ್ತಾರೆ ಇಲ್ಲಿ, “ಅವಶ್ಯಕ್ಕಷ್ಟೇ ನೀರು ಬಳಸುವ ಅಭ್ಯಾಸ ಬೆಳೆಸಿಕೊಂಡು ಮಳೆನೀರನ್ನು ಓಡದ ಹಾಗೆ ಅಲ್ಲಲ್ಲಿ, ಬೀಳುವಲ್ಲೇ ತಡೆಯುವ ವ್ಯವಸ್ಥೆ ಮಾಡಿದರೆ ಪಡ್ರೆಯಲ್ಲಿ ಈಗ ಇರುವ ತೋಟಗಳಿಗೆ ಮತ್ತು ಕುಟುಂಬಗಳಿಗೆ ಧಾರಾಳ ನೀರು ಇದೆ. ನೀರಿನ ನಿರ್ವಹಣೆಯ ಸಂಬಂಧಪಟ್ಟ ಲೋಪಗಳನ್ನು ಸರಿಪಡಿಸಿದರೆ ಈ ವರ್ಷದಂತೆ ಸ್ವಾತಿ ಮಳೆ ಮತ್ತು ಬೇಸಿಗೆ ಮಳೆ ಕೈಕೊಟ್ಟರೂ ಇಷ್ಟು ಸಂಕಟ ಪಡಬೇಕಾಗಿ ಬಾರದು”.

✍ ಮಹೇಶ್ ಪುಚ್ಚಪ್ಪಾಡಿ
ಸಂಪಾದಕರು – sullianews.com

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top