ಒರಿಸ್ಸಾದ ಬಲಸೋರ್ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ವಿಜಯವನ್ನು ಗಳಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡುತ್ತಿದ್ದಾರೆ. ಎಲ್ಲರೂ ಅವರನ್ನು ‘ಒರಿಸ್ಸಾದ ಮೋದಿ’ ಎಂದೇ ಕರೆಯುತ್ತಿದ್ದಾರೆ.
ಕಚ್ಛಾ ಮನೆಯಲ್ಲಿ ವಾಸಿಸುತ್ತಿರುವ ಸಾರಂಗಿ ಅವರಿಗೆ ಇರುವ ಏಕೈಕ ಆಸ್ತಿಯೆಂದರೆ ಆ ಮನೆಯೊಂದೇ. ಮದುವೆಯಾಗಿಲ್ಲ, ತಾಯಿಯನ್ನು ಕಳೆದ ವರ್ಷ ಕಳೆದುಕೊಂಡಿದ್ದಾರೆ. ಸಂಚರಿಸಲು ಸೈಕಲ್ ಬಳಸುತ್ತಾರೆ ಮತ್ತು ಇವರು ಒರಿಸ್ಸಾದ ಬಿಜೆಪಿಯ ತಳಮಟ್ಟದ ಕಾರ್ಯಕರ್ತ. ಸಂಸದನಾಗಿ ತನ್ನ ಕರ್ತವ್ಯವನ್ನು ಪೂರ್ಣಗೊಳಿಸಲು ಅವರು ದೆಹಲಿಗೆ ತೆರಳಲು ನಡೆಸುತ್ತಿರುವ ಸಿದ್ಧತೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದವರಾದ ಇವರು, ತಮ್ಮ ಕಾರ್ಯಕ್ಷೇತ್ರದಲ್ಲಿ ಅಪಾರವಾದಂತಹ ಗೌರವವನ್ನು ಪಡೆದುಕೊಂಡಿದ್ದಾರೆ. ಸಂಸ್ಕೃತಕ್ಕೆ ಇವರು ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಬಹುಶಃ ಸಂಸತ್ತಿನಲ್ಲಿ ಅತ್ಯಂತ ನಿರರ್ಗಳವಾಗಿ ಸಂಸ್ಕೃತ ಮಾತನಾಡುವ ಏಕೈಕ ವ್ಯಕ್ತಿ ಇವರಾಗಬಹುದು.
ಇಡೀ ಜೀವನವನ್ನು ಸಾಮಾಜಿಕ ಕಾರ್ಯ ಮತ್ತು ಸಾಮಾನ್ಯ ಜನರ ಉನ್ನತಿಗಾಗಿ ಮುಡುಪಾಗಿಟ್ಟುಕೊಂಡಿರುವ ಅವರು, ಅತ್ಯಂತ ಆಧ್ಯಾತ್ಮಿಕ ವ್ಯಕ್ತಿಯಾಗಿದ್ದಾರೆ, ಧರ್ಮಕ್ಕಾಗಿ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಸಂಸದನಾಗುತ್ತಿದ್ದಂತೆ ಇವರು ಇಡೀ ದೇಶದಲ್ಲೇ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಇವರ ಫೋಟೋಗಳು ಭಾರೀ ವೈರಲ್ ಆಗುತ್ತಿದ್ದು ಎಲ್ಲಾ ಕಡೆಯು ಹರಿದಾಡುತ್ತಿದೆ.
ಸಾರಂಗಿ ಅವರು ಬಿಜೆಡಿ ಪಕ್ಷದ ರಬೀಂದ್ರ ಜೇನ ಅವರನ್ನು 12,956 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. 1998, 1999 ಮತ್ತು 2004 ಅನ್ನು ಹೊರತುಪಡಿಸಿ ಮತ್ಯಾವ ವರ್ಷವೂ ಬಿಜೆಪಿ ಈ ಕ್ಷೇತ್ರವನ್ನು ಗೆದ್ದುಕೊಂಡಿರಲಿಲ್ಲ. 2004ರಲ್ಲಿ ಮತ್ತು 2009ರಲ್ಲಿ ಸಾರಂಗಿ ಅವರು ನೀಲಗಿರಿ ಸ್ಥಾನದಿಂದ ಶಾಸಕನಾಗಿ ಆಯ್ಕೆಯಾಗಿದ್ದರು. 2014ರಲ್ಲಿ ಸೋತಿದ್ದರು.
ಮೂಲಗಳ ಪ್ರಕಾರ ಸಾರಂಗಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ತೀರ ಹತ್ತಿರದ ವ್ಯಕ್ತಿಯಾಗಿದ್ದಾರೆ. ಒರಿಸ್ಸಾಗೆ ಹೋದಾಗಲೆಲ್ಲಾ ಮೋದಿ ಅವರನ್ನು ತಪ್ಪದೇ ಭೇಟಿ ಮಾಡುತ್ತಾರಂತೆ.
ಸಾರಂಗಿ ಅವರ ಪ್ರಸಿದ್ಧಿ ಈಗ ಅವರನ್ನು ಒರಿಸ್ಸಾದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಬೇಕು ಎಂಬಲ್ಲಿಯವರೆಗೆ ತಲುಪಿದೆ. ನೀಲಗಿರಿ ಜಿಲ್ಲೆಯ ಗೋಪಿನಾಥಪುರದ ಬಡ ಕುಟುಂಬವೊಂದರಲ್ಲಿ ಜನಿಸಿದ ಸಾರಂಗಿ ಫಕೀರ್ ಮೋಹನ್ ಕಾಲೇಜಿನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ರಾಮಕೃಷ್ಣ ಮಠದಲ್ಲಿ ಸನ್ಯಾಸಿ ಆಗಬೇಕು ಎಂಬುದು ಅವರ ಬಯಕೆಯಾಗಿತ್ತು, ಆದರೆ ಮಠ ಅವರಿಗೆ ಅವರ ಪ್ರದೇಶದಲ್ಲಿ ಸಾಮಾಜಿಕ ಸೇವೆಯನ್ನು ಮಾಡುವಂತೆ ಉತ್ತೇಜನವನ್ನು ನೀಡಿತು. ಬಳಿಕ ಅವರು ತಮ್ಮ ಗ್ರಾಮಕ್ಕೆ ವಾಪಾಸ್ ಆಗಿ ಜನ ಸೇವೆ ಮಾಡಲು ಆರಂಭಿಸಿದರು. ಬಲಸೋರ್ ಮತ್ತು ಮಯೂರ್ಬಂಜ್ ಬುಡಕಟ್ಟು ಪ್ರದೇಶಗಳಲ್ಲಿ ಅವರು ಶಾಲೆಗಳನ್ನೂ ತೆರೆದಿದ್ದಾರೆ.
ಪ್ರಸ್ತುತ ಸಂಸದನಾಗಿ ಆಯ್ಕೆಯಾಗಿರುವ ಅವರು ತಮ್ಮ ಅಧಿಕಾರವನ್ನು ಸದುಪಯೋಗಪಡಿಸಿಕೊಂಡು ಇನ್ನಷ್ಟು ಜನಸೇವೆ ಮಾಡಲು ಸಜ್ಜಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.