ಮುದ್ದು ತೊದಲು ಮಾತನಾಡುವ ಮಗುವಿನಿಂದ ಹಿಡಿದು ಚಂದದ ಕಥೆ ಹೇಳುವ ಅಜ್ಜನ ತನಕ ಮೋದಿ. ಯುವ ಪೀಳಿಗೆಯ ಕನಸಿಗೆ ರೆಕ್ಕೆ ಕೊಟ್ಟ ಮೋದಿ. ಸೈನಿಕರ, ಕಾರ್ಮಿಕರ, ರೈತರ, ಉದ್ಯಮಿಗಳ, ಉದ್ಯೋಗಿಗಳ, ಬಡವರ, ಮಧ್ಯಮ ವರ್ಗದ ಮತ್ತು ಎಲ್ಲರ ಮೋದಿ. ಅವರೇ ಒಂದು ಉತ್ಸಾಹ ಮತ್ತು ಅವರೇ ಒಂದು ಉತ್ಸವ.
ಮೋದಿ ಏನು ಮಾಡಿದ್ದಾರೆ ಎನ್ನುವ ಎಲ್ಲರಿಗೂ ಗೊತ್ತು, ಅವರೇನು ಮಾಡಿದರು ಎಂದು. ನಮಗೂ ಅವರೇ ಇಷ್ಟ, ಆದರೆ ನಮ್ಮ ಬದುಕಿಗಾಗಿ, ಹಿರಿಯರಿಂದಾಗಿ ಮತ್ತು ವೈಯಕ್ತಿಕ ಕಾರಣಗಳಿಗಾಗಿ ಮೋದಿಯವರನ್ನು ಬಹಿರಂಗವಾಗಿ ಹೊಗಳಲಾರೆ ಎನ್ನುವ ಎಷ್ಟೋ ಜನರಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶ ಅದಲ್ಲ. ಅವರು ತೋರಿಸಿದ ಕಾಳಜಿ, ಹೊಸ ಸಾಧ್ಯತೆಗಳನ್ನು ಜನ ಎಷ್ಟು ಅನುಸರಿಸಿದ್ದಾರೆ ಎನ್ನುವುದು.
ಹಲವಾರು ವರ್ಷಗಳ ಸ್ವಾತಂತ್ರ್ಯ ದಿನಗಳ ಮತ್ತು ಗಣರಾಜ್ಯ ದಿನಗಳ ಭಾಷಣಗಳ ತಿಳಿದಿದ್ದೇವೆ. ಯಾವತ್ತೂ ಒಬ್ಬ ಪ್ರಧಾನಿ ಕೆಂಪು ಕೋಟೆಯ ಮೇಲೆ ನಿಂತು ಶೌಚಾಲಯಗಳ ಬಗ್ಗೆ ಮಾತನಾಡಲಿಲ್ಲ. ಗಾಜಿನ ಪರದೆಯ ಹಿಂದೆ ನಿಂತು ಬರೆದಿರುವ ಭಾಷಣಗಳ ಓದಿ ಮುಗಿಸಿದವರೆಷ್ಟೊ. ಭಾರತವು ಸ್ವಚ್ಛತೆಯ ಕನಸು ಕಾಣುವ ಹಾಗೆ ಮಾಡಿದವರು ಅವರು. ಅಪಹೃತ ಸೈನಿಕರ ಹೆಣಗಳು ತಲೆಗಳಿಲ್ಲದೆ, ತುಂಡು ತುಂಡಾಗಿ ಕತ್ತರಿಸಿ ಕಳಿಸಿದ ಕಾಲವೂ ಒಂದಿತ್ತು. ಈಗ ವೀರನ ಹೊಸ ಸೂಟಿನೊಂದಿಗೆ ಚಹಾ ಕುಡಿಸಿ ಕಳಿಸಿಲಾಗುತ್ತಿದೆ.
ಭಾರತದ ತಂಟೆಗೆ ಬರಬಾರದು, ಅಲ್ಲಿ ನಾವು ಬರುತ್ತೇವೆ ಎಂದು ಹೇಳಿದ ದೇಶಗಳು ಇಷ್ಟು ವರ್ಷಗಳು ಈ ಭೂಮಿಯಲ್ಲಿ ಇದ್ದವು ಅಲ್ಲವೇ? ಭಾರತ ಜಗತ್ತಿನ ಎತ್ತರದ ಪ್ರತಿಮೆ ನಿಲ್ಲಿಸಬಲ್ಲೆವು ಎಂದು ಯಾರಾದರೂ 2014ರ ಮೊದಲು ಹೇಳಿದ್ದರೆ ಅದು ಕಲ್ಪನೆ ಅನ್ನಿಸುತ್ತಿತ್ತು. ಸೈನಿಕರನ್ನು ದೀಪಾವಳಿ-ಉಗಾದಿಗಳಲ್ಲೂ ನೀವು ಪ್ರಧಾನಿಗಳೊಂದಿಗೆ ನೋಡಬಹುದು.
ಸಾವಿರಾರು-ಲಕ್ಷಾಂತರ ರೂಪಾಯಿಗಳ ವಿಮಾ ಯೋಜನೆಗಳನ್ನು ಇದ್ದವು. ಬಾರಪ್ಪ ನಿನಗೆ ಒಂದೇ ಒಂದು ಹಾಳೆಯ ಅದೂ ದಿನಕ್ಕೆ ಕೇವಲ ಒಂದು ರೂಪಾಯಿಗೂ ಕಡಿಮೆ ದರದಲ್ಲಿ 200000 ರೂಪಾಯಿಗಳ ವಿಮೆ ಮಾಡಿಸುವೆ ಎಂದು ಯಾರಾದರೂ ಹೇಳಿದ್ದರೆ ನೀವು ಅವರನ್ನು ಏನೆಂದು ಕರೆಯುತ್ತಿದ್ದಿರಿ? ಅಡುಗೆ ಅನಿಲಕ್ಕೆ ತಿಂಗಳುಗಟ್ಟಲೆ ಕಾದ ದಿನಗಳೆಷ್ಟು? ಸಮಯಕ್ಕೆ ಸರಿಯಾಗಿ ಗೊಬ್ಬರ ಸಿಗದೇ ಹಾಳಾದ ಫಸಲೆಷ್ಟು?
ಅದ್ಭುತ ಭಾರತವನ್ನು ಪ್ರತಿನಿಧಿಸುವ ವ್ಯಕ್ತಿ ಒಳ್ಳೆಯ ಬಟ್ಟೆಯನ್ನು ಹಾಕಬಾರದೇ? ಅವರು ಯಾವ ಹಬ್ಬವನ್ನು ವಿದೇಶಗಳಲ್ಲಿ ಆಚರಿಸಿದ್ದು ನೀವು ನೋಡಿರಲಿಕ್ಕಿಲ್ಲ. ಅದಿರಲಿ ಲೆಕ್ಕಾಚಾರದ ಖರ್ಚಿನ ಬದುಕಿನ ನಾವು ಮಧ್ಯಮ ವರ್ಗದ ಜನ ಕಡಿಮೆ ದರದಲ್ಲಿ ದೊರಕುವ ಚೀನೀ ವಸ್ತುಗಳ ಬಹಿಷ್ಕರಿಸುವ ನಿರ್ಧಾರಕ್ಕೆ ಯಾರಿಂದ ಬಂದಿರಿ?
ರಾಜಕಾರಣಿಗಳು ಎಲ್ಲರೂ ಒಂದೇ ಅನ್ನುವವರು ಕೂಡ ಮೋದಿ ಇದ್ದಾರಲ್ಲ ಅನ್ನುತ್ತಾರೆ. ಮತಗಳು ಸಿಗಲಿ ಎಂದು ಅವರು ಭಾರತ ವಿರೋಧಿಗಳ ಬಣ್ಣಿಸಲಿಲ್ಲ.
ಬಿಡಿ ಮೋದಿಯವರ ಬಗ್ಗೆ ಹೇಳುತ್ತಾ ಹೋದರೆ ತುಂಬಾ ಸಮಯ ಬೇಕಾಗಬಹುದು. ಅವರ ಪಕ್ಷದ ಕಾರ್ಯಕರ್ತನೂ ಅಲ್ಲದೇ ಅವರ ಪರವಾಗಿ ಪ್ರಚಾರ ಮಾಡಿದವರು ಇದ್ದಾರೆ. ಅವರೂ ಸಾವನ್ನು ನೆನಪಿಸಿ ಮತ ಕೇಳಲಿಲ್ಲ. ಸಾಧನೆಗಳ ಸರಮಾಲೆ ನೀಡಿದ್ದಾರೆ. ಕೆಳ ಮಧ್ಯಮವರ್ಗದ, ಹಿಂದುಳಿದ ಜಾತಿಯ ಒಬ್ಬ ವ್ಯಕ್ತಿಯು ತನ್ನ ಸಾಧನೆಗಳಿಂದಲೇ ದೆಹಲಿಯ ಗದ್ದುಗೆಯನ್ನು ತಲುಪಿ, ಈಗ ನಿಮ್ಮ ಬದುಕನ್ನು ತಲುಪಿದ್ದಾರೆ. ಇಷ್ಟು ದಿನ ನನ್ನ ಮನೆ ಚಂದ ಇರಲಿ ಎನ್ನುತ್ತಿದ್ದ ನಮ್ಮ ಜನ ಅವರ ಸುಂದರ ಭಾರತವನ್ನು ಕಾಣುತ್ತಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರು ಒಂದು ಮಾತು ಹೇಳಿದ್ದರು “ಸೂರ್ಯ ಉದಿಸಲಿದ್ದಾನೆ, ಕತ್ತಲು ಕಳೆಯಲಿದೆ, ಕಮಲವು ಅರಳಲಿದೆ” ಎಂದು. ಆ ತತ್ವಜ್ಞಾನಿಯ ಮಾತು ಎಂದೂ ಸುಳ್ಳಾಗಲಿಲ್ಲ. ನಿಜವಾದ ಪ್ರಯತ್ನಕ್ಕೆ ದೇವರು ನಮ್ಮ ಬೆನ್ನ ಹಿಂದೆ ನಿಲ್ಲುತ್ತಾರೊ ಹಾಗೆ ನರೇಂದ್ರ ಮೋದಿಯವರ ಎಲ್ಲ ಕೆಲಸಗಳನ್ನು ಜನ ಮೆಚ್ಚಿ ಮತ್ತೆ ಹರಿಸಿದ್ದಾರೆ. ಇತಿಹಾಸದಲ್ಲೇ ಅತಿ ಹೆಚ್ಚು ಪ್ರಮಾಣದ ಮತದಾನ 2019ರ ಚುನಾವಣೆಯಲ್ಲಿ ಆಯಿತು. ಬರ್ನಾಲುಗಳ ಉತ್ಪಾದನೆ ಹೆಚ್ಚಿಸಲು ಮೋದಿಯವರು ಕ್ರಮ ಕೈಗೊಳ್ಳಬೇಕಾಗಬಹುದು. ತಮಾಷೆಯನ್ನು ಹೊರತು ಪಡಿಸಿದರೆ 2004ರಲ್ಲಿ ವಾಜಪೇಯಿ ಅವರಿಗೆ ಮಾಡಿದ ನಂಬಿಕೆದ್ರೋಹ ಪುನರಾವರ್ತನೆ ಆಗಲಿಲ್ಲ ಎಂಬುದು ಖುಷಿ ವಿಚಾರ.
ಭಾರತ ನಮಗೆಲ್ಲ ತಿಳಿದಿರುವಂತೆ ಯುವಜನರ ದೇಶ. ಇಲ್ಲಿ ಪ್ರತೀ ಚುನಾವಣೆಯಲ್ಲಿ ಹೊಸ ಮತದಾರರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಯುವಜನ ಎಂದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಚಟುವಟಿಕೆಗಳು ಇದ್ದೇ ಇರುತ್ತದೆ. ಅದಕ್ಕೇ ತಕ್ಕಂತೆ ಮೋದಿಯವರು ಯಾವುದೇ ಮಾಧ್ಯಮಗಳನ್ನು ಹತ್ತಿರ ಸುಳಿಯಗೊಡದೆ, ಕೇವಲ ಸಾಮಾಜಿಕ ಜಾಲತಾಣಗಳ ಬಳಸಿಕೊಂಡು ಜನರನ್ನು ತಲುಪಿದರು. ಯುವ ಪೀಳಿಗೆಯಲ್ಲಿ ದೇಶದ ಕುರಿತು ಭಾವನೆಗಳು ಮೂಡುತ್ತಿವೆ ಎಂದರೆ ಅದು ಅಮೆಜಾನ್ ಸಂಸ್ಥೆಯ, ಸರ್ಫ್ ಎಕ್ಸೆಲ್ ಅಥವಾ ನವಜೋತ್ ಸಿಂಗ್ ಸಿಧು ವಿಚಾರವೇ ಆಗಿರಲಿ ಆ ಎಲ್ಲರನ್ನೂ ಭಾರತೀಯ ಯುವ ಜನಾಂಗ ವಿರೋಧಿಸಿತು. ಇತ್ತೀಚಿನ ಪುಲ್ವಾಮ ದಾಳಿಯನ್ನೇ ತೆಗೆದುಕೊಂಡರೆ, ಅದನ್ನು ಅಪಹಾಸ್ಯ ಮಾಡಿದವರನ್ನು ಕೆಲಸದಿಂದ ವಜಾ ಮಾಡಲಾಯಿತು, ಬಂಧಿಸಲಾಯಿತು ಮತ್ತು ಕ್ಷಮೆ ಕೇಳಿಸಲಾಯಿತು.
ಮೊದಲೇ ಹೇಳಿದಂತೆ ಒಬ್ಬ ಪ್ರಧಾನಿ ಯಾವುದೇ ರಜೆಗಳಿಲ್ಲದೇ, ಸತತ ಐದು ವರ್ಷಗಳು ದಿನಕ್ಕೆ ಹದಿನೆಂಟು ತಾಸು ದುಡಿಯುವುದನ್ನು ಮೊದಲ ಬಾರಿಗೆ ತೋರಿಸಿದವರು ನರೇಂದ್ರ ಮೋದಿ. ಕಾಲಿಗೆ ಚಕ್ರ ಕಟ್ಟಿಕೊಂಡು ದೇಶ ವಿದೇಶಗಳ ಸುತ್ತಿದ ನಾಯಕ. ಅವರು ವಿಜ್ಞಾನ, ರಕ್ಷಣೆ, ಕ್ರೀಡೆ ಮತ್ತು ಅಂತರಾಷ್ಟ್ರೀಯ ಸಂಬಂಧ ಮೊದಲಾದ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ತೋರಿಸಿದ್ದಾರೆ.
ನಮೋ ಅವರಿಗೆ ಇದ್ದಷ್ಟು ವಿರೋಧಿಗಳು ಯಾರಿಗೂ ಇರಲಿಕ್ಕಿಲ್ಲ. ಮಹಾಘಟಬಂಧನ್, ತುಕ್ಡೆ ಗ್ಯಾಂಗ್, ಸಾಹಿತಿಗಳು, ರಂಗಕರ್ಮಿಗಳು, ಮಾಧ್ಯಮಗಳು, ನಟರು, ವಿಜ್ಞಾನಿಗಳು ಮತ್ತು ಬುದ್ದಿಜೀವಿಗಳು ಎನಿಸಿಕೊಂಡವರು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅವಾರ್ಡ್ ವಾಪ್ಸಿಯಿಂದ ಹಿಡಿದು ದಲಿತ ವಿರೋಧಿ ದಂಗೆಯ ತನಕ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಂದ ಹಿಡಿದು ಕೆಜ್ರೀವಾಲರ ಧರಣಿಯ ತನಕ, ಅಸಹಿಷ್ಣುತೆಯ ನಾಟಕದಿಂದ ಹಿಡಿದು ಮಮತಾ ಬ್ಯಾನರ್ಜಿಯ ಅತಿರೇಕದ ತನಕ ಪ್ರತಿಯೊಂದು ಹಂತದಲ್ಲೂ ಮೋದಿಯವರನ್ನು ತುಳಿಯಲು ಪ್ರಯತ್ನ ಮಾಡಲಾಯಿತು. ಪಾಕಿಸ್ತಾನವೇ ತನ್ನ ಮೇಲೆ ದಾಳಿ ಆಗಿರುವುದನ್ನು ಒಪ್ಪಿಕೊಂಡರೂ ಭಾರತದ ವಿಪಕ್ಷಗಳು ಒಪ್ಪಲು ತಯಾರಿರಲಿಲ್ಲ. ಎಲ್ಲಾ ಮುಗಿದ ಮೇಲೆ ಇವಿಎಂ ದುರ್ಬಳಕೆ ಆಪಾದನೆ ಮಾಡಲಾಯಿತು. ವಿಶೇಷ ರೀತಿಯಲ್ಲಿ ಈ ಎಲ್ಲ ಘಟನೆಗಳೂ ಮೋದಿಯವರು ಜನರಿಗೆ ಹತ್ತಿರವಾಗಲು ನೆರವಾದವು. ಅವರ ಕೀರ್ತಿ ಹೆಚ್ಚುತ್ತಲೇ ಹೋಯಿತು.
ಟೀಮ್ ಮೋದಿ, ನಮೋ ಮತ್ತೊಮ್ಮೆ ತರಹದ ತಂಡಗಳ ಸೇರಿಸಿ ಈ ಬಾರಿ ಸ್ವ ಪ್ರೇರಣೆಯಿಂದ ಪ್ರಚಾರ ಮಾಡಿದವರ ಸಂಖ್ಯೆ ಹೆಚ್ಚು. ತಮಿಳುನಾಡಿನಲ್ಲಿ 75 ವರ್ಷದ ಮೋದಿ ಪ್ರಚಾರಕನನ್ನು ಕೊಲ್ಲಲಾಯಿತು. ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಮರ್ಥಕರ ಹಿಂಸಾತ್ಮಕವಾಗಿ ತುಳಿಯುವ ಎಲ್ಲ ರೀತಿಯ ಕೆಲಸಗಳು ನಡೆದಿವೆ. ಆದರೆ ಮೋದಿ ವರ್ಚಸ್ಸು ಜನರ ಮನ ಮುಟ್ಟುವಂತಿತ್ತು. ಹೀಗೆ ಎಡಪಂಥೀಯ ಮಾಧ್ಯಮಗಳ ನಡುವೆ ಮೋದಿಯವರನ್ನು ಮನೆ ಮನಗಳ ಮುಟ್ಟಿಸಿದ ಹಿರಿಮೆ ಅನೇಕ ಯುವಕರ ಪ್ರಯತ್ನಕ್ಕೆ ಸಲ್ಲುತ್ತದೆ.
ಒಟ್ಟಿನಲ್ಲಿ ಭಾರತ ಗೆದ್ದಿದೆ. ವಿಶ್ವ ಗುರು ಹಿಂದೂಸ್ಥಾನ ಪರಮ ವೈಭವಕ್ಕೆ ಮರಳಲಿದೆ. ಒಳ್ಳೆಯ ದಿನಗಳ ಎರಡನೆಯ ಹಂತ ಹೆಚ್ಚು ವೈಭವಯುತವಾಗಿ ಆರಂಭವಾಗಿದೆ. ಭಾರತ ಯಾರೆದರೂ ತಲೆ ತಗ್ಗಿಸಲು ಬಿಡುವುದಿಲ್ಲ ಎಂದ ಮತ್ತು ಅಂತೆಯೇ ಮಾಡಿ ತೋರಿಸಿದ ಮಹಾನ್ ಚೇತನ ಮತ್ತೊಮ್ಮೆ ನಿಮ್ಮ ಪ್ರಧಾನಿ ಆಗಲಿದ್ದಾರೆ. ಶುಭಾಶಯಗಳು.
✍ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.