ಒಂದು ವಸ್ತುವಿನ ಮಹತ್ವ ಅಥವಾ ಅನಿವಾರ್ಯತೆಯ ಅರಿವಾಗುವುದು ಆ ವಸ್ತುವಿನ ಕೊರತೆ ಆದಾಗಲೇ. ಆ ವಸ್ತು ಧಂಡಿಯಾಗಿ ಸಿಗುತ್ತಿರುವಾಗ ಅದರ ಮಹತ್ವ, ಕಿಮ್ಮತ್ತು ನಮ್ಮ ಅರಿವಿಗೆ ಬರುವುದೇ ಇಲ್ಲ. ಈ ಮಾತಿಗೆ ನೀರಿಗಿಂತ ಉಜ್ವಲವಾದ ನಿದರ್ಶನ ಇನ್ನಾವುದು ಇರಬಲ್ಲದು ?
ಏಪ್ರಿಲ್ – ಮೇ ತಿಂಗಳು ಬಂತೆಂದರೆ ನೀರಿಗಾಗಿ ಎಲ್ಲೆಡೆ ಹಾಹಾಕಾರ ಕೇಳಿಬರುತ್ತಿರುವುದು ಕಳೆದೊಂದು ದಶಕದಿಂದ ನಡೆದೇ ಇದೆ. ಕೆಲವು ವರ್ಷ ನೀರಿನ ಬರ ಫೆಬ್ರವರಿಯಲ್ಲೇ ಆರಂಭವಾಗಿರುತ್ತದೆ. 2018 ರ ಮಳೆಗಾಲವನ್ನು ಯಾರೂ ಮರೆಯುವಂಥಹುದಲ್ಲ. ಭರಪೂರ ಮಳೆ ಸುರಿದು ಕೊಡಗು, ಕೊಡಗಿಗೆ ಅಂಟಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಭೂಕುಸಿತ ಸೇರಿದಂತೆ ಅಪಾರ ಹಾನಿಯಾಗಿದ್ದು ಈಗ ಇತಿಹಾಸ. ಕುಂಭದ್ರೋಣವಾಗಿ ಸುರಿದ ಮಳೆ ಮನೆ ಮಠ, ಆಕಳು, ಆಸ್ತಿ-ಪಾಸ್ತಿ, ಕಾಫಿ ತೋಟ, ಗದ್ದೆ ಎಲ್ಲವನ್ನೂ ಸರ್ವನಾಶ ಮಾಡಿತ್ತು. ಇಷ್ಟೊಂದು ವಿಪರೀತ ಮಳೆಯಾಗಿರುವುದರಿಂದ ಈ ವರ್ಷ ನೀರಿಗೆ ಬರ ಇಲ್ಲ ಎಂದೇ ಎಲ್ಲರೂ ಸಮಾಧಾನದಿಂದ ಇದ್ದರು. ಆದರೆ ಆಗಿದ್ದೇನು ?
ಡಿಸೆಂಬರ್ ಕೊನೆಯ ವೇಳೆಯಲ್ಲೇ ಎಲ್ಲೆಡೆ ನೀರಿನ ಬರ ಕಾಣಿಸಿಕೊಳ್ಳತೊಡಗಿತು. ಮಲೆನಾಡು ಪ್ರದೇಶದಲ್ಲೇ ನೀರಿಗೆ ತತ್ವಾರ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಯಿತು. ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಧರ್ಮಸ್ಥಳ, ಕಟೀಲು, ಕೂಡಲಸಂಗಮ, ಮಂತ್ರಾಲಯಗಳಲ್ಲಿ ನೀರಿನ ಅಭಾವ ತಲೆದೋರಿತು. ಯಾತ್ರಾಸಕ್ತರು ತಮ್ಮ ಯಾತ್ರೆಯನ್ನು ಆದಷ್ಟು ಮುಂದೂಡುವಂತೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಅಧಿಕೃತ ಪ್ರಕಟಣೆ ಹೊರಡಿಸಿದರು. ಧರ್ಮಸ್ಥಳಕ್ಕೆ ನೀರಿನ ಮೂಲವಾಗಿರುವ ನೇತ್ರಾವತಿ ಸಂಪೂರ್ಣ ಬತ್ತಿ ಹೋಗಿದ್ದೇ ಇದಕ್ಕೆ ಕಾರಣ. ಅಲ್ಲಿ ಯಾವತ್ತೂ ಹೀಗಾಗಿರಲಿಲ್ಲವಂತೆ. ಅಲ್ಲೀಗ ನೀರಿನ ಅಭಾವ ತಲೆದೋರಿರುವ ಹಿನ್ನೆಲೆಯಲ್ಲಿ ಊಟಕ್ಕೆ ಸ್ಟೀಲ್ ತಟ್ಟೆಯ ಬದಲಿಗೆ ಎಲೆಯಿಂದ ಮಾಡಿದ ಪತ್ರಾವಳಿಯನ್ನು ಬಳಸಲಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತಾದಿಗಳಿಗೆ ಇಲ್ಲಿ ಅನ್ನದಾಸೋಹ ನಿತ್ಯ ನಿರಂತರ. ಆದರೆ ತಟ್ಟೆಯಲ್ಲಿ ಬಡಿಸಿದರೆ ಅದನ್ನು ತೊಳೆಯಲು ಅಗಾಧ ಪ್ರಮಾಣದ ನೀರು ಬೇಕು. ಹೀಗಾಗಿ ಅನಿವಾರ್ಯವಾಗಿ ಪತ್ರಾವಳಿಯಲ್ಲಿ ಊಟದ ವ್ಯವಸ್ಥೆ. ದೇವರ ಅಭಿಷೇಕಕ್ಕೂ ನೀರಿನ ತತ್ವಾರ. ಸರ್ಕಾರ ನೇತ್ರಾವತಿ ಸ್ನಾನಘಟ್ಟದಲ್ಲಿ ಕಿಂಡಿ ಅಣೆಕಟ್ಟು ಮಾಡಿಕೊಟ್ಟಿರುವುದರಿಂದ ಸದ್ಯ ದೇವರಿಗೆ ಅಭಿಷೇಕಕ್ಕೆ ನೀರು ಲಭ್ಯ. ಸಕಾಲದಲ್ಲಿ ಮಳೆ ಬರದಿದ್ದರೆ ಮಂಜುನಾಥ ಸ್ವಾಮಿಗೂ ಬರದ ಬಿಸಿ ತಟ್ಟಬಹುದೇನೋ ಎಂದು ಹೆಗ್ಗಡೆಯವರೇ ಅಲವತ್ತುಕೊಂಡಿದ್ದಾರೆ. ಧರ್ಮಸ್ಥಳದ್ದೇ ಸ್ಥಿತಿ ಉಳಿದ ಕ್ಷೇತ್ರಗಳಲ್ಲೂ ಇದೆ.
ವಿಪರೀತ ಮಳೆ ಸುರಿದರೆ ಭೂಮಿಗೆ ಅದನ್ನು ಹಿಡಿದಿಟ್ಟುಕೊಳ್ಳುವ, ಇಂಗಿಸಿಕೊಳ್ಳುವ ಸಾಮರ್ಥ್ಯವೇ ಇರುವುದಿಲ್ಲ. ಅದಕ್ಕೇ ಈ ಬಾರಿ ಮಾರ್ಚ್ನಿಂದಲೇ ನೀರಿನ ಬರ ಕಾಡಿರುವುದು. ಜೊತೆಗೆ ಮಳೆಗಾಲದಲ್ಲಿ ಕೃತಕವಾಗಿ ನೀರು ಇಂಗಿಸುವ, ಶೇಖರಿಸುವ, ಮಳೆಕೊಯ್ಲು, ಇಂಗುಗುಂಡಿ ಇತ್ಯಾದಿ ಯೋಜನೆಗಳತ್ತ ಮನಸ್ಸು ಹಾಕುವವರ ಸಂಖ್ಯೆ ಈಗಲೂ ಕಡಿಮೆ. ಮಳೆ ಹೇಗೆ ಬರುತ್ತೆ, ನಾವ್ಯಾಕೆ ಇದನ್ನೆಲ್ಲ ಮಾಡಬೇಕು? ಎಂಬ ತಾತ್ಸಾರ ಭಾವನೆ ಜನರಿಂದ ಇನ್ನೂ ಮಾಸಿಲ್ಲ. ಇದರ ಪರಿಣಾಮ ಮಾತ್ರ ಭೀಕರ. ಅದನ್ನೇ ಈಗ ಜನರು ಏಪ್ರಿಲ್ – ಮೇ – ಜೂನ್ ತಿಂಗಳಲ್ಲಿ ಅನುಭವಿಸುವಂತಾಗಿದೆ.
ನೀರಿನ ಅಭಾವದಿಂದ ರಾಜ್ಯ ನಲುಗುತ್ತಿರುವುದು ಈಗೇನಲ್ಲ. ಕಳೆದ 20 ವರ್ಷಗಳ ಪೈಕಿ 15 ವರ್ಷ ರಾಜ್ಯ ತೀವ್ರ ಬರ ಎದುರಿಸಿದೆ. ಇಂತಹ ತೀವ್ರ ಬರ ಎದುರಾಗಿ ಎದುರಾದಾಗಲೆಲ್ಲ ಸರ್ಕಾರ ತ್ವರಿತ ಕುಡಿಯುವ ನೀರಿನ ಪೂರೈಕೆ ಮೇವು ವಿತರಣೆಯಂತಹ ತಾತ್ಕಾಲಿಕ ಕ್ರಮಗಳಿಗೆ ಮಾತ್ರ ಆದ್ಯತೆ ನೀಡಿದೆ. ಟ್ಯಾಂಕರ್ಗಳಲ್ಲಿ ನೀರಿನ ಅಭಾವ ಇರುವ ಗ್ರಾಮಗಳಿಗೆ ನೀರು ಪೂರೈಕೆ ಮಾಡಿದೆ ಅಲ್ಲಿಗೆ ತನ್ನ ಕರ್ತವ್ಯ ಮುಗಿಯಿತು ಎಂಬ ಸಮಾಧಾನದ ಭಾವ ಸರ್ಕಾರದ್ದು. ಈ ವರ್ಷವೂ ನೀರಿನ ಅಭಾವ ತಲೆದೋರಿರುವ 2999 ಗ್ರಾಮಗಳ ಪೈಕಿ 1600 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿದೆ. ಸರ್ಕಾರ ಇಷ್ಟು ಮಾಡಿಬಿಟ್ಟರೆ ಅದರ ಕರ್ತವ್ಯ ಮುಗಿಯಿತೇ ?
ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ರಾಜ್ಯದಲ್ಲಿ ಇದುವರೆಗೆ ಆಗಿಹೋದ ಯಾವ ಸರ್ಕಾರಗಳೂ ಸೂಕ್ತ ಯೋಜನೆಯನ್ನಾಗಲೀ, ಕ್ರಮಗಳನ್ನಾಗಲೀ ಕೈಗೊಂಡಿಲ್ಲ ಎನ್ನುವುದು ಹಗಲಿನಷ್ಟೇ ಸ್ಪಷ್ಟ. ಸರ್ಕಾರ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ರೂಪಿಸುವ ಕಡ್ಡಾಯ ಮಳೆ ಕೊಯ್ಲು, ಇಂಗುಗುಂಡಿ, ಕೃಷಿಹೊಂಡ, ಮಳೆಗಾಲದಲ್ಲಿ ಸಸಿ ನೆಡುವ ಕಾರ್ಯಕ್ರಮ, ನೀರಿನ ಮಿತ ಬಳಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಾಗಾರ – ಇತ್ಯಾದಿ ಯೋಜನೆಗಳು ಕಡತದಲ್ಲಿರುತ್ತವೆಯೇ ಹೊರತು ಅವು ಅಂತಿಮ ಹಂತದವರೆಗೆ ತಲುಪಿ ಕಾರ್ಯಗತ ಆಗುವುದು ತೀರಾ ಕಡಿಮೆ. ಸರ್ಕಾರವೊಂದೇ ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗದು. ಜನರ ಸಹಕಾರ ಅತ್ಯಗತ್ಯ. ಜೊತೆಗೆ ಸರ್ಕಾರಿ ಸಿಬ್ಬಂದಿಯ ಮುತುವರ್ಜಿಯುಕ್ತ ಕರ್ತವ್ಯ ಪಾಲನೆಯೂ ಅಗತ್ಯ.
ನಗರದ ವಾಣಿಜ್ಯ ಕಟ್ಟಡಗಳೂ ಸೇರಿದಂತೆ, ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಅನುಷ್ಠಾನವನ್ನು ಕಡ್ಡಾಯಗೊಳಿಸಲಾಗುವುದೆಂದು ಸಂಬಂಧಿಸಿದ ಸಚಿವರು ಪ್ರತಿ ವರ್ಷ ಘೋಷಿಸುತ್ತಲೇ ಇರುತ್ತಾರೆ. ಆದರೆ ಅನುಷ್ಠಾನ ಆಗಿರುವುದೆಷ್ಟು ? ಅನುಷ್ಠಾನ ಆಗಿಲ್ಲದಿದ್ದರೆ ಅದಕ್ಕೇನು ಕಾರಣ ? ಅದಕ್ಕೇನು ಕ್ರಮ ? ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳದಿರುವುದು ಸಮಸ್ಯೆಯನ್ನು ಇನ್ನಷ್ಟು ತೀವ್ರವಾಗುವಂತೆ ಮಾಡಿದೆ.
ರಾಜ್ಯಾದ್ಯಂತ ಪ್ರಸಕ್ತ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದಲೇ 2 ಕೋಟಿ ಸಸಿ ನೆಡುವ ಗುರಿ ಹೊಂದಿದ್ದೇವೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡರು ಹೇಳಿದ್ದಾರೆ. ಕಳೆದ ವರ್ಷವೂ ಸಚಿವರಿಂದ ಇಂತಹುದೇ ಘೋಷಣೆ ವ್ಯಕ್ತವಾಗಿತ್ತು. ಆದರೆ ಮಳೆಗಾಲದ ಸಂದರ್ಭದಲ್ಲಿ ನೆಟ್ಟ ಸಸಿಗಳೆಷ್ಟು ? ನೆಟ್ಟ ಸಸಿಗಳನ್ನೆಲ್ಲ ಪೋಷಿಸಲಾಯಿತೇ? ಕೇವಲ ಸಸಿ ನೆಟ್ಟರೆ ಸಾಕೇ? ಕಳೆದ 15 ವರ್ಷಗಳಿಂದ ನೆಡಲಾದ ಲಕ್ಷಾಂತರ ಸಸಿಗಳು ಹಾಗಾದರೆ ಏನಾದವು ? ಎಕರೆಗಟ್ಟಲೆ ಕಾಡು ಬೆಳೆಯಬೇಕಿತ್ತಲ್ಲವೇ ?ಅಷ್ಟೊಂದು ಕಾಡು ಬೆಳೆದಿದ್ದರೆ ಮಳೆ ಸುರಿದು, ಭೂಮಿ ನೀರನ್ನು ಹಿಡಿದಿಟ್ಟುಕೊಳ್ಳುತ್ತಿರಲಿಲ್ಲವೇ ? ಈ ಪ್ರಶ್ನೆಗಳನ್ನು ಯಾರೂ ಕೇಳುವ ಗೋಜಿಗೆ ಹೋಗದಿರುವುದೇ ನೀರಿನ ಸಮಸ್ಯೆಯ ಭೀಕರತೆಗೆ ಇನ್ನೊಂದು ಕಾರಣ.
ರಾಜ್ಯದಲ್ಲಿ ಹಲವೆಡೆ ನೀಲಗಿರಿ ನೆಡುತೋಪಿಗೆ ಆದೇಶ ನೀಡಿ, ಲಕ್ಷಾಂತರ ನೀಲಗಿರಿ ಮರಗಳು ಬೆಳೆದಿವೆ. ನೀಲಗಿರಿ ಮರಗಳಿಂದ ಅಂತರ್ಜಲಕ್ಕೆ ತೀವ್ರ ಹಾನಿ ತಟ್ಟುತ್ತದೆಂದು ಗೊತ್ತಿದ್ದರೂ ಹೀಗೆ ಮಾಡಿದ್ದೇಕೆ ? ನೀಲಗಿರಿ ಮರಗಳಿಂದ ಅಂತರ್ಜಲಕ್ಕೆ ಹಾನಿಯಾಗುತ್ತದೆ ಎಂದು ಅರಿವಾದ ಬಳಿಕ, ಈಗ ನೀಲಗಿರಿ ಸಸಿಗೆ ನಿಷೇಧ ಹೇರಲಾಗಿದೆ. ಹಣ್ಣಿನ ಮರಗಳಿಗೆ ಆದ್ಯತೆ ನೀಡಬೇಕೆಂದು ಸರ್ಕಾರ ಸೂಚಿಸಿದೆ. ನಮ್ಮ ಹಿರಿಯರು ಹಿಂದಿನಿಂದಲೂ ನೀರಿನ ಅಭಾವ ತಲೆದೋರದಿರಲಿ ಎಂದು ಎಲ್ಲೆಡೆ ಹಣ್ಣಿನ ಮರಗಳನ್ನೇ ನೆಡುತ್ತಿದ್ದರು. ಅವರಿಗೆ ಯಾವ ಸರ್ಕಾರದ ಸೂಚನೆಯೂ ಬೇಕಿರಲಿಲ್ಲ. ಪೂರ್ವಜರ ಪರಂಪರೆಯನ್ನು ಮುಂದುವರಿಸಿದಿದ್ದರೆ ಈಗ ನೀರಿನ ಅಭಾವದಿಂದ ತತ್ತರಿಸಿ ಹೋಗಬೇಕಾದ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ .
ರಾಜ್ಯದ ಕೆಲವೆಡೆ ಕುಡಿಯುವ ನೀರಿಗಾಗಿ ಜನರ ಪರದಾಟ ಹೇಳತೀರದು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಸನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗಸನಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಒಂದೂವರೆ ಕಿಲೋಮೀಟರ್ ದೂರ ಕಡಿದಾದ ರಸ್ತೆಯಲ್ಲಿ ಸಾಗಿ 60 ಅಡಿ ಆಳದ ಗುಂಡಿಗೆ ಇಳಿದು ನೀರೆತ್ತಬೇಕಾಗಿದೆ. ಯಾವುದೇ ಮೆಟ್ಟಿಲುಗಳೂ ಇಲ್ಲದ ಈ ಬಾವಿಗೆ ಇಳಿದು ನೀರನ್ನು ಮೇಲಕ್ಕೆ ತರುವುದೇ ಒಂದು ಹರಸಾಹಸ. ಅಷ್ಟೇ ಅಪಾಯಕಾರಿ ಕೂಡ. ಇಂತಹುದೇ ದುಃಸ್ಥಿತಿ ಉತ್ತರ ಕರ್ನಾಟಕದ ಹಲವಾರು ಗ್ರಾಮಗಳಲ್ಲಿದೆ.
ಬೇಸಿಗೆಯಲ್ಲಿ ಇಡೀ ರಾಜ್ಯವನ್ನು ಕಾಡುವ ನೀರಿನ ಹಾಹಾಕಾರದ ಇಂತಹ ಕಥೆಗಳು ರವಾನಿಸುವ ಒಂದೇ ಒಂದು ಸಂದೇಶವೇನೆಂದರೆ : ಮಳೆಗಾಲದಲ್ಲಿ ಹರಿದುಹೋಗುವ ನೀರು ವ್ಯರ್ಥವಾಗದಂತೆ ಸಂಗ್ರಹಿಸಿಡಬೇಕು. ಜಲ ಸಂರಕ್ಷಣೆಗೆ ಆದ್ಯ ಗಮನ ನೀಡಬೇಕು. ನೀರನ್ನು ಅನಗತ್ಯವಾಗಿ ಪೋಲು ಮಾಡಬಾರದು. ನೀರಿನ ಒಂದೊಂದು ಹನಿಯೂ ಅತಿ ಅಮೂಲ್ಯ. ನೀರು ಬರಿದೇ ನೀರಲ್ಲ, ಅದು ಜೀವಜಲ. ಜಲಾಮೃತ – ಜೀವ ಉಳಿಸುವ ಅಮೃತದ ಹನಿ.
ಈ ಜೀವಜಲದ ಸೂಕ್ತ ಸಂರಕ್ಷಣೆಗೆ ಈಗಲೂ ನಾವು ಮುಂದಾಗದಿದ್ದರೆ ಭವಿಷ್ಯದ ದಿನಗಳು ಕರಾಳವಾಗಲಿವೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆಗ ಪರಿತಪಿಸಿದರೆ ಏನು ಪ್ರಯೋಜನ ? ಹಾಗಾಗಿ ಈಗಲೇ ನೀರಿನ ಸಮಸ್ಯೆ ತಲೆದೋರದಂತೆ ಮಾಡಬೇಕಾದ ಶಾಶ್ವತ ಪರಿಹಾರ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸೋಣ.
✍ ದು. ಗು. ಲಕ್ಷ್ಮಣ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.