ಮಂಗಳೂರು : ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ಆಯೋಜಿಸಲ್ಪಡುತ್ತಿರುವ ಸ್ವಚ್ಛತಾ ಅಭಿಯಾನದ 5 ನೇ ವರ್ಷದ 22 ನೇ ಆದಿತ್ಯವಾರದ ಶ್ರಮದಾನ ದಿನಾಂಕ 5-5-2019 ರಂದು ಪಾಂಡೇಶ್ವರದ ಪೊಲೀಸ್ ಲೇನ್ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 8 ಗಂಟೆಗೆ ನೂತನವಾಗಿ ಲೋಕಾರ್ಪಣೆಗೊಂಡ ಪೋಲಿಸ್ ಲೇನ್ ಮಕ್ಕಳ ಪಾರ್ಕ್ ಎದುರಿಗೆ ಶ್ರಮದಾನಕ್ಕೆ ಚಾಲನೆ ನೀಡಲಾಯಿತು. ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತಿಯಲ್ಲಿ ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿ ಹಾಗೂ ಮನಪಾ ಮಾಜಿ ಸದಸ್ಯ ದಿವಾಕರ್ ಪಾಂಡೇಶ್ವರ ಜಂಟಿಯಾಗಿ ಶ್ರಮದಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಲಕ್ಷ್ಮೀಪ್ರಸಾದ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಡಾ ಜೀವರಾಜ್ ಸೊರಕೆ, ಡಾ ಧನೇಶ್ ಕುಮಾರ್, ಗುರುದತ್ತ ಶೆಣೈ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸ್ವಚ್ಛತೆ: ಚಾಲನೆ ನೀಡಿದ ಬಳಿಕ ಸ್ವಾಮಿಜಿಯವರು ಹಾಗೂ ಅತಿಥಿ ಗಣ್ಯರು ಪೊರಕೆ ಹಿಡಿದು ಕೆಲಕಾಲ ಸ್ವಚ್ಛತೆಯನ್ನು ಮಾಡಿದರು. ತದನಂತರ ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಮಾರ್ಗದರ್ಶನದಂತೆ ಆರು ತಂಡಗಳನ್ನು ರಚಿಸಿಕೊಂಡು ಸ್ವಚ್ಛತಾ ಕಾರ್ಯವನ್ನು ನೆರವೇರಿಸಲಾಯಿತು. ಮೊದಲ ತಂಡ ಮಕ್ಕಳ ಪಾರ್ಕ್ ಬದಿಯ ಜಾಗೆಯಲ್ಲಿದ್ದ ಒಂದು ಟಿಪ್ಪರ್ನಷ್ಟು ಕಸ, ಎಲೆ ಹಾಗೂ ಕಲ್ಲು ಮಣ್ಣುಗಳ ರಾಶಿಯನ್ನು ತೆಗೆದು ಶುಚಿಗೊಳಿಸಿದರು. ಮಧುಚಂದ್ರ ಆಡ್ಯಂತಾಯ, ಪ್ರವೀಣ ಶೆಟ್ಟಿ, ಹಾಗೂ ಹಿರಿಯ ಸ್ವಯಂಸೇವಕರು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಿದರು. ಎರಡನೇ ತಂಡ ದಿಲ್ರಾಜ್ ಆಳ್ವ ನೇತೃತ್ವದಲ್ಲಿ ಶ್ರೀದೇವಿ ದೇವಸ್ಥಾನದ ಮುಂಭಾಗದಲ್ಲಿದ್ದ ಕಲ್ಲು-ಮಣ್ಣುಗಳ ರಾಶಿಯನ್ನು ತೆರವು ಮಾಡಿತು ಹಾಗೂ ನೆಲವನ್ನು ಸಮತಟ್ಟು ಗೊಳಿಸಲಾಯಿತು. ಮತ್ತೊಂದು ತಂಡದಲ್ಲಿದ್ದ ರವಿ ಕೆ ಆರ್, ಹಿಮ್ಮತ್ ಸಿಂಗ್ ಹಾಗೂ ಕಾರ್ಯಕರ್ತರು ಅದೇ ರಸ್ತೆಯಲ್ಲಿದ್ದ ಬಾವಿಯ ಸುತ್ತಮುತ್ತಲಿನ ಕಟ್ಟಡ ತ್ಯಾಜ್ಯ ಸಹಿತ ಕಲ್ಲುಗಳನ್ನು ತೆಗೆದು ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಟ್ಟರು. ಸ್ವಚ್ಛ ಮಂಗಳೂರು ಪ್ರಧಾನ ಸಂಯೋಜಕ ಉಮಾನಾಥ್ ಕೋಟೆಕಾರ ಮಾರ್ಗದರ್ಶನದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಮುಖ್ಯ ರಸ್ತೆ ಹಾಗೂ ತೋಡುಗಳನ್ನು ಶುಚಿಗೊಳಿಸಿದರು. ಕೊನೆಯ ತಂಡದಲ್ಲಿದ್ದ ಸುಧೀರ್, ಯೋಗೀಶ್ ಕಾಯರ್ತಡ್ಕ ಹಾಗೂ ಕಾರ್ಯಕರ್ತರು ತ್ಯಾಜ್ಯರಾಶಿ ಬೀಳುತ್ತಿದ್ದ ಸ್ಥಳವನ್ನು ಸ್ವಚ್ಛಗೊಳಿಸಿ ಲಾರಿಗೆ ತುಂಬಿಸಿ ಜಾಗೆಯನ್ನು ಸಮತಟ್ಟುಗೊಳಿಸಿದರು. ಇದೀಗ ಅಲ್ಲಿ ಆಲಂಕಾರಿಕ ಗಿಡಗಳನ್ನಿಡಲಾಗಿದೆ. ಇಂದಿನಿಂದ ಸ್ವಚ್ಛತಾ ಯೋಧರ ಕಣ್ಗಾವಲು ಪಡೆ ಪೊಲೀಸ್ ಲೇನ್ನಲ್ಲಿ ಪ್ರತಿನಿತ್ಯ ಕಾವಲು ಕಾಯಲಿದೆ. ಅಕಸ್ಮಾತ್ ಯಾರಾದರೂ ಕಸ ಹಾಕಿದರೆ ಅವರಿಗೆ ತಿಳಿಹೇಳಿ, ರಸ್ತೆಗೆ ಕಸ ಹಾಕದಂತೆ ಮನವೊಲಿಸುವ ಕಾರ್ಯ ಮಾಡಲಿದೆ.
ಜಾಗೃತಿ ಕಾರ್ಯ: ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿನಿಯರು ಅಭಿಷೇಕ ವಿ. ಎಸ್. ಜೊತೆಗೂಡಿ ಸುಮಾರು ಇನ್ನೂರಕ್ಕೂ ಹೆಚ್ಚು ಮನೆಗಳನ್ನು ಸಂಪರ್ಕಿಸಿ ಸ್ವಚ್ಛತೆಯ ಕುರಿತು ಮಾಹಿತಿ ನೀಡಿದರು. ಹಾಗೂ ಅಲ್ಲಿದ್ದ ಅಂಗಡಿಯ ವರ್ತಕರಿಗೂ ತಮ್ಮ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವಂತೆ ಮನವಿ ಮಾಡಲಾಯಿತು. ಸುರೇಶ್ ಶೆಟ್ಟಿ ಮಲೇರಿಯಾ ಹಾಗೂ ಡೆಂಗ್ಯೂ ಕುರಿತು ಜನರಿಗೆ ಮಾಹಿತಿ ನೀಡಿದರು. ಸ್ವಚ್ಛ ಮಂಗಳೂರು ಕನಸಲ್ಲ ಸುಮಾರು 200 ಕೈಪಿಡಿಗಳನ್ನು ಹಂಚಲಾಯಿತು.
ಮಾರ್ಗಸೂಚಕ ಫಲಕಗಳ ನವೀಕರಣ: ಪಾಂಡೇಶ್ವರದಲ್ಲಿರುವ 3 ಮಾರ್ಗಸೂಚಕ ಫಲಕಗಳನ್ನಿಂದು ನವೀಕರಿಸಲಾಯಿತು. ಬಿ ಆರ್ ಕರ್ಕೇರಾ ರಸ್ತೆ ಅನ್ನುವ ಹೆಸರಿನ ಎರಡು ಹಾಗೂ ಡಾ. ಎಂ ವಿ ಶೆಟ್ಟಿ ರಸ್ತೆ ಎಂಬ ಫಲಕಗಳನ್ನು ತೊಳೆದು ಶುಚಿಗೊಳಿಸಿ, ಹಳದಿ ಕಪ್ಪು ಬಣ್ಣ ಬಳಿದು ಸುಂದರ ಅಕ್ಷರಗಳಿಂದ ಬರೆದು ನವೀಕರಣಗೊಳಿಸಲಾಗಿದೆ. ಶ್ರೀದೇವಿ ಆರ್ಟ್ಸ್ ಕರ್ಣ ಹಾಗೂ ಆನಂದ ಅಡ್ಯಾರ್ ಈ ಕಾರ್ಯದಲ್ಲಿ ಸಹಕಾರ ನೀಡಿದರು.
ಮಕ್ಕಳ ಪಾರ್ಕ್ ಉದ್ಘಾಟನೆ : ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದಡಿ ನೂತನವಾಗಿ ನವೀಕರಣಗೊಂಡ ಪಾರ್ಕಿನ ಉದ್ಘಾಟನೆ ದಿನಾಂಕ 5-5-2019 ರಂದು ಬೆಳಿಗ್ಗೆ 7-30 ಕ್ಕೆ ನೆರವೇರಿತು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಲಕ್ಷ್ಮೀಪ್ರಸಾದ ಹಾಗೂ ಸ್ವಾಮಿ ಜಿತಕಾಮಾನಂದಜಿ ಪಾರ್ಕನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೀ ಪ್ರಸಾದ್ ಯಾವುದೇ ಕಾರ್ಯಯೋಜನೆ ಅನುಷ್ಠಾನಗೊಳ್ಳಬೇಕಿದ್ದರೆ ನಿರಂತರತೆ ಬಹಳ ಮುಖ್ಯ, ಅಂತಹ ನಿರಂತರತೆ ಹಾಗೂ ಕಾರ್ಯನಿಷ್ಠೆಯನ್ನು ಈ ಅಭಿಯಾನದಲ್ಲಿ ಕಾಣಬಹುದಾಗಿದೆ. ಭಿನ್ನ ವಿಭಿನ್ನ ಸ್ತರಗಳಿಂದ ಜನರು ಇಂತಹ ಅತ್ತ್ಯುತ್ತಮ ಉದ್ದೇಶಕ್ಕಾಗಿ ಸಮಯವನ್ನು ಮೀಸಲಿಟ್ಟು ಕೆಲಸ ಮಾಡುತ್ತಿರುವುದು ಮಂಗಳೂರಿನ ಪ್ರಜ್ಞಾವಂತಿಕೆಯ ದ್ಯೋತಕ ಎಂದು ಬಣ್ಣಿಸಿದರು. ಸ್ವಾಮಿ ಜಿತಕಾಮಾನಂದಜಿ ಮಾತನಾಡಿ ಕಾರ್ಯಕರ್ತರ ಏಕನಿಷ್ಠೆಗೆ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಶಕ್ತಿಯಿದೆ; ಅಂತಹ ಶಕ್ತಿಯ ಅನಾರವಣವನ್ನು ಸ್ವಚ್ಛ ಮಂಗಳೂರು ಕಾರ್ಯಕ್ರಮದಲ್ಲಿ ಕಾಣಬಹುದಾಗಿದೆ ಎಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು. ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸ್ವಾಮಿ ಏಕಗಮ್ಯಾನಂದಜಿ ವಂದಿಸಿದರು. ಉಪನ್ಯಾಸಕ ಸಂತೋಷ ಆಳ್ವ ನಿರೂಪಿಸಿದರು. ಈ ಸ್ವಚ್ಛತಾ ಅಭಿಯಾನದ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.