ಮಂಗಳೂರು : ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 5 ನೇ ಹಂತದ 21 ನೇ ಭಾನುವಾರದ ಶ್ರಮದಾನ ದಿನಾಂಕ 28-4-2019 ರಂದು ಗಾಂಧಿನಗರದಲ್ಲಿ ಆಯೋಜಿಸಲಾಗಿತ್ತು. ಬೆಳಿಗ್ಗೆ 7-30 ಕ್ಕೆ ಸರಿಯಾಗಿ ವೇದಮಂತ್ರದೊಂದಿಗೆ ಉರ್ವಾದಲ್ಲಿರುವ ಪತ್ರಿಕಾ ಭವನದ ಮುಂಭಾಗದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಧುವರರಿಂದ ಶ್ರಮದಾನಕ್ಕೆ ಚಾಲನೆ
ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಶಿವು ಪುತ್ತೂರು ಹಾಗು ಸುಮ ಕೋಡಿಕಲ್ ಕಳೆದ ನಾಲ್ಕು ವರ್ಷಗಳಿಂದ ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದಲ್ಲಿ ಸ್ವಯಂಸೇವಕರಾಗಿ ಭಾಗವಹಿಸುತ್ತಿದ್ದರು. ಇಂದು ಮದುವೆಯ ದಿನವೂ ಶ್ರಮದಾನದಲ್ಲಿ ಭಾಗವಹಿಸುವುದರ ಮೂಲಕ ಅನೇಕ ಜನರಿಗೆ ಸ್ಫೂರ್ತಿಯಾದರು. ಈ ದಿನ ಸ್ವಾಮಿ ಏಕಗಮ್ಯಾನಂದಜಿ ಸಮ್ಮುಖದಲ್ಲಿ ವಧುವರರು 21ನೇ ಶ್ರಮದಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸುಮ ಕೋಡಿಕಲ್ ಮಾತನಾಡಿ “ಸ್ವಚ್ಛ ಮಂಗಳೂರು ನಮ್ಮ ಕನಸು! ಆ ಕನಸು ನನಸಾಗಬೇಕಾದರೆ ಎಲ್ಲರ ಶ್ರಮ ಅಗತ್ಯ ಮತ್ತು ಸ್ವಚ್ಛ ಮಂಗಳೂರು ಆದಷ್ಟು ಬೇಗ ಸಾಕಾರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಾಲ್ಕು ವರ್ಷಗಳಿಂದ ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಪಾಲ್ಗೊಂಡ ಧನ್ಯತಾ ಭಾವವಿದೆ. ಭಾನುವಾರಗಳಂದು ತಪ್ಪದೇ ಭಾಗವಹಿಸುತ್ತಿದ್ದ ನಾವು ಮದುವೆಯ ದಿನವೂ ಶ್ರಮದಾನದಲ್ಲಿ ಸ್ವಲ್ಪ ಮಟ್ಟಿಗಾದರೂ ಸಮಯ ಕಳೆಯಬೇಕೆಂದು ನಮ್ಮ ಅಭಿಲಾಶೆಯಾಗಿತ್ತು. ಶ್ರಮದಾನಕ್ಕೆ ಚಾಲನೆ ಕೊಡುವ ಸೌಭಾಗ್ಯ ನಮ್ಮದಾಗಿರುವುದು ಪುಣ್ಯ” ಎಂದು ಸ್ಮರಿಸಿಕೊಂಡರು.
ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಮಾತನಾಡಿ “ಸಜ್ಜನರ ನಿಷ್ಕ್ರಿಯತೆ, ದುರ್ಜನರ ಕ್ರಿಯಾಶೀಲತೆಗಿಂತ ಹೆಚ್ಚು ಅಪಾಯಕಾರಿ ಎಂಬ ಮಾತಿನ ಹಿನ್ನಲೆಯಲ್ಲಿ ಸಾಮಾಜಿಕ ಕಾಳಜಿಯುಳ್ಳ ವ್ಯಕ್ತಿಗಳನ್ನು ಒಗ್ಗೂಡಿಸಿ ರಾಷ್ಟ್ರ ನಿರ್ಮಾಣದ ಕೈಂಕರ್ಯವನ್ನು ವ್ಯವಸ್ಥಿತವಾಗಿ ಮಾಡುತ್ತಿರುವ ರಾಮಕೃಷ್ಣ ಮಿಷನ್ ಎಲ್ಲರಿಗೂ ಮಾದರಿ. ಮದುವೆಯ ದಿನವೂ ಸ್ವಯಂಸೇವಕರು ಶ್ರಮದಾನದಲ್ಲಿ ಭಾಗವಹಿಸುತ್ತಿರುವುದು ಅವರ ಕಾಳಜಿ ಹಾಗೂ ಬದ್ಧತೆಯನ್ನು ಎತ್ತಿತೋರಿಸುತ್ತದೆ. ಅಂತಹ ಮನೋಭಾವವನ್ನು ಭಾರತೀಯರು ಪ್ರದರ್ಶಿಸಿದರೆ ಭಾರತ ವಿಶ್ವವಂದ್ಯವಾಗುವುದರಲ್ಲಿ ಸಂಶಯವಿರುವುದಿಲ್ಲ” ಎಂದು ತಿಳಿಸಿ ಕಾರ್ಯಕರ್ತರಿಗೆ ಶುಭಾಶಯ ಹೇಳಿದರು. ವಿಶೇಷ ಅಹ್ವಾನಿತರಾಗಿ ವೃಷಾಂಕ್ ಭಟ್ ಸಂಪಾದಕರು ವಿಕ್ರಮ ವಾರಪತ್ರಿಕೆ ಬೆಂಗಳೂರು ಇವರು ಶ್ರಮದಾನದಲ್ಲಿ ಭಾಗವಹಿಸಿದರು. ಇನ್ನುಳಿದಂತೆ ಸ್ವಚ್ಛ ಸುರತ್ಕಲ್ ಅಭಿಯಾನದ ಸಂಚಾಲಕ ಡಾ. ರಾಜಮೋಹನ್ ರಾವ್, ಸತೀಶ್ ಸದಾನಂದ, ಶ್ರೀನಿವಾಸ್ ರಾವ್, ಸುಧಾ ಮಂಜುನಾಥ್, ಶಶಿಭೂಷಣ, ಯೋಗೀಶ್ ಪ್ರಭು, ಸುನೀಲ್ ಕುಮಾರ್ ಪಾಂಡೇಶ್ವರ್, ರಾಮಕೃಷ್ಣ ಕೊಟ್ಟಾರ, ಕುದ್ರೋಳಿ ಗಣೇಶ್ ಮತ್ತಿತರರು ಶ್ರಮದಾನ ಮಾಡಿದರು.
ಸ್ವಚ್ಛತಾ ಕಾರ್ಯ: ಪ್ರಥಮವಾಗಿ ವಧುವರರು ಪೊರಕೆ ಹಿಡಿದು ಉರ್ವಾ ಮುಖ್ಯ ರಸ್ತೆಯ ಬದಿಯನ್ನು ಸ್ವಚ್ಛಗೊಳಿದರು. ಬಳಿಕ ಕಾರ್ಯಕರ್ತರು ನಾಲ್ಕು ತಂಡಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಗಾಂಧಿನಗರ 4ನೇ ಅಡ್ಡರಸ್ತೆ, ಗಾಂಧಿನಗರ ಸರ್ಕಾರಿ ಶಾಲೆಯ ಮುಂಭಾಗ, ಪೆಟ್ಲಾಮ್ಪೆಟ್ ವೃತ್ತದ ಸುತ್ತಮುತ್ತ ಹಾಗೂ ಉರ್ವಾ ಮುಖ್ಯರಸ್ತೆಗಳ ಚರಂಡಿ, ಕಾಲುದಾರಿ ಹಾಗೂ ಮಾರ್ಗವಿಭಾಜಕಗಳನ್ನು ಸ್ವಚ್ಛಗೊಳಿಸಲಾಯಿತು. ಉಮಾನಾಥ್ ಕೋಟೆಕಾರ್ ಮಾರ್ಗದರ್ಶನದಲ್ಲಿ ಅಲ್ಲಲ್ಲಿ ರಾಶಿರಾಶಿಯಾಗಿ ಬಿದ್ದಿದ್ದ ಕಸತ್ಯಾಜ್ಯ ಹಾಗೂ ಕಲ್ಲು ಮಣ್ಣುಗಳ ಮೂರು ರಾಶಿಗಳನ್ನು ಜೆಸಿಬಿ ಬಳಸಿಕೊಂಡು ತೆರವು ಮಾಡಿ ಶುಚಿಗೊಳಿಸಲಾಯಿತು. ಮೆಹಬೂಬ್ ಖಾನ್ ನೇತೃತ್ವದಲ್ಲಿ ಪತ್ರಿಕಾ ಭವನದ ಆವರಣವನ್ನು ನಿಟ್ಟೆ ಫಿಸಿಯೋಥೆರಪಿ ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದರು. ಅಲ್ಲಿ ಹಾಕಲಾಗಿದ್ದ ಹಾನಿಕಾರಕ ವಸ್ತುಗಳನ್ನು ಹಾಕಿದವರಿಂದಲೇ ತೆಗೆಸಲಾಯಿತು. ಅಲ್ಲಲ್ಲಿ ಬೆಳೆದಿದ್ದ ಹುಲ್ಲು ಪೊದೆಗಳನ್ನು ಹುಲ್ಲು ಕತ್ತರಿಸುವ ಯಂತ್ರದ ಸಹಾಯದಿಂದ ಕತ್ತರಿಸಿ ತೆಗೆಯಲಾಯಿತು. ಪ್ರಮುಖವಾಗಿ ಗಾಂಧಿನಗರದ ಶಾಲೆಯ ಮುಂಭಾಗದ ಎದುರಿರುವ ಸುಮಾರು ಒಂದು ಟಿಪ್ಪರಿಗೂ ಅಧಿಕ ತ್ಯಾಜ್ಯರಾಶಿಯನ್ನು ಕಮಲಾಕ್ಷ ಪೈ ಮಾರ್ಗದರ್ಶನದಲ್ಲಿ ಉದಯ ಕೆಪಿ, ಸೌರಜ್ ಮಂಗಳೂರು, ಸತೀಶ್ ಕೆಂಕನಾಜೆ ಮತ್ತಿತರ ಸ್ವಯಂ ಸೇವಕರು ಶ್ರಮವಹಿಸಿ ಕಸದ ಕೊಪ್ಪೆಯನ್ನು ತೆರವುಗೊಳಿಸಿದರು. ಇದೀಗ ಅಲ್ಲಿ ಆಲಂಕಾರಿಕ ಗಿಡಗಳನ್ನು ಇಟ್ಟು ಜಾಗ ಸುಂದರವಾಗಿ ಕಾಣುವಂತೆ ಮಾಡಲಾಗಿದೆ. ಎಂದಿನಂತೆ ಸ್ವಚ್ಛತಾ ಯೋಧರ ಪಡೆ ಅಲ್ಲಿ ಪ್ರತಿನಿತ್ಯ ಕಾವಲು ಕಾಯಲಿದೆ, ಜೊತೆಗೆ ಕಸಹಾಕುವವರಿಗೆ ತಿಳಿಹೇಳುವ ಕಾರ್ಯ ನಿರ್ವಹಿಸಲಿದೆ. ಕೊನೆಯದಾಗಿ ಬಣ್ಣ ಮಾಸಿಹೋಗಿರುವ ಸುಮಾರು ನಾಲ್ಕು ಮಾರ್ಗಸೂಚಕ ಫಲಕಗಳಾದ ಪತ್ರಿಕಾ ಭವನದ ಬಳಿಯಿರುವ ಗಾಂಧಿನಗರ ರಸ್ತೆ, ಲೇಡಿಹಿಲ್ ವೃತ್ತದ ಬಳಿಯಿರುವ ಗಾಂಧಿನಗರ, ಪೆಟ್ಲಾಮ್ಪೇಟ್ ವೃತ್ತದ ಹತ್ತಿರವಿರುವ ಗಾಂಧಿನಗರ ೭ನೇ ಅಡ್ಡರಸ್ತೆ ಹಾಗೂ ಮಠದಕಣಿ ರಸ್ತೆಯ ಫಲಕಗಳನ್ನು ಬಣ್ಣ ಬಳಿದು ಸುಂದರ ಅಕ್ಷರಗಳಿಂದ ಬರೆದು ನವೀಕರಿಸಲಾಯಿತು.
ಚಿಣ್ಣರ ಪಾರ್ಕ್ ನವೀಕರಣ ಕಾರ್ಯ: ಪಾಂಡೇಶ್ವರ್ ಪೋಲಿಸ್ ಲೇನ್ ನಲ್ಲಿರುವ ಚಿಣ್ಣರ ಪಾರ್ಕ್ ನಿರ್ವಹಣೆ ಇಲ್ಲದೇ ಪಾಳುಬಿದ್ದ ಸ್ಥಿತಿಯಲ್ಲಿತ್ತು. ಇದೀಗ ಅದನ್ನು ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಅಡಿಯಲ್ಲಿ ನವೀಕರಣಗೊಳಿಸಲಾಗುತ್ತಿದೆ. ಪಾರ್ಕ್ ಜಾಗೆ ಹುಲ್ಲುಕಡ್ಡಿಗಳಿಂದ ತುಂಬಿ, ಮಕ್ಕಳ ಆಟಿಕೆ ಸಾಮಾನುಗಳು ತುಕ್ಕು ಹಿಡಿದು, ಮುರಿದುಬಿದ್ದು ಕುಡುಕರ ಹಾಗೂ ಭಿಕ್ಷುಕರ ವಾಸಸ್ಥಾನವಾಗಿತ್ತು. ಇದೀಗ ಅಲ್ಲಿನ ಆವರಣ ಗೋಡೆಯನ್ನು ಮಕ್ಕಳಿಗೆ ಇಷ್ಟವಾಗುವ ಚಿತ್ರಗಳಿಂದ ಅಂದಗೊಳಿಸಲಾಗಿದೆ ಹಾಗೂ ಹೊರಾವರಣವನ್ನು ಸಾಮಾಜಿಕ ಸಂದೇಶಗಳುಳ್ಳ ಕಲಾಕೃತಿಗಳಿಂದ ಚೆಂದಗೊಳಿಸಲಾಗಿದೆ. ನೂತನ ಆಟಿಕೆ ಸಾಮಾನುಗಳನ್ನು ಜೋಡಿಸುವ ಕಾರ್ಯ, ಇಂಟರ್ ಲಾಕ್ ಅಳವಡಿಸುವ ಕಾರ್ಯ, ಗಿಡಗಳನ್ನು ನೆಡುವ ಕಾರ್ಯ ಮತ್ತಿತರ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಮಾಡಿ ಮುಗಿಸಿ, ಬರುವ ಶ್ರಮದಾನದ ದಿನದಂದು ಲೋಕಾರ್ಪಣೆ ಮಾಡಲಾಗುವುದು. ಈ ಸ್ವಚ್ಛತಾ ಅಭಿಯಾನದ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.