ವಿ.ಎಮ್.ಜೋಷಿ ರವರು ಬರೆದ ‘ಮುತ್ತಿನಹಾರ’ ಕಥೆ ಆಧಾರಿತ ಸಿನಿಮಾವನ್ನು 1990 ರಲ್ಲಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬುರವರು ನಿರ್ದೇಶನ ಮಾಡುತ್ತಾರೆ. ಡಿ.ವಿ.ರಾಜಾರಾಮ್ರವರ ಛಾಯಾಗ್ರಹಣ, ಹಂಸಲೇಖರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ವಿಷ್ಣುವರ್ಧನ್, ಸುಹಾಸಿನಿ, ಕೆ.ಎಸ್.ಅಶ್ವತ್ಥ್ ಹಾಗೂ ರಾಮ್ಕುಮಾರ್ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ. 1990-91ನೇ ಸಾಲಿನ ಅತ್ಯುತ್ತಮ ಚಿತ್ರ ಎಂಬ ರಾಷ್ಟ್ರಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತಲ್ಲದೇ, ಪ್ರಥಮ ಅತ್ಯುತ್ತಮ ಚಿತ್ರ, ಅತ್ಯುತ್ತಮ ಪೋಷಕ ನಟ (ಕೆ.ಎಸ್.ಅಶ್ವತ್ಥ್), ಅತ್ಯುತ್ತಮ ಛಾಯಾಗ್ರಾಹಕ (ಡಿ.ವಿ.ರಾಜಾರಾಮ್) ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಕಥೆ:
ಎರಡನೇ ಮಹಾಯುದ್ಧದ ಸಂಧರ್ಭ. ಭಾರತ ಹಾಗೂ ಚೀನಾ ದೇಶದ ನಡುವೆ ಘನಘೋರ ಯುದ್ಧ. ಆ ಯುದ್ದದಲ್ಲಿ ಗಾಯಗೊಂಡ ಮಡಿಕೇರಿಯ ಸಿಪಾಯಿ ಮೇಜರ್ ಅಚ್ಚಪ್ಪ (ವಿಷ್ಣುವರ್ಧನ್) ಅಲ್ಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡುತ್ತಾನೆ. ಮಿಲಿಟರಿ ಆಸ್ಪತ್ರೆಯ ದಾದಿಯಾಗಿ ಕೆಲಸ ನಿರ್ವಹಿಸುವ ಅನ್ನಪೂರ್ಣಳ (ಸುಹಾಸಿನಿ) ಪರಿಚಯವಾಗುತ್ತದೆ. ಆಕೆಯೂ ಕೊಡಗಿನವಳಾದ್ದರಿಂದ ಬಹುಬೇಗ ಸ್ನೇಹಿತರಾಗುತ್ತಾರೆ. ಆ ಸ್ನೇಹ ಪ್ರೀತಿಗೂ ಮುನ್ನುಡಿ ಬರೆಯುತ್ತದೆ. ಇವರ ನವಿರು ಪ್ರೀತಿಗೆ ಯುದ್ಧದ ಬಿಡುವಿನ ಸಮಯದಲ್ಲಿ ಮಡಿಕೇರಿಗೆ ಹೋಗಿ, ಹಿರಿಯರ ಅನುಮತಿ ಹಾಗೂ ಆಶೀರ್ವಾದದೊಂದಿಗೆ ಸಪ್ತಪದಿ ತುಳಿಯುತ್ತಾರೆ. ಅವರ ಅನುರಾಗಕ್ಕೆ ದೇವರು ಕೊಟ್ಟ ಕಾಣಿಕೆಯಾಗಿ ಗಂಡುಮಗುವಿಗೆ ಜನ್ಮ ನೀಡುತ್ತಾಳೆ ಅನ್ನಪೂರ್ಣ. ಕುಟುಂಬ ಸಂತಸದಿಂದಿರುವಾಗಲೇ ಅಚ್ಚಪ್ಪನಿಗೆ ಯುದ್ದಕ್ಕೆ ಕರೆ ಬರುತ್ತದೆ. ಆತ ಯುದ್ದಕ್ಕೆ ಹೊರಡುತ್ತಾನೆ. ಯುದ್ದದಿಂದ ಆತ ಬೇಗ ಮರಳಿ ಬರುವುದಿಲ್ಲ. ನಂತರ ರಾಜಸ್ಥಾನದ ಹತ್ತಿರ ಕ್ಯಾಂಪಿಗೆ ವರ್ಗಾವಣೆಯಾಗುತ್ತದೆ. ಆಗ ಅನ್ನಪೂರ್ಣ ತನ್ನ ಮಗನನ್ನು ಕರೆದುಕೊಂಡು ಅಚ್ಚಪ್ಪನಿರುವ ಕ್ಯಾಂಪಿಗೆ ಹೊರಡುತ್ತಾಳೆ. ದಾರಿ ಮಧ್ಯೆ ರಾಜಸ್ಥಾನದ ಬಳಿ ಶತ್ರುಗಳ ದಾಳಿಗೆ 6-7 ವರ್ಷದ ಮಗನನ್ನು ಕಳೆದುಕೊಳ್ಳುತ್ತಾಳೆ. ಬಹುತೇಕ ಎರಡು ದಿನ ಅದೇ ಮರಳುಗಾಡಿನಲ್ಲಿ ನಡೆದೆ ಸಾಗುತ್ತಾಳೆ. ಕೊನೆಗೆ ತನ್ನ ಗಂಡನಿಗೆ ತನ್ನ ಮಗನ ಶವವನ್ನಾದರೂ ತೋರಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಆಕೆ ಮಗನ ಶವವನ್ನು ಅಲ್ಲಿಯೇ ಮರಳಿನಲ್ಲಿ ಹೂತು, ಶವಸಂಸ್ಕಾರ ಮಾಡುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬಂದ ಅಚ್ಚಪ್ಪ, ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ್ದ ಹೆಂಡತಿಯನ್ನು ಕಂಡು ಆಶ್ಚರ್ಯಪಡುತ್ತಾನೆ ಅಲ್ಲದೇ, ಎದೆಯೆತ್ತರ ಬೆಳೆದ ಮಗನನ್ನು ನೋಡಲಾಗದಿದ್ದಕ್ಕೆ ತುಂಬಾ ನೊಂದುಕೊಳ್ಳುತ್ತಾನೆ. ಮಗನನ್ನು ಕಳೆದುಕೊಂಡ ದುಃಖದಲ್ಲಿ ದಂಪತಿಗಳಿಬ್ಬರು ಕಾಶ್ಮೀರದ ಹತ್ತಿರದಲ್ಲಿನ ಸೇನೆಯ ಕ್ಯಾಂಪಿನಲ್ಲಿ ಅಚ್ಚಪ್ಪ ಸೈನಿಕರ ತರಬೇತುದಾರರನಾಗಿ ಹಾಗೂ ಅನ್ನಪೂರ್ಣ ಮುಖ್ಯದಾದಿಯಾಗಿ ಕೆಲಸ ನಿರ್ವಹಿಸುತ್ತಾ, ಮಕ್ಕಳಿಲ್ಲದ ನೋವು ಮರೆತು, ಎಲ್ಲರೊಂದಿಗೂ ಬೆರೆತು ಉಳಿದ ಖುಷಿಯ ಸಮಯವನ್ನು ಕಳೆಯುತ್ತಾ ಇರುತ್ತಾರೆ. ಇತ್ತ ಅಚ್ಚಪ್ಪನ ತಂದೆ ಮೊಮ್ಮಗನನ್ನು ನೋಡುವ ತವಕ ಹೆಚ್ಚಾಗಿ ಪತ್ರಗಳನ್ನು ಬರೆದಾಗಲೆಲ್ಲಾ, ಮೊಮ್ಮಗನಂತೆ ತಾವೇ ಬರೆದು ತಾತನಿಗೊಂದಷ್ಟು ಖುಷಿಯನ್ನು ನೀಡುತ್ತಿರುತ್ತಾರೆ. ಆದರೆ ಆತ ಮೊಮ್ಮಗನನ್ನು ನೋಡಲೇಬೇಕೆಂದು ದಂಪತಿ ಸಮೇತ ಇವರಿದ್ದಲ್ಲಿಗೆ ಬಂದಾಗ ಮೊಮ್ಮಗ ಸತ್ತು ತುಂಬಾ ವರ್ಷಗಳಾದವು ಎಂಬ ಕಟು ಸತ್ಯ ಕೇಳಿ, ಅಚ್ಚಪ್ಪನ ತಾಯಿ ಎದೆಯೊಡೆದುಕೊಂಡು ಪ್ರಾಣ ಬಿಡುತ್ತಾಳೆ. ತಾಯಿಯನ್ನು ಕಳೆದುಕೊಂಡ ಅಚ್ಚಪ್ಪನಿಗೆ ಮತ್ತಷ್ಟು ನೋವಾಗುತ್ತದೆ. ಅಚ್ಚಪ್ಪ-ಅನ್ನಪೂರ್ಣರೊಂದಿಗೆ ಅಚ್ಚಪ್ಪನ ತಂದೆಯೂ ಕೂಡ ಅಲ್ಲಿಯೇ ವಾಸ ಮಾಡಲು ನಿರ್ಧರಿಸುತ್ತಾರೆ. ಹೀಗಿದ್ದಾಗ ಒಮ್ಮೆ ಚೀನಾ ದೇಶದವರು ದಾಳಿ ಮಾಡಿದಾಗ, ಅಚ್ಚಪ್ಪ ಸೇರಿ ಹಲವು ಸೈನಿಕರನ್ನು ಬಂಧಿಸುತ್ತಾರೆ. ಅವರಿಗೆ ಕಿರುಕುಳ ನೀಡುತ್ತಾರೆ. ಅಷ್ಟೇ ಏಕೆ ಅಚ್ಚಪ್ಪ ಚೀನಿಯರ ಕೈಯಲ್ಲಿ ಮರಣ ಹೊಂದಿದನೆಂದು ಸುದ್ದಿ ಬರುತ್ತದೆ. ಮಗನನ್ನು ಕಳೆದುಕೊಂಡ ದುಃಖವೂ ತೀವ್ರವಾಗಿ ಹೃದಯ ಹಿಂಡುವಂತಾಗುತ್ತದೆ ಮುಪ್ಪಿನಲ್ಲಿರುವ ಅಚ್ಚಪ್ಪನ ತಂದೆಗೆ. ಏನಾದರೂ ಸರಿ ಅಳಲಾರೆನು ಎಂದು ಮಾತು ಕೊಟ್ಟಂತೆ ಆಕೆ ಅಳದೆ, ದುಃಖವನ್ನು ಎದೆಯಲ್ಲಿಟ್ಟುಕೊಂಡು, ಅನ್ನಪೂರ್ಣ ಸೈನಿಕರ ಸೇವೆ ಮಾಡುತ್ತಿರುತ್ತಾಳೆ. ಹೀಗಿರುವಾಗ ಚೀನಿಯರ ವಶದಿಂದ ಹೋರಾಡಿ ಮತ್ತೆ ಸೈನಿಕರೊಂದಿಗೆ ಅಚ್ಚಪ್ಪ ಹಿಂದಿರುಗಿದ್ದಾರೆ ಎಂಬ ಸುದ್ದಿ ಕೇಳಿ ತನ್ನ ವಿವಾಹ ವಾರ್ಷಿಕೋತ್ಸವಕ್ಕಾಗಿ ತಂದಿದ್ದ ಸೀರೆಯನ್ನುಟ್ಟು ಆತ ಇರುವ ಕಡೆ ಬರುತ್ತಾಳೆ. ಆದರೆ ಅಚ್ಚಪ್ಪ ವೀರಮರಣ ಹೊಂದಿರುತ್ತಾನೆ. ಅಲ್ಲಿಗೆ ಸಿನಿಮಾ ಮುಗಿಯುತ್ತದೆ.
ಹಳ್ಳಿ, ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶ ಎಂಬ “ಗಡಿ” ರೇಖೆಯೊಂದು ನಡುವೆ ಬಂದಾಗ ಗಡಿಭಾಗದ ಜಾಗಕ್ಕಾಗಿ ಉಭಯ ಬಣಗಳು ಬಡಿದಾಡುತ್ತಿರುವುದು ತೀರಾ ಮಾಮೂಲಾಗಿಬಿಟ್ಟಿದೆ. ರಾಜರ ಆಳ್ವಿಕೆ ಇದ್ದ ಕಾಲದಲ್ಲೂ ಇಂಥಾ ಗಡಿಭಾಗಕ್ಕಾಗಿ ಯುದ್ದಗಳು, ರಕ್ತಪಾತಗಳು ಸಾಕಷ್ಟು ನಡೆದಿವೆ. ರಾಜರ ಆಳ್ವಿಕೆ ಕಳೆದು, ಪ್ರಜಾಪ್ರಭುತ್ವ ಬಂದರೂ ದೇಶದ ಗಡಿಭಾಗದ ವಿಷಯದಲ್ಲಿ ಇನ್ನೂ ಸಾಕಷ್ಟು ಯುದ್ದಗಳು ನಡೆಯುತ್ತಿವೆ. ಈ ಯುದ್ದ ಅನ್ನೋ ಪದವೇ ಭಯಂಕರ. ಆದರೆ ಆ ಭೀಕರತೆಯ ಪರಿಣಾಮ ಭಾರತೀಯರಿಗೆ ಸ್ವಲ್ಪವೂ ಗೊತ್ತಾಗದಿರುವಷ್ಟರ ಮಟ್ಟಿಗೆ ಗಡಿಯಲ್ಲಿ ಸೈನಿಕರು ಕಾವಲು ಕಾಯುತ್ತಿದ್ದಾರೆ. ಅಲ್ಲದೇ ಶತ್ರುಗಳು ದಾಳಿ ನಡೆಸದಂತೆ ತಡೆಯುತ್ತಿದ್ದಾರೆ. ಆದರೂ ಈ ಉಗ್ರವಾದ ತನ್ನ ಉಗ್ರರೂಪ ತೋರುತ್ತಲೇ ಇದೆ. ಪಾಕಿಸ್ತಾನವೆಂಬ ದೇಶ ಗಡಿನಾಡಿನ ಕಾಶ್ಮೀರವನ್ನು ತನ್ನದಾಗಿಸಿಕೊಳ್ಳಲು ದಶಕಗಳಿಂದಲೂ ಹೋರಾಟ ನಡೆಸುತ್ತಲೇ ಇರುವುದು ಪ್ರತಿಯೊಬ್ಬ ಭಾರತೀಯನಿಗೂ ಗೊತ್ತಿರುವ ವಿಷಯವೇ. ಇತ್ತೀಚೆಗಷ್ಟೆ ಪುಲ್ವಾಮ ಬಳಿ ಮಾನವ ಬಾಂಬ್ ದಾಳಿ ನಡೆಸಿ 40ಕ್ಕೂ ಹೆಚ್ಚು ಸೈನಿಕರು ಹತರಾಗುವಂತೆ ಮಾಡಿದ್ದು, ಆ ಸೈನಿಕರನ್ನು ಕಳೆದುಕೊಂಡಿದ್ದಕ್ಕೆ ಇಡೀ ಭಾರತವೇ ಮರುಕಪಟ್ಟಿತ್ತು. ಇದಕ್ಕೆ ಪ್ರತಿಯಾಗಿ ಭಾರತದ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟು, ಪ್ರತಿದಾಳಿ ನಡೆಸಿ 40 ಸೈನಿಕರ ಆಹುತಿಗೆ ಬದಲಾಗಿ 300 ಕ್ಕೂ ಉಗ್ರವಾದಿಗಳ ಸಂಹಾರ ನಡೆಸಿತ್ತು. ಈ ಸಮಯದಲ್ಲಿ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ರವರನ್ನು ಪಾಕಿಸ್ತಾನ ಸೇನೆಯು ಸೆರೆಹಿಡಿದು, ತದನಂತರ ಬಿಡುಗಡೆ ಮಾಡಿತು.
ಇಂಥಾ ಸೈನಿಕರ ಕುರಿತಂತೆ ಕಥಾವಸ್ತುವಿರುವ ಈ ಚಿತ್ರದಲ್ಲಿ ವೀರಸೈನಿಕನಾಗಿ ಅಚ್ಚಪ್ಪನ ಪಾತ್ರದಲ್ಲಿ ಡಾ.ವಿಷ್ಣುವರ್ಧನ್, ಯುದ್ದ ಸಮಯದಲ್ಲಿ ಗಾಯಗೀಡಾಗುವ ಸೈನಿಕರ ಶುಶ್ರೂಷೆ ಮಾಡುವ, ಹಾಗೂ ಮಾನಸಿಕ ಸ್ಥೈರ್ಯ ತುಂಬ ಅನ್ನಪೂರ್ಣಳ ಪಾತ್ರದಲ್ಲಿ ಸುಹಾಸಿನಿ ಹಾಗೂ ಅಚ್ಚಪ್ಪನ ತಂದೆಯಾಗಿ, ಮುಪ್ಪಿನ ಕಾಲದಲ್ಲಿರುವ ಆತನ ಕಣ್ಮುಂದೆ ತೀರಿಕೊಳ್ಳುವ ಹೆಂಡತಿ, ಮಗ ಹಾಗೂ ಮೊಮ್ಮಗನ ಸಾವಿನಿಂದ ಕಂಗಾಲಾದರೂ ಜೀವ ಬಿಗಿಹಿಡಿದು ಸೊಸೆಯ ಆಸರೆಯಲ್ಲಿ ದಿನ ಸವೆಸುವ ನಿವೃತ್ತ ಕರ್ನಲ್ ಪಾತ್ರದಲ್ಲಿ ಅಶ್ವತ್ಥ್ರವರ ಅಭಿನಯವನ್ನು ಯಾವುದೇ ಕಾರಣಕ್ಕೂ ಯಾರೂ ಮರೆಯಲಾರದಂತೆ ನಟಿಸಿದ್ದಾರೆ. ಆ ಪಾತ್ರದಲ್ಲಿ ಅವರು ಜೀವಿಸಿದ್ದಾರೆ. ಇಂಥಾ ಅಪರೂಪದ ಸಿನಿಮಾವನ್ನು ಮರೆಯದೇ ನೋಡಲೇಬೇಕು.
ಸಿನಿಮಾ ನೋಡಲೇಬೇಕೆಂಬುದಕ್ಕೆ ಕಾರಣಗಳು:
1. ದೇಶ ಕಾಯುವ ಯೋಧರ ಜೀವನದ ಕಷ್ಟ-ಸುಖಗಳ ಕುರಿತು ತಿಳಿಯಲು.
2. ಜೀವನದಲ್ಲಿ ಪ್ರೀತಿ ಹೇಗೆ ಪಾತ್ರ ನಿರ್ವಹಿಸುತ್ತೆ ಎನ್ನುವುದನ್ನು ತಿಳಿಯಲು ಈ ಸಿನಿಮಾ ನೋಡಲೇಬೇಕು.
3. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.