ಸುಬ್ರಹ್ಮಣ್ಯ : ಮಳೆಗಾಲದ ಆರಂಭದ ವೇಳೆ ಡೆಂಘೆ, ಮಲೇರಿಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಕಾಣಿಸುತ್ತದೆ. ಈ ಸಂದರ್ಭದಲ್ಲಿ ಸ್ವಚ್ಚತೆ ಹಾಗೂ ಆರೋಗ್ಯದ ಕಾಳಜಿ ವಹಿಸಬೇಕಾಗುತ್ತದೆ. ಇದಕ್ಕಾಗಿ ಸಮುದಾಯದ ಪಾತ್ರ ಹಾಗೂ ಸ್ವಚ್ಚತೆಯ ಕಡೆಗೆ ಆದ್ಯತೆ ನೀಡಬೇಕಾದ ಅಗತ್ಯವಿದೆ ಎಂದು ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಂದಕುಮಾರ್ ಹೇಳಿದರು.
ಅವರು ಸೋಮವಾರ ಗುತ್ತಿಗಾರು ಪೇಟೆಯಲ್ಲಿ ಗುತ್ತಿಗಾರು ಯುವಕ ಮಂಡಲ, ಗ್ರಾಮ ಪಂಚಾಯತ್ ಗುತ್ತಿಗಾರು,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುತ್ತಿಗಾರು ಹಾಗೂ ಗುತ್ತಿಗಾರು ಸರ್ಕಾರಿ ಪದವಿಪೂರ್ವ ಕಾಲೇಜು ಇದರ ಸಸ್ಯ ಕಾಶಿ ಇಕೋ ಕ್ಲಬ್ ಸಹಯೋಗದೊಂದಿಗೆ ನಡೆದ ಡೆಂಘೆ, ಮಲೇರಿಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ವಿರೋಧಿ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.ಆರೋಗ್ಯ ಇಲಾಖೆಯು ಈಗಾಗಲೇ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಇದರ ಜೊತೆಗೆ ಸಂಘಸಂಸ್ಥೆಗಳೂ ಜಾಗೃತಿ ಮೂಡಿಸುವ ಕೆಲಸ ಮಾಡಿದೆ. ಆದರೆ ಸಮುದಾಯದ ಪಾತ್ರ ಇಲ್ಲಿ ಪ್ರಮುಖವಾಗಿದೆ.ಹೀಗಾಗಿ ಎಲ್ಲರೂ ಜಾಗೃತರಾಗಬೇಕಿದೆ ಎಂದು ಹೇಳಿದರು.
ಗುತ್ತಿಗಾರು ಗ್ರಾಪಂ ಅಧ್ಯಕ್ಷೆ ಪ್ರಮಿಳಾ ಶಶಿಧರ್ ಮಾತನಾಡಿ, ಗ್ರಾಮದ ಎಲ್ಲಾ ಜನರು ಸ್ವಚ್ಚತೆಯ ಕಡೆಗೆ ಆದ್ಯತೆ ನೀಡಬೇಕಾಗಿದೆ, ಪಂಚಾಯತ್ ಆಡಳಿತದ ಅಂತಿಮ ಹಂತದಲ್ಲಿ ನಡೆದ ಈ ಕಾರ್ಯಕ್ರಮ ಯಶಸ್ವಿಯಾಗಲಿ, ಸಮುದಾಯದಲ್ಲಿ ಜಾಗೃತಿಯಾಗಲಿ ಎಂದರು.ಗುತ್ತಿಗಾರು ಗ್ರಾಪಂ ನೂತನ ಸದಸ್ಯ ವೆಂಕಟ್ ವಳಲಂಬೆ ಮಾತನಾಡಿ, ಪಂಚಾಯತ್ ನೂತನ ಸದಸ್ಯರಿಗೆ ಇದು ಆರಂಭ, ಗುತ್ತಿಗಾರು ಪೇಟೆಯನ್ನು ಸ್ವಚ್ಚ ಮಾಡುವುದರ ಜೊತೆಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ. ಆರೋಗ್ಯದ ಕಡೆಗೂ ಎಲ್ಲರೂ ಕಾಳಜಿ ವಹಿಸಬೇಕಾಗಿದೆ. ಆಂದೋಲನ ಯಶಸ್ವಿಯಾಗಲಿ ಎಂದರು.ಗುತ್ತಿಗಾರು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಸುಮಿತ್ರಾ ಎಂಜಿ ಮಾತನಾಡಿ,ಸಾರ್ವಜನಿಕರಿಗೆ ಅರಿವು ಮೂಡಿಸುವ ಹಾಗೂ ಸಾಮಾಜಿಕ ಕಳಕಳಿಯ ಎಲ್ಲಾ ಕೆಲಸ ಕಾರ್ಯಗಳಿಗೂ ತಮ್ಮ ಸಹಕಾರ ಇದೆ.ವಿದ್ಯಾರ್ಥಿಗಳ ಮೂಲಕ ಮನೆಮನೆಗೂ ಇಂತಹ ಜಾಗೃತಿ ಕಾರ್ಯಕ್ರಮಗಳು ತಲುಪಿದಾಗ ಮನೆ ಮನೆಯಲ್ಲೂ ಜಾಗೃತಿ ಮೂಡಲು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯುವಕ ಮಂಡಲದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ಗುತ್ತಿಗಾರು ಗ್ರಾಮವು ಕಳೆದ ವರ್ಷ ಜ್ವರದ ಮೂಲಕ ರಾಜ್ಯದಲ್ಲೇ ಗಮನಸೆಳೆದಿತ್ತು, ಆರೋಗ್ಯ ಸಚಿವರೇ ಆಗಮಿಸಿದ್ದರು. ಆದರೆ ಈ ಬಾರಿ ಅಂತಹ ಪ್ರಸಂಗ ಎದುರಾಗದೆ ಎಲ್ಲರೂ ಜಾಗೃತರಾಗಿ ಡೆಂಘೆ, ಮಲೇರಿಯಾದ ಬಾರದಂತೆ ಹೆಚ್ಚು ಹಮನಹರಿಸಬೇಕಾಗಿದೆ, ಸಮುದಾಯದಲ್ಲಿ ಈ ಬಗ್ಗೆ ಜಾಗೃತಿ ಮೂಡಬೇಕಿದೆ ಎಂದರು.ಗುತ್ತಿಗಾರಿನ ಡಿವಿಜಿ ನಗರದಿಂದ ಆರಂಭಗೊಂಡ ಡೆಂಘೆ, ಮಲೇರಿಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ವಿರೋಧಿ ಆಂದೋಲನವು ಮುತ್ತಪ್ಪ ನಗರದ ಪೆಟ್ರೋಲ್ ಪಂಪ್ವರೆಗೆ ನಡೆಯಿತು.ಈ ಸಂದರ್ಭದಲ್ಲಿ ಗುತ್ತಿಗಾರು ಪೇಟೆಯಾದ್ಯಂತ ಜಾಗೃತಿ ಕರಪತ್ರ ವಿತರಿಸಲಾಯಿತು.ಶಾಲೆ, ಕಾಲೇಜು ವಿದ್ಯಾರ್ಥಿಗಳ ಮೂಲಕ ಮನೆಮನೆಗೂ ಕರಪತ್ರ ತಲಪಿಸುವ ವ್ಯವಸ್ಥೆ ಮಾಡಲಾಯಿತು.
ಆ ಬಳಿಕ ಗುತ್ತಿಗಾರು ಸರ್ಕಾರಿ ಪದವಿಪೂರ್ವ ಕಾಲೇಜು ಇದರ ಸಸ್ಯ ಕಾಶಿ ಇಕೋ ಕ್ಲಬ್ ವಿದ್ಯಾರ್ಥಿಗಳು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು ಸಾಂಕೇತಿಕವಾಗಿ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ರಸ್ತೆ ಬದಿಯ ಕಸ ಕಡ್ಡಿಗಳನ್ನು ಹೆಕ್ಕುವ ಮೂಲಕ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂಬ ಸಂದೇಶವನ್ನು ಸಮುದಾಯಕ್ಕೆ ನೀಡಿದರು.
ಈ ಸಂದರ್ಭದಲ್ಲಿ ಗುತ್ತಿಗಾರು ಗ್ರಾಪಂ ಉಪಾಧ್ಯಕ್ಷ ಶರತ್ ಗುತ್ತಿಗಾರು, ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಂದಕುಮಾರ್, ಗುತ್ತಿಗಾರಿನ ವೈದ್ಯ ಡಾ.ಉದಯಕುಮಾರ್ , ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಶಿವಪ್ರಕಾಶ್ ಅಡ್ಡನಪಾರೆ, ಗ್ರಾಪಂ ಸದಸ್ಯರುಗಳಾದ ವೆಂಕಟ್ ವಳಲಂಬೆ,ಅಚ್ಚುತ ಗುತ್ತಿಗಾರು, ಜಯಪ್ರಕಾಶ್ ಮೊಗ್ರ, ರಾಧಾಕೃಷ್ಣ ತುಪ್ಪದಮನೆ, ಬಿ.ಕೆ.ಶ್ರೀಧರ,ರಾಕೇಶ್ ಮೆಟ್ಟಿನಡ್ಕ, ಸವಿತಾ ಕುಳ್ಳಂಪಾಡಿ, ಭಾಗೀರಥಿ, ಗುತ್ತಿಗಾರು ಪ್ರೌಢಶಾಲ ಮುಖ್ಯೋಪಾಧ್ಯಾಯ ಹೆರಾಲ್ಡ್ ನೆಲ್ಸನ್ , ಯುವಕಮಂಡಲದ ಕಾರ್ಯದರ್ಶಿ ಲೋಹಿತ್ ಚೈಪೆ, ಕೋಶಾಧಿಕಾರಿ ಲೋಕೇಶ್ವರ ಡಿಆರ್,ಗೌರವಾಧ್ಯಕ್ಷ ಗೋಪಾಲ ಚತ್ರಪ್ಪಾಡಿ,ಸದಸ್ಯರಾದ ರವಿಪ್ರಕಾಶ್ ಬಿವಿ,ದಿನೇಶ್ ಸರಸ್ವತಿಮಹಲ್, ಜಯರಾಮ ವಳಲಂಬೆ,ರಘರಾಮ ಬಾಕಿಲ,ದಾಮೋದರ ನೂಜಾಡಿ,ಪೂರ್ಣಚಂದ್ರ ಪೈಕ,ಶಿವರಾಮ ದೇವ, ಕರ್ನಾಟಕ ರಕ್ಷಣಾ ವೇದಿಕೆಯ ಮಾಧವ ಎರ್ಡಡ್ಕ ಹಾಗೂ ಪ್ರೌಢಶಾಲೆ,ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮತ್ತು ಉಪನ್ಯಾಸಕರು, ಜೀಪು, ಅಟೋ ಚಾಲಕರು, ವರ್ತಕ ಸಂಘದ ಪದಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸರ್ಕಾರಿ ಆಸ್ಪತ್ರೆ ಸಿಬಂದಿಗಳು, ಸಾರ್ವಜನಿಕರು ಭಾಗವಹಿಸಿದರು.ಯುವಕ ಮಂಡಲದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಸ್ವಾಗತಿಸಿ ವರ್ತಕ ಸಂಘದ ಕಾರ್ಯದರ್ಶಿ ಬಿ.ಕೆ.ಶ್ರೀಧರ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.