ದ್ವಾರಕೀಶ್ ಚಿತ್ರ ಸಂಸ್ಥೆಯಿಂದ ತಮಿಳಿನ “ಧೀರ್ಘಸುಮಂಗಲಿ” ಚಿತ್ರವನ್ನು 1977 ರಲ್ಲಿ ಚಿತ್ರಕಥೆಯನ್ನು ಬರೆದು, ನಿರ್ದೇಶನದ ಹೊಣೆಯನ್ನು ಹೆಚ್.ಆರ್.ಭಾರ್ಗವ ರವರು ಹೊರುತ್ತಾರೆ. ಡಿ.ವಿ.ಜಯರಾಮ್ ರವರ ಛಾಯಾಗ್ರಹಣ, ರಾಜನ್-ನಾಗೇಂದ್ರ ರವರ ಸಂಗೀತವಿರುತ್ತದೆ. ಚಿ.ಉದಯಶಂಕರ್ ರವರ ಸಾಹಿತ್ಯವಿದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ರಾಜ್ ಕುಮಾರ್, ಬಿ.ಸರೋಜಾದೇವಿ, ಮೈನಾವತಿ, ತೂಗುದೀಪ ಶ್ರೀನಿವಾಸ, ಅಶೋಕ್, ರಾಮಕೃಷ್ಣ, ದ್ವಾರಕೀಶ್, ಬಾಲಕೃಷ್ಣ ಹಾಗೂ ಜಯಮ್ಮ ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ತಮಿಳಿನ ‘ದೀರ್ಘಸುಮಂಗಲಿ’ ಎಂಬಾ ಸಿನಿಮಾ ರಿಮೇಕ್ ಇದಾಗಿದ್ದು, ಈ ಸಿನಿಮಾ ಒಂದು ಕುಟುಂಬ ಹೇಗಿರಬೇಕು. ಗಂಡ-ಹೆಂಡತಿ ಬಾಂಧವ್ಯ ಹೇಗಿರಬೇಕು ಎಂಬ ಬಗ್ಗೆ, ಹಾಗೂ ಮಕ್ಕಳೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ಈ ಸಿನಿಮಾ ತಮಗೊಂದು ಮಾರ್ಗದರ್ಶನ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಡಾ. ರಾಜ್ ಕುಮಾರ್ ರವರ ಧರ್ಮಪತ್ನಿಯಾದ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ರವರು ಈ ಸಿನಿಮಾದ ಕೊನೆಯ ದೃಶ್ಯವನ್ನು ಅವರ ಜೀವಮಾನದಲ್ಲೇ ನೋಡಲು ಇಷ್ಟಪಡಲಿಲ್ಲ ಎಂಬುದನ್ನು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಅಂತಹ ಭಾವನಾತ್ಮಕ ದೃಶ್ಯವದು.
ಕಥೆ:
“ಮದುವೆ ಕೇವಲ ದೈಹಿಕ ಬಯಕೆಗಳ ಪೂರೈಕೆಗಳಿಗಾಗಿ ಇರುವ ಸಾಧನವಲ್ಲ. ಒಲಿದ ಜೀವಗಳೆರಡು ಹೂವು ಗಂಧದಂತೆ ಸಂಗಮವಾಗುವುದೇ ಆ ಪವಿತ್ರ ಅನುಬಂಧದ ಉದ್ದೇಶ. ಒಬ್ಬರನ್ನೊಬ್ಬರು ಅರಿತು, ಒಬ್ಬರಿಗಾಗಿ ಒಬ್ಬರು ಉಸಿರಾಡುತ್ತಾ ಬಾಳಿನ ಅನುಕ್ಷಣವೂ ತ್ಯಾಗದಿಂದ ದೊರೆಯುವ ಅಮೃತವನ್ನು ಸವೆಯುವ ದಂಪತಿಗಳೇ ಭಾಗ್ಯವಂತರು” ಎಂಬ ಸಂದೇಶದ ಈ ಸಿನಿಮಾ ಆರಂಭವಾಗುತ್ತದೆ. ಅದೆಷ್ಟು ಅರ್ಥಗರ್ಭಿತ ಸಾಲುಗಳನ್ನು ನಿರ್ದೇಶಕರು ಹೇಳಿದ್ದಾರೆ ಇಲ್ಲಿ. ಕುಮಾರ್ (ಡಾ. ರಾಜ್ ಕುಮಾರ್) ಹಾಗೂ ಪಾರ್ವತಮ್ಮ (ಡಾ. ಬಿ.ಸರೋಜಾದೇವಿ) ಹಾಗೂ ಮೂರು ಮಕ್ಕಳ ಮುದ್ದಿನ ಸಂಸಾರ. ಕುಮಾರ್ ಬಡತನದಿಂದ ಮೇಲೆ ಬಂದ ಸ್ವಾಭಿಮಾನಿ. ನಿಕೃಷ್ಟ ಸ್ವಭಾವಿ. ತನ್ನ ಮಾತೇ ನಡೆಯಬೇಕೆಂಬ ಹಠ ಸ್ವಭಾವಿ. ತನ್ನ ಸಂಸಾರದ ಹೆಂಡತಿ, ಮಕ್ಕಳು ಕೂಡ ಅಷ್ಟೇ ಕಟ್ಟುನಿಟ್ಟಾಗಿ ಬಾಳಬೇಕೆಂಬ ಬಯಕೆ ಆತನದು. ಯಾರು ಏನೇ ತಪ್ಪು ಮಾಡಿದರೂ ಸಹಿಸದವನು. ಮಕ್ಕಳನ್ನು ಕೂಡ ಅತಿ ಜಾಗರೂಕತೆಯಿಂದ ಸಾಕುತ್ತಿರುತ್ತಾನೆ. ಅಷ್ಟೇ ಅಲ್ಲದೇ, ತನ್ನ ಮನೆಯ ಪಾರ್ಟಿಗೆ ಆಗಮಿಸಿದ ಸ್ನೇಹಿತರ ಎದುರು, ತನ್ನ ಮಕ್ಕಳು ಹೇಗೆ ತಂದೆಯ ಮಾತಿಗೆ ಬೆಲೆ ನೀಡುತ್ತಾರೆಂಬುದರ ಬಗ್ಗೆ ತೋರಿಸುತ್ತಾನೆ. ಆ ಮಕ್ಕಳು ಹಾಗೇ, ತನ್ನ ತಂದೆಯ ಎದುರು ತುಂಬಾ ಗೌರವ ಹಾಗೂ ವಿನಯತೆಯಿಂದ ನಡೆದುಕೊಳ್ಳುತ್ತಾರೆ.
ಮಕ್ಕಳನ್ನು ತುಂಬಾ ಸ್ಟ್ರಿಕ್ಟ್ ಆಗಿ ಬೆಳೆಸುತ್ತಿರುವ ಕುಟುಂಬಗಳಲ್ಲಿಯೇ, ತಂದೆ-ತಾಯಿಯ ಮೇಲಿನ ಕೋಪದಿಂದ ಮನೆಯಿಂದ ಹೊರಗೆ ಬಂದ ಮಕ್ಕಳು ಹಾದಿ ತಪ್ಪುವ ಉದಾಹರಣೆಗಳು ಸಾಕಷ್ಟು ಇವೆ. ಅದೇ ರೀತಿ, ಇಲ್ಲಿ ಕೂಡ, ಕುಮಾರ್ ನ ದೊಡ್ಡಮಗ, ಜಾಲಿ ಕ್ಲಬ್ ಮೆಂಬರ್ ಆಗಿ, ಕುಡಿದು, ಕುಣಿಯುತ್ತಾ, ಮೋಜು ಮಸ್ತಿ ಮಾಡುವ ವಿಷಯ ತಿಳಿದು, ಕುಮಾರ್ ಅಲ್ಲಿಗೆ ಬಂದು ಮಗನ ಮೇಲೆ ರೇಗುತ್ತಾನೆ. ಎದೆಯೆತ್ತರಕ್ಕೆ ಬೆಳೆದ ಮಕ್ಕಳೊಂದಿಗೆ ರೇಗಾಡಿ, ಕೂಗಾಡಿ ಮನಸು ಬದಲಿಸುವ ಬದಲಾಗಿ, ಸ್ನೇಹಿತರಂತೆ ವರ್ತಿಸಿ, ತಮ್ಮ ಅಭಿಪ್ರಾಯವನ್ನಷ್ಟೇ ಮಂಡಿಸಿ, ಮಕ್ಕಳನ್ನು ಸರಿದಾರಿಗೆ ಪ್ರಯತ್ನ ಮಾಡಬೇಕು ಎಂಬ ಸೂಕ್ಷ ಸಂಗತಿಯನ್ನು ಈ ಸಿನಿಮಾ ತೋರಿಸುತ್ತದೆ. ಮಗನಿಂದ ಅವಮಾನಗೊಂಡ ಕುಮಾರ್, ಮನೆಗೆ ಬಂದ ನಂತರ ಹಿರಿಯ ಮಗನನ್ನು ಮನೆಯಿಂದ ಹೊರ ಹಾಕುತ್ತಾನೆ. ಅದೇ ರೀತಿ ತನ್ನ ಮನೆಯಲ್ಲಿಯೇ ಕಳ್ಳತನದ ಆರೋಪ ಹೊತ್ತ ಕಿರಿಯ ಮಗನನ್ನು ಕೂಡ ಮನೆಯಿಂದ ಹೊರ ಹಾಕುತ್ತಾನೆ. ಅದು ಆ ತಾಯಿಯ ಮನಸಿಗೆ ನೋವಾದರೂ, ಗಂಡನಿಗಾಗಿ ಆ ನೋವನ್ನು ತನ್ನಲ್ಲೇ ಹುದುಗಿಸಿಕೊಂಡು, ನಿತ್ಯವೂ ವೇದನೆ ಅನುಭವಿಸುತ್ತಿರುತ್ತಾಳೆ. ಒಂದು ದಿನ ಆಕೆಗೆ “ರಕ್ತ ಕ್ಯಾನ್ಸರ್” ಇರುವುದು ಪತ್ತೆಯಾಗಿ, ಹೆಂಡತಿಯನ್ನು ಅತಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಕುಮಾರ್ ಗೆ ತಡೆದುಕೊಳ್ಳಲಾಗದ ಆಘಾತವಾಗುತ್ತದೆ. ಅದನ್ನು ಡಾಕ್ಟರಿಂದ ತಿಳಿದು, ಮನೆಗೆ ಬಂದಾಗ ಆಕೆ ಸೋಫಾ ಮೇಲೆ ಕುಳಿತು, ಕೈಯಲ್ಲಿ “ಮುತ್ತೈದೆ” ಎಂಬ ಪುಸ್ತಕ ಹಿಡಿದು ನಿದಿರೆಗೆ ಜಾರಿರುತ್ತಾಳೆ. ಆಕೆ ಕೈಯಲ್ಲಿ ಹಿಡಿದಿದ್ದ ಆ ಮುತ್ತೈದೆ ಪುಸ್ತಕದ ಶೀರ್ಷಿಕೆಯಂತೆ ಆಕೆ ಮುತ್ತೈದೆಯಾಗಿ ಸಾಯುವ ಸಂಧರ್ಭ ಬರುತ್ತದೆ. ಆಕೆಗೆ ಬ್ಲಡ್ ಕ್ಯಾನ್ಸರ್ ಇದೆ ಎಂಬ ವಿಷಯ ಇಬ್ಬರಿಗೂ ಗೊತ್ತು. ಆದರೆ ಒಬ್ಬರಿಗೊಬ್ಬರು ಹೇಳಿಕೊಳ್ಳುವಂತಿಲ್ಲ. ಅದಕ್ಕೆ ಅವರಿಬ್ಬರ ನಡುವಣ ಪ್ರೀತಿಯೇ ಕಾರಣ. ಆ ಕ್ಷಣಗಳು ಅವರುಗಳು ಅನುಭವಿಸುವ ಮನೋವೇದನೆ, ಹೇಳಿಕೊಳ್ಳಲಾಗದ ಮಾತುಗಳನ್ನು ಬರೀ ಕಣ್ಣಂಚಿನಲ್ಲೇ ಹನಿ ನೀರು ಜಿನುಗಿಸಿ, ಮುಖದಲ್ಲಿ ಭಾವ ತುಂಬಿಸಿ, ಇಬ್ಬರೂ ಅತ್ಯಮೋಘವಾಗಿ ನಟಿಸಿದ್ದಾರೆ. ಅಲ್ಲಲ್ಲ… ಆ ಪಾತ್ರಗಳಲ್ಲೇ ಜೀವಿಸಿದ್ದಾರೆ. ಈ ಸಮಯದಲ್ಲಿ ಬರುವ “ನಿನ್ನ ನನ್ನ ಮನವು ಸೇರಿತು” ಎಂಬ ಗೀತೆಯಲ್ಲಿ ನಿರ್ದೇಶಕರು ಆ ಭಾವನೆಗಳಿಗೆ ಜೀವಂತಿಕೆ ನೀಡಿ, ಪ್ರತಿ ಫ್ರೇಮಿನಲ್ಲೂ ಸೆರೆಹಿಡಿದಿದ್ದಾರೆ. ಇಂತಹ ಪಾತ್ರಗಳಿಂದಲೇ ರಾಜ್ ಕುಮಾರ್ ಎಂಬ ನಟ, ಮಹಾನಟನಾಗಿ ಜನಮಾನಸದಲ್ಲಿ ಮನೆ ಮಾಡಿದ್ದು. ಈ ಚಿತ್ರದಲ್ಲಿ ರಾಜ್ ಕುಮಾರ್ ರವರಿಗೆ ಜೋಡಿಯಾಗಿ ನಟಿಸಿರುವ ಬಿ.ಸರೋಜಾದೇವಿಯವರದು ಕೂಡ ಅಷ್ಟೇ ಅಮೋಘ ಅಭಿನಯ. ಆಕೆಯ ಕೊನೆಯ ದಿನಗಳು ಸುಖವಾಗಿರಲಿ ಎಂಬ ಕಾರಣಕ್ಕಾಗಿಯೇ ತಾನೇ ಹೊರದೂಡಲ್ಪಟ್ಟ ಮಕ್ಕಳನ್ನು ಮತ್ತೆ ಮನೆಗೆ ಬರುವಂತೆ ಮಾಡುತ್ತಾನೆ ಕುಮಾರ್. ಮತ್ತೆ ಆತನ ಮನೆ ಸ್ವರ್ಗದಂತಾಗುತ್ತದೆ. ಎಲ್ಲರೂ ಖುಷಿಯಿಂದ ನಲಿಯುತ್ತಾರೆ. ಅಪ್ಪ-ಮಕ್ಕಳ ನಡುವೆ ಒಂದು ಅನನ್ಯ ಭಾವನೆ ಮನೆ ಮಾಡಿ, ಖುಷಿಯಿಂದ ನಲಿಯುತ್ತಾರೆ. ಕುಮಾರ್ ಒಬ್ಬ ಕಟುವಾಗಿ, ತೀಕ್ಷ್ಣವಾಗಿ, ನಿಷ್ಟುರವಾಗಿ, ನೇರ ದಿಟ್ಟ ನುಡಿಗಳನ್ನಾಡುವವನಾದರೂ ಆತನ ಅಂತಃಕರಣ ತುಂಬಾ ಮೃದು. ಆತನ ಹೆಂಡತಿಗಾಗಿ, ಆತನ ಮಕ್ಕಳಿಗಾಗಿ ಆತ ಯೋಚಿಸುವ ಪರಿ, ಮಕ್ಕಳಿಗಾಗಿಯೇ ಪ್ರತ್ಯೇಕ ಮನೆಗಳನ್ನು ನಿರ್ಮಿಸಿ ತಾನೊಂದು ಪುಟ್ಟ ಮನೆಯನ್ನು ಕಟ್ಟಿಕೊಳ್ಳುವ ಆತನ ಕನಸು, ಆತನ ಮುಂದಾಲೋಚನೆಯ ಕುರಿತು ತಿಳಿಸುತ್ತದೆ. ಒಂದು ದೃಶ್ಯದಲ್ಲಿ ಗುಡುಗು ಮಿಂಚು ಸಹಿತ ಮಳೆಯ ನಡುವೆ ಬೀಸುವ ಬಿರುಗಾಳಿಗೆ ಆತನ ಕನಸಿನ ಮನೆಗಳ ಮಾದರಿಯು ಟೇಬಲಿನಿಂದ ಕೆಳಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತದೆ. ತಾನು ಕೂಡಿಟ್ಟ ಕನಸುಗಳು ಛಿದ್ರವಾಯಿತಲ್ಲ ಎಂಬ ಭಾವನೆಗಳನ್ನು ನಿರ್ದೇಶಕರು ಅದೆಷ್ಟು ಸೂಕ್ಷ್ಮವಾಗಿ ಹಿಡಿದಿಟ್ಟಿದ್ದಾರೆ.
ಮಕ್ಕಳೆಲ್ಲಾ ಮತ್ತೆ ಗೂಡು ಸೇರಿದ ಮೇಲೆ ಖುಷಿಯಿಂದ ಮನೆಮಂದಿಯೆಲ್ಲಾ ನಲಿಯುವಾಗ ಪಾರ್ವತಿ-ಕುಮಾರ್ ರವರ ವಿವಾಹದ 25ನೇ ವಾರ್ಷಿಕ ಆಚರಣೆಯನ್ನು ಮಾಡುವ ಸಮಯ ಬರುತ್ತದೆ. ತಂದೆ ತುಂಬಾ ಸ್ಟ್ರಿಕ್ಟ್ ಆಗಿದ್ದಾರೆಂಬ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದು, ತಾವು ಮಾಡಿದ್ದು ತಪ್ಪು ಎಂದು ಅರಿವಾಗಿ, ಆ ತಂದೆಯ ಮನಸಿಗೆ ಮತ್ತೆ ನೋವು ಕೊಡಬಾರದೆಂದು ತೀರ್ಮಾನಿಸಿದಂತೆ, ಮತ್ತೇ ಆ ತಂದೆ-ತಾಯಿಯ ಜೊತೆ ಅನ್ಯೋನ್ಯತೆಯಿಂದ ಕಾಲ ಕಳೆಯುತ್ತಾರೆ. ಅವರ ಪ್ರೀತಿ, ಮಮತೆ, ಅನ್ಯೋನ್ಯತೆಗೆ “ಭಾಗ್ಯವಂತರು, ನಾವೇ ಭಾಗ್ಯವಂತರು” ಅನ್ನೋ ಗೀತೆಯೇ ಸಾಕ್ಷಿ. ಎಲ್ಲರೂ ಹೀಗೆ ಖುಷಿಖುಷಿಯಲ್ಲಿರುವಾಗಲೇ, ಪಾರ್ವತಿಗೆ ತಲೆಸುತ್ತಿ ಬಂದಂತಾಗಿ, ದೃಷ್ಠಿ ಮಂದವಾಗುತ್ತದೆ. ಆಗ ಕುಮಾರ್-ಪಾರ್ವತಿ ಇಬ್ಬರೂ ತಮ್ಮ ಕೋಣೆಗೆ ಹೋಗುತ್ತಾರೆ. ಅಲ್ಲಿಂದ ಕುಮಾರ್ ಡಾಕ್ಟರ್ ಗೆ ಕರೆಮಾಡಿ, ಮನೆ ತಕ್ಷಣವೇ ಬರಲು ತಿಳಿಸುವಾಗ ಆತನ ಉದ್ವೇಗದಿಂದ ಆತನಿಗೆ ಹೃದಯಾಘಾತವಾಗುತ್ತದೆ. ಇಬ್ಬರೂ ಒಬ್ಬರಿಗೊಬ್ಬರು ತಬ್ಬಿಕೊಂಡು, ಕುಳಿತಲ್ಲಿಯೇ ಇಹಲೋಕ ಸೇರುತ್ತಾರೆ. ಚಿಕ್ಕಪುಟ್ಟ ಕಾರಣಗಳಿಗಾಗಿ ಗಂಡ-ಹೆಂಡತಿ ನಡುವೆ ಮನಸ್ತಾಪ ಬಂದು “ವಿಚ್ಛೇದನ” ಎಂಬ ನೆಪದಿಂದ ದೂರವಾಗುವ ಅದೆಷ್ಟೋ ಸಂಸಾರಗಳಿಗೆ ಗಂಡ ಎಂದರೇನು? ಹೆಂಡತಿ ಎಂದರೇನು? ಗಂಡ-ಹೆಂಡತಿ ಸಂಬಂಧ ಹೇಗಿರಬೇಕು? ಎಂಬೆಲ್ಲಾ ನಾನಾ ಪ್ರಶ್ನೆಗಳಿಗೆ ಉತ್ತರವಾಗಿ ಈ ಜೋಡಿ, ಜೀವನದ ಕೊನೆವರೆಗೂ ಜೊತೆಯಾಗಿ ಇರುವ ನಾವುಗಳೇ ಭಾಗ್ಯವಂತರು ಎಂಬ ಉತ್ತರ ನೀಡುತ್ತದೆ. ಆ ಜೋಡಿ ದುರಂತ ಅಂತ್ಯ ಕಂಡು ಸಿನಿಮಾದ ಕತೆ ಮುಗಿಯುವಾಗ 25ನೇ ವರ್ಷದ ಆಚರಣೆಗಾಗಿ ಹೊತ್ತಿಸಿದ 25 ಎಂಬ ಅಕ್ಷರಗಳಿಗೆ ಜೋಡಿಸಿದ ಲೈಟುಗಳು ಆರಿಹೋಗುತ್ತದೆ. ಅದೆಷ್ಟು ಸೂಕ್ಷ್ಮಾರ್ಥಗಳು ಈ ದೃಶ್ಯದಲ್ಲಿ ಅಡಗಿವೆ ಅಲ್ಲವೇ. ಇಂಥಾ ಅಪರೂಪದ ದೃಶ್ಯರೂಪಕ ನೀಡಿದ ಹೆಚ್.ಆರ್.ಭಾರ್ಗವರವರನ್ನು ಇಲ್ಲಿ ನೆನೆಯಲೇಬೇಕು. ಅಷ್ಟೇ ಅಲ್ಲದೇ ಭಾವನಾತ್ಮಕವಾಗಿ ನಟಿಸಿದ ರಾಜ್ ಕುಮಾರ್ ಹಾಗೂ ಸರೋಜಾದೇವಿಯವರನ್ನು ಕೂಡ ಮರೆಯುವಂತಿಲ್ಲ. ನಿಜಕ್ಕೂ ಗ್ರೇಟ್ ಸಿನಿಮಾ.
ಕನ್ನಡ ಭಾಷೆ ಗೊತ್ತಿರುವ ಪ್ರತಿಯೊಂದು ಮನೆಯವರು, ತಾತ-ಅಜ್ಜಿ, ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ಮಕ್ಕಳು-ಮೊಮ್ಮಕ್ಕಳು ಹೀಗೆ ಎಲ್ಲರೂ ಸೇರಿ ಮನೆಮಂದಿ ಕುಳಿತು ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಚಿತ್ರ “ಭಾಗ್ಯವಂತರು” ಎಂದು ಹೇಳಿದರೇ ಅತಿಶಯೋಕ್ತಿ ಎನಿಸಲಾರದು. ಒಮ್ಮೆಯೂ ನೋಡಿಲ್ಲವೆಂದರೆ ದಯವಿಟ್ಟು ನಿಮ್ಮ ಪ್ರೀತಿಪಾತ್ರರ ಜೊತೆ ಈ ಸಿನಿಮಾ ನೋಡಿ. ನೋಡಿದ್ದರೂ ಇನ್ನೊಮ್ಮೆ ತಮ್ಮ ಕುಟುಂಬದೊಂದಿಗೆ ನೋಡಿ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಗಂಡ-ಹೆಂಡತಿ ನಡುವಿನ ಸಂಬಂಧ ಹೇಗಿರಬೇಕು ಎಂಬುದರ ಕುರಿತು ತಿಳಿಯಲು.
2. ಮಕ್ಕಳು ಹಾಗೂ ಪೋಷಕರ ನಡುವಿನ ಸಂಬಂಧ ಹೇಗಿರಬೇಕು ಕುರಿತು ತಿಳಿಯಲು.
3. ಜೀವನದಲ್ಲಿ ಪ್ರೀತಿ ಹೇಗೆ ಪಾತ್ರ ನಿರ್ವಹಿಸುತ್ತೆ ಎನ್ನುವುದನ್ನು ತಿಳಿಯಲು ಈ ಸಿನಿಮಾ ನೋಡಲೇಬೇಕು.
4. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.