ಶ್ರೀ ಪಾಂಡುರಂಗ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಪಂಡರೀಬಾಯಿರವರು 1957 ರಲ್ಲಿ ಈ ಸಿನಿಮಾದಲ್ಲಿ ಮುಖ್ಯಪಾತ್ರವೊಂದರಲ್ಲಿ ನಟಿಸಿ, ನಿರ್ಮಾಣದ ಹೊಣೆ ಕೂಡ ಹೊತ್ತುತ್ತಾರೆ. ಆರ್.ಸಂಪತ್ ರವರ ಛಾಯಾಗ್ರಹಣ, ಆರ್.ದಿವಾಕರರವರ ಸಂಗೀತವಿರುತ್ತದೆ. ಪಿ.ಗುಂಡೂರಾವ್ ರವರ ಸಾಹಿತ್ಯವಿದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ರಾಜಕುಮಾರ್, ಉದಯ್ ಕುಮಾರ್, ಪಂಡರೀಬಾಯಿ, ಮೈನಾವತಿ, ರಮಾದೇವಿ, ಆದವಾನಿ ಲಕ್ಷ್ಮಿದೇವಿ, ಬಾಲಕೃಷ್ಣ ಹಾಗೂ ನರಸಿಂಹರಾಜು ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ಈ ಸಿನಿಮಾ ರಾಜಕುಮಾರ್ ರವರ 6 ನೇ ಸಿನಿಮಾ, ಅಲ್ಲದೇ ಮೊದಲ ಸಾಮಾಜಿಕ ಕಳಕಳಿಯ ಚಿತ್ರ. ಈ ಸಿನಿಮಾಗಾಗಿ ರಾಜಕುಮಾರ್ ರವರು ತಮ್ಮ ಗಿರಿಜಾ ಕೂದಲನ್ನು ಹೇರ್ ಕಟ್ ಮಾಡಿಸಿದ್ದು, ಮೊದಲ ಬಾರಿಗೆ ಪ್ಯಾಂಟ್ ಧರಿಸಿದ್ದು ಎಲ್ಲವೂ ತಮಾಷೆಯಾಗಿದೆಯಾದರೂ, ನಟನೆಗಾಗಿ ಅವರಲ್ಲಿದ್ದ ಶ್ರದ್ಧೆಯನ್ನು ಇಮ್ಮಡಿಗೊಳಿಸಿತ್ತು. ಪಂಡರೀಬಾಯಿಯವರು ಈ ಸಿನಿಮಾದ ನಿರ್ಮಾಪಕರಾದರೂ, ತಾನು ಒಂದು ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಲ್ಲದೇ, ಆ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸುತ್ತಾರೆ. ವರದಕ್ಷಿಣೆ ಎಂಬ ಭೂತ ಮದುವೆ ಎಂಬ ಸಂಭ್ರಮದ ಹಿಂದೆ ಅಡಗಿರುತ್ತದೆ. ವರದಕ್ಷಿಣೆ ಎಂಬ ಪಿಡುಗು 50ರ ದಶಕದಿಂದ 90ರ ದಶಕದವರೆಗೂ ಸಮಾಜವನ್ನು ಕಾಡಿತ್ತು. ಈಗಲೂ ಇದ್ದರೂ ಇರಬಹುದು. ಆದರೆ ಕೆಲವರು ವರದಕ್ಷಿಣೆ ಕಾನೂನು ದುರುಪಯೋಗ ಮಾಡಿಕೊಂಡು ಗಂಡನ ಮನೆಯವರ ಕಡೆ ಸುಳ್ಳು ಆರೋಪಗಳನ್ನು ಮಾಡಿದ್ದು ಸಹ ಈ ಸಮಾಜ ಕಂಡಿದೆ. ದುರಾಸೆ ಎಂಬುದು ಇರುವವರೆಗೂ ಈ ತರಹದ ಸಾಮಾಜಿಕ ಸಮಸ್ಯೆಗಳು ತಪ್ಪಿದ್ದಲ್ಲ. ಸಾಮಾಜಿಕ ಸಮಸ್ಯೆಗಳನ್ನು ಸರಿಪಡಿಸಲು ಸಮಾಜದ ಪ್ರತಿಯೊಬ್ಬರು ಕೈಜೋಡಿಸಬೇಕು. ಆಗಲೇ ಸಂಸಾರಗಳು ಹಿತವಾಗಿರುತ್ತದೆ. ಇಡೀ ಜಗತ್ತನ್ನು ಸಂಸಾರ ಎಂದು ಕರೆಯುವುದಾದರೆ, ಮನೆಯನ್ನೂ ಸಂಸಾರ ಎಂದು ಕರೆಯುವುದರ ಹಿಂದಿನ ಮರ್ಮವೇ ಮನೆಯಲ್ಲೂ – ಜಗದಲ್ಲೂ ಹೊಂದಾಣಿಕೆ ಮುಖ್ಯ. ದುರಾಸೆ ಯಿಂದ ಮನೆಯಲ್ಲಾದರೂ ಸರಿ, ಜಗದಲ್ಲಾದರೂ ಸರಿ ಕೆಡುಕುಂಟಾಗದೇ ಇರದು.
ಕಥೆ:
ರಾಯರು (ರಾಮಚಂದ್ರಶಾಸ್ತ್ರಿ) ಲಕ್ಷ್ಮಿ ಪೂಜೆ ಮಾಡುವ ದೃಶ್ಯದೊಂದಿಗೆ ಸಿನಿಮಾ ಆರಂಭವಾಗುತ್ತದೆ. ಅರವಿಂದ (ಕಲ್ಯಾಣ್ ಕುಮಾರ್) ಮತ್ತು ಲಕ್ಷ್ಮಿ (ಮೈನಾವತಿ) ದಾಂಪತ್ಯದಲ್ಲಿ ರಾಯರು ವರದಕ್ಷಿಣೆ ಬಾಕಿ ಬಾಬ್ತು ನೆಪದಲ್ಲಿ, ಅವರ ಮಡದಿ ಜಯಶ್ರೀ ಎಷ್ಟೇ ಗೋಗರೆದರು ಕೇಳದೆ ಸೊಸೆಯನ್ನು ತವರಿಗೆ ಹೋಗಿ ಬರಬೇಕಿದ್ದ ಹಣವನ್ನು ತಂದರೆ ನಿನಗೆ ಜಾಗ ಇಲ್ಲದೆ ಹೋದರೆ ಅಲ್ಲೇ ನೀನು ಇಲ್ಲೇ ಇವನು ಎಂದು ಕಠೋರವಾಗಿ ಹೇಳಿ ಶುಕ್ರವಾರ ಮುಸ್ಸಂಜೆ ತನ್ನ ಸೊಸೆಯನ್ನು ಹೊರಹಾಕುತ್ತಾರೆ. ಇದನ್ನೆಲ್ಲಾ ಸರಿಪಡಿಸಲು ಅರವಿಂದ ಹಾಗೂ ಅವನ ಸ್ನೇಹಿತ ಡಾಕ್ಟರ್ (ರಾಜಕುಮಾರ್), ರಾಯರ ಬೆನ್ನಂಟಿದ ಧನಪಿಶಾಚಿಯನ್ನು ಓಡಿಸುವ ಸಲುವಾಗಿ ಉಪಾಯ ಮಾಡುತ್ತಿರುತ್ತಾರೆ. ಈ ಮಧ್ಯೆ ರಾಯರು ಮಗ ತನ್ನ ಮಾತು ಕೇಳಲಿಲ್ಲವೆಂದರೆ ಯಾರನ್ನಾದರೂ ದತ್ತು ತೆಗೆದುಕೊಂಡು, ಆಸ್ತಿಯನ್ನೆಲ್ಲಾ ಬರೆದುಬಿಡುತ್ತೇನೆ ಎಂದಾಗ ಅದೇ ಮನೆಯಲ್ಲಿದ್ದ ಗೋಪಕ್ಕನ (ರಮಾದೇವಿ) ಮಗನಾದ ಗಣಪನನ್ನೇ (ನರಸಿಂಹರಾಜು) ದತ್ತು ತೆಗೆದುಕೊಳ್ಳುವಂತೆ ರಾಯನ ಮನ ಸೆಳೆಯಲು ಗೋಪಕ್ಕ ಪ್ರಯತ್ನಿಸುತ್ತಾಳೆ. ಗೋಪಕ್ಕ ಹಾಗೂ ಗಣಪನ ಸಂಭಾಷಣೆಯಲ್ಲಿ ಹಾಸ್ಯವಿದ್ದರೂ ಎಂಥ ಅರ್ಥಗರ್ಭಿತ ಮಾತುಗಳಿವೆ.
“ಅಮ್ಮ ಹಪ್ಪಳ ಕೊಡೆ.. ಸಪ್ಪಳ ಮಾಡದ ಹಾಗೆ ತಿಂದು ಬಿಡುತ್ತೇನೆ”
“ಗಣಪ ನಿನ್ನ ಅದೃಷ್ಟ ಆನೆ ಮೇಲೆ ಬರುತ್ತೆ ಕಣೋ.. ”
“ಅಮ್ಮ ಆನೆ ಮೇಲೆ ಬೇಡ.. ಅದು ಎತ್ತರಕ್ಕೆ ಇರುತ್ತದೆ.. ಕತ್ತೆ ಮೇಲೆ ಬರೋಕೆ ಹೇಳು.. ಅದರ ಮೇಲೆ ನಾನೇ ಹತ್ತಿ ಬರುತ್ತೇನೆ”
“ನನ್ನನ್ನು ದತ್ತು ತೆಗೆದುಕೊಂಡರೆ, ಧಣಿಯ ಮಗನ ಹೆಂಡತಿ ನನ್ನ ಹೆಂಡತಿಯಾಗುತ್ತಾಳೆ” (ಆಹಾ ಎಂಥಹ ತರ್ಕ)
“ಹಣ ಕೊಡುತ್ತೇನೆ ಎಂದರೆ.. ಅವರ ಅಪ್ಪನಿಗೂ ದತ್ತುವಾಗುತ್ತೇನೆ”
ಇಂತಾ ಸಂಭಾಷಣೆ ಚಿತ್ರದುದ್ದಕ್ಕೂ ಇವೆ. ರಾಯರ ಮಗ ಹುಚ್ಚು ಹಿಡಿದಂತೆ ನಟಿಸುತ್ತಾನೆ. ಕೊನೆಗೆ ರಾಯರಿಗೆ ಹಿಡಿದಿದ್ದ ಧನಪಿಶಾಚಿ ಬಿಟ್ಟು, ಸೊಸೆಯನ್ನು ವಾಪಾಸ್ಸು ಮನೆಗೆ ಕರೆದುಕೊಂಡು ಹೋಗುತ್ತಾರೆ ರಾಯರು. ಅಲ್ಲಿಗೆ ಸಿನಿಮಾ ಮುಕ್ತಾಯವಾಗುತ್ತದೆ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ವರದಕ್ಷಿಣೆ ಎಂಬ ಸಾಮಾಜಿಕ ಮಹಾಪಿಡುಗಿನಿಂದ ಸಂಸಾರಗಳು ಅನುಭವಿಸಿದ ಯಾತನೆ ಕುರಿತು ತಿಳಿಯಲು.
2. ದುರಾಸೆ, ಹಣದ ಹಿಂದೆ ಹೋದರೆ ಮಾನಸಿಕ ನೆಮ್ಮದಿ ಹೇಗೆ ಹಾಳಾಗುತ್ತದೆ ಎಂಬ ಕುರಿತು ತಿಳಿಯಲು.
3. ಜೀವನದಲ್ಲಿ ಹಣ ಹೇಗೆ ಪಾತ್ರ ನಿರ್ವಹಿಸುತ್ತೆ, ಅದನ್ನು ಹೇಗೆ ನಿಯಂತ್ರಿಸುವುದು ಎನ್ನುವುದನ್ನು ತಿಳಿಯಲು ಈ ಸಿನಿಮಾ ನೋಡಲೇಬೇಕು.
4. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.