ಕೋಮಲ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಟಿ.ಎಸ್.ನಾಗಾಭರಣ ರವರು 1983 ರಲ್ಲಿ ಆರ್.ಕೆ.ನಾರಾಯಣ್ ರವರ ‘ದಿ ಫೈನಾನ್ಷಿಯಲ್ ಎಕ್ಸ್ ಪರ್ಟ್’ ಕಾದಂಬರಿ ಆಧಾರಿತ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಾರೆ. ಎಸ್.ರಾಮಚಂದ್ರರವರ ಛಾಯಾಗ್ರಹಣ, ವಿಜಯ್ ಭಾಸ್ಕರ್ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ಲೋಕೇಶ್, ಜಯಂತಿ, ಸುಂದರಕೃಷ್ಣ ಅರಸ್, ಮುಸುರಿ ಕೃಷ್ಣಮೂರ್ತಿ, ಸುಂದರ್ ರಾಜ್ ಹಾಗೂ ಮಾಸ್ಟರ್ ಮಂಜುನಾಥ್ ರವರು ಭೂಮಿಕೆಯಲ್ಲಿದ್ದಾರೆ.
1984 ರಲ್ಲಿ ಅತ್ತ್ಯುತ್ತಮ ಚಿತ್ರ ಎಂಬ ರಾಷ್ಟ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಅಲ್ಲದೇ 1983-84 ನೇ ಸಾಲಿನ ರಾಜ್ಯ ಪ್ರಶಸ್ತಿಗಳ ಆಯ್ಕೆಯಲ್ಲಿ ಅತ್ಯುತ್ತಮ ನಟ ಎಂಬ ಪ್ರಶಸ್ತಿಗೆ ಲೋಕೇಶ್ ರವರು ಭಾಜನರಾಗಿದ್ದಾರೆ.
ಕಥೆ:
ತನ್ನ ಚಿಕ್ಕ ಕಬ್ಬಿಣದ ಪೆಟ್ಟಿಗೆಯೊಂದನು ಹಿಡಿದು ಸಹಕಾರಿ ಬ್ಯಾಂಕಿನ ಎದುರು ದೊಡ್ಡ ಮರದ ಕೆಳಗೆ ಕೂತು, ಹಳ್ಳಿಯ ಅನಕ್ಷರಸ್ಥ ಜನರಿಗೆ ಸಾಲ ಕೊಡಿಸುವ, ಸಾಲ ಪಡೆಯುವ ಬಗ್ಗೆ ಅದೇ ಹಳ್ಳಿಜನರಿಗೆ ಮಾರ್ಗದರ್ಶಿಯಾಗಿ ನೆರವಾಗುವ ಮಾರ್ಗಯ್ಯ (ಲೋಕೇಶ್) ಹಳ್ಳಿ ಜನರ ಅಜ್ಞಾನವನ್ನೇ ಬಂಡವಾಳ ಮಾಡಿಕೊಳ್ಳುತ್ತಾನೆ. ಬುದ್ದಿವಂತಿಕೆಯಿಂದ, ನಯವಾದ ಮಾತುಗಳಿಂದ, ತನ್ನ ಚತುರತೆಯಿಂದ, ಊರಿನವರಿಗೆಲ್ಲಾ ತುಂಬಾ ಬೇಕಾದ ವ್ಯಕ್ತಿಯಾಗಿರುತ್ತಾನೆ. ಅರ್ಜಿ ಬರೆಯುವುದು, ಅವರ ಪರವಾಗಿ ವಾದಿಸುವುದು, ಕಾನೂನಾತ್ಮಕ ವಿಚಾರಗಳನ್ನು ತುಂಬಾ ಚೆನ್ನಾಗಿ ಮನನ ಮಾಡಿಕೊಂಡನಾದ್ದರಿಂದ ಹಳ್ಳಿಯವರ ಪರ ನಿಲ್ಲುತ್ತಾನೆ. ಈತ ಜನರಿಗೆ ಸಾಲ ಕೊಡಿಸಿ, ಅದರ ಲೆಕ್ಕಪತ್ರಗಳನ್ನು ತಾನೇ ನಿರ್ವಹಿಸುತ್ತಿರುತ್ತಾನೆ. ಅದರಿಂದಾಗಿ ಒಂದಷ್ಟು ಕಾಸು ಕೂಡಿಹಾಕಿ ಸಂಸಾರ ನಿರ್ವಹಿಸುತ್ತಿರುತ್ತಾನೆ.
ಹೀಗಿರುವಾಗ ಆ ಬ್ಯಾಂಕಿಗೆ ಹೊಸದಾಗಿ ಬಂದ ಮ್ಯಾನೇಜರ್ ತನ್ನ ಸಹೋದ್ಯೋಗಿಗಳ ಮನವಿಯಂತೆ ಮಾರ್ಗಯ್ಯನ ವಿರುದ್ಧ ನಿಲ್ಲುತ್ತಾನೆ. ಅಲ್ಲದೇ ಯಾವುದೇ ಅರ್ಜಿಗಳನ್ನು ಬರೆಯದೆ ಇರಲು ಹಾಗೂ ಜನರಿಗೆ ಉಚಿತ ಸಲಹೆ ನೀಡದಿರಲು ತಾಕೀತು ಮಾಡುತ್ತಾನೆ. ಈ ಮಧ್ಯೆ ತನ್ನ ತುಂಟ ಮಗನಿಂದ (ಮಾಸ್ಟರ್ ಮಂಜುನಾಥ್) ಮಾರ್ಗಯ್ಯನ ಲೆಕ್ಕದ ಪುಸ್ತಕವನ್ನು ಚರಂಡಿಗೆ ಎಸೆದುಬಿಡುತ್ತಾನೆ. ಲೆಕ್ಕದ ಪುಸ್ತಕ ಕಳೆದುಕೊಂಡ ಮೇಲೆ, ಜನರು ಸಹ, ನಮ್ಮ ಬಾಕಿ ಏನೂ ಇಲ್ಲ, ನಾವು ನಿಮಗೆ ಕೊಡೋದು ಏನೂ ಇಲ್ಲವೆಂದು, ಅವನ ಪಾಲಿನ ಹಣ ಕೊಡದೆ ಅವನಿಗೆ ಮೋಸ ಮಾಡುತ್ತಾರೆ. ಇದರಿಂದಾಗಿ ದಟ್ಟ ದರಿದ್ರ ಬಡತನ ಅವನದಾಗುತ್ತದೆ.
ಈ ಬಡತನ ಹೋಗಲಾಡಿಸಲು ಸ್ವಾಮಿಗಳು ಹೇಳಿದಂತೆ ೪೮ ದಿನಗಳ ಮಂಡಲ ಪೂಜೆ ಮಾಡುತ್ತಾನೆ. ಈ ಸಮಯದಲ್ಲಿ ಆಕಸ್ಮಿಕವಾಗಿ ಪರಿಚಯವಾಗುವ ಡಾ. ಪಾಲ್ (ಸುಂದರ ಕೃಷ್ಣ ಅರಸ್) ಬರೆದ ಲೈಂಗಿಕ ಪುಸ್ತಕವನ್ನು ಕೊಡುತ್ತಾನೆ. ಅದು ಪುಸ್ತಕದ ಯುಗ. ಈಗಿನಂತೆ ಪೋರ್ನ್ ಸೈಟ್ ಗಳ ಅತಿದೊಡ್ಡ ಜಾಲವೇನಿರಲಿಲ್ಲ. ಡಾ. ಪಾಲ್ ಒತ್ತಾಯದಂತೆ ಆ ಲೈಂಗಿಕ ಪುಸ್ತಕವನ್ನು ಅಚ್ಚು ಹಾಕಿಸುತ್ತಾನೆ. ಅದನ್ನು ಕೊಂಡು ಕದ್ದು ಒದುವವರ ಸಂಖ್ಯೆ ಹೆಚ್ಚಾಗುತ್ತದೆ. ಅದರಿಂದ ಇವನಿಗೆ ಒಳ್ಳೆಯ ಆದಾಯ ಕೂಡ ಬರುತ್ತದೆ. ಈ ಪುಸ್ತಕದ ಹುಚ್ಚಿನಲ್ಲಿ ಆತನ ಇದ್ದ ಒಬ್ಬನೇ ಮಗ (ಸುಂದರ್ ರಾಜ್ ) ದೊಡ್ಡವನಾದಾಗ ಶಿಕ್ಷಣದ ಕಡೆ ಗಮನ ಕೊಡದೆ, ಪರೀಕ್ಷೆಯಲ್ಲಿ ಫೇಲಾಗಿ, ಶಿಕ್ಷಣದಿಂದ ದೂರಾಗಿ ಕೆಡುತ್ತಾನೆ. ಇದೆ ರೀತಿ ಆ ಕಾಲಕ್ಕೆ ಕೆಟ್ಟವರೆಷ್ಟೋ., ಹಾಗೆಯೇ ಈ ಕಾಲಕ್ಕೆ ಪೋರ್ನ್ ವೆಬ್ ಸೈಟ್ ಗಳಿಂದಲೂ ಕೂಡ ಅಷ್ಟೇ ಹುಡುಗ-ಹುಡುಗಿಯರು ಕೆಡುತ್ತಿದ್ದಾರೆ. ಸಮಾಜದಲ್ಲಿ ಲೈಂಗಿಕ ಅಪರಾಧಗಳು ಕೂಡ ಅಷ್ಟೇ ಹೆಚ್ಚಾಗಲು ಕಾರಣ ಇದೇ.
ತಂದೆ-ತಾಯಿಯರ ಮಾತು ಕೇಳದಂತಾಗಿ, ಸದಾ ಧಿಕ್ಕರಿಸಿ ತನ್ನಿಷ್ಟದಂತೆ ತಾನು ಸ್ವೇಚ್ಛೆಯಾಗಿ ಇರುವ ಮಾರ್ಗಯ್ಯನ ಮಗ ಒಮ್ಮೆ ಮನೆ ಬಿಟ್ಟು ಹೋಗುತ್ತಾನೆ. ಆಗ ಪಟ್ಟಣಕ್ಕೆ ಹೋಗಿ ಅವನನ್ನು ಹುಡುಕಿ ತಂದು, ಅವನಿಗೊಂದು ಮದುವೆ ಮಾಡಿ, ಇನ್ನಾದರೂ ಬದಲಾಗಲಿ ಎಂಬ ಆಶಯದ ಆಶಾವಾದ ಹೊಂದುತ್ತಾರೆ. ಒಬ್ಬ ಕೆಟ್ಟ ಹಾಗೂ ಕೆಡುಕ ಮಗನನ್ನು ಸರಿಪಡಿಸಲು ಮದುವೆಯ ನೆಪದಲ್ಲಿ ಹೆಣ್ಣೊಬ್ಬಳ ಜೀವನ ಹಾಳು ಮಾಡುವುದು ಅದೆಷ್ಟು ಸರಿಯೋ ನಾ ಕಾಣೆ. ನೂರಕ್ಕೆ ತೊಂಭತ್ತರಷ್ಟು ಇಂತಹ ಮದುವೆಗಳಿಂದ ಮದುವೆಯಾದ ಹೆಣ್ಣು ನೊಂದಂದ್ದೇ ಹೆಚ್ಚು ಎನಿಸುತ್ತದೆ. ಚಿತ್ರದಲ್ಲಿ ಆಕೆಯ ಪಾಡು ಕೂಡ ಅಂತದೆ.
ಈ ನಡುವೆ ಮಾರ್ಗಯ್ಯ ಮಾತ್ರ ಸಾಲ ಸಲಹೆಗಾರನಾಗಿ, ನಶೆಪುಡಿ ಮಾರಾಟಗಾರನಾಗಿ, ಹಲ್ಲು ಪುಡಿ ಮಾರಾಟಗಾರನಾಗಿ, ಪ್ರಕಾಶಕನಾಗಿ, ಹೆಚ್ಚು ಬಡ್ಡಿ ನೀಡುವ ಬ್ಯಾಂಕರ್ ಆಗಿ ಬಡತನದಿಂದ ನೊಂದು ಬೆಂದಿದ್ದ ಅವನು ಒಬ್ಬ ಆಗರ್ಭ ಶ್ರೀಮಂತನಾಗಿ ಬೆಳೆಯುತ್ತಾನೆ. ತನ್ನಷ್ಟಕ್ಕೇ ತಾನು ಕಣ್ಣೀರು ಹಾಕಿಕೊಂಡು ಮನೆಯಲ್ಲಿ ಮರಗುವ ಮರುಳೆಯಾಗಿ ಮಾರ್ಗಯ್ಯನ ಸೊಸೆ ಮನೆಯಲ್ಲಿ ಇರುವಾಗ ಮಾರ್ಗಯ್ಯ ಮನೆಗೆ ಬರುತ್ತಾನೆ. ಆಕೆಯ ನೋವಿನಿಂದ ತನ್ನ ಮಗ ಸೂಳೆಯರ ಸಹವಾಸ ಮಾಡಿರುವುದು ಗೊತ್ತಾಗುತ್ತದೆ. ತಕ್ಷಣವೇ ಇದಕ್ಕೆಲ್ಲಾ ಮೂಲ, ತಾನು ಪ್ರಕಟಿಸುತ್ತಿರುವ ಪುಸ್ತಕವೇ ಕಾರಣವೆಂದು ಮನದಟ್ಟಾಗುತ್ತದೆ. ಅಲ್ಲಿಗೆ ಪುಸ್ತಕ ಪ್ರಕಟಿಸುವ ಕೆಲಸ ನಿಲ್ಲಿಸುತ್ತಾನೆ. ತನ್ನ ಮಗನಿಗೂ ಬುದ್ದಿ ಹೇಳಿ ಮನೆಗೆ ಕರೆತರುತ್ತಾನೆ. ಇದರಿಂದಾಗಿ ಡಾ. ಪಾಲ್ ಹಾಗೂ ಮಾರ್ಗಯ್ಯನ ಮಗ ಇಬ್ಬರಿಗೂ ಕೋಪ ಬಂದು, ಮಾರ್ಗಯ್ಯ ದಿವಾಳಿಯಾಗಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿ, ಜನರೆಲ್ಲಾ ಹೆಚ್ಚಿನ ಬಡ್ಡಿ ಆಸೆಗಾಗಿ ಆತನ ಬಳಿ ಇಟ್ಟ ಹಣವನ್ನು ಹಿಂಪಡೆಯುತ್ತಾರೆ. ಆ ಕಾರಣಕ್ಕಾಗಿ ಆತ ತನ್ನ ಎಲ್ಲಾ ಆಸ್ತಿ, ಒಡವೆಗಳನ್ನು ಕಳೆದುಕೊಂಡು ಮತ್ತೊಮ್ಮೆ ಭಿಕಾರಿಯಂತಾಗುತ್ತಾನೆ. ಅತಿಯಾಸೆ ಗತಿಕೇಡು ಎನ್ನುವುದೋ, ಒಂದು ಕೆಟ್ಟ ಕೆಲಸದಿಂದ ಹೀಗೆ ನಾನಾ ಫಜೀತಿ ಅನುಭವಿಸಬೇಕಾಗಿ ಬರಬಹುದು ಎನ್ನುವುದು ತಿಳಿಯದು.
ಕೊನೆಗೆ ಮಾರ್ಗಯ್ಯನ ಮಗನಿಗೆ ತನ್ನ ತಪ್ಪಿನ ಅರಿವಾಗಿ, ತಂದೆಯ ಬಳಿ ಕ್ಷಮೆ ಕೇಳುತ್ತಾನೆ. ಮತ್ತೇ ಎಲ್ಲರೂ ಒಂದಾಗಿ ಜೀವನದಲ್ಲಿ ಒಳ್ಳೆಯದನ್ನೇ ಮಾಡುವ ಪ್ರತಿಜ್ಞೆ ಮಾಡಿಕೊಂಡು ಬದಲಾಗುವ ದೃಶ್ಯದೊಂದಿಗೆ ಸಿನಿಮಾ ಸುಖಾಂತ್ಯ ಕಾಣುತ್ತದೆ. ಸಿನಿಮಾ ಮುಗಿದ ನಂತರಕ್ಕೆ ಆ ಬ್ಯಾಂಕರ್ ಮಾರ್ಗಯ್ಯನ ಮನಸ್ಥಿತಿಯವರನ್ನು ನಮ್ಮ ನಡುವೆಯೇ ತುಂಬ ಜನರನ್ನು ಕಂಡಂತೆ ಭಾಸವಾಗುತ್ತದೆ. ಅದೇನೇ ಇರಲಿ, ಬ್ಯಾಂಕರ್ ಮಾರ್ಗಯ್ಯನ ಪಾತ್ರದಲ್ಲಿ ಲೋಕೇಶ್ ತುಂಬಾ ದಿನಗಳವರೆಗೂ ಕಾಡುತ್ತಾರೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.
ಜೀವನದಲ್ಲಿ ಕಷ್ಟ ಹಾಗೂ ಸುಖದ ಕ್ಷಣಗಳು ಬರುತ್ತವೆ, ಹೋಗುತ್ತವೆ. ಅವುಗಳನ್ನು ಧೃತಿಗೆಡದೆ ಸರಿಯಾಗಿ ನಿರ್ವಹಿಸುವ ಮನಸ್ಥಿತಿ ಸದಾ ನಮ್ಮದಾಗಿರಬೇಕು. ಒಬ್ಬರಿಗೆ ಕೆಡುಕು ಮಾಡಿದರೆ, ಮುಂದೊಂದು ದಿನ ನಮ್ಮ ಬುಡಕ್ಕೆ ಬರುತ್ತದೆ. ಸಾಧ್ಯವಾದಷ್ಟು ಒಳ್ಳೆಯ ಮಾರ್ಗ ಅನುಸರಿಸಬೇಕು ಎಂಬ ಮಹತ್ವದ ಸಂದೇಶವನ್ನು ಈ ಸಿನಿಮಾ ಸಾರುತ್ತದೆ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಜೀವನದಲ್ಲಿ ಹಣವೊಂದೇ ಮುಖ್ಯವಲ್ಲ ಎಂಬ ಕುರಿತು ತಿಳಿಯಲು.
2. ಕುಟುಂಬದ ಮೌಲ್ಯ ಏನು? ಕೆಟ್ಟ ಮಾರ್ಗಗಳಿಂದ ಹಣ ಸಂಪಾದನೆ ಮಾಡಿದರೆ ಆಗುವ ದುಷ್ಪರಿಣಾಮಗಳು ಏನು ಎಂಬುದನ್ನು ತಿಳಿಯಲು.
3. ಹಣಕಾಸು ನಿರ್ವಹಣೆ ವಿಷಯದಲ್ಲಿ ಆಸಕ್ತಿ ಉಳ್ಳವರು ಈ ಸಿನಿಮಾ ನೋಡಲೇಬೇಕು.
4. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.