’ನಾವು ವಿದೇಶಿ ಸಂಸ್ಕೃತಿಯ ಆಮದುದಾರರಾಗದೆ ದೇಶೀ ಸಂಸ್ಕೃತಿಯ ರಪ್ತುದಾರರಾಗೋಣ’ – ಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ
ಮಂಗಳೂರು : ಭಾರತೀಯ ಸಂಸ್ಕೃತಿ ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠವೆಂದು ಮಾನ್ಯತೆ ಗಳಿಸಿದೆ. ನಾವು ದೇಹ ನಿಷ್ಠ ಸಂಸ್ಕೃತಿಗಿಂತ ಆತ್ಮನಿಷ್ಠವಾದ ಸಂಸ್ಕೃತಿಗೆ ಹೆಚ್ಚಿನ ಪ್ರಾಧಾನ್ಯವನ್ನು ನೀಡಿದ್ದೇವೆ. ’ಶರೀರ ಮಾದ್ಯ ಖಲು ಧರ್ಮ ಸಾಧನಂ’ ಎಂಬಂತೆ ಧರ್ಮ ಸಾಧನೆಗೆ ಹೇತುವಾಗಿರುವ ಭೌತಿಕ ಶರೀರದ ಆರೋಗ್ಯ ಮತ್ತು ಪೋಷಣೆಗೆ ಉತ್ತಮ ಆಹಾರ-ವಿಹಾರಾದಿಗಳು ಅವಶ್ಯಕವಾಗಿದೆ. ಆದರೆ ನಶ್ವರವಾದ ಈ ದೇಹದ ಪೋಷಣೆಗಿಂತಲೂ ಶಾಶ್ವತವೆನಿಸದ ಅದರೊಳಗಿನ ಆತ್ಮಕ್ಕೆ ಉತ್ತಮ ಸಂಸ್ಕಾರ ಸಿಗುವುದು ಅಗತ್ಯವಾಗಿದೆ ಎಂಬುದಾಗಿ ನಮ್ಮ ಪ್ರಾಚೀನ ಋಷಿ-ಮುನಿಗಳು ತಮ್ಮ ತಪಃಸ್ಸಾಧನೆಯಿಂದ ಕಂಡುಕೊಂಡ ವಿಚಾರವಾಗಿದೆ. ದೇವತಾರಾಧನೆ, ಭಜನೆ, ಪೂಜೆ ಹಾಗೂ ಆಧ್ಯಾತ್ಮಿಕ ವಿಚಾರಗಳೊಂದಿಗೆ ಅವರು ನಮಗೆ ಆತ್ಮೋದ್ಧಾರದ ದಾರಿಯನ್ನು ತೋರಿಸಿಕೊಟ್ಟಿದ್ದಾರೆ. ಭಾರತೀಯ ಸಂಸ್ಕೃತಿ, ಪರಂಪರೆ ಜೀವನ ಮೌಲ್ಯಗಳ ವಾರಸುದಾರರಾದ ನಾವು ನಮ್ಮ ಸಂಸ್ಕೃತಿಯ ಶ್ರೇಷ್ಠತೆ ಹಾಗೂ ಮೌಲ್ಯಯುತ ಸಂಗತಿಗಳನ್ನು ವಿದೇಶಗಳಿಗೆ ರಪ್ತು ಮಾಡುವ ರಪ್ತುದಾರರಾಗಬೇಕೇ ವಿನಃ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಗಳ ಆಮದುದಾರರಾಗುವುದು ತರವಲ್ಲ ಎಂಬುದಾಗಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ನುಡಿದರು.
ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾ ಸಂಸ್ಥೆಯಲ್ಲಿ ನಡೆದ ಶಾರದೋತ್ಸವದ ಸಭಾ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಆಶೀರ್ವಚನ ನೀಡಿದರು. ಪಾಶ್ಚಾತ್ಯರ ಪ್ರಭಾವ ಹಾಗೂ ಆಧುನಿಕ ಜೀವನ ಶೈಲಿಯಿಂದಾಗಿ ಇಂದು ಸಮಾಜದಲ್ಲಿ ಭಾವನಾತ್ಮಕ ವಿಚಾರಗಳಿಗೆ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. ಹಿಂದಿನ ಕಾಲದಲ್ಲಿ ಮನೆಗಳಲ್ಲಿ ಹಿರಿಯರಿಂದ, ತಂದೆ-ತಾಯಿ-ಬಂಧುಗಳಿಂದ ಮಕ್ಕಳಿಗೆ ಉತ್ತಮ ಆಚಾರ-ವಿಚಾರ-ಸಭ್ಯತೆಗಳ ಪಾಠ ದೊರಕುತ್ತಿತ್ತು. ಮನೆಗಳೇ ಪ್ರಥಮ ಸಂಸ್ಕಾರ ಕೇಂದ್ರಗಳಾಗಿದ್ದವು. ಆದರೆ ಈಗ ಹಾಸ್ಟೇಲ್ ಸಂಸ್ಕೃತಿಯಿಂದಾಗಿ ಮಕ್ಕಳು ತಂದೆ-ತಾಯಿಯ ಪ್ರೀತಿಯಿಂದ ವಂಚಿತರಾಗಿದ್ದಾರೆ. ವೃದ್ದಾಪ್ಯದಲ್ಲಿ ತಂದೆ-ತಾಯಿ ಮಕ್ಕಳಿಂದ ದೂರೀಕರಿಸಲ್ಪಟ್ಟು ವೃದ್ಧಾಶ್ರಮ ಸೇರುವಂತಾಗಿದೆ. ಹಿಂದೆ ಅಪಘಾತಗೊಂಡು ಬಿದ್ದವನನ್ನು ಎಬ್ಬಿಸಲು ಜನ ಮುಂದಾಗುತ್ತಿದ್ದರೆ, ಇಂದು ಎದ್ದವನನ್ನು ಬೀಳಿಸಿ ಮೊಬೈಲಿನಲ್ಲಿ ಚಿತ್ರೀಕರಿಸಿ ಜಾಲತಾಣದಲ್ಲಿ ಪ್ರಕಟಿಸಿ ಪ್ರಶಂಸೆಗೈಯ್ಯಲಾಗುತ್ತದೆ. ಸಮಾಜದಲ್ಲಿ ಪ್ರೀತಿ-ಸಹಾನುಭೂತಿ ಮರೆಯಾಗುತ್ತಿದೆ. ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಮೌಲ್ಯಗಳಾದ ಹೊಂದಾಣಿಕೆಯ ಮನೋಭಾವ, ಹಂಚಿಕೊಂಡು ತಿನ್ನುವ ಗುಣ, ವಿನಯವಂತಿಕೆ, ಹಿರಿಯರ ಬಗ್ಗೆ ಗೌರವಾದರ ಇತ್ಯಾದಿ ಸಂಗತಿಗಳನ್ನು ಕಲಿಸಿಕೊಡಬೇಕಾಗಿದೆ. ಅದೇ ರೀತಿ ಮೊಬೈಲ್ ಸಂಸ್ಕೃತಿಯ ಅಪಾಯವನ್ನು ಕೂಡಾ ಮನವರಿಕೆ ಮಾಡಿಕೊಡಬೇಕಾಗಿದೆ. ಚಿತ್ರಕಾರ ವಿವಿಧ ವಿನ್ಯಾಸಗಳ ರೇಖೆಗಳಿಂದ ಸುಂದರ ಚಿತ್ರವನ್ನು ರಚಿಸಿದಂತೆ ಜೀವನ ಸೌಂದರ್ಯ ಕೂಡಾ ನಮ್ಮ ಬದುಕಿನ ರೇಖಾ-ರೇಖಿಗಳ ವಿನ್ಯಾಸವಾಗಿದೆ. ನಮ್ಮ ಸಂಸ್ಕೃತಿ, ಕಲೆ, ಸಂಗೀತ ನಮ್ಮ ಆತ್ಮಕ್ಕೆ ಸಂಸ್ಕಾರ ನೀಡಿ ದೇಹ, ಮನಸ್ಸುಗಳಿಗೆ ಆನಂದವನ್ನು ನೀಡುವ ಶಕ್ತಿಯನ್ನು ಹೊಂದಿದೆ. ಶಾರದಾ ವಿದ್ಯಾ ಸಂಸ್ಥೆಯಲ್ಲಿ ಈ ಉನ್ನತ ಮೌಲ್ಯಗಳ ಆಧಾರದ ಶಿಕ್ಷಣ ದೊರಕಿ ವಿದ್ಯಾರ್ಥಿಗಳ ಜೀವನ ಬೆಳಗುವಂತಾಗಲಿ. ಸಮಾಜದ ಹಿತಕ್ಕಾಗಿ ಬದುಕುವ ಶಿಕ್ಷಣ ಸಿಗಲಿ ಎಂಬುದಾಗಿ ಪೂಜ್ಯ ಸ್ವಾಮೀಜಿ ಎಲ್ಲರಿಗೂ ಆಶೀರ್ವಚನವಿತ್ತರು.
ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ| ಎಂ.ಬಿ.ಪುರಾಣಿಕರು ವಿದ್ಯಾ ಸಂಸ್ಥೆಯಲ್ಲಿ ಶಾರದಾ ಮಹೋತ್ಸವವನ್ನು ಆಚರಿಸುವ ಹಿನ್ನಲೆ, ವಿದ್ಯಾ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಉಲ್ಲೇಖಿಸಿ, ವಿನಯಶೀಲ, ಸಭ್ಯ ಹಾಗೂ ದೇಶಭಕ್ತ ನಾಗರಿಕರನ್ನು ರೂಪಿಸಲು ವಿದ್ಯಾಸಂಸ್ಥೆಯು ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮಗಳನ್ನು ವಿವರಿಸಿದರು ಹಾಗೂ ವಿದ್ಯಾ ಸಂಸ್ಥೆಯ ಬೆಳವಣಿಗೆಯಲ್ಲಿ ಸಮಾಜದ ಸಹಕಾರವನ್ನು ಸ್ಮರಿಸಿದರು.
ಆಡಳಿತ ಮಂಡಳಿಯ ವಿಶ್ವಸ್ಥರಾದ ಶ್ರೀ ಪ್ರದೀಪಕುಮಾರ ಕಲ್ಕೂರಾ ಅವರು ಈ ಸಂದರ್ಭದಲ್ಲಿ ಮಾತನಾಡಿ, ಭಜನೆ – ಉತ್ಸವಾದಿ ಆಚರಣೆಗಳು ಸಮಾಜದಲ್ಲಿ ವಿಭಜನೆಯನ್ನು ದೂರಮಾಡಿ ಸಂಘಟಿತ ಹಾಗೂ ಸದ್ಗುಣ ಸಂಪನ್ನ ರಾಷ್ಟ್ರ ನಿರ್ಮಾಣಕ್ಕೆ ಕಾರಣವಾಗುವುದು ಎಂದರು.
ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಉಪಾಧ್ಯಕ್ಷರಾದ ಶ್ರೀ ಕೆ.ಎಸ್.ಕಲ್ಲೂರಾಯ, ವಿಶ್ವಸ್ಥರಾದ ಶ್ರೀ ಸೀತಾರಾಮ ಆಚಾರ್ಯ, ಶೈಕ್ಷಣಿಕ ಸಲಹೆಗಾರರಾದ ಡಾ| ಲೀಲಾ ಉಪಾಧ್ಯಾಯ, ಎಸ್.ಕೆ.ಡಿ.ಬಿ. ಅಸೋಶಿಯೇಶನ್ನಿನ ಕಾರ್ಯದರ್ಶಿ ಶ್ರೀ ಸುಧಾಕರ ರಾವ್ ಪೇಜಾವರ, ಶ್ರೀಮತಿ ಸುನಂದಾ ಪುರಾಣಿಕ್, ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಸುನೀತಾ ವಿ. ಮಡಿ, ಶಾರದಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ಶ್ರೀ ಮಹಾಬಲೇಶ್ವರ ಭಟ್, ಶಾರದಾ ವಿದ್ಯಾನಿಕೇತನದ ಆಡಳಿತಾಧಿಕಾರಿ ಶ್ರೀ ವಿವೇಕ್ ತಂತ್ರಿ, ಪ್ರಾಂಶುಪಾಲರುಗಳಾದ ಶ್ರೀಮತಿ ಸುಷ್ಮಾ ದಿನಕರ್, ಶ್ರೀ ವಿನಾಯಕ ಬಿ.ಜಿ., ಶಾರದಾ ಆಯುರ್ಧಾಮ ಕಾಲೇಜಿನ ವೈದ್ಯಾಧಿಕಾರಿ ಡಾ| ರವಿ ಗಣೇಶ್ ಸಭಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾರದಾ ವಿದ್ಯಾಲಯದ ಶಿಕ್ಷಕರಾದ ಶ್ರೀ ಸತ್ಯನಾರಾಯಣ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ನಾಗರಾಜ್ ಭಟ್ ಸ್ವಾಗತಗೈದರು. ಶಾರದಾ ಪ.ಪೂ. ಕಾಲೇಜಿನ ಉಪನ್ಯಾಸಕ ಶ್ರೀ ರಮೇಶ್ ಆಚಾರ್ಯ ವಂದಿಸಿದರು.
ಶಾರದೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಆರಂಭದಲ್ಲಿ ಧ್ಯಾನಮಂದಿರ ಸಭಾಂಗಣದಲ್ಲಿ ವೈಶಿಷ್ಟ್ಯಪೂರ್ಣವಾಗಿ ಅಲಂಕೃತಗೊಂಡ ಶಾರದಾ ಮಾತೆಯ ವಿಗ್ರಗದ ಮುಂದೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದಿಂದ ಭಜನಾ ಕಾರ್ಯಕ್ರಮ ನೆರವೇರಿತು. ಶಾರದಾ ಪೂಜೆ ಹಾಗೂ ಮಂಗಳಾರತಿಯ ಬಳಿಕ ವಿದ್ಯಾಲಯದ ಸಭಾ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ಸಂಪನ್ನಗೊಂಡಿತು. ವಿದ್ಯಾರ್ಥಿಗಳಿಂದ ವಿವಿಧ ಆಕರ್ಷಕ ನೃತ್ಯ ವೈವಿಧ್ಯ ಪ್ರದರ್ಶನವಿತ್ತು ಎಲ್ಲರನ್ನು ಮನರಂಜಿಸಿದರು. ವಂದೇ ಮಾತರಂ ಗೀತೆಯೊಂದಿಗೆ ಶಾರದಾ ಮಹೋತ್ಸವ ಸಮಾರಂಭ ಸಮಾಪ್ತಿಗೊಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.