ಅನಂತಲಕ್ಷ್ಮಿ ಪಿಕ್ಚರ್ಸ್ ಸಂಸ್ಥೆಯಿಂದ ಜಿ.ವಿ.ಅಯ್ಯರ್ ರವರು 1962 ರಲ್ಲಿ ಕಥೆಯೊಂದನ್ನು ಬರೆದು ಚಿತ್ರಕಥೆ, ಸಂಭಾಷಣೆ, ಹಾಗೂ ಹಾಡುಗಳನ್ನು ಬರೆದು ಪಿ.ಎಸ್.ಗೋಪಾಲಕೃಷ್ಣ ರವರೊಂದಿಗೆ ಸೇರಿ ನಿರ್ಮಾಣ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಬಿ.ದೊರೈರಾಜ್ ರವರ ಛಾಯಾಗ್ರಹಣ, ಜಿ.ಕೆ.ವೆಂಕಟೇಶ್ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ಡಾ. ರಾಜ್ ಕುಮಾರ್, ಉದಯ್ ಕುಮಾರ್ ಹಾಗೂ ಕಲ್ಯಾಣ್ ಕುಮಾರ್ ರವರ ತ್ರಿವೇಣಿ ಸಂಗಮದಲ್ಲಿ ಲೀಲಾವತಿ, ಆದವಾನಿ ಲಕ್ಷ್ಮಿದೇವಿ, ಬಾಲಕೃಷ್ಣ, ನರಸಿಂಹರಾಜು, ಜಯ, ಕೆ.ಎಸ್.ಅಶ್ವಥ್ಹಾಗೂ ವಿಜಯಕುಮಾರಿರವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ಕಥೆ:
“ಭಾಗ್ಯದ ಲಕ್ಷ್ಮಿ ಬಾರಮ್ಮ” ಎಂಬ ಗೀತೆಯೊಂದಿಗೆ ಸಿನಿಮಾ ಆರಂಭವಾಗುತ್ತದೆ. ಊರಿನ ಜಮೀನ್ದಾರನ ಬಳಿ ಕೆಲಸ ಮಾಡುವ ದಾಸಣ್ಣನಿಗೆ (ಡಾ.ರಾಜ್ ಕುಮಾರ್) ತಾನು ಸ್ವಂತ ಜಮೀನು ಮಾಡಿಕೊಂಡು ತನ್ನ ಕುಟುಂಬ ಪಾಲನೆ ಮಾಡಬೇಕೆಂಬ ಮಹದಾಸೆ ಹೊತ್ತಿರುತ್ತಾರೆ. ಅದಕ್ಕಾಗಿ ಆತ ತುಂಬಾ ವರುಷಗಳ ಕಾಲ ಆ ಜಮೀನ್ದಾರನ ಬಳಿ ಕೆಲಸ ಮಾಡುತ್ತಿರುತ್ತಾನೆ. ಅಲ್ಲದೇ ತುಂಡು ಭೂಮಿಗಾಗಿ ಸಾಕಷ್ಟು ಬಾರಿ ಆತನ ಬಳಿ ಕೈಯೊಡ್ಡುತ್ತಾನೆ. ಅದನ್ನು ನಯವಾಗಿಯೇ ಆ ಸಾಹುಕಾರ ತಿರಸ್ಕರಿಸುತ್ತಲೇ ಇರುತ್ತಾನೆ. ಇದರಿಂದಾಗಿ ದಾಸಣ್ಣನ ಮಕ್ಕಳಾದ ರಾಮ (ಉದಯ್ ಕುಮಾರ್), ಲಕ್ಷ್ಮಣ (ಕಲ್ಯಾಣ್ ಕುಮಾರ್) ಹಾಗೂ ಮಗಳು ಗೌರಿ (ಲೀಲಾವತಿ) ಕೂಡ ನೊಂದುಕೊಳ್ಳುತ್ತಾರೆ. ಒಂದು ದಿನ ಆ ಊರಿಗೆ “ವಿನೋಭ ಭಾವೆ” ಯವರ “ಭೂದಾನ” ತಂಡವು ಬರುತ್ತದೆ. ಜಮೀನುದಾರರಿಂದ 1/2 ರಷ್ಟು ಭೂಮಿಯನ್ನು ಪಡೆದು ಕಡುಬಡವರಿಗೆ ನೀಡುವ ಮಹೋನ್ನತ ಕಾರ್ಯಕ್ರಮವನ್ನು ಅವರು ಹಮ್ಮಿಕೊಂಡಿರುತ್ತಾರೆ. ಆ ಕಾರ್ಯಕ್ರಮದಲ್ಲಿ ಜಮೀನ್ದಾರರಿಂದ 5 ಎಕರೆ ಜಮೀನು ದಾಸಣ್ಣನಿಗೆ ಸಿಗುತ್ತದೆ. ದಾಸಣ್ಣನ ಕುಟುಂಬದ ಎಲ್ಲರಿಗೂ ಖುಷಿಯಾಗುತ್ತದೆ, ಆತನ ತಮ್ಮನ (ಅಶ್ವಥ್) ಹೆಂಡತಿ ಲಕ್ಷ್ನಿಯ (ಆದವಾನಿ ಲಕ್ಷ್ಮಿದೇವಿ) ಹೊರತು. ಆದರೆ ಆ ಜಮೀನು ಬರೀ ಕಲ್ಲು ಗುಡ್ಡದಿಂದ ತುಂಬಿದ್ದು, ಅದು ಉಳಲು ಯೋಗ್ಯವಲ್ಲವಾದರೂ ದಾಸಣ್ಣ ಹಾಗೂ ಅವನ ಮಕ್ಕಳು ಶ್ರಮವಹಿಸಿ ದುಡಿದು, ಭತ್ತದ ಬೆಳೆಯನ್ನು ಬೆಳೆಯುತ್ತಾರೆ. ಇದನ್ನು ಕಂಡು ಆ ಭೂಮಿಯನ್ನು ಕಬಳಿಸುವ ಉದ್ದೇಶದಿಂದ ತಮ್ಮನ ಸಾಲವನ್ನು ಸಹ ದಾಸಣ್ಣನಿಗೆ ಹೊರಿಸುತ್ತಾನೆ ಜಮೀನುದಾರ. ಅಪ್ಪನ ಔದಾರ್ಯದ ಗುಣ ಹಾಗೂ ಜಮೀನ್ದಾರನ ದರ್ಪದಿಂದ ಬೇಸತ್ತ ಮಕ್ಕಳು ಕಾಫಿತೋಟಕ್ಕೆ ಕೆಲಸ ಮಾಡಲು ಹೋಗುತ್ತಾರೆ.
ಕಾಫಿತೋಟದಲ್ಲಿ ಕೆಲಸ ಮಾಡುವಾಗ ತಮ್ಮದೇ ಊರಿನ ಪರಿಚಯದ ಕ್ರೈಸ್ತ ಧರ್ಮದ ಹುಡುಗಿಯನ್ನು ಮದುವೆಯಾಗುತ್ತಾನೆ. ಮದುವೆಯಿಂದಾಗಿ 10 ಎಕರೆ ಜಮೀನು ಬಳುವಳಿಯಾಗಿ ಚರ್ಚಿನವರು ಕೊಡುತ್ತಾರೆ. ಅನಾರೋಗ್ಯಕ್ಕೆ ತುತ್ತಾದಾ ರಾಮಣ್ಣ ದಾಸಣ್ಣನ ಮನೆಗೆ ವಾಪಾಸು ಬರುತ್ತಾನೆ. ಅಷ್ಟರಲ್ಲಾಗಲೇ ದಾಸಣ್ಣನ ತಮ್ಮನ ಹೆಂಡತಿಯು ಸಹ ದಾಸಣ್ಣನ ಮನೆಯಲ್ಲೇ ಉಳಿದುಕೊಳ್ಳುವ ಪ್ರಸಂಗ ಬರುತ್ತದೆ. ತನ್ನ ಮರ್ಯಾದೆ ಕಾಪಾಡಿದ ಭಾವನ ಹಾಗೂ ಅವನ ಮಕ್ಕಳ ಕುರಿತು ಅವಳಿಗೂ ಗೌರವ ಅಭಿಮಾನ ಉಂಟಾಗುತ್ತದೆ. ರಾಮಣ್ಣನ ಖಾಯಿಲೆ ಗುಣಪಡಿಸಲು ತನ್ನ ಜೋಡೆತ್ತುಗಳನ್ನು ಕೂಡ ರಾಮಣ್ಣ ಮಾರುತ್ತಾನೆ. ಅಷ್ಟರಲ್ಲಿ ರಾಮಣ್ಣ ರಹೀಮಣ್ಣನಾಗಲು ತೀರ್ಮಾನಿಸಿರುತ್ತಾನೆ. ಜಮೀನನ್ನು, ಮಕ್ಕಳನ್ನು, ಮನೆಯನ್ನು ಹಾಗೂ ಎತ್ತುಗಳನ್ನು ಕಳೆದುಕೊಂಡ ದಾಸಣ್ಣ ಅರೆಹುಚ್ಚನಂತಾಗುತ್ತಾನೆ. ಅಷ್ಟರಲ್ಲಿ ವಿನೋಭಬಾವೆಯವರ “ಭೂದಾನ” ತಂಡವು ಮತ್ತೆ ಆ ಊರಿಗೆ ಬರುತ್ತದೆ. ದಾಸಣ್ಣನಿಗೆ ನ್ಯಾಯವೂ ಸಿಗುತ್ತದೆ. ಮಕ್ಕಳೂ ವಾಪಸ್ಸು ಬರುತ್ತಾರೆ. ಕಥೆ ಸುಖಾಂತ್ಯ ಕಾಣುತ್ತದೆ.
ದಾಸಣ್ಣ ತನ್ನ ಮಕ್ಕಳಿಗೆ ಹೇಳುವ ಬುದ್ದಿಮಾತುಗಳು ನೋಡುಗನ ಹೃದಯಕ್ಕೆ ನಾಟುವಂತಿದೆ. ಅಂತಹ ಅತ್ಯುತ್ತಮ ಸಂಭಾಷಣೆ ಈ ಸಿನಿಮಾದಲ್ಲಿದೆ. ರಾಜ್ ಕುಮಾರ್, ಉದಯ್ ಕುಮಾರ್ ಹಾಗೂ ಕಲ್ಯಾಣ್ ಕುಮಾರ್ ಈ ಮೂವರೂ ಸ್ಟಾರ್ ಗಳು ಒಟ್ಟಿಗೆ ನಟಿಸಿದ ಮೊದಲ ಚಿತ್ರ. ಬಾಲಕೃಷ್ಣ-ನರಸಿಂಹರಾಜು ಜೋಡಿ ಕಚಗುಳಿ ಇಡುತ್ತಾದರೂ, ಅವರೊಂದಿಗೆ ಸೇರಿ ಕಲ್ಯಾಣ್ ಕುಮಾರ್ ತುಂಬಾ ನಗಿಸುತ್ತಾರೆ. ಕುಟುಂಬದ ಎಲ್ಲರೂ ಒಮ್ಮೆಯಾದರೂ ನೋಡಲೇಬೇಕಾದ ಸಿನಿಮಾ ಇದು.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಕುಟುಂಬದಲ್ಲಿ ತಂದೆ-ಮಕ್ಕಳ, ಅಣ್ಣ-ತಮ್ಮಂದಿರ, ಸೋದರ-ಸೋದರಿಯರ, ಸೊಸೆಯಾಗಿ ಬರುವವರ ಪಾತ್ರ ಒಂದು ಕುಟುಂಬದಲ್ಲಿ ಎಷ್ಟು ಮಹತ್ವದ್ದು, ಅದನ್ನು ನಿಭಾಯಿಸಬೇಕು ಎನ್ನುವುದನ್ನು ತಿಳಿಯಲು.
2. ಕಷ್ಟಗಳೇ ಶಾಶ್ವತವಲ್ಲ. ಆ ಕಷ್ಟಗಳನ್ನು ಪ್ರೀತಿಯಿಂದ ನಿಭಾಯಿಸುವುದು ಹೇಗೆ ಎಂಬುದನ್ನು ತಿಳಿಯಲು.
3. ಕೌಟುಂಬಿಕ ಸಮಸ್ಯೆಗಳು ಇದಿರಾದಾಗ ಎದುರಿಸುವ ಬಗೆ ಹೇಗೆ ಎಂಬುದ ತಿಳಿಯಲು.
4. ಅಮಾಯಕತನ ಇದ್ದರೆ ಜನ ಹೇಗೆಲ್ಲಾ ಮೋಸ ಮಾಡಬಹುದು ಎಂದು ಅರಿಯಲು.
5. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.