ಆಧುನಿಕ ಜಗತ್ತಿನಲ್ಲಿ ಸಂಬಂಧಗಳಿಗಿಂತಲೂ ಹಣವೇ ಹೆಚ್ಚು ಮುಖ್ಯ ಎಂದುಕೊಳ್ಳುವ ಹಾಗೂ ಹಣದಿಂದಲೇ ಎಲ್ಲಾ ಸಂತೋಷಗಳನ್ನೂ ಪಡೆಯಬಲ್ಲೆ ಎಂದುಕೊಳ್ಳುವ ಯುವ ಜನತೆಯ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ನಾವು ಬದುಕಬೇಕಾಗಿರುವುದು ಈ ರೀತಿಯಲ್ಲಲ್ಲ ಎಂದು ತಿಳಿ ಹೇಳುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ ಅಥವಾ ಅಂತಹಾ ಸಲಹೆಗಳನ್ನು ಸ್ವೀಕರಿಸುವ ಮನಃ ಸ್ಥಿತಿ ಹಣವೇ ಸರ್ವಸ್ವ ಎಂದುಕೊಂಡು ದಾರಿ ತಪ್ಪುತ್ತಿರುವವರಿಗಿಲ್ಲ.
ಇದಕ್ಕೆ ನೈಜ ಉದಾಹರಣೆಯೆಂದರೆ ಲಿವ್-ಇನ್ ಸಂಬಂಧಗಳೆಂಬ ಹೊಸದೊಂದು ಪರಂಪರೆಯತ್ತ ಯುವ ಜನತೆ ಆಕರ್ಷಿತರಾಗುತ್ತಿರುವುದು. ಆಧುನಿಕತೆಯ ಮೋಹ, ಹಣದ ವ್ಯಾಮೋಹ, ಆ ಹಣ ನೀಡುವ ಸ್ವಾತಂತ್ರ್ಯ, ಆ ಸ್ವಾತಂತ್ರ್ಯವನ್ನೇ ಸ್ವಾಭಿಮಾನವೆಂದು ತಪ್ಪಾಗಿ ಅರ್ಥೈಸಿಕೊಳ್ಳುವಿಕೆ, ಆ ತಪ್ಪು ಗ್ರಹಿಕೆಯಿಂದಲೇ ಕೌಟುಂಬಿಕ ವ್ಯವಸ್ಥೆ ಎಂದರೆ ಕೇವಲ ಕಟ್ಟುಪಾಡುಗಳೆನ್ನುವ ಭ್ರಮೆ, ಆ ಭ್ರಮೆಯಿಂದ ಸಂಸಾರ ಬಂಧನದಿಂದ ದೂರವಿರುವ ನಿರ್ಧಾರ, ಕೊನೆಗೆ ಕಟ್ಟುಪಾಡುಗಳೇ ಇಲ್ಲದ ಸಂಬಂಧಗಳನ್ನಿಟ್ಟುಕೊಂಡು ಸಮಸ್ಯೆಯ ಸುಳಿಯಲ್ಲಿ ಸಿಲುಕುವ ಪೀಳಿಗೆ. ಕಟ್ಟುಪಾಡುಗಳೇ ಇಲ್ಲದ, ಹಣ ಮತ್ತು ಯೌವ್ವನವೇ ಬಂಡವಾಳವಾಗಿರುವ ಲಿವ್-ಇನ್ ಸಂಬಂಧಗಳು ಎಷ್ಟು ಚಿಕ್ಕ ಕಾರಣಕ್ಕೆ ಬೇಕಾದರೂ ತುಂಡಾಗಿಬಿಡಬಹುದು. ಸಮಸ್ಯೆಯ ಸುಳಿಯಲ್ಲಿ ಸಿಲುಕಿಬಿಡಬಹುದು. ಮುಂದೇನು ಎನ್ನುವ ಪ್ರಶ್ನಾರ್ಥಕ ಚಿನ್ಹೆ ಭೂತಾಕಾರವಾಗಿ ಅವರೆದುರು ಎದ್ದುನಿಲ್ಲಬಹುದು. ಏಕೆಂದರೆ ಆ ಕ್ಷಣದಲ್ಲಿ ಅವರನ್ನು ಸಮಾಧಾನಪಡಿಸುವ ಅಥವಾ ಅವರನ್ನು ಯಾವುದೋ ಸಂಬಂಧಗಳಲ್ಲಿ ಬಂಧಿಸಿಡುವ ಯಾವ ಅಂಶಗಳೂ ಅಲ್ಲಿರುವುದಿಲ್ಲ.
ಜವಾಬ್ಧಾರಿಯೇ ಇಲ್ಲದ, ಯಾವುದೇ ಕಟ್ಟುಪಾಡುಗಳೇ ಇಲ್ಲದ ಸಂಬಂಧಗಳು ಎಷ್ಟು ದಿನ ಬಾಳಿಕೆ ಬಂದಾವು? ಅಂತಹಾ ಸಂದರ್ಭದಲ್ಲಿ ಇಬ್ಬರಲ್ಲಿ ಯಾರೋ ಒಬ್ಬರಿಗೆ ಅನ್ಯಾಯವಾದರೆ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುವವರಾರು? ಅವರ ಸಹಾಯಕ್ಕೆ ನಿಲ್ಲುವವರಾರು? ಆದ ತಪ್ಪುಗಳಿಗೆ ಯಾರನ್ನು ಹೊಣೆ ಮಾಡಬೇಕು? ಒಂದು ವೇಳೆ ಆಗಲೇ ಜೋಡಿ ತಮ್ಮದೇ ಆದ ಮಗುವನ್ನೂ ಪಡೆದಿದ್ದರೆ ಅದರ ಜವಾಬ್ದಾರಿ ಯಾರಿಗೆ? ವಿನಾಕಾರಣ ಆ ಮಕ್ಕಳೇಕೆ ಕೌಟುಂಬಿಕ ಸಂತೋಷಗಳಿಂದ ವಂಚಿತರಾಗಬೇಕು? ಒಂದು ವೇಳೆ ಆ ಮಕ್ಕಳು ಕೆಟ್ಟ ಹಾದಿ ತುಳಿದರೂ ಅವರಿಗೆ ಬುದ್ಧಿ ಹೇಳುವ ನೈತಿಕತೆಯನ್ನು ಅವರು ಅದು ಹೇಗೆ ಉಳಿಸಿಕೊಂಡಿರಲು ಸಾಧ್ಯ? ಒಂದು ವೇಳೆ ಆ ಜೋಡಿಗೆ ಮಕ್ಕಳೇನೂ ಇಲ್ಲದಿದ್ದರೆ ವೃದ್ಧಾಪ್ಯದ ಸಮಯದಲ್ಲಿ, ಅನಾರೋಗ್ಯಗಳ ಸಂದರ್ಭಗಳಲ್ಲಿ ಅವರಿಗೆ ಆಸರೆಯಾಗುವವರು ಯಾರು? ಕೇವಲ ಜೀವನದ ಸಂತೋಷವನ್ನು ಮಾತ್ರ ಅನುಭವಿಸಬೇಕೆನ್ನುವ ಇಚ್ಛೆಯಿಂದ ಜೊತೆಯಾದ ಸಂಗಾತಿ ಕಷ್ಟದ ಸಮಯದಲ್ಲಿಯೂ ಜೊತೆ ನಿಲ್ಲುವಂತೆ ಬಯಸುವುದು ಹೇಗೆ ಸಾಧ್ಯ? ಸ್ವತಃ ನ್ಯಾಯಾಲಯಗಳೇ ಈ ಸಮಸ್ಯೆಗೊಂದು ಸಮರ್ಪಕ ಪರಿಹಾರ ಸೂಚಿಸುವಲ್ಲಿ ಇಂದಿಗೂ ಯಶಸ್ವಿಯಾಗಿಲ್ಲ.
ಹೀಗೆ ಕೇವಲ ಆ ಕ್ಷಣದ ಸಂತೋಷವನ್ನೇ ನೆಚ್ಚಿಕೊಂಡು ನೈತಿಕತೆಯಿಂದ ಹೊರಗೆ, ಕಾನೂನಿನಿಂದ ಹೊರಗೆ, ವ್ಯವಸ್ಥೆಯಿಂದ ಹೊರಗೆ ಒಂದು ತಾತ್ಕಾಲಿಕ ಸಂಬಂಧವನ್ನು ಕಟ್ಟಿಕೊಂಡು, ನಂತರ ಅದರಿಂದ ಉಂಟಾಗುವ ಕೆಟ್ಟ ಪರಿಣಾಮಗಳನ್ನು ಅನುಭವಿಸಿ ಎಚ್ಚೆತ್ತುಕೊಳ್ಳುವುದರೊಳಗಾಗಿ ಅಮೂಲ್ಯ ಜೀವನ ಕೈಜಾರಿರುತ್ತದೆ. ಹಾಗಾದರೆ ಕಟ್ಟುಪಾಡುಗಳಿಲ್ಲದೆ ಜೀವನವನ್ನರಸಿ, ಕೌಟುಂಬಿಕ ಮೌಲ್ಯಗಳನ್ನು ಮರೆತು ಅಂತಹಾ ಅಮೂಲ್ಯ ಜೀವನವನ್ನು ಕಳೆದುಕೊಳ್ಳುತ್ತಿರುವವರಿಗೆ ಅರಿವು ಮೂಡಿಸುವುದಾದರೂ ಹೇಗೆ?
ಬಹುಶಃ ಅಂತಹಾ ಅರಿವು ಮೂಡಿಸುವ ಕಾರ್ಯಕ್ಕೆ ಸಿನಿಮಾ ಮಾಧ್ಯಮವೇ ಹೆಚ್ಚು ಸೂಕ್ತ. ಏಕೆಂದರೆ ಇಂದಿನ ದಿನಗಳಲ್ಲಿ ಯುವ ಜನತೆಯನ್ನು ತಲುಪುತ್ತಿರುವ ಅತ್ಯಂತ ಪ್ರಭಾವಶಾಲೀ ಮಾಧ್ಯಮವೆಂದರೆ ಅದು ಸಿನಿಮಾ ಮಾಧ್ಯಮ. ಆದರೆ ಅಲ್ಲೂ ನಕಾರಾತ್ಮಕ ವಿಚಾರಗಳೇ ಹೆಚ್ಚು ವಿಜೃಂಭಿಸುತ್ತಿರುವುದು ವಿಪರ್ಯಾಸವೇ ಸರಿ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮತ್ತು ಇದೇ ವಿಷಯವನ್ನೇ ಪ್ರಧಾನವಾಗಿಟ್ಟುಕೊಂಡು, ಅದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕೆನ್ನುವ ದೃಷ್ಟಿಯಿಂದ ಇತ್ತೀಚಿಗೆ ತೆರೆಗೆ ಬಂದ ಚಿತ್ರ ಇರುವುದೆಲ್ಲವ ಬಿಟ್ಟು.
ಉತ್ತಮ ಉದ್ಯೋಗವಿದೆ, ಒಳ್ಳೆಯ ಹುದ್ದೆಯಿದೆ, ಕೈ ತುಂಬಾ ಸಂಬಳವಿದೆ, ಯೌವ್ವನವಿದೆ, ಹಣದ ಮುಂದೆ ಬೇರೆ ಯಾವ ಸಂಬಂಧಗಳೂ ಮುಖ್ಯವಲ್ಲ ಎಂದುಕೊಳ್ಳುತ್ತಾ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ಗಳನ್ನೇ ಪ್ರೀತಿಸುತ್ತಾ, ಯಾರನ್ನೂ ಲೆಕ್ಕಿಸದೆ ಲಿವ್-ಇನ್ ಸಂಬಂಧಗಳ ಬಗ್ಗೆ ಆಸಕ್ತಿ ತೋರಿಸುತ್ತಿರುವ, ಕೌಟುಂಬಿಕ ವ್ಯವಸ್ಥೆಯ ಮಹತ್ವಗಳನ್ನು ಮರೆಯುತ್ತಿರುವ ಇಂದಿನ ಸಮಾಜಕ್ಕೆ ಒಂದು ಅತ್ಯುತ್ತಮ ಸಂದೇಶ ನೀಡಬಹುದಾದ ಚಿತ್ರ ಇದೆಂದರೆ ತಪ್ಪಿಲ್ಲ. ಚಿತ್ರದಲ್ಲಿ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲಾ ಕೌಟುಂಬಿಕ ಸಂಬಂಧಗಳನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಸೂಕ್ಷ್ಮವಾಗಿ ತಿಳಿಸಿಕೊಡುವ ಕೆಲಸ ಮಾಡಲಾಗಿದೆ. ಚಿತ್ರಕ್ಕೆ ಜಯಂತ್ ಕಾಯ್ಕಿಣಿ, ವಿ.ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್, ಕವಿರಾಜ್ ಮುಂತಾದವ ಸಾಹಿತ್ಯವಿದೆ. ಯುವ ಜನರನ್ನು ಸೆಳೆಯಬಲ್ಲ ಸನ್ನಿವೇಶಗಳಿವೆ.
ಪ್ರತಿಷ್ಠಿತ ಕಂಪನಿಯೊಂದರಲ್ಲಿ ಒಳ್ಳೆಯ ಹುದ್ದೆಯಲ್ಲಿರುವ ನಾಯಕಿ ತನ್ನನ್ನು ಇಷ್ಟಪಟ್ಟ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವಕನೊಬ್ಬನ ಜೊತೆ ವಾಸಿಸತೊಡಗುತ್ತಾಳೆ. ಅವರಿಬ್ಬರ ಪ್ರಕಾರ ಮದುವೆ ಎನ್ನುವುದು ಹಣ ಮತ್ತು ಸಮಯವನ್ನು ಹಾಳು ಮಾಡುವ ಒಂದು ಸಂಪ್ರದಾಯವಷ್ಟೆ. ಹಾಗೆಯೇ ಮದುವೆಯೆಂದರೆ ಅವರ ಪ್ರಕಾರ ತಮ್ಮ ಪ್ರೀತಿಯ ಬಗ್ಗೆ ನಂಬಿಕೆಯಿಲ್ಲದ ಜನ ತಮಗೆ ತಾವೇ ಹಾಕಿಕೊಳ್ಳುವ ಬೀಗವಷ್ಟೆ. ಒಂದು ದಿನ ಆಕೆಯ ತಂದೆ ತಾಯಿಯರಿಗೆ ಅವರಿಬ್ಬರ ವಿಚಾರ ತಿಳಿದುಬಿಡುತ್ತದೆ.ತಮ್ಮ ಮಾರ್ಗವೇ ಸರಿ ಎನ್ನುವ ಪರಸ್ಪರ ವಾದಗಳು ನಡೆದು ಕೊನೆಗೆ ತಂದೆ ತಾಯಿಯರಿಂದಲೂ ದೂರವಾಗುತ್ತಾಳೆ. ತಾನು ಗರ್ಭಿಣಿಯಾಗಿದ್ದರೂ ನನಗೆ ಸಮಯ ಕೊಡುತ್ತಿಲ್ಲ ಎನ್ನುವ ಮುನಿಸಿನಿಂದ ತನ್ನ ಜೊತೆಗಾರನಿಂದಲೂ ಮುನಿಸಿಕೊಂಡು ದೂರವಾಗುವ ಆಕೆಗೆ ಕೊನೆಗೊಂದು ದಿನ ಆತ್ಮಹತ್ಯೆಯೊಂದೇ ಪರಿಹಾರವೆನ್ನಿಸಿಬಿಡುತ್ತದೆ. ಅದೇ ಸಮಯದಲ್ಲಿ ಕುಟುಂಬದ ಪ್ರೀತಿಯನ್ನೇ ಅನುಭವಿಸದೇ ಅನಾಥಾಲಯದಲ್ಲಿ ಬೆಳೆದು ತನ್ನದೇ ಆದ ಸುಂದರ ಕುಟುಂಬವೊಂದನ್ನು ಸಂಪಾದಿಸಿಕೊಳ್ಳಬೇಕೆಂದು ಕನಸು ಕಾಣುತ್ತಿರುವ ನಾಯಕ ಅನಿರೀಕ್ಷಿತವಾಗಿ ಆಕೆಗೆ ಪರಿಚಯವಾಗುತ್ತಾನೆ. ಹಾಗೆ ಪರಿಚಯವಾಗುವ ನಾಯಕ ಆಕೆಯ ಜೀವ ಉಳಿಸುವುದಲ್ಲದೆ ಆಕೆಯ ಬದುಕಿನಲ್ಲಿ ಕಳೆದುಹೋದ ಸಣ್ಣ ಸಣ್ಣ ಕೌಟುಂಬಿಕ ಸಂತೋಷಗಳ ಅರಿವು ಮೂಡಿಸುತ್ತಾನೆ. ಕಂಪ್ಯೂಟರ್ ಗೇಮ್ಗಳೇ ಪ್ರಪಂಚ ಎಂದು ತಿಳಿದಿದ್ದ ಆಕೆಯ ಪುಟ್ಟ ಮಗನಿಗೆ ಹೊರಗಿನ ಸುಂದರ ಪ್ರಪಂಚವನ್ನು ಪರಿಚಯಿಸುತ್ತಾನೆ. ಕೊನೆಗೆ ಅವರ ಕುಟುಂಬವನ್ನು ಒಂದು ಮಾಡುತ್ತಾನೆ.
ಚಿತ್ರದ ಕೊನೆಯಲ್ಲಿ ಆ ಜೋಡಿ ಸುಖಾಂತ್ಯ ಕಾಣುತ್ತದೆ. ಅದಕ್ಕೆ ಕಾರಣ ನಿರ್ದೇಶಕರ ಮನಸ್ಸಿನಲ್ಲಿರುವ ಕಳಕಳಿಯೇ ಹೊರತೂ ಆ ಜೋಡಿಯಲ್ಲ. ಆದರೆ ನಿಜ ಜೀವನದಲ್ಲಿ ಅಂತಹಾ ಪರಿಸ್ಥಿತಿ ಎದುರಿಸಿದವರ ಪ್ರಕರಣಗಳೆಲ್ಲಾ ಸುಖಾಂತ್ಯ ಕಾಣುವಂತೆ ಮಾಡುವ ನಿರ್ದೇಶಕರ್ಯಾರು?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.