ಸ್ವಿಟ್ಜರ್ಲ್ಯಾಂಡ್ನ ಸಮ್ಮೇಳನವನ್ನು ಮುಗಿಸಿ ನೆದರ್ಲ್ಯಾಂಡ್ನ ತನ್ನ ಕಚೇರಿಗೆ ಮರಳಿದ ಖಾನನಿಗೆ ಆಘಾತವೊಂದು ಕಾದಿತ್ತು. ಆತನ ಬರುವಿಗೆ ಮೊದಲೇ ಅವನ ಪ್ರತಿಯೊಂದು ಚಟುವಟಿಕೆಯ ಕುರಿತಾದ ಗುಪ್ತವರದಿಯೊಂದು FDO ಸಮೇತ URENCO ದ ಅಧಿಕಾರಿಗಳು ಮತ್ತು ನೆದರ್ಲ್ಯಾಂಡ್ನ ಗುಪ್ತದಳಕ್ಕೆ ತಲುಪಿತ್ತು. ಇದರ ಪರಿಣಾಮವಾಗಿ ಆತನ ವೈಜ್ಞಾನಿಕನ ಹುದ್ದೆಗಿದ್ದ ವಿಶೇಷ ಸವಲತ್ತುಗಳನ್ನು ಒಂದೊಂದಾಗಿ ಕಿತ್ತುಕೊಳ್ಳಲಾಗುತಿತ್ತು. ಮೊದಲಿಗೆ ದೂರದ ಅಲ್ಮೆಲೋದಲ್ಲಿದ್ದ ಅತಿ ವಿಶಿಷ್ಟ ಮತ್ತು ಅತ್ಯಾಧುನಿಕ ಯುರೇನಿಯಂ Centrifuge ಗಳ ಮಾಹಿತಿಯುಳ್ಳ ಕೇಂದ್ರಸ್ಥಾನಕ್ಕೆ ಆತನಿಗಿದ್ದ ಅನಿರ್ಬಂಧಿತ ಓಡಾಟವನ್ನು ಸ್ಥಗಿತಗೊಳಿಸಲಾಯಿತು. ನಂತರ ಆಂಸ್ಟರ್ಡ್ಯಾಮ್ ನಲ್ಲಿನ FDOದ ಕೇಂದ್ರ ಕಚೇರಿಯಲ್ಲಿಯೂ ಆತನ ಚಲನವಲನಗಳ ಮೇಲೆ ಏಕಾಏಕಿ ನಿರ್ಬಂಧಗಳು ಹೇರಲ್ಪಟ್ಟವು. ಈ ಎಲ್ಲ ನಿರ್ಬಂಧನೆಗಳು ಮೊದಲಿಗೆ ಇರಲಿಲ್ಲವೆಂದೇನಿಲ್ಲ ಆದರೆ ಅವುಗಳ ಪಾಲನೆ ಮಾತ್ರ ನಾಮಮಾತ್ರಕ್ಕೂ ಆಗುತ್ತಿರಲಿಲ್ಲ.
ಹಿಂದೆಂದೂ ಇಲ್ಲದ ಬಿಗುವು, ಕಟ್ಟುಪಾಡುಗಳು ತನ್ನ ದೈನಂದಿನ ಕಾರ್ಯಾಚರಣೆಗೆ ತೊಡಕಾಗಿದ್ದನ್ನು ಅದರ ಹಿಂದಿನ ಉದ್ದೇಶಗಳನ್ನೂ ಅರಿಯದಷ್ಟು ಮುಗ್ಧನಾಗಿರಲಿಲ್ಲ A.Q. ಖಾನ್ . ಐ.ಎಸ್.ಐ. ಏಜಂಟನ ತನ್ನ ನಿಜರೂಪ ಬಯಲಿಗೆ ಬಿದ್ದು, ವಿದೇಶದ ನೆಲದಲ್ಲಿ ತಾನು ಬಂಧಿಯಾಗಿ, ಜೈಲಿನ ಕತ್ತಲಿನಲ್ಲಿ ತನ್ನ ಆಯುಷ್ಯವನ್ನೆಲ್ಲ ಕೊಳೆಯುವ ಕಲ್ಪನೆ ಆತನ ಮನದಲ್ಲಿ ಹಾದುಹೋಗಿರಲಿಕ್ಕೂ ಸಾಕು. ಈ ಎಲ್ಲ ವಿಚಾರಗಳನ್ನು ಹೊತ್ತಂತೆಯೇ ಡಿಸೆಂಬರ್ 15 ,1975 ಕ್ಕೆ ಖಾನ್ ತನ್ನ ಯುರೋಪಿಯನ್ ಮೂಲದ ಹೆಂಡತಿ ಹೆನ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಡನೆ ವಾರ್ಷಿಕ ರಜೆಗಳ ನೆಪದಲ್ಲಿ ತವರುನೆಲ ಪಾಕಿಸ್ತಾನಕ್ಕೆ ಹಾರಿದ. ಅದು ಆತನ FDO ದ ಕೇಂದ್ರಕಚೇರಿಗೆ ಮತ್ತೆಂದೂ ಮರಳದ ಕೊನೆಯ ಉಡ್ದಾಣವಾಗಿತ್ತು.
ಪಾಕಿಸ್ತಾನದ ಮತ್ತು ಸಮಸ್ತ ಮುಸ್ಲಿಂ ಜಗತ್ತಿನ ಹಿತರಕ್ಷಣೆಗಾಗಿ ಹಿಂದೂಸ್ತಾನದ ಸಮೇತ ಪಶ್ಚಿಮದ ರಾಷ್ಟ್ರಗಳ ಸೊಕ್ಕಡಿಗಿಸಲು ಜಗತ್ತನ್ನೇ ನಾಶಗೊಳಿಸಬಲ್ಲ ಪರಮ ಘಾತಕ ನ್ಯೂಕ್ಲಿಯರ್ ಬಾಂಬಿನ ಕಳ್ಳ ತಯಾರಿಯಲ್ಲಿ ತನ್ನ ಸಂದಿಗ್ಧ ಕೈವಾಡದ ಗೂಢಚಾರಿಕೆಯ ಆಪಾದನೆಗೆ ಒಳಗಾಗದೇ ವಿದೇಶಿ ನೆಲದಿಂದ ಆತ ಸ್ವಸ್ಥನಾಗಿ, ಸುರಕ್ಷಿತವಾಗಿ ಪಾಕಿಸ್ತಾನಕ್ಕೆ ಮರಳುವಂತಾಗಿದ್ದು ಪವಾಡವೇ ಸರಿ. ಆಧುನಿಕ ಪ್ರಪಂಚ ಮತಾಂಧರ, ಅಧಿಕಾರದಾಹಿಗಳ ಕೈಯಲ್ಲಿ ಸಿಕ್ಕು ಪ್ರತಿಕ್ಷಣವೂ ತನ್ನ ಉಳಿವಿಗಾಗಿ ಪ್ರಾರ್ಥಿಸುವಂತೆ ಮಾಡಿದ ಇಂತಹ ಕಾರಸ್ಥಾನಗಳೆಲ್ಲ ತನ್ನ ಮೂಗಿನ ಕೆಳಗೇ ನಡೆಯುತ್ತಿದ್ದರೂ ಕುರುಡಾಗಿ ವರ್ತಿಸಿದ ಯುರೋಪಿಯನ್ ಮತ್ತು ಅಮೇರಿಕದ ಬೇಹುಗಾರಿಕೆ ಸಂಸ್ಥೆಗಳ ವಿಶ್ವಾಸನೀಯತೆಗಳ ಮೇಲೆ ಅಲ್ಲಿನ ಸರ್ಕಾರಗಳ ನಡವಳಿಕೆಗಳ ಮೇಲೆ ಇದು ಯಾವತ್ತು ಅಳಿಸಲಾಗದ ಕಪ್ಪುಚುಕ್ಕೆಯೇ ಸರಿ.
ಆರಂಭಿಕ ವಿಘ್ನಗಳು
ಇಷ್ಟೆಲ್ಲಾ ಆದರೂ ಖಾನ್ ಪಾಕಿಸ್ತಾನಕ್ಕೆ ಮರಳಿದ ಹೊತ್ತು ಮಾತ್ರ ಸುಖಕರವಾಗೇನೂ ಇರಲಿಲ್ಲ. ಮುಸ್ಲಿಂ ಜಗತ್ತಿನಲ್ಲೇ ಅಣುಶಸ್ತ್ರಗಳನ್ನು ಹೊಂದಿರುವ ಮೊದಲ ಮತ್ತು ಏಕಮಾತ್ರ ದೇಶವಾಗಬೇಕು ಎನ್ನುವ ಪಾಕಿಸ್ತಾನದ ಧಾವಂತಕ್ಕೆ ಎಲ್ಲ ದಿಕ್ಕಿನಿಂದಲೂ ತೊಡರುಗಳು ಇದಿರಾಗುತ್ತಿದ್ದವು. ಮೊದಲಿಗೆ ಕೆನಡಾದ ಸಹಯೋಗದಲ್ಲಿ ಕರಾಚಿಯಲ್ಲಿ ನಡೆಯುತ್ತಿದ್ದ ರಿಯಾಕ್ಟರ್ನ ಕೆಲಸಗಳು ಅರ್ಧದಾರಿಯಲ್ಲೇ ಉಸಿರುಗಟ್ಟಿದ್ದವು. ಅಂತರಾಷ್ಟ್ರೀಯ ಒತ್ತಡದಿಂದಾಗಿ ಬಿಡಿಭಾಗಗಳು ಮತ್ತು ಕಚ್ಚಾ ಪ್ಲುಟೋನಿಯಂನ ಉರುವಲಿನ ಪೂರೈಕೆಯನ್ನು ತನ್ನಿಂದ ಮಾಡಲಾಗದು ಎಂದು ಮೊದಲಿಗೆ ಕೆನಡಾ ನಂತರ ಫ್ರಾನ್ಸ್ ಸಹ ಹಿಂತೆಗೆಯಿತು.
ಯುರೋಪಿಯನ್ ರಾಷ್ಟ್ರಗಳಲ್ಲಿ ಪಾಕಿಸ್ತಾನದ ವಿದೇಶಾಂಗ ರಾಯಭಾರ ಕಚೇರಿಗಳ ಮರೆಯಲ್ಲಿ ಖಾನ್ ಮತ್ತು ಸಿದೀಕ್ ಬಟ್ ನಡೆಸುತ್ತಿದ್ದ ಗುಪ್ತ ನ್ಯೂಕ್ಲಿಯರ್ ಪೂರೈಕೆಯ ವ್ಯವಹಾರದ ಪ್ರಯತ್ನಗಳಿಂದಾಗಿ ಯುರೇನಿಯಂ Centrifuge ಗಳ ಬಿಡಿಭಾಗಳ ಮೊದಲ ಕಂತು 1975ರ ಕೊನೆಗೆಲ್ಲ ಪಾಕಿಸ್ತಾನಕ್ಕೆ ತಲುಪಿತ್ತಾದರೂ ಅವನ್ನೆಲ್ಲ ಓರಣವಾಗಿ ಜೋಡಿಸುವ, ಒಂದಕ್ಕೊಂದು ಹೊಂದಿಸುವ ಪ್ರಾಥಮಿಕ ಕೆಲಸಗಳೂ ಶುರುವಾಗಿರಲೇ ಇಲ್ಲ. ಪಾಕಿಸ್ತಾನದಲ್ಲಿಳಿದವನೇ ಖಾನ್ ಮಾಡಿದ ಮೊದಲನೆಯ ಕೆಲಸವೆಂದರೆ ತಾನು ಕಳಿಸಿದ ಸಾಮಗ್ರಿಗಳ ಹೊಂದಿಕೆಯ ಕಾರ್ಯ, ಯಂತ್ರಣಗಳ ಜೋಡಣಾಕಾರ್ಯ ಎಲ್ಲಿಯವರೆಗೆ ಮುಗಿದಿದೆ ಎಂದು ನೋಡಲು ಹೋಗಿದ್ದು. ವಸ್ತುಸ್ಥಿತಿಯಲ್ಲಿ ಆತ ಕಳಿಸಿದ್ದ ಅದೆಷ್ಟೋ ಬಿಡಿಭಾಗಗಳ ಮೇಲಿದ್ದ ಹೊದಿಕೆಯನ್ನು ಸರಿಸಿ ನೋಡುವ ಕನಿಷ್ಠ ಪ್ರಯತ್ನವೂ ಆಗಿಲ್ಲ ಎಂದು ಕಂಡಕೂಡಲೇ ತಾನು ಪ್ರಾಣವನ್ನೇ ಪಣವಾಗಿಟ್ಟು ಮಾಡಿದ ಕೆಲಸಕ್ಕೆ ತನ್ನ ತವರುದೇಶದಲ್ಲಿ ಯಾವುದಾದರೂ ಬೆಲೆಯಿದೆಯೇ ಎಂಬ ಹತಾಶೆಗೆ ಸಿಲುಕಿದ.
ಆ ಹೊತ್ತಿಗೆ ವಿದೇಶದಲ್ಲಿದ್ದ ಭುಟ್ಟೊ ತನ್ನ ಪ್ರವಾಸವನ್ನು ಮುಗಿಸಿ ಅದಷ್ಟೇ ಸ್ವದೇಶಕ್ಕೆ ಮರಳಿದ್ದ. ಆ ಸಂದರ್ಭದಲ್ಲಿ ಅವನ ಭೇಟಿಗೆ ತೆರಳಿದ ಖಾನ್, ಪಾಕಿಸ್ತಾನದಲ್ಲಿ ತನಗೆ ಎದುರಾಗಿರುವ ಪರಿಸ್ಥಿತಿಗಳನ್ನು ವಿವರಿಸಿದ. ‘3-4 ವರ್ಷಗಳಲ್ಲಿ ಅಣುಶಕ್ತಿಯಾಗುವ ಮತ್ತು ಅದರ ಮೂಲಕ ಸಮಸ್ತ ಇಸ್ಲಾಮೀ ಜಗತ್ತಿನ ಮುಕುಟಮಣಿಯಾಗುವ ಕನಸುಕಾಣುವ ದೇಶಕ್ಕೆ ತನ್ನ ದಾರಿಯಲ್ಲಿನ ತೊಡರುಗಳನ್ನು ನಿವಾರಿಸುವ ಸಾಮರ್ಥ್ಯವೂ ಇಲ್ಲದ್ದು ಶೋಭೆತರುವ ವಿಚಾರವಲ್ಲ. ಅಣುಬಾಂಬಿನ ಒಡೆತನ ಸಾಧಿಸುವ ನಿಮ್ಮ ಕನಸಿನ ಬಗ್ಗೆ ನೀವು ನಿಜಕ್ಕೂ ಗಂಭೀರರಾಗಿದ್ದಲ್ಲಿ ನನ್ನ ದಾರಿಯಲ್ಲಿ ಅದನ್ನು ಸಾಧಿಸುವ ಮುಕ್ತತೆ ಕೊಡಿ ಇಲ್ಲ ಪಾಕಿಸ್ತಾನದಿಂದ ನಾನು ಮರಳಿ ಹೊರಡುವುದಕ್ಕೆ ಅನುಮತಿ ಕೊಡಿ’ ಎಂದು ಖಂಡತುಂಡವಾಗಿ ತಿಳಿಸಿದ.
ಕಳ್ಳನ ಸಾಮ್ರಾಜ್ಯಕ್ಕೆ ಬುನಾದಿ ಹಾಕಿದ ಭುಟ್ಟೋ
ಖಾನನ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳದೇ ಭುಟ್ಟೋಗೆ ಪರ್ಯಾಯವಿರಲಿಲ್ಲ. ಹೀಗಾಗಿ, ಖಾನ್ ತನ್ನ ಕೆಲಸಕ್ಕಾಗಿ ದೇಶದ ಅಣುಶಕ್ತಿ ಕಮಿಷನ್ (PAEC)ನ ಮರ್ಜಿ ಕಾಯಬೇಕಾಗಿಲ್ಲವೆಂದೂ, ಕಾರ್ಯಸಾಧನೆಯ ದಾರಿಯಲ್ಲಿ ಯಾವುದೇ ಅಡಚಣೆಗಳಿದ್ದರೆ ನೇರವಾಗಿ ತನ್ನ ಮಿಲಿಟರಿ ಪಡೆಯ ಮುಖ್ಯಸ್ಥ ಜಿಯಾ-ಉಲ್-ಹಕ್ ನನ್ನು ಕಾಣುವಂತೆಯೂ ತಿಳಿಸಿದ.
ಜುಲೈ 31 1976ರಂದು ಖಾನನ ಹೆಸರಿಗೆ ತನ್ನ ಹಣಕಾಸು ಮಂತ್ರಿ ಗುಲಾಂ ಇಶಕ್ನಿಗೆ ಹೇಳಿಸಿ ಮೊತ್ತವನ್ನೇ ನಮೂದಿಸದ ಖಾಲಿ ಚೆಕ್ಕನ್ನು ಬರೆಯುವಂತೆ ತಿಳಿಸಿದ. ಅದೇ ದಿನ ಪ್ರಾಜೆಕ್ಟ್-706 ಎಂಬ ಹೆಸರಿನ ಯುರೇನಿಯಂ ಪುಷ್ಟೀಕರಣದಿಂದ ಅಣುಬಾಂಬನ್ನು ತಯಾರಿಸುವ ರಹಸ್ಯ ಯೋಜನೆಗೆ ಭುಟ್ಟೋ ಸಹಿ ಹಾಕಿದ. ಈ ಯೋಜನೆಯ ಸಂಪೂರ್ಣ ಜವಾಬ್ದಾರಿ ಖಾನ್ಗೆ ಸೇರಿದ್ದರೆ ಅದರ ಮೇಲುಸ್ತುವಾರಿಯ ಕೆಲಸಕ್ಕೆ ಸ್ವತಃ ತನ್ನನ್ನೇ ನೇಮಿಸಿಕೊಂಡ. ಪೂರ್ಣ ಯೋಜನೆಯ ಕಿರುಮಾದರಿಯನ್ನು ನಡೆಸುವಂತಾಗಲು ಪರೀಕ್ಷಾರ್ಥ ರಿಯಾಕ್ಟರ್ ಒಂದನ್ನು ನಿರ್ಮಿಸಲು ಜಿಯಾ ಉಲ್ ಹಕ್ಗೆ ಸೂಚಿಸಿದ.
ತನ್ನ ದೇಶ ನ್ಯೂಕ್ಲಿಯರ್ ಶಸ್ತ್ರಗಳನ್ನು ಹೊಂದಲು ವಿದೇಶಿ ತಂತ್ರಜ್ಞಾನವನ್ನು ಕದ್ದು ಸಾಗಿಸಿದ್ದ ಕಳ್ಳ ವಿಜ್ಞಾನಿಯೊಬ್ಬ ತನ್ನ ದಾರಿಯ ಒಂದೊಂದೇ ಬಾಧೆಗಳನ್ನು ನಿವಾರಿಸಿ ಮುನ್ನಡೆಯುತ್ತ ಈಗ ಪಾಕಿಸ್ತಾನದ ಅತಿ ಪ್ರಮುಖ ವ್ಯಕ್ತಿಗಳ ಸಾಲಿನಲ್ಲಿ ಸೇರ್ಪಡೆಯಾಗಿದ್ದ. ತನ್ನ ಕೆಲಸದಲ್ಲಿ ನೇರವಾಗಿ ದೇಶದ ಮಿಲಿಟರಿ ಪಡೆಯ ಮುಖ್ಯಸ್ಥನೇ ಸಹಾಯಕನಾಗಿದ್ದು ಆತನ ಹಿರಿಮೆಗೆ ಸೇರಿದ ಇನ್ನೊಂದು ಗರಿಯಾಗಿತ್ತು. ಖಾನ್ ಮತ್ತು ಹಕ್ರ ಈ ಜುಗಲ್ಬಂದಿ ಬರುವ ದಿನಗಳಲ್ಲಿ ಪಾಕಿಸ್ತಾನವನ್ನು ಅಕ್ಷರಶಃ ಆಳುವ ಹಂತಕ್ಕೆ ಏರಲಿತ್ತು. ಕಳ್ಳ ಸಾಮ್ರಾಟನ ಸಾಮ್ರಾಜ್ಯಕ್ಕೆ ಸುಳ್ಳರ, ಮೋಸಗಾರರ ಪಡೆಯ ನಿಯುಕ್ತಿಯ ದಿನಗಳು ಇನ್ನಷ್ಟೇ ಪ್ರಾರಂಭವಾಗಬೇಕಿತ್ತು.
(ಸಶೇಷ..)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.