38ರ ವಯಸ್ಸಿಗೆಲ್ಲ ಅಬ್ದುಲ್ ಕದೀರ್ ಖಾನ್ ತನ್ನನ್ನು ತಾನು ಓರ್ವ ಮಧ್ಯಮಸ್ತರದ ಲೋಹಶಾಸ್ತ್ರಜ್ಞನಾಗಿ ದಶಕಗಳ ವರೆಗೆ ತಾನು ಕಲಿತ ಲೋಹಶಾಸ್ತ್ರದ ಪಾಠಗಳನ್ನೆಲ್ಲಾ ತನ್ನ ದೇಶ ಪಾಕಿಸ್ತಾನದಿಂದ ಸಹಸ್ರಾರು ಮೈಲಿ ದೂರದ ನೆದರ್ಲ್ಯಾಂಡ್ನ FDO ದ ಅತಿಸುಧಾರಿತ Centrifuge ಗಳ ನಿರ್ಮಾಣಕಾರ್ಯದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಕಾರ್ಯರೂಪಕ್ಕೆ ತರುವಲ್ಲಿ ಪೂರ್ತಿಯಾಗಿ ತೊಡಗಿಸಿಕೊಂಡಿದ್ದ.
ಕಚೇರಿಯಲ್ಲಿ ತನ್ನ ಅಂಕೆಗೂ ಮೀರಿದ, ಪ್ರಯೋಗಾಲಯದ ಸೂಕ್ಷ್ಮ ಸ್ಥಳಗಳಿಗೆ ಪ್ರವೇಶ ಪಡೆಯುವಲ್ಲಿ ಸಫಲನಾಗಿದ್ದ. ಅಲ್ಲಿ ನಡೆಯುತ್ತಿರುವ ಸಂಶೋಧನೆಗಳ ಮೇಲಿನ ರಹಸ್ಯ ವರದಿಗಳು, ವಿವಿಧ ಯಂತ್ರಣಗಳ ಸಂರಚನೆ, ಅವುಗಳ ತಯಾರಿಯ ವಿಧಿ-ವಿಧಾನ, ಅವುಗಳ ಬಳಕೆಯ ಕ್ರಮಗಳ ಸಹಿತ ಇತರೆ ಮಹತ್ತರ ಮಾಹಿತಿಗಳನ್ನು ಅವುಗಳ ಛಾಯಾಚಿತ್ರಗಳ ಸಮೇತ ವ್ಯವಸ್ಥಿತವಾಗಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದ.
1974ರ ಬೇಸಿಗೆಯಲ್ಲಿ ಭಾರತ ನಡೆಸಿದ ಪರಮಾಣು ಸ್ಫೋಟದ ಪರೀಕ್ಷಣೆಗಳ ಸುದ್ದಿಗಳಿಂದ ಆತನ ಪಾಕಿಸ್ತಾನದ ಅಂಧಪ್ರೇಮ ಮತ್ತು ಇಸ್ಲಾಮೀ ಮೂಢಭಕ್ತಿಗಳಿಗೆ ಇನ್ನಷ್ಟು ವ್ಯಗ್ರತೆ ಬಂದಿತ್ತು. ಹಿಂದುಸ್ತಾನವನ್ನು ನೇರಾನೇರ ಯುದ್ಧದಲ್ಲಿ ಎದುರಿಸಲಾರದ ಪಾಕಿಸ್ತಾನದ ಕುಬ್ಜತೆ ಮತ್ತು ಅದರ ಕ್ಲೈಬ್ಯಗಳ ಚಿತ್ರಣ ಆತನ ಕಣ್ಮುಂದೆ ಸ್ಪಷ್ಟವಾಗಿ ಬಿಡಿಸಿದಂತಿತ್ತು. ತನ್ನ ಮನಸ್ಸಿನ ಬೆಗುದಿಗಳಿಗೆ ಅಕ್ಷರರೂಪ ನೀಡಿದವನೇ ನೇರಾನೇರ ಪಾಕಿಸ್ತಾನದ ಅಧ್ಯಕ್ಷ ಜುಲ್ಫಿಕರ್ ಭುಟ್ಟೋಗೆ ಪತ್ರವೊಂದನ್ನು 1974 ರ ಆಗಸ್ಟ್ – ಸೆಪ್ಟೆಂಬರ್ನಲ್ಲಿ ರವಾನಿಸಿಯೇ ಬಿಟ್ಟ.
ಪತ್ರದಲ್ಲಿ ಆಗಿನವರೆಗೆ ಪಾಕಿಸ್ತಾನವು ಪ್ರಯೋಗಿಸುತ್ತಿದ್ದ ಪ್ಲುಟೋನಿಯಂ ಅಣುಪರೀಕ್ಷಣಗಳು ತಾಂತ್ರಿಕವಾಗಿ ಕಡಿಮೆ ದರ್ಜೆಯದ್ದೂ, ಮಾರಕತೆಯಲ್ಲಿ ಕಡಿಮೆ ಕ್ಷಮತೆಯನ್ನು ಹೊಂದಿದ್ದವೆಂದೂ, ತಾನು ಈಗಾಗಲೇ ಕೆಲಸ ಮಾಡುತ್ತಿರುವ ಯುರೋನಿಯಂ ಪರೀಕ್ಷಣಗಳು ಹೆಚ್ಚು ಘಾತಕವೂ ತಾಂತ್ರಿಕವಾಗಿ ಸುಪುಷ್ಠವೂ ಆದದ್ದೆಂದು ವಿವರಿಸಿದ್ದ. ಅದೆಲ್ಲಕ್ಕೂ ಮಿಗಿಲಾಗಿ ಇಂತಹ ಶಸ್ತ್ರಾಸ್ತ್ರಗಳ ತಯಾರಿಯಲ್ಲಿ ಯಾವೆಲ್ಲ ರೀತಿಯಲ್ಲಿ ತಾನು ಪಾಕಿಸ್ತಾನದ ಸೇವೆಗೆ ಸಜ್ಜಾಗಿರುವೆ ಎಂಬುದನ್ನೂ ಸೇರಿಸಿದ್ದ.
ತಾನು ಬರೆದ ಮೊದಲ ಪತ್ರಕ್ಕೆ ಪಾಕಿಸ್ತಾನಿ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದನ್ನು ನೋಡಿ ಸ್ವಲ್ಪ ಅಧೀರನಾದರೂ 1974 ಸೆಪ್ಟೆಂಬರ್ 17 ರಂದು ಭುಟ್ಟೋಗೆ ನಿರ್ದೇಶಿಸಿದ್ದ ಮತ್ತೊಂದು ಪತ್ರವನ್ನು ಕಳುಹಿಸಿಯೇ ಬಿಟ್ಟ. ಈ ಪತ್ರ ಭುಟ್ಟೋನ ಚಿತ್ತವನ್ನು ಸೆರೆಹಿಡಿಯುವಲ್ಲಿ ಸಫಲವೂ ಆಯಿತು.
ತನಗೆ ಪತ್ರ ಕಳಿಸಿದವನ ಸತ್ಯಾಸತ್ಯತೆ ಮತ್ತು ಪೂರ್ವಾಪರಗಳನ್ನು ಕೂಲಂಕುಶವಾಗಿ ತಿಳಿದುಕೊಳ್ಳುವ ಕೆಲಸವನ್ನು ಪಾಕಿಸ್ತಾನದ ಅಧ್ಯಕ್ಷ ಜುಲ್ಫಿಕರ್ ಅಲಿ ಭುಟ್ಟೊ ನೆದರ್ಲ್ಯಾಂಡ್ ನ ಹಾಗ್ ನಗರದಲ್ಲಿನ ತನ್ನ ರಾಯಭಾರ ಕಚೇರಿಗೆ ಒಪ್ಪಿಸಿದ. ಇವು ಪಾಕಿಸ್ತಾನದ ಇಸ್ಲಾಮಿ ಅಣುಬಾಂಬ್ ನ ರಹಸ್ಯ ಕಾರ್ಯಾಚರಣೆಗೆ ತೊಡಕಾಗಬಹುದಾದ, ಕಾಳನ್ನು ಜೊಳ್ಳಿನಿಂದ ಬೇರ್ಪಡಿಸಲು ಮಾಡಲೇಬೇಕಾದ ಅನಿವಾರ್ಯ ಕ್ರಮಗಳಂತಿದ್ದವು. ಸುಮಾರು ಒಂದು ತಿಂಗಳ ಅವಧಿಯ ನಂತರ ಹಾಗ್ ನ ಪಾಕಿಸ್ತಾನಿ ರಾಯಭಾರಿ ಕಛೇರಿಯಿಂದ ಭುಟ್ಟೊ ಎದುರು ನೋಡುತ್ತಿದ್ದ ನಿರೂಪವೂ ಬಂತು. ಅದರಲ್ಲಿ A.Q ಖಾನನ ವ್ಯಕ್ತಿ ಚಿತ್ರಣಗಳು ಆತ ಕೆಲಸ ಮಾಡುತ್ತಿದ್ದ FDO ದ ಪ್ರಾಮುಖ್ಯತೆಯನ್ನೂ ವಿವರಿಸಲಾಗಿತ್ತು.
ಕೊನೆಗೂ ಭುಟ್ಟೋನ ಆದೇಶಕ್ಕೆ ಅನುಸಾರವಾಗಿ ಹಾಲೆಂಡಿನಲ್ಲಿ ಪಾಕಿಸ್ತಾನದ ರಾಯಭಾರಿಯಾಗಿದ್ದ ಜೆ.ಜಿ.ಖಾರಸ್ ಖಾನ್ ನನ್ನು ಸಂಪರ್ಕಿಸಿದ. ಖಾನನ ಪತ್ರವನ್ನು ಸ್ವತ: ಅಧ್ಯಕ್ಷರೇ ಓದಿರುವರೆಂದೂ, ಖಾನನ ಕಾರ್ಯಕ್ಷಮತೆ, ಸಾಹಸ ಪ್ರವೃತ್ತಿಗಳ ಕುರಿತಾಗಿಯೂ ಆತನ ದೇಶಪ್ರೇಮ, ಇಸ್ಲಾಮಿನ ನಿಷ್ಥೆಯಿಂದಾಗಿ ಪ್ರಭಾವಿತರಾಗಿರುವದಾಗಿಯೂ ತಿಳಿಸಿದ.
ಎಲ್ಲಕ್ಕಿಂತ ಮಹತ್ವದ ಸುದ್ದಿಯನ್ನು ತಿಳಿಸುತ್ತ ಆತ ಇಸ್ಲಾಮಾಬಾದ್ ಗೆ ಬರುವಂತೆಯೂ ಅಲ್ಲಿ ಅಧ್ಯಕ್ಷರ ಮಿಲಿಟರಿ ಸಲಹೆಗಾರ ಮೇಜರ್ ಜನರಲ್ ಇಮ್ತಿಯಾಜ್ ಅಲಿ ಯೊಡನೆ ಆತನ ಸಂದರ್ಶನದ ವೇಳೆಯನ್ನೂ ನಿಗದಿಪಡಿಸಿದ.
ಒಬ್ಬ ವಿಜ್ಞಾನಿಯಾಗಿಯೇ ಇರಲಿ, ಒಬ್ಬ ಸಾಮಾನ್ಯ ನಾಗರಿಕನಾಗಿಯೇ ಇರಲಿ ಖಾನನಿಗೆ ತಾನು ಕೈಗೊಂಡಿರುವ ಕಾರ್ಯದ ಕುರಿತು ತಿಲಮಾತ್ರದಷ್ಟೂ ಅಳುಕಿರಲಿಲ್ಲ. ತನ್ನ ಜೀವಿತದ ಉದ್ದೇಶ್ಯ ಹೆಚ್ಚುಹೆಚ್ಚು ಸ್ಪಷ್ಟವಾಗುತ್ತಲಿತ್ತು. ತನ್ನ ಕಾರ್ಯದ ಗುರುತ್ವವನ್ನು ಅದರ ಪರಿಣಾಮಗಳನ್ನೂ ಆತ ಸರಿಯಾಗಿಯೇ ಅಂದಾಜಿಸಿದ್ದ. ಪಾಕಿಸ್ತಾನದ ಇಸ್ಲಾಮೀ ಬಾಂಬಿನ ಜನಕನಾಗಿ ಜನ ತನ್ನನ್ನು ಗುರುತಿಸುವ ಹಿರಿಘಳಿಗೆಯನ್ನು ಮನದಲ್ಲೇ ನೆನೆದು ಹಿಗ್ಗುತ್ತಿದ್ದ. ನಾಳೆಯ ದಿನ ಪಾಕಿಸ್ತಾನದ ಅಷ್ಟೇ ಏಕೆ ಸಮಸ್ತ ಇಸ್ಲಾಮಿನ ಹೋರಾಟದ ಇತಿಹಾಸದ ಪುಟಗಳಲ್ಲಿ ತನಗಾಗಿ ಸಿದ್ಧವಾಗುತ್ತಿದ್ದ ಸುವರ್ಣ ಅಧ್ಯಾಯಗಳನ್ನು ಆತ ಬಹು ಆಸ್ಥೆಯಿಂದ ಕಲ್ಪಿಸಿಕೊಳ್ಳುತ್ತಿದ್ದ.
ಆದರೆ, ಒಮ್ಮೆ ಸ್ವದೇಶಕ್ಕೆ ತಲುಪಿದ ಮೇಲೆ ಕದ್ದು ಸಂಪಾದಿಸಿರುವ ಈ ಮಾಹಿತಿಯೇ ತನ್ನ ಭವಿಷ್ಯಕ್ಕೆ ಆಸರೆಯಾಗಲಿದೆ ಎಂಬ ವಾಸ್ತವದ ಎಚ್ಚರಿಕೆಯೂ ಆತನಲ್ಲಿತ್ತು. ಈ ಕಾರಣಕ್ಕಾಗಿಯೇ ತಾನು ಪಾಕಿಸ್ತಾನಕ್ಕೆ ಹೊರಡುವ ಮೊದಲು ಯುರೇನಿಯಂ ಅಣುಸ್ಥಾವರಗಳಿಗೆ ಸಂಬಂಧಿಸಿದ ವಾಸ್ತವಿಕ ತಾಂತ್ರಿಕ ವಿವರಣೆಗಳನ್ನೂ ಅದರ ಪೂರಕ ಮಾಹಿತಿಗಳನ್ನು ಒಟ್ಟುಗೂಡಿಸುವ ಪ್ರಯತ್ನವನ್ನು ಆತ ಇನ್ನಷ್ಟು ಜಾಗ್ರತೆಯಿಂದ ಮುಂದುವರೆಸಿದ. ಈ ಮೊದಲಿಗೂ ಖಾನ್ ಮತ್ತು ಆತನ ಕುಟುಂಬ ಪಾಕಿಸ್ತಾನಕ್ಕೆ 3 ಬಾರಿ ಭೇಟಿಕೊಟ್ಟಿದ್ದರೂ ಭಾರತದ ಅಣುಪರೀಕ್ಷಣಗಳ ಹಿನ್ನೆಲೆಯಲ್ಲಿ, ಭುಟ್ಟೋನ ಅಣ್ವಾಸ್ತ್ರಗಳನ್ನು ಹೊಂದುವ ಚಡಪಡಿಕೆಗಳ ಅರಿವಿರುವ ಸಿಐಎ ಮತ್ತು IAEA ಗುಪ್ತಚರ ಸಂಸ್ಥೆಗಳ ಕಣ್ಣುಗಳಿಗೆ ಅನಾಯಾಸವಾಗಿ ಬೀಳುವುದು ತುಂಬಾ ಅಪಾಯದ್ದೆಂಬ ಸ್ಪಷ್ಟತೆ ಆತನಲ್ಲಿತ್ತು. ಇದೆಲ್ಲವನ್ನೂ ಆತ ಪ್ರಾಮಾಣಿಕವಾಗಿ ಖಾರಸ್ನಿಗೆ ವಿವರಿಸಿದ. ಖಾರಸ್ ಅದೇ ಸಮಾಚಾರವನ್ನು ಪಾಕಿಸ್ತಾನಕ್ಕೆ ರವಾನಿಸಿದ ಮತ್ತು ಪಾಕಿಸ್ತಾನದ ಆತನ ಆಳರಸರಿಂದಲೂ ಖಾನನ ಭೇಟಿಯನ್ನು ಮುಂದೂಡುವಂತೆಯೇ ಸಲಹೆ ಬಂತು.
1974 ರ ಉತ್ತರಾರ್ಧದ ವೇಳೆಗೆ ನೆದರ್ಲ್ಯಾಂಡಿನ Centrifuge ಗಳನ್ನು ಜರ್ಮನಿಯ G-2 ಎಂಬ ರಹಸ್ಯ ತಂತ್ರಜ್ಞಾನದ ಸಹಾಯದಿಂದ ಉನ್ನತಿಕರಣಗೇರಿಸುವ ಯೋಜನೆಯೊಂದನ್ನು URENCO ಸಿದ್ಧಪಡಿಸಿತು. ಇದರ ಕಾರ್ಯಾಚರಣೆ ನೆದರ್ಲ್ಯಾಂಡ್ನ ಅಲ್ಮೆಲೋದಲ್ಲಿ ನಡೆಯಬೇಕಿತ್ತು. ಡಚ್ ವೈಜ್ಞಾನಿಕರಿಗೆ ಹೊಸ ತಂತ್ರಜ್ಞಾನದ ಒಳಸುರುಳಿಗಳನ್ನು ಗುಟ್ಟಿನ ಸಂಗತಿಗಳನ್ನೂ ತಿಳಿದುಕೊಳ್ಳುವ ಅತಿ ಮಹತ್ವದ ಪರೀಕ್ಷೆ ಎದುರಾಯ್ತು. ಎಲ್ಲಕಿಂತ ಮುಖ್ಯವಾಗಿ ಈ ತಂತ್ರಜ್ಞಾನಕ್ಕೆ ಸಂಬಂಧಿಸಿದ ರಹಸ್ಯ ಮಾಹಿತಿಗಳ ಕಡತ ಕಾಗದ ಪತ್ರಗಳೆಲ್ಲ ಇದ್ದದ್ದು ಜರ್ಮನ್ ಭಾಷೆಯಲ್ಲಿ. ಆ ಹೊತ್ತಿಗೆ FDO ನಲ್ಲಿ ಜರ್ಮನ್ ಮತ್ತು ಡಚ್ ಎರಡೂ ಭಾಷೆಗಳನ್ನು ಬಲ್ಲ ಕೆಲವೇ ಕೆಲವು ವೈಜ್ಞಾನಿಕರಲ್ಲಿ A.Q. ಖಾನನೂ ಒಬ್ಬನಾಗಿದ್ದ. ಹೀಗಾಗಿ ಪರಮಸೂಕ್ಷ್ಮಮಾಹಿತಿಯಿದ್ದ ಹೊರತಾಗಿಯೂ ಡಚ್ ಸರ್ಕಾರ ಮತ್ತು FDO ಖಾನ್ ನನ್ನು ಜರ್ಮನಿಯಲ್ಲಿದ್ದ ಕಡತಗಳನ್ನು ಡಚ್ ಭಾಷೆಗೆ ಅನುವಾದಿಸುವ ಕಾರ್ಯಕ್ಕೆ ನಿಯೋಜಿಸಿತು. ಈ ಕಡತಗಳಲ್ಲಿದ್ದ ಅತ್ಯಾಧುನಿಕ ಅತಿಸುಧಾರಿತ Centrifuge ಗಳ ತಯಾರಿಕೆಯ ಮಾಹಿತಿಗಳನ್ನು ಯಥಾವತ್ತಾಗಿ ಗಿಟ್ಟಿಸಿಕೊಳ್ಳುವ ಯೋಚನೆಯೇ ಖಾನ್ನನ್ನು ತನ್ನ ಪಾಕಿಸ್ತಾನದ ಭೇಟಿಯನ್ನು ಮುಂದೂಡುವಂತೆ ಮಾಡಿತ್ತು.
ಜರ್ಮನ್ ರಹಸ್ಯ ಕಡತಗಳೆಲ್ಲ Brain Box ಹೆಸರಿನ ಅತಿ ಸಂರಕ್ಷಿತ 12 ಪೆಟ್ಟಿಗೆಗಳಲ್ಲಿ ಬಂಧಿಯಾಗಿದ್ದವು. ಈ ಪೆಟ್ಟಿಗೆಗಳನ್ನು ಮುಟ್ಟುವ ಮಾತಿರಲಿ ಅವುಗಳ ಹತ್ತಿರ ಸುಳಿಯಲೂ ಕಟ್ಟುನಿಟ್ಟಿನ ಕಣ್ಗಾವಲನ್ನು ಮೀರಬೇಕಾಗಿತ್ತು.ಆದರೆ, ಸ್ವತ: ಡಚ್ ಸರ್ಕಾರವೇ ಖಾನನ ಬೆಂಬಲಕ್ಕೆ ನಿಂತಿರುವಂತೆ, ಆತನ ಪಾಕಿಸ್ತಾನಿ ಮೂಲದ ಹೊರತಾಗಿಯೂ Brain Box ನಲ್ಲಿ ಸಂಗ್ರಹಿತ ಮಾಹಿತಿಗೆ ಮುಕ್ತ ಪ್ರವೇಶವನ್ನು ನೀಡಿತು. ಮೊದಲು ಖಾನ್ ಜರ್ಮನ್ ಕಡತಗಳನ್ನು ಅಲ್ಲಿಯೇ ಓದುವಂತೆಯು ನಂತರ ಅವುಗಳ ಹಸ್ತಲಿಖಿತ ಡಚ್ ಭಾಷಾಂತರವನ್ನು ಆತ FDO ದ ಕಛೇರಿಯನ್ನು ತಲುಪಿದ ಮೇಲೆ ಸೆಕ್ರೆಟರಿಯ ಸಹಾಯದಿಂದ ಮುದ್ರಿಸಿ ಕಳಿಸುವ ಅನುಕೂಲವನ್ನೂ ಕಲ್ಪಿಸಿತು.
ಭೂತದ ಉಚ್ಚಾಟನೆಗೆ ಮತ್ತೊಂದು ದೊಡ್ಡ ಭೂತವನ್ನೇ ಆಹ್ವಾನಿಸುವ ಡಚ್ ಸರ್ಕಾರದ ಈ ಮೂರ್ಖ ನಡೆಗೆ ಮುಂದೆ ವಿಶ್ವವೇ ನಡುಗಬೇಕಾದ ಪ್ರಸಂಗ ಮೇಲಿನ ತೆರೆ ಅಂದು ಸರಿದಿತ್ತು.
(ಸಶೇಷ..)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.