ಮಂಗಳೂರು : ನಗರದ ಕೊಡಿಯಾಲಬೈಲಿನ ಪ್ರತಿಷ್ಠಿತ ಶಾರದಾ ವಿದ್ಯಾಲಯದ ಶಾರದಾ ಮಹೋತ್ಸವದ ಆಚರಣೆಯ ಪ್ರಯುಕ್ತ ಆಯೋಜಿಸಲಾದ ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಅಂತರ್ ಶಾಲಾ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆಯನ್ನು ವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು ದ.ಕ. ಜಿಲ್ಲಾ ಉಪನಿರ್ದೇಶಕರಾದ ಶ್ರೀ ವೈ. ಶಿವರಾಮಯ್ಯ ಸಮಾರಂಭದ ಮುಖ್ಯ ಅತಿಥಿಯಾಗಿ ದೀಪ ಪ್ರಜ್ವಲನೆಯೊಂದಿಗೆ ಈ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿದರು. ಬಾಲ್ಯ ಕಾಲ ಎನ್ನುವುದು ಅತ್ಯಂತ ಮಹತ್ವಪೂರ್ಣವಾದ ಕಾಲಘಟ್ಟವಾಗಿದ್ದು, ಈ ಸಂದರ್ಭದಲ್ಲಿ ರೂಡಿಸಿಕೊಂಡ ಹವ್ಯಾಸಗಳು ನಮ್ಮ ಜೀವನ ಪೂರ್ತಿ ಇರುತ್ತದೆ. ಮಕ್ಕಳು ಕೇವಲ ಅಂಕ ಗಳಿಕೆಯ ಅಥವಾ ಬಹುಮಾನ ಗಳಿಕೆಯ ಉದ್ದೇಶವನ್ನಿಟ್ಟುಕೊಂಡು ಸ್ಪರ್ಧೆಯಲ್ಲಿ ಭಾಗವಹಿಸದೆ ಸ್ಪರ್ಧಾ ಸ್ಪೂರ್ತಿಯಿಂದ ಪಾಲ್ಗೊಳ್ಳುವುದರೊಂದಿಗೆ ತಮ್ಮ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಿಕೊಳ್ಳಬೇಕು. ಗುರು ಹಿರಿಯರೊಂದಿಗೆ ಗೌರವಭಾವದಿಂದ ಇರುವುದರ ಜೊತೆಗೆ ನಮ್ಮ ರಾಷ್ಟ್ರದ ಸಾಂಸ್ಕೃತಿಕ ಸಂಗತಿಗಳನ್ನು ಅರಿತುಕೊಳ್ಳಬೇಕೆಂಬುದಾಗಿ ತಮ್ಮ ಭಾಷಣದಲ್ಲಿ ಕಿವಿಮಾತನ್ನು ಹೇಳಿದ ಮುಖ್ಯ ಅತಿಥಿಗಳು ಸ್ಪರ್ಧಾಳುಗಳಿಗೆ ಶುಭ ಕೋರಿದರು.
ವಿದ್ಯಾರ್ಥಿಗಳು ಸತ್ಚಿಂತನೆಯೊಂದಿಗೆ ಸಾತ್ವಿಕ ಮನೋಭಾವದಿಂದ ತಮ್ಮನ್ನು ಸಮರ್ಪಿಸಿಕೊಂಡಾಗ ಅವರು ದೇಶದ ಅಮೂಲ್ಯ ಆಸ್ತಿಯಾಗಬಲ್ಲರು. ಶಾರದಾ ವಿದ್ಯಾಲಯ ಆಚರಿಸುತ್ತಿರುವ ಈ ಶಾರದಾ ಮಹೋತ್ಸವ ಪ್ರಯುಕ್ತದ ಸಾಂಸ್ಕೃತಿಕ ಸ್ಪರ್ಧೆಗಳು ಜಿಲ್ಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವೀಕರಣಕ್ಕೆ ಕಾರಣೀಭೂತವಾಗಲಿ. ನಮ್ಮ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳು ಅರಳುವುದಕ್ಕೆ ಇದೊಂದು ಮಹತ್ವಪೂರ್ಣ ವೇದಿಕೆಯಾಗಿದೆ ಎಂಬುದಾಗಿ ಸ್ಪರ್ಧಾಳುಗಳಿಗೆ ಶುಭವನ್ನು ಹಾರೈಸುತ್ತಾ ಶಾರದಾ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ವಿಶ್ವಸ್ಥರಾದ ಶ್ರೀ ಪ್ರದೀಪ ಕುಮಾರ ಕಲ್ಕೂರ ಆಶಯವನ್ನು ವ್ಯಕ್ತಪಡಿಸಿದರು.
ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ| ಎಂ.ಬಿ.ಪುರಾಣಿಕರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಪ್ರತಿಯೊಂದು ಮಗುವಿನಲ್ಲೂ ಭಗವಂತ ಇದ್ದಾನೆ. ಅದೇ ರೀತಿ ಪ್ರತಿಯೊಬ್ಬನಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಅದಕ್ಕೆ ಉತ್ತಮ ಅವಕಾಶ ದೊರೆತಾಗ ಆ ಪ್ರತಿಭೆಯು ಪ್ರಕಾಶಕ್ಕೆ ಬರುತ್ತದೆ. ಮಕ್ಕಳು ತಮ್ಮ ಅಂಕ ಗಳಿಕೆಗಷ್ಟೇ ಮಹತ್ವ ನೀಡದೆ ತಮ್ಮಲ್ಲಿರುವ ಅಂತ:ಸತ್ವವನ್ನು ಪ್ರಕಟಿಸಲು ಮುಂದಾಗಬೇಕು. ಆ ಮುಖಾಂತರ ನಮ್ಮ ರಾಷ್ಟ್ರದ ಅಮೂಲ್ಯ ನಿಧಿಗಳಾಗಿ ಬೆಳಗಬೇಕು. ನಮ್ಮ ಭಾರತೀಯ ಸಂಸ್ಕೃತಿಯ ಶ್ರೇಷ್ಠತ್ವವನ್ನು ಅರಿತುಕೊಂಡು ಅದಕ್ಕೆ ಗೌರವ ನೀಡುವ ಕಾರ್ಯಕ್ಕೆ ಮುಂದಾಗಬೇಕು. ಈ ಒಂದು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಸ್ಪರ್ಧಿಗಳು ರಾಷ್ಟ್ರದ ಉತ್ತಮ ಪ್ರತಿಭೆಗಳಾಗಿ ಗೌರವವನ್ನು ಪಡೆಯಲಿ ಎಂಬುದಾಗಿ ಪ್ರೊ| ಎಂ.ಬಿ.ಪುರಾಣಿಕರು ಶುಭ ಹಾರೈಸಿದರು.
ಶಾರದಾ ವಿದ್ಯಾಸಂಸ್ಥೆಗಳ ಉಪಾಧ್ಯಕ್ಷರಾದ ಶ್ರೀ ಕೆ.ಎಸ್.ಕಲ್ಲೂರಾಯ, ಶೈಕ್ಷಣಿಕ ಸಲಹೆಗಾರರಾದ ಡಾ| ಲೀಲಾ ಉಪಾಧ್ಯಾಯ, ಎಸ್.ಕೆ.ಡಿ.ಬಿ. ಅಸೋಶಿಯೇಶನ್ನಿನ ಕಾರ್ಯದರ್ಶಿ ಶ್ರೀ ಸುಧಾಕರ ರಾವ್ ಪೇಜಾವರ, ಶಾರದಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ಶ್ರೀ ಮಹಾಬಲೇಶ್ವರ ಭಟ್, ವಿದ್ಯಾಲಯ ಪ್ರಾಂಶುಪಾಲೆ ಶ್ರೀಮತಿ ಸುನೀತಾ ವಿ ಮಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೇದ ಘೋಷದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಿಕ್ಷಕಿ ಕು| ಶ್ರುತಿ ನಾಯಕ್ ಸ್ವಾಗತಿಸಿದರು. ಶ್ರೀಮತಿ ರಮ್ಯಾ ರೈ ವಂದನಾರ್ಪನೆಯಿತ್ತರು. ಶ್ರೀಮತಿ ಅಮಿತಾ ಪದ್ಮನಾಭ ಸಭಾ ಕಾರ್ಯಕ್ರಮ ನಿರ್ವಹಣೆಗೈದರು. ವಿದ್ಯಾಲಯದ ಉಪ-ಪ್ರಾಂಶುಪಾಲರಾದ ಶ್ರೀ ದಯಾನಂದ ಕಟೀಲ್ ಸ್ಪರ್ಧೆಗಳ ಮಾಹಿತಿ, ನಿಯಮ-ನಿಬಂಧನೆಗಳನ್ನು ಮತ್ತು ಸೂಚನೆಗಳನ್ನು ನೀಡಿದರು. ಈ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಚಿತ್ರಕಲೆ, ರಂಗೋಲಿ, ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಭಜನೆ, ಗೀತಾಕಂಠಪಾಠ, ಶಂಖನಾದ, ಭಾಷಣ ಸ್ಪರ್ಧೆಗಳು ನಡೆಯಿತು. ಶಿಶು-ಬಾಲ-ಕಿಶೋರ ಎಂಬೀ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ವಿಭಜಿಸಲಾಯಿತು. ಸುಮಾರು ೧೦೦ ಶಾಲೆಗಳಿಂದ ೧೨೫೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ. ಸ್ಪರ್ಧೆಯ ಬಳಿಕ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣಪತ್ರಗಳನ್ನು, ಅದೇ ರೀತಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.