ಮಂಗಳೂರು : ಮಂಗಳೂರಿನ ಭಗವತೀ ನಗರದಲ್ಲಿರುವ ಪ್ರತಿಷ್ಠಿತ ಮಹಾಲಸಾ ಶಿಕ್ಷಣ ಸಮಿತಿ (ರಿ.)ಯ ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯವು ತನ್ನ 40 ನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಈ ಪ್ರಯುಕ್ತ ‘ವೈಬ್ರೆಂನ್ಸ್’ ದಿ ಪ್ಯೂಜನ್ ಆಫ್ ಕಲರ್ಸ್ ಎಂಬ ಶೀರ್ಷಿಕೆಯಡಿಯಲ್ಲಿ ದಿನಾಂಕ 28-3-2018 ರಿಂದ 5 ದಿನಗಳ ಕಾಲ ವಾರ್ಷಿಕ ಚಿತ್ರಕಲಾ ಪ್ರದರ್ಶನವನ್ನು ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದೆ.
ಶಾಲೆಯ ಒಟ್ಟು 135 ವಿದ್ಯಾರ್ಥಿ ವಿದ್ಯಾರ್ಥಿನಿಯರೂ ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದು 500 ಕ್ಕೂ ಹೆಚ್ಚು ವಿವಿಧ ಪ್ರಕಾರಗಳ ಕಲಾಕೃತಿಗಳು ಪ್ರದರ್ಶಿಸಲ್ಪಡುತ್ತಿವೆ. ಅವುಗಳೆಂದರೆ – ರೇಖಾ ಚಿತ್ರಗಳು, ವಸ್ತು ಚಿತ್ರಣ, ಸ್ಥಿರಚಿತ್ರಣ, 2ಡಿ ಡಿಜೈನ್ಸ್, ಗ್ರಾಫಿಕ್ ಕಲೆ, ಸೃಜನಶೀಲ ಸಮಕಾಲೀನ ಕಲಾಕೃತಿಗಳು, ಅಮೂರ್ತಕಲೆ, ಕಿನ್ನಾಳಕಲೆ, ಜಾನಪದ – ಸಾಂಪ್ರದಾಯಿಕ ಕಲೆ, ಭಾವಚಿತ್ರ, ವ್ಯಕ್ತಿ ಚಿತ್ರಣ, ಜಾಹೀರಾತು ಕಲೆ, ಸಾಂದರ್ಭೀಕ ಚಿತ್ರಗಳು, ಪ್ರಕೃತಿ ಚಿತ್ರಗಳೂ ಸೇರಿದಂತೆ ಹತ್ತು ಹಲವು ಕಲಾ ಪ್ರಕಾರಗಳ ರಸದೌತಣವನ್ನು ಕಲಾಸಕ್ತರಿಗೆ ‘ವೈಬ್ರೆಂನ್ಸ್’ ಚಿತ್ರಕಲಾ ಪ್ರದರ್ಶನ ನೀಡಲಿದೆ.
1978 ರಲ್ಲಿ ಪ್ರಾರಂಭವಾಗಿ ಕಳೆದ 40 ವರ್ಷಗಳಿಂದ ಈ ಸಂಸ್ಥೆಯು ದ.ಕ. ಜಿಲ್ಲೆಯಲ್ಲಿಯೇ ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಏಕೈಕ ಶಿಕ್ಷಣ ಸಂಸ್ಥೆಯಾಗಿ ಕಲಾಕ್ಷೇತ್ರಕ್ಕೆ ಅವಿರತ ಸೇವೆ ಸಲ್ಲಿಸುತ್ತಾ ಬಂದಿದೆ. ಕನ್ನಡ ವಿ.ವಿ. ಹಂಪಿಯ ಅಫಿಲೇಷನ್ ನೊಂದಿಗೆ ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು ಇದರ ಆಡಳಿತಕ್ಕೊಳಪಟ್ಟು ಇದೀಗ ಪಿ.ಯು.ಸಿ ನಂತರದ 4 ವರ್ಷಗಳ ಪದವಿ ಶಿಕ್ಷಣವನ್ನು ಚಿತ್ರಕಲೆ ಮತ್ತು ಅನ್ವಯಿಕ ಕಲಾ ವಿಭಾಗದಲ್ಲಿ ನೀಡುತ್ತಿದೆ.
ಈ ಶಾಲೆಯಲ್ಲಿ ನುರಿತ, ಅನುಭವೀ ಉಪನ್ಯಾಸಕರಿದ್ದು, ಇಲ್ಲಿ ಪದವಿ ಪಡೆದ ನೂರಾರು ವಿದ್ಯಾರ್ಥಿಗಳು ರಾಜ್ಯ, ಹೊರರಾಜ್ಯ ಮಾತ್ರವಲ್ಲದೆ ವಿದೇಶಗಳಲ್ಲೂ ಕಲಾಕ್ಷೇತ್ರದಲ್ಲಿ ಸ್ವತಂತ್ರವಾಗಿ ದುಡಿಯುತ್ತಿದ್ದಾರೆ ಮತ್ತು ನೂರಾರು ಕಲಾ ಶಿಕ್ಷಕರನ್ನೂ ರೂಪಿಸಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಗೌರವಕ್ಕೆ ಮಹಾಲಸಾ ಶಿಕ್ಷಣ ಸಂಸ್ಥೆಯು ಪಾತ್ರವಾಗಿದೆ. ಪ್ರತೀ ವರ್ಷ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಇಲ್ಲಿನ ವಿದ್ಯಾರ್ಥಿಗಳು ನಿರಂತರವಾಗಿ ಪಡೆಯುತ್ತಿರುವುದು ಇಲ್ಲಿ ನೀಡಲಾಗುತ್ತಿರುವ ಉತ್ತಮ ಮಾರ್ಗದರ್ಶನಕ್ಕೆ ಹಿಡಿದ ಕನ್ನಡಿಯಾಗಿದೆ.
ಪ್ರಸ್ತುತ ಸಂಸ್ಥೆಯು 40ನೇಯ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿಸಲು ಕಲಾಪ್ರದರ್ಶನದೊಂದಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ದಿನಾಂಕ 28-3-2018 ರಂದು ಬೆಳಿಗ್ಗೆ 11 ಗಂಟೆಗೆ ಹಾಲಿ ಪ್ರತಿಪಕ್ಷದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರಿಂದ ಉದ್ಘಾಟನೆಗೊಳ್ಳಲಿರುವ ‘ವೈಬ್ರೆಂನ್ಸ್’ ವಾರ್ಷಿಕ ಕಲಾ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಅಂದು ಕಲಾಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಐವರು ಸಾಧಕರಿಗೆ ಸನ್ಮಾನ ಸೇರಿದಂತೆ ಶಾಲಾ ವಾರ್ಷಿಕ ಸಾಧನೆ ಕುರಿತಾದ ಪುಸ್ತಕ ಹಾಗೂ ಶಾಲೆಯಲ್ಲಿ 2018 ನೇ ಸಾಲಿನಲ್ಲಿ ಏರ್ಪಡಿಸಲಾದ ಕಲಾ ಶಿಭಿರಗಳು ಮತ್ತು ಕಾರ್ಯಗಾರಗಳ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದು. ಶಾಲೆಯ ವೆಬ್ಸೈಟ್ www.mahalasacollegeofvisualart.com ಅನ್ನು ಈ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ.ತಾರನಾಥ ಪೈಯವರಿಂದ ಅಧಿಕೃತವಾಗಿ ಲೋಕಾರ್ಪಣೆ ಮಾಡಿಸುವುದೂ ಒಳಗೊಂಡಂತೆ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಪಡೆದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಅತಿಥಿಗಣ್ಯರು ವಿದ್ಯಾರ್ಥಿಗಳಿಗೆ ವಿತರಿಸಲಿರುವರು. ನಂತರ ಅಂದು ಅಪರಾಹ್ನ 2 ಗಂಟೆಯಿಂದ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.
‘ವೈಬ್ರೆಂನ್ಸ್’ ಚಿತ್ರಕಲಾ ಪ್ರದರ್ಶನವು ದಿನಾಂಕ 28-3-2018 ರಿಂದ ದಿ. 2-4-2018 ರ ವರೆಗೆ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.