ಮಂಗಳೂರು: ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವ ಅನಂತ ವೈಭವದಿಂದ ಕೂಡಿದೆ. ಇಲ್ಲಿ ನಾಗಬನ ಇದೆ. ಅನಂತೇಶ್ವರ ದೇವರು ಇದ್ದಾರೆ. ಉಡುಪಿ ಮತ್ತು ಕುಡುಪು ಈ ವಿಚಾರದಲ್ಲಿ ಸಮೀಪದಲ್ಲೇ ಇವೆ. ಉಡುಪಿಯಲ್ಲೂ ಅನಂತೇಶ್ವರ ಇದ್ದಾನೆ. ಕುಡುಪುನಲ್ಲಿ ಅನಂತ ಪದ್ಮನಾಭ ಇದ್ದಾನೆ. ಸುಬ್ರಹ್ಮಣ್ಯ ನಾಗಕ್ಷೇತ್ರವಾಗಿದೆ. ಹರಿಹರ ಶಿವ, ಅನಂತೇಶ್ವರ ಎಲ್ಲರನ್ನೂ ಪೂಜಿಸುತ್ತೇವೆ. ಕುಡುಪು ನಾಗನ ಸಾನಿಧ್ಯ ಇರುವ ಕ್ಷೇತ್ರ. ಈ ಕ್ಷೇತ್ರದ ಮೇಲೆ ನಂಬಿಕೆ ವಿಶ್ವಾಸ ಇದ್ದರೆ ಯಶಸ್ಸು, ಸಮೃದ್ಧಿ ಸಿಗಬಹುದು ಎಂದು ಪೇಜಾವರ ವಿಶ್ವೇಶತೀರ್ಥ ಪಾದಂಗಳ ಸ್ವಾಮೀಜಿಯವರು ಹೇಳಿದರು.
ಅವರು ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಸಮಾರೋಪ ದಿನವಾದ ಭಾನುವಾರ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮತನಾಡಿದರು.
ಹಿಂದೂ ಧರ್ಮದವರು ದೇವತೆಗಳನ್ನು ನಂಬುವವರು. ಕ್ರೈಸ್ತ ಮತ್ತು ಇಸ್ಲಾಂ ಧರ್ಮ ದೇವರು ಒಬ್ಬನೆ ಎಂದು ಸಾರುತ್ತದೆ. ಹಿಂದೂ ಧರ್ಮದಲ್ಲಿ ಮಾತ್ರ ಹಲವು ದೇವರುಗಳು ಇದ್ದಾರೆ ಎನ್ನುತ್ತಾರೆ. ಇದು ತಪ್ಪು. ಸನಾತನ ಧರ್ಮದಲ್ಲೂ ಇರುವುದು ದೇವರು ಒಬ್ಬನೇ. ಒಬ್ಬನೇ ದೇವರಿಗೆ ಹಲವು ನಾಮಗಳಿವೆ ಅಷ್ಟೇ. ಏಕದೇವತಾವಾದವನ್ನು ವೈದಿಕ ಹಿಂದೂ ಧರ್ಮದಿಂದ ಪಡೆಯಲಾಗಿದೆ. ಭಗವಂತನನ್ನು ಯಾವ ಹೆಸರಿನಿಂದಲೂ ಕರೆಯಬಹುದು. ಭಗವಂತನ ಆಕಾರದ ಬಗ್ಗೆ ಹೆಸರಿನ ವಿಚಾರಲ್ಲಿ ಚರ್ಚೆಗೆ ಅವಕಾಶ ಇರುವುದಿಲ್ಲ. ಈ ಹಿಂದೆ ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯರು ಏಕ ದೇವರ ಬಗ್ಗೆ ಪ್ರತಿಪಾದಿಸಿದ್ದಾರೆ. ಪರಮಾತ್ಮನ ಸಂದೇಶವನ್ನು ಉಪನಿಷತ್ನ ಮೂಲಕ ನೀಡಲಾಗಿದೆ. ರಾಷ್ಟ್ರದ ಕಾನೂನು ಮೀರಿ ರಾಷ್ಟ್ರಧ್ವಜವನ್ನು ಗೌರವಿಸುವವರು ಹೇಗೆ ರಾಷ್ಟ್ರಭಕ್ತನಾಗುವುದಿಲ್ಲವೋ ಹಾಗೇ ಧಾರ್ಮಿಕ ಕಾನೂನು ಮೀರಿ ವೈದಿಕ ಧರ್ಮ ಅನುಸರಿಸಿದರೆ ಧರ್ಮ ಭಕ್ತನಾಗುವುದಿಲ್ಲ. ವೈದಿಕ ಧರ್ಮದ ನಿಯಮಗಳನ್ನು ಅನುಸರಿಸಿ ದೇವರ ಪಾತ್ರರಾಗಬೇಕು. ನಾಗ ಸಾನಿಧ್ಯವಿರುವ ಕುಡುಪು ಅನಂತ ಪದ್ಮನಾಭ ಕ್ಷೇತ್ರ ಮಾದರಿಯಾಗಿ ಬೆಳೆದಿದೆ ಎಂದು ಅವರು ಶುಭ ಹಾರೈಸಿದರು.
ಆಶೀರ್ವಚನ ನೀಡಿದ ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಮಠದ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಭಗವಂತನನ್ನು ಅನಂತ ಎಂದು ಸ್ಮರಿಸಿದರೆ ಬದುಕು ದುರಂತವಾಗುವುದಿಲ್ಲ. ಅದಕ್ಕಾಗಿ ಅನಂತನ ಸ್ಮರಣೆ ಮಾಡಬೇಕು ಎಂದು ಅವರು ತಿಳಿಸಿದರು.
ಶ್ರೀ ಅನಂತ ಪದ್ಮನಾಭ ದೇವಸ್ಥಾನ ವಾಸ್ತುಬದ್ಧ ರೀತಿಯಲ್ಲಿ ನಿರ್ಮಾಣಗೊಂಡಿದೆ. ಅದ್ಭುತ ಕ್ಷೇತ್ರವಾಗಿ ಮೂಡಿಬಂದಿದೆ ಎಂದವರು ತಿಳಿಸಿದರು.
ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಧಾರ್ಮಿಕ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ್ಆಳ್ವ, ಕರ್ನಾಟಕ ಬ್ಯಾಂಕ್ನ ಆಡಳಿತ ನಿರ್ದೇಶಕ ಎಂ.ಎಸ್.ಮಹಾಬಲೇಶ್ವರ, ಮಾಜಿ ಸಚಿವ ನಾಗರಾಜ ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ, ಮುಕ್ತೇಸರ ಭಾಸ್ಕರ ಕೆ., ಕಾರ್ಯನಿರ್ವಹಣಾಧಿಕಾರಿ ಅರವಿಂದ ಎ ಸುತಗುಂಡಿ, ಚಂದ್ರಹಾಸ ರೈ, ಕೆ. ಸುದರ್ಶನ ಕುಡುಪು, ಕೆ. ನರಸಿಂಹ ತಂತ್ರಿ, ಕೆ. ಕೃಷ್ಣರಾಜ ತಂತ್ರಿ, ಮನೋಹರ್ ಭಟ್, ಅಚ್ಯುತ, ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಅನುವಂಶಿಕ ಆಡಳಿತ ಮುಕ್ತೇಸರ ಕೆ. ನರಸಿಂಹ ತಂತ್ರಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ಕೆ.ಕೃಷ್ಣರಾಜ ತಂತ್ರಿ ಅವರನ್ನು ಸನ್ಮಾನಿಸಲಾಯಿತು. ಶರತ್ ಶೆಟ್ಟಿ ಪಡು ಪ್ರಾರ್ಥಿಸಿದರು. ಕೃಷ್ಣರಾಜ ತಂತ್ರಿ ಸ್ವಾಗತಿಸಿ ಪ್ರಸ್ತಾವನೆಗೈದರು. ವಾಸುದೇವರಾವ್ ಕುಡುಪು ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.