ಕಲ್ಲಡ್ಕ : ಮಕ್ಕಳ ಮಾನಸಿಕ, ಬೌದ್ಧಿಕ ವಿಕಸನಕ್ಕೆ ಪೂರಕವಾಗಿ ಶಾರೀರಿಕ ಚಟುವಟಿಕೆಗಳನ್ನು ಹಾಗೂ ಪರಿಸರದ ಬಗ್ಗೆ ಉತ್ತಮ ಭಾವನೆಗಳನ್ನು ಜಾಗೃತ ಮಾಡುವ ಹೊರಾಂಗಣ ಚಟುವಟಿಕೆಗಳು ಅವಶ್ಯಕವಾಗಿದ್ದು, ’ಕಿಷ್ಕಿಂಧಾ’ ಆಟಿಕಾವನ ಮಗುವಿನ ಸೃಜನಾತ್ಮಕ ಚಟುವಟಿಕೆಗಳಿಗೆ ಪೂರಕವಾಗಿ ನಿರ್ಮಿಸಲಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನೂತನವಾಗಿ ನಿರ್ಮಿಸಲಾದ ಮಕ್ಕಳ ಆಟಿಕಾ ಉದ್ಯಾನವನದ ಉದ್ಘಾಟನಾ ಸಂದರ್ಭದಲ್ಲಿ ಹೇಳಿದರು.
ಮಾರ್ಚ್ 13 ರಂದು ಲೋಕಾರ್ಪಣೆ ಮಾಡಲಾದ ಆಟಿಕಾವನದಲ್ಲಿ ತೆರೆದಿಡಲಾದ ಕರಿಹಲಗೆ ಗೋಡೆಯಲ್ಲಿ ಮಗು ಯಾವಾಗ ಬೇಕಾದರೂ ಚಿತ್ರ ಮಾಡುವ ಸೃಜನಶೀಲತೆಗೆ ಅವಕಾಶಕ್ಕಾಗಿ ವಿಕಸನದ ಭಿತ್ತಿ ಪತ್ರ ನಿರ್ಮಿಸಲಾಗಿದೆ. ’ವಿರಚನ’ ಕುಟೀರದಲ್ಲಿ ಮಣ್ಣಿನಲ್ಲಿ ಆಟವಾಡುವ ಆಸಕ್ತಿಗೆ ಪೂರಕವಾಗಿ, ಮೂರ್ತಿ ರಚನೆ, ಮಣ್ಣಿನ ಮಾದರಿಗಳನ್ನು ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಶಾರೀರಿಕ ವಿಕಸನಕ್ಕೆ ಬೇಕಾದ ಭಾವನಾತ್ಮಕ ಸಂಗತಿಗಳನ್ನು ಇಲ್ಲಿ ಅಳವಡಿಸಲಾಗಿದೆ. ನೇತ್ರಾವತಿ ಜಲಧಾರೆಯನ್ನು ನಿರ್ಮಿಸಿದ್ದು, ನೀರಿನ ಅವಶ್ಯಕತೆಯನ್ನು ತಿಳಿದುಕೊಳ್ಳುವ ಹಾಗೆ ಮಾಡಲಾಗಿದೆ. ತೂಗುಸೇತುವೆ ನಿರ್ಮಾಣ ವಿಶೇಷ ಆಕರ್ಷಣೆಯಾಗಿದ್ದು, ಗಿರೀಶ್ ಭಾರದ್ವಾಜ್ ಮಾರ್ಗದರ್ಶನದಲ್ಲಿ ರೂಪಿಸಲಾಗಿದೆ ಎಂದು ವಿವರಿಸಿದರು.
ಹಲವು ಭಾವನಾತ್ಮಕ ಸಂಗತಿಗಳನ್ನು ಜೋಡಿಸಿ ಆಟಿಕವನವನ್ನು ನಿರ್ಮಾಣ ಮಾಡಲಾಗಿದೆ. ಮಗು ಎಲ್ಲಾ ಹಂತದಲ್ಲೂ ಬೆಳೆಯಬೇಕು. ಸಂತೋಷದಿಂದ ನಲಿನಲಿದು ಕಲಿಯಬೇಕು. ಆನಂದದ ಕಲಿಕೆಗೆ ಪೂರಕವಾಗುವಂತೆ ಎಳೆಯ ವಯಸ್ಸಿನ ಮಕ್ಕಳ ಮೆದುಳಿನ ಬೆಳವಣಿಗೆಗೆ ಪೂರಕವಾಗಿ ವಿವಿಧ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಮಗುವಿನ ಮನಸ್ಸನ್ನು ಅರಳಿಸುವ ಶಿಕ್ಷಣ ನೀಡುವುದು ಅವಶ್ಯವಾಗಿದೆ ಎಂದು ತಿಳಿಸಿದರು.
ಶ್ರೀರಾಮ ವಿದ್ಯಾಕೇಂದ್ರದ ಆಟಿಕಾವನದಲ್ಲಿ ವಿಶೇಷವಾಗಿ ನಿರ್ಮಿಸಲಾದ ’ತೂಗುಸೇತುವೆ’ಯನ್ನು ಪದ್ಮಶ್ರೀ ಪುರಸ್ಕೃತ ತೂಗುಸೇತುವೆಯ ಸರದಾರ ಗಿರೀಶ್ ಭಾರದ್ವಾಜ್ ಉದ್ಘಾಟಿಸಿದರು. ಮಕ್ಕಳ ಸೃಜನಶೀಲ ಚಟುವಟಿಕೆಗಳಿಗೆ ಅವಕಾಶ ನೀಡುವ ’ವಿಕಸನದ ಭಿತಿ’ಯನ್ನು ಉದ್ಯಮಿ ರಾಜೇಂದ್ರ ಮೈಸೂರು ಚಿತ್ರ ಬಿಡಿಸುವ ಮೂಲಕ ಅನಾವರಣಗೊಳಿಸಿದರು. ಮಣ್ಣಿನ ಮಡಿಕೆ-ಮಾದರಿಗಳನ್ನು ತಯಾರಿಸುವ ’ವಿರಚನ’ ಕುಟೀರಕ್ಕೆ ಉದ್ಯಮಿ ವಸಂತ ಶೆಟ್ಟಿ ಚಾಲನೆ ನೀಡಿದರು. ನಾಮಫಲಕವನ್ನು ಲಯನ್ ಅರುಣ್ ಶೆಟ್ಟಿ ಅನಾವರಣಗೊಳಿಸಿದರು. ಬಟನ್ ಅದುಮುವ ಮೂಲಕ ಉದ್ಯಮಿ ಪ್ರಕಾಶ್ ಶೆಟ್ಟಿ ಬೆಂಗಳೂರು ’ನೇತ್ರಾವತಿ ಜಲಧಾರೆ’ಯನ್ನು ಹರಿಸಿದರು. ಮಕ್ಕಳ ಆಟಕ್ಕಾಗಿ ನಿರ್ಮಿಸಲಾದ ವೈವಿಧ್ಯಮಯ ಉಯ್ಯಾಲೆಗಳಿಗೆ ವೀಣಾ ಶಶಿಧರ ಮಾರ್ಲ ಚಲಾವಣೆ ಮಾಡಿದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಸುಧಾಕರ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ರಮಾನಂದ ಶೆಟ್ಟಿ, ಡಾ| ಕಮಲಾ ಪ್ರಭಾಕರ ಭಟ್, ಚೆನ್ನಪ್ಪ ಕೋಟ್ಯಾನ್, ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಮುಖ್ಯೋಪಾಧ್ಯಾಯ ರವಿರಾಜ್, ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿಧರ ಮಾರ್ಲ, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಜಯರಾಮ ರೈ, ಪ್ರೌಢಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ ಪ್ರಭು ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.