ಉತ್ತರ ಪ್ರದೇಶದಲ್ಲಿ ಕಮಲ ಅರಳಿದೆ. ಅಪ್ಪ ಮಕ್ಕಳ ಜಗಳದ ಪರಿಣಾಮವೋ ಅಥವಾ ಯುವರಾಜ ರಾಹುಲ್ ಅವರೊಂದಿಗೆ ಅಖಿಲೇಶ್ ಯಾದವ್ ಕೈಕುಲುಕಿದ ಪರಿಣಾಮವೋ ಕಮಲ ಅರಳಿದೆ. ಕಮಲದ ನಗುವಿಗೆ ಕಾರಣಗಳು ಹಲವು.
ಕಾಂಗ್ರೆಸ್, ಬಿಎಸ್ಪಿ ಹಾಗೂ ಎಸ್ಪಿಗಳ ಜಾತಿ ರಾಜಕಾರಣ, ಭ್ರಷ್ಟಾಚಾರ, ಮಾಫಿಯಾಗಳ ತೋಳ್ಬಲಕ್ಕೆ ಜನ ರೋಸಿ ಹೋಗಿದ್ದರು. ಅಭಿವೃದ್ಧಿ ಎಂಬುದು 14 ವರ್ಷಗಳಿಂದ ಮರೀಚಿಕೆಯಾಗಿತ್ತು. ಪರಿಣಾಮ ಕಮಲದತ್ತ ಜನ ಒಲವು ತೋರಿದರು.
ಅಮೇಥಿ ಹಾಗೂ ರಾಯಬರೇಲಿಯಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕಿದ್ದು, ಸೋನಿಯಾ ಹಾಗೂ ರಾಹುಲ್ ಬಗೆಗಿನ ಜನಾಭಿಪ್ರಾಯ ಕುರಿತು ಸ್ಪಷ್ಟ ಸಂದೇಶ ನೀಡಿದಂತಾಗಿದೆ. ಜಾತಿ ಮತಗಳ ಲೆಕ್ಕಾಚಾರದಲ್ಲೇ ಚುನಾವಣೆ ಫಲಿತಾಂಶ ನಿರೀಕ್ಷಿಸುತ್ತಿದ್ದ ಕಾಂಗ್ರೆಸ್ಗೆ ಇದೀಗ ಬಹುದೊಡ್ಡ ಪೆಟ್ಟು ಬಿದ್ದಿದೆ. ಮೋದಿ ಅವರ ಅಭಿವೃದ್ಧಿ ಮಂತ್ರಕ್ಕೆ ಜನ ಮನ್ನಣೆ ದೊರಕಿದೆ ಎನ್ನಬಹುದು.
ಅತಿ ಚಿಕ್ಕ ವಯಸ್ಸಿನ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಅಖಿಲೇಶ್ ಯಾದವ್ , ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ್ದು ಹಾಗೂ ಕೌಟುಂಬಿಕ ಕಲಹಗಳ ಪರಿಣಾಮ ಸೋಲು ನಿರೀಕ್ಷಿತ ಎಂದುಕೊಂಡಿದ್ದರು. ಅದರ ಪರಿಣಾಮವೇ ಯುವರಾಜ ರಾಹುಲ್ ಕೈ ಹಿಡಿಯಲು ಮುಂದಾದರು. ಆದರೆ ಕೇಂದ್ರದಲ್ಲಿ ಯುಪಿಎ ಇದ್ದಾಗ ಕೈ ಗಳೆಲ್ಲ ಭ್ರಷ್ಟಾಚಾರದಲ್ಲಿ ಮುಳುಗೆದ್ದಿವೆ ಎಂಬ ಸತ್ಯವನ್ನು ಅವರು ಧಿಕ್ಕರಿಸಿ, ತಮ್ಮ ಸೋಲನ್ನು ತಾವೇ ಮೊದಲು ಒಪ್ಪಿಕೊಂಡು ಬಿಟ್ಟರು.
ಅಲ್ಲದೇ ಕೊನೇ ಘಳಿಗೆಯಲ್ಲಿ ಜಾತ್ಯತೀತ ನೆಪದಲ್ಲಿ ಮತ್ತಷ್ಟು ಬೆತ್ತಲಾದರು. ಕೋಮುಶಕ್ತಿಗಳ ವಿರುದ್ಧ ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂದು ಕರೆ ಕೊಡುವ ಮೂಲಕ ಬಿಎಸ್ಪಿಯ ಮಾಯಾವತಿಯವರೊಂದಿಗೂ ಕೈ ಜೋಡಿಸುವ ಒಲವು ತೋರಿಸಿದರು. ಹೀಗೇ ಜಾತಿ, ಮತ, ಧರ್ಮಗಳ ಲೆಕ್ಕಾಚಾರದಲ್ಲೇ ಕಾಲ ಕಳೆದ ಅಖಿಲೇಶ್ಗೆ ಅಭಿವೃದ್ಧಿಯ ಮಂತ್ರವನ್ನು ಹತ್ತಿಕ್ಕಲು ಸಾಧ್ಯವೇ ಆಗಲಿಲ್ಲ.
ಇನ್ನು ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ, ಮಾಯಾವತಿ ದೇವಿಯವರು ಬಟನ್ ಒತ್ತಿದ್ದೆಲ್ಲ ಬಿಜೆಪಿಗೆ ವೋಟ್ ಹೋಗಿವೆ ಎಂಬ ಬಾಲಿಶ ಹೇಳಿಕೆ ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೆಲವು ಸೋಲುಗಳನ್ನೂ ಪ್ರಾಮಾಣಿಕವಾಗಿ ಸ್ವೀಕರಿಸುವ ಸಹೃದಯ ಇಲ್ಲದವರನ್ನು ಜನ ಬೆಂಬಲಿಸುವುದಾದರೂ ಹೇಗೇ? ಅದಕ್ಕೇ ಜಾತಿ ಕಾರ್ಡ್ ಮುಂದುಮಾಡಿ ರಾಜಕೀಯ ಚದುರಂಗದಾಟ ಆಡುತ್ತಿದ್ದ ಮಾಯಾವತಿ ಅವರಿಗೆ ಜನ ಬರೋಬ್ಬರಿ ಉತ್ತರ ನೀಡಿದ್ದಾರೆ ಎನ್ನಬಹುದು.
ಕಮಲ ಅರಳಲು ಸಹಕರಿಸಿದ ಅಂಶಗಳು
ಕೇವಲ ಉತ್ತರ ಪ್ರದೇಶವಲ್ಲದೇ ಪಂಚರಾಜ್ಯಗಳಲ್ಲಿ ಬಿಜೆಪಿ ಅಲೆ ಭರ್ಜರಿ ಬೀಸಿದೆ. ಉತ್ತರಾಖಂಡ್ನಲ್ಲಿ ಬಹುಮತ ಪಡೆದ ಕಮಲ, ಗೋವಾ ಹಾಗೂ ಮಣಿಪುರದಲ್ಲೂ ಅಧಿಕಾರ ರಚಿಸಲು ಸಹಕರಿಸುವ ಸನಿಹದಲ್ಲಿದೆ. ಕಮಲದ ಈ ವಿಜಯಕ್ಕೆ ಕಾರಣಗಳು ಹಲವು.
ನೋಟು ಅಮಾನ್ಯೀಕರಣ
ವಿಪಕ್ಷಗಳೆಲ್ಲ ಅದೆಷ್ಟೇ ಬೊಬ್ಬೆ ಹೊಡೆದರೂ, ರಾಹುಲ್ ಸ್ವತಃ ಕ್ಯೂನಲ್ಲಿ ನಿಂತಾಗಲಿ, ಅಂಗಿಯ ಜೇಬು ಹರಿದಂತೆ ನಟಿಸಿದರೂ ಜನರನ್ನು ಮೂರ್ಖ ಮಾಡಲು ಸಾಧ್ಯವಾಗಲಿಲ್ಲ. ಕಪ್ಪು ಕುಳಗಳ ವಿರುದ್ಧ ಸಮರ ಸಾರಿದ ಮೋದಿ ಅವರು ನಿಜಕ್ಕೂ ಜನ ಸಾಮಾನ್ಯನ ಹೃದಯ ಗೆದ್ದಿದ್ದರು. ಭ್ರಷ್ಟಾಚಾರದಿಂದ ನರಳಿ ಹೋಗಿದ್ದ ಭಾರತ ಅರಳಲು ಮೋದಿ ಅವರ ಜನಪರ ಯೋಜನೆ, ಯೋಚನೆಗಳೇ ಕಾರಣ. ಸ್ವಚ್ಛ ಭಾರತ, ಕಾಂಗ್ರೆಸ್ ಮುಕ್ತ ಭಾರತ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಕನಸುಗಳನ್ನು ಬಿತ್ತುವ ಮೂಲಕ ದೇಶದ ಆರ್ಥಿಕಾಭಿವೃದ್ಧಿಗೂ ಒತ್ತು ನೀಡಿದ್ದು ಗಮನಾರ್ಹ.
ಅಭಿವೃದ್ಧಿ ಮಂತ್ರ
ಯಾವುದೇ ಜಾತಿ, ಮತ, ಧರ್ಮದ ಗೊಡವೆಗೆ ಹೋಗದ ಮೋದಿ ಅವರು, ಅಪ್ಪಟ ಅಭಿವೃದ್ಧಿಗೆ ಆದ್ಯತೆ ನೀಡಿದ್ದು ಫಲ ನೀಡಿದೆ ಎನ್ನಬಹುದು. ಬಿಜೆಪಿ ಎಂದರೆ ಹಿಂದುತ್ವ, ರಾಮ ಮಂತ್ರ ಜಪ ಎಂಬ ಮಾತುಗಳಿಗೆ ಅಪವಾದ ಎಂಬಂತೆ ಮೋದಿ ಜನಮನ್ನಣೆ ಗಳಿಸಿದ ಪರಿಣಾಮ ಕಮಲ ಅರಳಿದೆ.
ವಿದೇಶ ನೀತಿ
ಜಾಗತಿಕ ಮಟ್ಟದಲ್ಲಿ ಮೋದಿ ಅವರ ಚಾಣಕ್ಯ ನೀತಿ, ಭಯೋತ್ಪಾದನೆ ವಿರುದ್ಧ ದಿಟ್ಟ ಹೆಜ್ಜೆ, ಸರ್ಜಿಕಲ್ ಸ್ಟ್ರೈಕ್ನಂತಹ ಧೈರ್ಯ ತೋರುವ ಧೀಮಂತ ನಾಯಕ ಜನರ ಆಶಾಕಿರಣವಾಗಿ ಕಂಡದ್ದು ಸುಳ್ಳಲ್ಲ. ಸ್ನೇಹಕ್ಕೂ ಬದ್ಧ, ಯುದ್ಧಕ್ಕೂ ಸಿದ್ಧ ಎಂಬ ನೀತಿ ಪ್ರಶಂಸೆಗೆ ಪಾತ್ರವಾಗಿದೆ. ಅಮೆರಿಕಾ, ಚೀನಾ, ಪಾಕ್ಗಳಿಗೆ ಸಂದರ್ಭಕ್ಕನುಗುಣವಾಗಿ ತಿರುಗೇಟು ನೀಡಿರುವ ಭಾರತದ ವಿದೇಶಾಂಗ ನೀತಿ ಸ್ವಾಗತಾರ್ಹ. ಭವ್ಯ ಭಾರತದ ಕನಸು ಕಂಡ ಮನಸುಗಳಿಗೆ ಹುಮ್ಮಸ್ಸು ತುಂಬುವ ಅಗಾಧ ಶಕ್ತಿ ಮೋದಿಯಲ್ಲಿ ಜನ ಕಂಡ ಪರಿಣಾಮ ಕಮಲ ಅರಳಿದೆ.
ಭ್ರಷ್ಟಾಚಾರ ರಹಿತ ಆಡಳಿತ
ಆಧುನಿಕ ಭಾರತದಲ್ಲಿ ಡಿಜಿಟಲ್ ಕಲ್ಪನೆ ಮೂಡಿಸಿದ್ದೂ ಅಲ್ಲದೇ, ಅದನ್ನೇ ದಿನನಿತ್ಯದ ಜೀವನವನ್ನಾಗಿ ಮಾಡುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ನೇರ ಪಾವತಿ, ನೇರ ನಗದು, ನೇರ ಹಣ ವರ್ಗಾವಣೆ ಹೀಗೇ ಎಲ್ಲವನ್ನೂ ನೇರವಾಗಿಯೇ ಮಾಡಿದ ಮೋದಿ ಅವರನ್ನು ಜನ ನಂಬಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಭರವಸೆಯನ್ನು ಉಳಿಸಿಕೊಂಡ ಬಿಜೆಪಿ ಸರ್ಕಾರದ ಕಾರ್ಯವೈಖರಿಯನ್ನು ಮೆಚ್ಚಿದ್ದಾರೆ.
ಭ್ರಷ್ಟಾಚಾರ, ಗೂಂಡಾಗಿರಿ, ಮಾಫಿಯಾ, ಭಯೋತ್ಪಾದನೆಗಳಿಂದ ದೇಶ ತತ್ತರಿಸಿ ಹೋಗಿದೆ. ಇವೆಲ್ಲ ಅಪಸವ್ಯಗಳಿಗೂ ತಿಲಾಂಜಲಿ ನೀಡುವಲ್ಲಿ ಮೋದಿ ಸರ್ಕಾರ ಬದ್ಧತೆ ತೋರಿಸಿದೆ. ರಾಮ ಮಂದಿರ, ಹಿಂದುತ್ವ, ಕೋಮುವಾದಿ ಮುಂತಾದ ವಿಷಯಗಳನ್ನೂ ಮೀರಿ ಕಮಲ ಅರಳಿ ನಿಂತಿರುವುದು ನಿಜವಾದ ಪ್ರಜಾಪ್ರಭುತ್ವದ ಜೀವಂತಿಕೆಗೆ ಸಾಕ್ಷಿ.
ಕವಿಯ ಆಶಯ
ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ
ಆಗು ನೀ ಅನಿಕೇತನ !!
ಎಂಬ ರಸಋಷಿಯ ಆಶಯದಂತೆ ಆಡಳಿತ ನೀಡುತ್ತಿರುವ ಮೋದಿ ಅವರಿಗೆ ದೇಶಾದ್ಯಂತ ಜನ ಬೆಂಬಲವಿದೆ ಎಂಬುದಕ್ಕೆ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶವೇ ನಿದರ್ಶನ. ಜಗದಾದ್ಯಂತ ಭಾರತ ಪ್ರಕಾಶಿಸಲಿ ಎಂಬುದೇ ಸರ್ವರ ಸದಾಶಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.