ಕಲ್ಲಡ್ಕ: ಸಂಸ್ಕೃತ ಸಾಹಿತ್ಯ ಸಾಗರದಂತೆ. ಆಳಕ್ಕೆ ಇಳಿದಾಗ ಮುತ್ತು ರತ್ನಗಳಂತಿರುವ ಜ್ಞಾನ ಸಂಪತ್ತು ಲಭಿಸುತ್ತದೆ ಎಂದು ಒಡಿಯೂರು ಕ್ಷೇತ್ರದ ಸಾಧ್ವಿ ಮಾತಾನಂದಮಯಿ ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಂಸ್ಕೃತ ಭಾರತೀ ಕರ್ನಾಟಕ ಇದರ ವತಿಯಿಂದ ಏರ್ಪಡಿಸಲಾದ ಸಂಸ್ಕೃತ ಶಿಕ್ಷಕ ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಸಂಸ್ಕೃತ ಕಠಿಣ ಭಾಷೆಯಲ್ಲ, ಎಲ್ಲರಿಗೂ ಕಲಿಯುವ ಅವಕಾಶ ಸಿಕ್ಕಿಲ್ಲ. ವೈದಿಕ ಸಾಹಿತ್ಯಗಳು ಕಾವ್ಯಗಳನ್ನು ಅಧ್ಯಯನ ಮಾಡಿದಾಗ ಸಂಸ್ಕೃತ ಜನಸಾಮಾನ್ಯರ ಭಾಷೆಯಾಗಿದ್ದು, ಕಾಲಕ್ರಮೇಣ ರಾಜಾಶ್ರಯವಿಲ್ಲದ ಕಾರಣ ಸಂಸ್ಕೃತಕ್ಕೆ ಹಿನ್ನಡೆಯಾಯಿತು. ಸಂಸ್ಕೃತ ಸಂಸ್ಕೃತಿಯ ಭಾಷೆಯಾಗಿದ್ದು ಎಲ್ಲರಿಗೂ ಕಲಿಯುವ ಅವಕಾಶ ಆಗಬೇಕು. ಶಿಕ್ಷಣದಲ್ಲಿಯೂ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಆಳ್ವಾಸ್ನಲ್ಲಿ ಸಂಸ್ಕೃತ ಅಧ್ಯಯನ ಕೇಂದ್ರ:
ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಮುಂದಿನ ವರ್ಷದಿಂದ ಸಂಸ್ಕೃತ ಅಧ್ಯಯನ ಕೇಂದ್ರವನ್ನು ತೆರೆಯಲಾಗುವುದು ಹಾಗೂ ಆಳ್ವಾಸ್ ನುಡಿಸಿರಿಯಲ್ಲಿಯೂ ಸಂಸ್ಕೃತ ಸಾಹಿತ್ಯ ಗೋಷ್ಠಿಗೆ ಅವಕಾಶ ನೀಡಲಾಗುವುದು ಎಂದು ಆಳ್ವಾಸ್ ಸಂಸ್ಥೆಯ ಡಾ| ಮೋಹನಆಳ್ವ ಶಿಬಿರವನ್ನು ಉದ್ಘಾಟಿಸಿ ಹೇಳಿದರು.
ಸಂಸ್ಕೃತ ಭಾರತದ ಭಾಷೆಗಳ ತಾಯಿ ಸ್ಥಾನದಲ್ಲಿದ್ದು ಸಂಸ್ಕೃತದ ಮೂಲಕ ಭಾರತದ ಜ್ಞಾನ ಪರಂಪರೆ ಬೆಳೆದುಬಂದಿದೆ. ಸಂಸ್ಕೃತವನ್ನು ಕೇವಲ ಭಾಷೆಯಾಗಿ ನೋಡದೆ ಜ್ಞಾನ, ಸಂಸ್ಕೃತಿಯಾಗಿ ಗಮನಿಸಬೇಕು. ಅಖಂಡ ಭಾರತವನ್ನು ಅರ್ಥ ಮಾಡಿಕೊಳ್ಳಲು, ಸಂಸ್ಕೃತಿಯ ಪುನರುಜ್ಜೀವನಕ್ಕೆ ಸಂಸ್ಕೃತ ಭಾಷೆಯನ್ನು ತಿಳಿದುಕೊಳ್ಳುವುದು ಅಗತ್ಯ ಎಂದು ಡಾ| ಆಳ್ವರು ನುಡಿದರು. ಸಂಸ್ಕೃತ-ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ರಾಷ್ಟ್ರಧ್ವಜ, ರಾಷ್ಟ್ರಗೀತೆಯಂತೆ ಸಂಸ್ಕೃತಕ್ಕೂ ಸ್ಥಾನ ನೀಡಬೇಕು. ಋಷಿ ಮುನಿಗಳ ತಪಸ್ಸು, ಹಿರಿಯರ ಹೋರಾಟದಿಂದ ಸಂಸ್ಕೃತ ಭಾಷೆ, ಸಾಹಿತ್ಯ ಬೆಳೆದಿದೆ. ಭಾಷೆಯನ್ನು ಕಟ್ಟಿ ಬೆಳೆಸದಿದ್ದರೆ ದೇಶ, ಸಂಸ್ಕೃತಿಯನ್ನು ಕಳೆದುಕೊಂಡಂತಾಗುತ್ತದೆ ಎಂದ ಅವರು, ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಮನೋಭಾವ ಬಿಟ್ಟು ಮೌಲ್ಯಾಧಾರಿತ ಶಿಕ್ಷಣ ನೀಡುವ ಕಡೆಗೆ ಗಮನ ಹರಿಸಬೇಕು. ಕರ್ನಾಟಕದಲ್ಲಿ ಸಂಸ್ಕೃತ ವಿ.ವಿ. ಇದ್ದರೂ ಅದರ ಉಪಕುಲಪತಿ ನೇಮಕ ಮಾಡದೆ ಸರಕಾರ ನಿರ್ಲಕ್ಷ್ಯ ವಹಿಸಿದೆ ಎಂದು ವಿಷಾದಿಸಿದರು.
ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ| ಪ್ರಭಾಕರ ಭಟ್ ಸ್ವಾಗತಿಸಿ, ಈ ದೇಶದ ಮೂಲ ಭಾಷೆ, ಮೂಲ ಸಂಸ್ಕೃತಿ ಉಳಿಯಬೇಕಾದರೆ ಸಂಸ್ಕೃತ ಭಾರತೀಯರೆಲ್ಲರ ಭಾಷೆಯಾಗಬೇಕು. 10 ದಿನಗಳ ಸಂಸ್ಕೃತ ಸಂಭಾಷಣ ಶಿಬಿರ ಅನಕ್ಷರಸ್ಥರಿಗೂ ಸಂಸ್ಕೃತ ಕಲಿಸುವ ಯೋಜನೆಯಾಗಿದೆ ಎಂದರು.
ಸಂಸ್ಕೃತ ಭಾರತಿ ಸಂಘಟನಾ ಮಂತ್ರಿ ಲಕ್ಷ್ಮೀನಾರಾಯಣ ಬೆಂಗಳೂರು ಪ್ರಸ್ತಾವನೆಗೈದರು. 1981ರಲ್ಲಿ ಆರಂಭಗೊಂಡ ಸಂಸ್ಕೃತ ಭಾರತಿ ದೇಶ, ವಿದೇಶಗಳಲ್ಲಿಯೂ ಸಂಸ್ಕೃತ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದೆ ಎಂದರು.
ಶಿಬಿರದ ಸ್ವಾಗತ ಸಮಿತಿ ಅಧ್ಯಕ್ಷ ಪುಷ್ಪರಾಜ ಜೈನ್ ಮಾತನಾಡಿ ಸಂಸ್ಕೃತ, ಸಂಸ್ಕೃತಿ ಉಳಿಸುವ ಕೆಲಸ ಸಂಸ್ಕೃತ ಶಿಕ್ಷಕರಿಂದ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ ಉಪಸ್ಥಿತರಿದ್ದರು. ಆರಂಭದಲ್ಲಿ ಮೇಘಾಲಯದ ವಿದ್ಯಾರ್ಥಿಗಳು ವೇದಘೋಷ ಮಾಡಿದರು. ವರ್ಗದ ಸಹಶಿಕ್ಷಣ ಪ್ರಮುಖ ಸಂತೋಷ ವಂದಿಸಿದರು. ಬೆಂಗಳೂರು ಮಹಾನಗರ ಸಂಪರ್ಕ ಪ್ರಮುಖ್ ಭಾಗ್ಯಲಕ್ಷ್ಮೀ ನಿರೂಪಿಸಿದರು.
ರಾಜಾದ್ಯಂತ ಸಂಸ್ಕೃತ ಶಿಕ್ಷಕರು ಭಾಗವಹಿಸಿದ್ದು ಪ್ರತಿದಿನ ಸಂಜೆ 4.೦೦ರಿಂದ 6.೦೦ರವರೆಗೆ ಆದರ್ಶ ಸಂಭಾಷಣಾ ಶಿಬಿರ ನಡೆಯುತ್ತಿದ್ದು ಆಸಕ್ತ ಸಾರ್ವಜನಿಕರು ಭಾಗವಹಿಸಬಹುದು ಎಂದು ಸಾವಿತ್ರಿ ಭಗಿನಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.