ಅದೊಂದು ಸುಂದರ ಕುಟುಂಬ. ಮನೆಯ ಜನರೆಲ್ಲ ಸುಖ-ಶಾಂತಿಯಿಂದ ಬಾಳುತ್ತಿದ್ದರು. ಮನೆಯ ಹಿರಿಯರು ಮನೆಯ ಜವಾಬ್ದಾರಿ ಹೊತ್ತು ಪೋಷಿಸುತ್ತಿದ್ದರು. ಆರ್ಥಿಕ ದೃಷ್ಟಿಯಿಂದಾಗಲಿ, ಆರೋಗ್ಯ ದೃಷ್ಟಿಯಿಂದಾಗಲಿ ಮನೆ ಸಮೃದ್ಧಿಯಿಂದ ಕೂಡಿತ್ತು. ಸಮೃದ್ಧಿ ಇದ್ದಾಗಲೇ ಆ ಮನೆಗೆ- ಕುಟುಂಬಕ್ಕೆ ಶೋಭೆ. ಮನೆಯ ಹಿರಿಯರು ಮನೆಯ ಸುರಕ್ಷತೆ ಬಗ್ಗೆ ಕಾಳಜಿವಹಿಸಿದ್ದರು. ಏಕೆಂದರೆ ಇದು ಅವರ ಆದ್ಯ ಕರ್ತವ್ಯ. ಅಷ್ಟೇ ಪ್ರಮುಖವಾಗಿ ಮನೆಯಲ್ಲಿ ಸಾಮರಸ್ಯವಿತ್ತು. ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸುವುದೇ ಆ ಕುಟುಂಬದ ಯಶಸ್ಸಿನ ಗುಟ್ಟು. ಹೀಗೆ ಸಮೃದ್ಧಿ, ಸುರಕ್ಷತೆ ಹಾಗು ಸಾಮರಸ್ಯ ಆ ಕುಟುಂಬದ ಬೆಳವಣಿಗೆಯ ಪ್ರಮುಖ ಅಂಶಗಳಾಗಿದ್ದವು.
ಹೇಗೆ ಈ ಮೂರು ಅಂಶಗಳು ಸಮೃದ್ಧಿ, ಸುರಕ್ಷತೆ ಹಾಗು ಸಾಮರಸ್ಯ ಕುಟುಂಬಕ್ಕೆ ಅವಶ್ಯಕವೋ ಅಷ್ಟೇ ಅವಶ್ಯಕವಿರುವುದು ನಮ್ಮ ಭಾರತಕ್ಕೆ. ಅನೇಕ ಕುಟುಂಬಗಳ ಆಧಾರದ ಮೇಲೆ ಗಟ್ಟಿಯಾಗಿ ಬೇರೂರಿ ನಿಂತಿರುವುದು ನಮ್ಮ ಭಾರತ. ಈ ದೇಶವೂ ಒಂದು ಕುಟುಂಬದಂತೆ. ಪ್ರಜೆಗಳೆಲ್ಲ ಆ ಕುಟುಂಬದ ಸದಸ್ಯರು. ದೇಶವನ್ನಾಳುವ ನಾಯಕರೇ ನಮ್ಮ ಹಿರಿಯರು. ಈ ಮೂರು ಅಂಶಗಳಿದ್ದರೆ ಮಾತ್ರ ದೇಶ ಅಭಿವೃದ್ಧಿ ಹೊಂದಬಲ್ಲದು. ದೇಶವನ್ನು ಮುನ್ನಡೆಸಲು ಸಮೃದ್ಧಿ, ಪ್ರಜೆಗಳನ್ನು ಕಾಪಾಡಲು ಸುರಕ್ಷತೆ, ಸಮಾಜದ ಏಳಿಗೆಗಾಗಿ ಸಾಮರಸ್ಯ ಇವು ಭಾರತಕ್ಕೆ ಅವಶ್ಯಕ ಮತ್ತು ಅನಿವಾರ್ಯ.
ದೇಶ ಮುನ್ನಡೆಯ ಬೇಕಾದರೆ ಮುಖ್ಯವಾಗಿ ಆರ್ಥಿಕವಾಗಿ ಸದೃಢವಾಗಬೇಕು. ಭೌತಿಕ, ನೈಸರ್ಗಿಕ ಹಾಗು ಆರ್ಥಿಕ ಸಂಪತ್ತುಗಳೇ ಭಾರತವನ್ನು ಸಮೃದ್ಧ ದೇಶವನ್ನಾಗಿ ಮಾಡಬಲ್ಲವು. ಎಲ್ಲಿ ಸಮೃದ್ಧಿ ಇರುತ್ತದೆಯೋ ಅಲ್ಲಿ ಸುಖ-ಶಾಂತಿ ನೆಲೆಸಿರುತ್ತದೆ. ಸಮೃದ್ಧಿ ಇಲ್ಲವಾದಲ್ಲಿ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಬಂದೊದಗಬಹುದು. ದೇಶ ಎಷ್ಟು ಸಮೃದ್ಧವಾಗಿರುತ್ತದೆಯೋ ಅದರ ಎರಡರಷ್ಟು ಸುರಕ್ಷಿತವಾಗಿರಬೇಕು. ಅನ್ಯ ಆಕ್ರಮಣದಿಂದಲೂ, ಆಂತರಿಕ ಕಲಹಗಳಿಂದಲೂ, ಅನೇಕ ಸಮಾಜ ಘಾತುಕರಿಂದಲೂ ದೇಶ ಹಾಗು ಪ್ರಜೆಗಳು ಸುರಕ್ಷಣೆಗೆ ಒಳಗಾಗಬೇಕು. ಇದು ನಮ್ಮ ನಾಯಕರ ಬಹು ಮುಖ್ಯ ಕರ್ತವ್ಯ. ಯಾವ ಆಕ್ರಮಣಗಳಿಗೂ ಜಗ್ಗದೇ ದೇಶ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಗಡಿಯಲ್ಲಿ ಭೂ-ಸೇನೆ, ಕಡಲ ತೀರದಲ್ಲಿ ನೌಕಾ ಸೇನೆ, ಆಗಸದಲ್ಲಿ ವಾಯು ಸೇನೆ ಹಾಗೆಯೇ ನಾಡಿನಲ್ಲಿ ಆರಕ್ಷಕದಳ ಅಗತ್ಯವಾದುದು.
ಇನ್ನೂ ಸಾಮರಸ್ಯ, ಏಕತೆಯಲ್ಲಿ ವಿವಿಧತೆ ಕೂಡಿದ ಈ ಭಾರತದಲ್ಲಿ ಸಾಮರಸ್ಯ ತರಲು ಪ್ರಯತ್ನಿಸಬೇಕು. ಆದರೆ ಇದು ಕಷ್ಟವಲ್ಲ. ದೇಶದ ಪ್ರಜೆಗಳೆಲ್ಲ ಒಂದೇ ಕುಟುಂಬದವರಿದ್ದಂತೆ. ಅವರನ್ನು ಜಾತಿ, ಮತ, ಭಾಷೆ, ಪಂಥ, ಧರ್ಮ, ಕರ್ಮ ಇವುಗಳ ಆಧಾರದ ಮೇಲೆ ಅವರನ್ನು ವಿಭಜಿಸುವುದು ಅನಗತ್ಯ ಹಾಗು ಘೋರ ಅಪರಾಧ. ಈ ವಿಭಜನೆಗಳೇ ಮುಂದೆ ದೇಶ ವಿಭಜನೆಗೂ ಸಹ ನಾಂದಿಯಾಗಬಲ್ಲದು. ಸಾಮರಸ್ಯದ ಜೊತೆಗೆ ಭಾರತ ಸಹಿಷ್ಣು ರಾಷ್ಟ್ರವೂ ಹೌದು. ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಭಾರತ ಎಂದಿಗೂ, ಎಲ್ಲಿಯೂ ಅಸಹಿಷ್ಣುತೆಯನ್ನು ಪ್ರದರ್ಶಿಸಿಲ್ಲ. ವಿವಿಧ ಜನರ ಭಿನ್ನಾಭಿಪ್ರಾಯಗಳು ಆಂತರಿಕ ಕಲಹಕ್ಕೆ ನಾಂದಿಯಾಗಿದೆ. ಇದನ್ನು ಸರಿಪಡಿಸಬೇಕಾದರೆ ಸಾಮರಸ್ಯ ಬೇಕು. ಯಾವುದೇ ಭೇದ ಭಾವವಿಲ್ಲದೆ, ಎಲ್ಲ ಅಡೆತಡೆಗಳನ್ನು ಮೀರಿ ಈ ಭಾರತ ನಮ್ಮದು, ನಾವು ಭಾರತೀಯರು ಎಂಬ ದೃಢ ನಿಶ್ಚಯ ಎಲ್ಲರದ್ದಾಗಬೇಕು.
ಹೀಗೆ ಕುಟುಂಬದ ಆಧಾರದ ಮೇಲೆ ನಮ್ಮ ದೇಶ ನಿಂತಿದೆ. ಕುಟುಂಬದ ಗುಣ ಲಕ್ಷಣಗಳೇ ಈ ದೇಶದ ಗುಣ ಲಕ್ಷಣಗಳು ಆದರೆ ಗಾತ್ರದಿಂದ ವಿಭಿನ್ನ. ಇದನ್ನು ಯೋಚಿಸುವಾಗೆಲ್ಲ ನಮ್ಮ ದೇಶ ಎಲ್ಲದಕ್ಕಿಂತಲೂ ಮುಂದೆ. ಏಕೆಂದರೆ, ‘ವಸುದೈವ ಕುಟುಂಬಕಮ್’ ಇಡೀ ವಿಶ್ವವೇ ಒಂದು ಕುಟುಂಬ ಎಂಬ ಕಲ್ಪನೆ ಕೊಟ್ಟವರು ನಾವೇ. ಒಂದು ಕುಟುಂಬದಲ್ಲಿ ಮಾನವ ಹೇಗೆ ಜೀವಿಸುತ್ತಾನೋ ಹಾಗೆಯೇ ದೇಶದಲ್ಲಿಯೂ ಜೀವಿಸಬೇಕು. ಸಮಾನತೆ, ಸೌಹಾರ್ದತೆ, ಶಾಂತಿ, ಸಹಕಾರ, ವಿಶ್ವಾಸ, ಪ್ರೀತಿ ಹೇಗೆ ಒಂದು ಕುಟುಂಬದಲ್ಲಿ ಕಾಣಸಿಗುತ್ತವೆಯೋ ಹಾಗೆಯೇ ಭಾರತದಲ್ಲಿ ಕಾಣುವಂತಾಗಬೇಕು. ಸಮಾಜದ ಎಲ್ಲ ಭೇದಗಳನ್ನು ಮೀರಿ ಭಾರತ ಎಂಬ ಪದದಿಂದ ಪ್ರಜೆಗಳನ್ನೆಲ್ಲ ಒಂದುಗೂಡಿಸಬೇಕು. ‘ಇದೇ ನನ್ನ ಕನಸಿನ ಭಾರತ’.
-ನಿತೀಶ ಡಂಬಳ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.