ಬೆಂಗಳೂರು: 14 ವರ್ಷಗಳ ಹಿಂದೆ ಛತ್ತೀಸ್ಗಢದಿಂದ ಬಂದ ಸಾಫ್ಟ್ವೇರ್ ಎಂಜಿನಿಯರ್ರೊಬ್ಬರು ಬೆಂಗಳೂರನ್ನು ಹಸಿರಾಗಿಡುವ ಕಾಯಕವನ್ನು ಮಾಡುತ್ತಿದ್ದಾರೆ. 2007 ರಿಂದ ಪ್ರತಿ ವೀಕೆಂಡ್ನಲ್ಲೂ ಗಿಡಗಳನ್ನು ನೆಡುವ ಅಭ್ಯಾಸವನ್ನು ರೂಢಿಸಿಕೊಂಡಿರುವ ಇವರು ಇದುವರೆಗೆ ನೆಟ್ಟ ಗಿಡಗಳ ಸಂಖ್ಯೆ 35 ಸಾವಿರ.
ಕಪಿಲ್ ಶರ್ಮಾ ಬೆಂಗಳೂರಿಗೆ ಬಂದೊಡನೆ ಆ ನಗರದ ಮೇಲೆ ಅಪಾರ ಪ್ರೀತಿಯನ್ನು ಬೆಳೆಸಿಕೊಂಡವರು, ಅಲ್ಲಿನ ಹಸಿರು ಸಮೃದ್ಧಿ, ತಣ್ಣಗಿನ ವಾತಾವರಣ, ಬೃಹತ್ ಮರಗಳು ಅವರನ್ನು ಪುಳಕಿತಗೊಳಿಸಿದ್ದವು. ಆದರೆ ವರ್ಷಗಳು ಉರುಳಿದಂತೆ ಬೆಂಗಳೂರಿನ ಚಿತ್ರಣಗಳು ಬದಲಾಗತೊಡಗಿತು, ಅಲ್ಲಿನ ಹಸಿರು ಸಮೃದ್ಧಿ ಶೀಘ್ರವಾಗಿ ಕುಸಿಯುತ್ತಾ ಸಾಗಿದವು, ವಾತಾವರಣ ಬದಲಾಯಿತು. ಇದು ಶರ್ಮಾರನ್ನು ತೀವ್ರವಾಗಿ ಆಘಾತಕ್ಕೊಳಪಡಿಸಿತ್ತು.
ಹೀಗಾಗಿಯೇ ಅವರು ಬೆಂಗಳೂರಿನ ಹಸಿರು ಸಿರಿಯನ್ನು ಉಳಿಸುವ ಕಾಯಕಕ್ಕೆ ಮುಂದಾದರು, ಗಿಡಗಳನ್ನು ನೆಡುವ ಕಾರ್ಯಕ್ಕೆ ಮುಂದಾದರು. ಮನೆಯ ಸುತ್ತಮುತ್ತ, ಕಛೇರಿಗೆ ತೆರಳುವ ದಾರಿ ಹೀಗೆ ಎಲ್ಲೆಂದರಲ್ಲಿ ಗಿಡಗಳನ್ನು ನೆಟ್ಟರು. ಆದರೆ ಇದು ಸಾಕಾಗಲ್ಲ ಎಂದು ಅವರಿಗನಿಸಿತು. ಹೀಗಾಗಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯನ್ನು ಸಂಪರ್ಕಿಸಿ ತಾನು ಎಲ್ಲಿ ಮರಗಳನ್ನು ನೆಡಬಹುದು ಎಂಬ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಬಳಿಕ ಪ್ರತಿ ಶನಿವಾರ ಬಿಬಿಎಂಪಿ ಕಛೇರಿಗೆ ತೆರಳಿ ತನ್ನಂತೆ ಹಸಿರಿನಲ್ಲಿ ಆಸಕ್ತರಾಗಿರುವ ಅಧಿಕಾರಗಳನ್ನು ಕಂಡು ಚರ್ಚಿಸುತ್ತಿದ್ದರು, ಗಿಡಗಳನ್ನು ಹೆಚ್ಚು ಹೆಚ್ಚಾಗಿ ನೆಡಲಾರಂಭಿಸಿದರು. ಬಳಿಕ ತನ್ನ ಕಾಯಕಕ್ಕೆ ಮತ್ತಷ್ಟು ಉತ್ತೇಜನ ಸಿಗಲಿ ಎಂಬ 2007ರಲ್ಲಿ ಕಾರಣಕ್ಕೆ ‘ಸೇ ಟ್ರೀಸ್’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು.
ಏಕಾಂಗಿಯಾಗಿ ಆರಂಭಿಸಿದ ಅವರ ಕಾರ್ಯಕ್ಕೆ ಬಳಿಕ ಬಹಳಷ್ಟು ಮಂದಿ ಸೇರಿಕೊಂಡರು, ಪ್ರೋತ್ಸಾಹ ನೀಡಿದರು. ಅವರ ಸಂಸ್ಥೆಯಡಿ ಬಹಳಷ್ಟು ಗಿಡ ನೆಡುವ ಅಭಿಯಾನಗಳನ್ನು ನಡೆಸಲಾಗಿದೆ. ಪ್ರದೇಶಗಳನ್ನು ಗುರುತಿಸುವುದು, ಅಲ್ಲಿ ಗಿಡ ನೆಡಲು ಸರ್ಕಾರದಿಂದ ಅನುಮತಿಯನ್ನು ಪಡೆಯುವ ಕಾರ್ಯಗಳನ್ನು ಕಪಿಲ್ ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಹೆಚ್ಚು ಮಂದಿ ಈ ಅಭಿಯಾನಕ್ಕೆ ಕೈಜೋಡಿಸಿದರು.
ಮನುಷ್ಯರು ಮತ್ತು ಪ್ರಾಣಿಗಳು ಓಡಾಡದ ಜಾಗವನ್ನು ಆಯ್ಕೆ ಮಾಡಿ ಇವರು ಗಿಡ ನೆಡುತ್ತಾರೆ, ಇವುಗಳು ಹೆಚ್ಚಾಗಿ ಬದುಕುತ್ತವೆ ಎಂಬ ಕಾರಣಕ್ಕೆ ಎರಡರಿಂದ ಮೂರು ವರ್ಷಗಳಾಗಿರುವ 8ರಿಂದ 12 ಫೀಟ್ ಉದ್ದದ ಗಿಡಗಳನ್ನೇ ನೆಡಲು ಆಯ್ಕೆ ಮಾಡುತ್ತಾರೆ. ಮೇ ಇಂದ ಅಕ್ಟೋಬರ್ ತಿಂಗಳಲ್ಲೇ ಹೆಚ್ಚು ಗಿಡಗಳನ್ನು ನೆಡುತ್ತಾರೆ. ಗಿಡ ನೆಟ್ಟು ಕೈಕಟ್ಟಿ ಕುಳಿತುಕೊಳ್ಳುವ ಜಾಯಾಮಾನ ಕಪಿಲ್ ಅವರದ್ದಲ್ಲ, ಸುಧೀರ್ಘ ಸಮಯಗಳ ಕಾಲ ಅದರ ಕಾಳಜಿ ವಹಿಸುತ್ತಾರೆ, ನೀರುಣಿಸುತ್ತಾರೆ. ಸ್ಥಳಿಯರನ್ನು ಒಟ್ಟುಗೂಡಿಸಿ ಆ ಗಿಡಗಳ ಕಾಳಜಿ ವಹಿಸುವಂತೆ ಮನವಿ ಮಾಡುತ್ತಾರೆ.
ಶಾಲೆ, ಕಾರ್ಪೋರೇಟ್, ಸಮುದಾಯಗಳ ಬಳಿ ಹೋಗಿಯೂ ಗಿಡ ನೆಡುವ ಕಾರ್ಯವನ್ನು ಇವರ ಸಂಸ್ಥೆ ಮಾಡುತ್ತದೆ. ಇವರ ಕಾರ್ಯಕ್ಕೆ ಬಿಬಿಎಂಪಿ ಮತ್ತು ಕಾರ್ಪೋರೇಟ್ ಕಂಪನಿಗಳ ಸಹಾಯವೂ ಇದೆ, ಪ್ರಾಯೋಜಕತ್ವವೂ ಸಿಗುತ್ತಿದೆ.
2007ರಲ್ಲಿ ‘ಸೇ ಟ್ರೀಸ್’ ಸಂಸ್ಥೆ ಆರಂಭವಾದ ಬಳಿಕ ಒಟ್ಟು 35 ಸಾವಿರ ಗಿಡಗಳನ್ನು ನೆಡಲಾಗಿದೆ. ಸ್ವಯಂ ಸೇವಕರ, ಪ್ರಾಯೋಜಕರ ಕೊರತೆಯಿದ್ದರೂ ಇತರ ನಗರಗಳಿಗೂ ತೆರಳಿ ಗಿಡನೆಡಬೇಕೆಂಬ ಮಹತ್ವಾಕಾಂಕ್ಷೆ ಕಪಿಲ್ ಶರ್ಮಾ ಅವರಿಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.