
ಭಾರತ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಆಚರಿಸುತ್ತಿರುವಾಗ, ಮೀನಾ ಬೆನ್ ಅವರಂತಹ ಕಥೆಗಳು ನಮಗೆ ಹೇಗೆ ಗ್ರಾಮೀಣ ಪ್ರಜಾಪ್ರಭುತ್ವವು ಮಹಿಳೆಯರಿಗೆ ನಾಯಕತ್ವದ ಹೊಸ ಬಾಗಿಲು ತೆರೆಯಿತು ಎಂಬುದನ್ನು ನೆನಪಿಸುತ್ತವೆ .
ಗುಜರಾತ್ನ ವ್ಯಾರಾ ಗ್ರಾಮದಲ್ಲಿ ಒಂದು ಶಾಂತ ಬೆಳಿಗ್ಗೆ. ಪಂಚಾಯತ್ ಕಚೇರಿಯ ಸಮೀಪದಲ್ಲಿ ಸಣ್ಣ ಗುಂಪೊಂದು ಸೇರಿತ್ತು. ಮುಂಬರುವ ಚುನಾವಣೆಯ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅಭ್ಯರ್ಥಿಗಳ ಪಟ್ಟಿಯಲ್ಲಿ ಒಂದು ಹೆಸರು ಎಲ್ಲರನ್ನೂ ಆಶ್ಚರ್ಯಕ್ಕೆ ಒಳಪಡಿಸಿತು — ಮೀನಾ ಬೆನ್.
ಮಹಿಳೆಯರು ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವುದೇ ಅಪರೂಪವಾಗಿದ್ದ ಗ್ರಾಮದಲ್ಲಿ, ಒಬ್ಬ ಮಹಿಳೆ ಸರ್ಪಂಚ್ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾಳೆ ಎಂಬುದು ಊಹಿಸಲಾಗದ ವಿಷಯವೇ ಆಗಿತ್ತು. ಗುಸುಗುಸು ಮಾತುಗಳು ಆರಂಭವಾದವು ನಂತರ ಇದು ಬಹಿರಂಗ ವಿರೋಧಕ್ಕೆ ತಿರುಗಿತು.
ಕೆಲವರು ನಗುತ್ತಿದ್ದರು, ಇನ್ನು ಕೆಲವರು “ನಾಯಕತ್ವವು ಮಹಿಳೆಯ ಕೆಲಸವಲ್ಲ” ಎಂದು ಹೇಳುತ್ತಿದ್ದರು. ತನ್ನ ಸ್ವಂತ ಸಮುದಾಯದೊಳಗೂ ಮೀನಾ ಬೆನ್ ಅವರು ಸಂದೇಹ ಮತ್ತು ವಿರೋಧವನ್ನು ಎದುರಿಸಿದರು. ಆದರೆ ಮೀನಾ ಬೆನ್ ಛಲಗಾತಿ. ಹೆಚ್ಚಿನ ಹಣಕಾಸು ಬೆಂಬಲವಿಲ್ಲದೆ, ಪ್ರಚಾರದ ಸಮಯದಲ್ಲಿ ನಿರಂತರ ಟೀಕೆಗಳ ನಡುವೆಯೂ ಅವರು ಹಿಂದೆ ಸರಿಯಲಿಲ್ಲ.
ಆದರೆ ಅವರ ಧೈರ್ಯಕ್ಕೆ ಬೆಂಬಲ ನೀಡಿದ್ದು ಹಲವು ವರ್ಷಗಳ ಹಿಂದೆ ನಡೆದ ಒಂದು ಐತಿಹಾಸಿಕ ಸುಧಾರಣೆ.
1992ರಲ್ಲಿ 73ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಪಂಚಾಯತಿ ರಾಜ್ ಸಂಸ್ಥೆಗಳಿಗೆ ಸಾಂವಿಧಾನಿಕ ಸ್ಥಾನಮಾನ ನೀಡಲಾಯಿತು ಮತ್ತು ಸ್ಥಳೀಯ ಆಡಳಿತದಲ್ಲಿ 33% ಸೀಟುಗಳನ್ನು ಮಹಿಳೆಯರಿಗೆ ಮೀಸಲಿಡಲಾಯಿತು. ಮೊದಲ ಬಾರಿಗೆ ಭಾರತದಾದ್ಯಂತ ಅಸಂಖ್ಯಾತ ಗ್ರಾಮೀಣ ಮಹಿಳೆಯರು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಅವಕಾಶ ಪಡೆದರು.
ಈ ಅವಕಾಶವನ್ನು ಬಳಸಿಕೊಂಡು ಮೀನಾ ಬೆನ್ ಚುನಾವಣಾ ಕಣಕ್ಕೆ ಇಳಿದರು ಮತ್ತು ಅಂತಿಮವಾಗಿ ವ್ಯಾರಾ ಗ್ರಾಮದ ಮೊದಲ ಮಹಿಳಾ ಸರ್ಪಂಚ್ ಆದರು. ಅವರ ಗೆಲುವು ಮಹಿಳಾ ನಾಯಕತ್ವದ ಬಗ್ಗೆ ಶತಮಾನಗಳಿಂದ ಬೇರೂರಿದ್ದ ನಂಬಿಕೆಗಳಿಗೆ ಸವಾಲೊಡ್ಡಿತು. ಇನ್ನೂ ವಿಶೇಷವೆಂದರೆ — ಅವರ ನೇತೃತ್ವದಲ್ಲಿ ರಚನೆಯಾದ ಪಂಚಾಯತ್ ಸಂಪೂರ್ಣವಾಗಿ ಮಹಿಳಾ ಸದಸ್ಯರಿಂದಲೇ ಕೂಡಿತ್ತು.
ಅವರು ಗ್ರಾಮಸ್ಥರು ವರ್ಷಗಳಿಂದ ಎದುರಿಸುತ್ತಿದ್ದ ಸಾಮಾನ್ಯ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಹರಿಸಿದರು.
ಮೊದಲ ದೊಡ್ಡ ಕಾರ್ಯಕ್ರಮಗಳಲ್ಲಿ ಒಂದು — ಗ್ರಾಮವನ್ನು ಸಮೀಪದ ಪಟ್ಟಣಗಳೊಂದಿಗೆ ಸಂಪರ್ಕಿಸುವ ಸುಗಮ ರಸ್ತೆ ನಿರ್ಮಾಣ.
ಇದು ಸಣ್ಣ ಅಭಿವೃದ್ಧಿ ಯೋಜನೆಯಂತೆ ತೋರಿದರೂ ಪರಿಣಾಮ ದೊಡ್ಡದಾಗಿತ್ತು. ಗರ್ಭಿಣಿಯರು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಸುಲಭವಾಗಿ ತಲುಪಬಹುದಾಯಿತು. ಗ್ರಾಮಸ್ಥರು ಹೊರಗೆ ಪ್ರಯಾಣಿಸಲು ಸುಲಭವಾಯಿತು
ಮಹಿಳೆಯರು ಪಂಚಾಯತ್ ನೇತೃತ್ವ ಮಾಡುತ್ತಿದ್ದಂತೆ ಸ್ಥಳೀಯ ಆಡಳಿತದ ವಾತಾವರಣವೇ ಬದಲಾಯಿತು.
ಗ್ರಾಮದ ಮಹಿಳೆಯರು ಆರೋಗ್ಯ ಸಮಸ್ಯೆಗಳು, ವೈಯಕ್ತಿಕ ಚಿಂತೆಗಳ ಬಗ್ಗೆ ಹೆದರಿಕೆಯಿಲ್ಲದೆ ಮಾತನಾಡಲು ಆರಂಭಿಸಿದರು.
ಅವರ ಅವಧಿಯಲ್ಲಿ 30ಕ್ಕೂ ಹೆಚ್ಚು ಕುಟುಂಬಗಳಿಗೆ ಸರಿಯಾದ ಮನೆ ಸಿಕ್ಕಿತು, ಸರ್ಕಾರಿ ಕಲ್ಯಾಣ ಯೋಜನೆಗಳು ಜನರಿಗೆ ಹೆಚ್ಚು ಸಮರ್ಥವಾಗಿ ತಲುಪಿದವು.
ಹಿಂದೆ ಅವರ ನಾಯಕತ್ವವನ್ನು ಅನುಮಾನಿಸಿದ್ದ ಅದೇ ಗ್ರಾಮಸ್ಥರು ತಮ್ಮ ಸುತ್ತಲೂ ನಡೆಯುತ್ತಿದ್ದ ಬದಲಾವಣೆಯನ್ನು ನೋಡಿ ಆಶ್ಚರ್ಯಪಟ್ಟರು.
ಮೀನಾ ಬೆನ್ ಅವರಂತಹ ಕಥೆಗಳು ಪಂಚಾಯತಿ ರಾಜ್ ಸುಧಾರಣೆಯೊಂದಿಗೆ ಆರಂಭವಾದ ದೊಡ್ಡ ಬದಲಾವಣೆಯನ್ನು ಪ್ರತಿಬಿಂಬಿಸುತ್ತವೆ.
ವರ್ಷಗಳು ಕಳೆದಂತೆ ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚುತ್ತಲೇ ಹೋಯಿತು.
ಇಂದು ಅನೇಕ ರಾಜ್ಯಗಳು ಆರ್ಟಿಕಲ್ 243(D) ಅಡಿಯಲ್ಲಿ ಪಂಚಾಯತ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಿವೆ.
ಈಗ, 73ನೇ ತಿದ್ದುಪಡಿಯ ಸುಮಾರು ಮೂರು ದಶಕಗಳ ನಂತರ, ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ಅದುವೇ ನಾರಿ ಶಕ್ತಿ ವಂದನ ಅಧಿನಿಯಮ (128ನೇ ಸಾಂವಿಧಾನಿಕ ತಿದ್ದುಪಡಿ) ಶಾಸಕಾಂಗ ಸಂಸ್ಥೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ವಿಸ್ತರಿಸಿ, ರಾಷ್ಟ್ರೀಯ ರಾಜಕೀಯದಲ್ಲಿ ಅವರ ಪಾತ್ರವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಆದರೆ ವಿಪಕ್ಷಗಳು ತಡೆಯೊಡ್ಡಿದ ಪರಿಣಾಮ ಮಸೂದೆ ಜಾರಿ ವಿಳಂಬವಾಗುತ್ತಿದೆ.
2024ರ ಸರ್ಕಾರಿ ದತ್ತಾಂಶದ ಪ್ರಕಾರ, ಭಾರತದಲ್ಲಿ 2.6 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ಕಾರ್ಯನಿರ್ವಹಿಸುತ್ತಿವೆ. ಮೂರು ಹಂತದ ಸ್ಥಳೀಯ ಆಡಳಿತದಲ್ಲಿ ಸುಮಾರು 31 ಲಕ್ಷ ಚುನಾಯಿತ ಪ್ರತಿನಿಧಿಗಳಿದ್ದಾರೆ ಅದರಲ್ಲಿ *46%*ರಷ್ಟು — ಅಂದರೆ 14–15 ಲಕ್ಷ ಮಹಿಳೆಯರು.
ರಾಷ್ಟ್ರೀಯ ಪಂಚಾಯತಿ ರಾಜ್ ದಿನದಂದು ಮೀನಾ ಬೆನ್ ಅವರ ಕಥೆ ನಮಗೆ ಮಹಿಳೆಯರಿಗೆ ಆಡಳಿತದಲ್ಲಿ ಸ್ಥಾನ ನೀಡಿದಾಗ ಅವರು ಕೇವಲ ಭಾಗವಹಿಸುವುದಿಲ್ಲ — ಅವರು ಸಮುದಾಯವನ್ನೇ ಪರಿವರ್ತಿಸುತ್ತಾರೆ ಎಂಬ ದೊಡ್ಡ ಸಂದೇಶ ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


