
ಮಾರ್ಚ್ 25–26, 1971 ರ ರಾತ್ರಿ, ಪಾಕಿಸ್ತಾನದ ಮಿಲಿಟರಿ ಆಡಳಿತವು ಬಾಂಗ್ಲಾದೇಶದಲ್ಲಿ ದೊಡ್ಡ ಪ್ರಮಾಣದ ದಮನ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಅದಕ್ಕೆ ʼಆಪರೇಷನ್ ಸರ್ಚ್ ಲೈಟ್ʼ ಎಂದು ಹೆಸರಿಟ್ಟಿತು. ಅವಾಮಿ ಲೀಗ್ನ ಚುನಾವಣಾ ಗೆಲುವು ಮತ್ತು ರಾಜಕೀಯ ಸ್ವಾಯತ್ತತೆ ಮತ್ತು ಭಾಷಾ ಹಕ್ಕುಗಳಿಗಾಗಿನ ದೀರ್ಘಕಾಲದ ಬೇಡಿಕೆಗಳ ಹೊರತಾಗಿಯೂ ಅಧಿಕಾರವನ್ನು ವರ್ಗಾಯಿಸಲು ಪಾಕ್ ನಿರಾಕರಿಸಿದ ಹಿನ್ನೆಲೆಯಲ್ಲಿ ಭುಗಿಲೆದ್ದ ಬಂಗಾಳಿ ದಂಗೆಯನ್ನು ಹತ್ತಿಕ್ಕುವುದೇ ಈ ಆಪರೇಷನ್ನ ಉದ್ದೇಶವಾಗಿತ್ತು. ಆಪರೇಷನ್ ಸರ್ಚ್ಲೈಟ್ ಹೆಸರಿನ ಈ ಕಾರ್ಯಾಚರಣೆಯನ್ನು ಬಂಗಾಳಿ ರಾಜಕೀಯ ಪ್ರಜ್ಞೆಯನ್ನು ರೂಪಿಸುವವರನ್ನು ಗುರಿಯಾಗಿಸಿಕೊಂಡು ಪ್ರತಿರೋಧವನ್ನು ಕೆಡವಲು ಬಹಳ ಎಚ್ಚರಿಕೆಯಿಂದಲೇ ಯೋಜಿಸಲಾಗಿತ್ತು ಮತ್ತು ಅತ್ಯಂತ ಕ್ರೂರವಾದ ರೀತಿಯಲ್ಲಿ ಇದನ್ನು ಕಾರ್ಯಗತಗೊಳಿಸಲಾಗಿತ್ತು. ಪಾಕ್ ಸೇನೆಯು ಬಂಗಾಳಿ ಹೋರಾಟದಲ್ಲಿ ಸಕ್ರಿಯರಾಗಿದ್ದ ವಿದ್ಯಾರ್ಥಿಗಳು, ಶಿಕ್ಷಕರು, ಬುದ್ಧಿಜೀವಿಗಳು, ರಾಜಕೀಯ ಕಾರ್ಯಕರ್ತರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ವಿವಿಧ ಸಂಸ್ಥೆಗಳನ್ನು ಗುರಿಯಾಗಿಸಿ ಆಪರೇಷನ್ ಸರ್ಚ್ ಲೈಟ್ ಆರಂಭಿಸಿತ್ತು.
1952 ರ ಭಾಷಾ ಚಳುವಳಿಯಿಂದ 1969–71 ರ ಸಾಮೂಹಿಕ ಪ್ರತಿಭಟನೆಗಳವರೆಗೆ ಬಂಗಾಳಿ ಚಳುವಳಿಯ ಬೌದ್ಧಿಕ ಮತ್ತು ಸಾಂಸ್ಕೃತಿಕ ಕೇಂದ್ರವೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದ ಢಾಕಾ ವಿಶ್ವವಿದ್ಯಾಲಯ ಕೂಡ ಪಾಕ್ ಸೇನೆಯ ಗುರಿಯಾಗಿತ್ತು. ಆ ರಾತ್ರಿ, ವಿದ್ಯಾರ್ಥಿ ಸಭಾಂಗಣಗಳ ಮೇಲೆ ದಾಳಿ ಮಾಡಲಾಯಿತು, ನಿರಾಯುಧ ವಿದ್ಯಾರ್ಥಿಗಳ ಮೇಲೆ ಅವರ ವಸತಿ ನಿಲಯಗಳೊಳಗೆ ನುಗ್ಗಿ ಗುಂಡು ಹಾರಿಸಲಾಯಿತು, ಮತ್ತು ಶಿಕ್ಷಕರನ್ನು ಅವರ ಮನೆಗಳಿಂದ ಹೊರಗೆ ಎಳೆದು ಕೊಲ್ಲಲಾಯಿತು, ಇದು ಕಲಿಕಾ ಕೇಂದ್ರವನ್ನು ಕೊಲೆಯ ನೆಲವನ್ನಾಗಿ ಪರಿವರ್ತಿಸಿತು. ಕೊಲ್ಲಲ್ಪಟ್ಟವರಲ್ಲಿ ಢಾಕಾ ವಿಶ್ವವಿದ್ಯಾಲಯದ ಹಿರಿಯ ಶಿಕ್ಷಣ ತಜ್ಞ ಮತ್ತು ಹಿಂದೂ ವಿದ್ಯಾರ್ಥಿ ನಿವಾಸವಾದ ಜಗನ್ನಾಥ ಹಾಲ್ನ ಪ್ರೊವೊಸ್ಟ್ ಪ್ರೊಫೆಸರ್ ಜ್ಯೋತಿರ್ಮಯ್ ಗುಹತಕುರ್ತಾ ಕೂಡ ಸೇರಿದ್ದಾರೆ. ಅವರ ಹತ್ಯೆಯು ಆಪರೇಷನ್ ಸರ್ಚ್ಲೈಟ್ ಸಮಯದಲ್ಲಿ ಪಾಕಿಸ್ತಾನ ಸೇನೆಯ ಕ್ರೌರ್ಯದ ಅನೇಕ ದಾಖಲಿತ ನಿದರ್ಶನಗಳಲ್ಲಿ ಒಂದಾಗಿದೆ, ಇದು ವಿದ್ಯಾರ್ಥಿಗಳೊಂದಿಗೆ ಶಿಕ್ಷಕರನ್ನು ಉದ್ದೇಶಪೂರ್ವಕವಾಗಿ ಹೇಗೆ ಗುರಿಯಾಗಿಸಲಾಗಿತ್ತು ಎಂಬುದನ್ನು ಪ್ರತಿಬಿಂಬಿಸುತ್ತದೆ.
ಈ ಹತ್ಯಾಕಾಂಡದಿಂದ, ಮಾರ್ಚ್ 1971 ರಲ್ಲಿ ನಿಖರವಾಗಿ ಏನಾಯಿತು ಮತ್ತು ಇತಿಹಾಸದ ಆ ಕ್ಷಣದಲ್ಲಿ, ಬೋಧನೆಯನ್ನು ಅಪರಾಧವೆಂದು ಏಕೆ ಪರಿಗಣಿಸಲಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಲೇಖನವು ಜ್ಯೋತಿರ್ಮಯ್ ಗುಹತಕುರ್ತಾ ಕಥೆಯನ್ನು ನಿಮ್ಮ ಮುಂದೆ ತರುತ್ತಿದೆ
ಪಾಕಿಸ್ತಾನ ಸೇನೆಯಿಂದ ರಾತ್ರಿ ದಾಳಿ
ಆ ಮಧ್ಯರಾತ್ರಿ ಗುಹತಕುರ್ತಾ ಕುಟುಂಬವು ಗುಂಡಿನ ಶಬ್ದಕ್ಕೆ ಬೆಚ್ಚುಬಿದ್ದು ಎಚ್ಚಗೊಂಡಿತು. ಸ್ಫೋಟಗಳು ಜೋರಾಗಿ ಮತ್ತು ಸಮೀಪದಲ್ಲೇ ಕೇಳುತ್ತಿದ್ದವು. ಏನೋ ಕೆಟ್ಟದು ಸಂಭವಿಸುತ್ತದೆ ಎಂದು ಹೆದರಿ, ಅವರು ಹಾಸಿಗೆಯ ಕೆಳಗೆ ತೆವಳುತ್ತಾ ಅಡಗಿಕೊಂಡರು. ಗುಂಡಿನ ಚಕಮಕಿ ಸ್ವಲ್ಪ ಸಮಯ ಕಡಿಮೆಯಾದಾಗ, ಶ್ರೀಮತಿ ಗುಹತಕುರ್ತಾ ಹೊರಗೆ ಇಣುಕಿ ನೋಡಿದಾಗ, ಕ್ರಾಸ್ರೋಡ್ಸ್ ಬಳಿಯ ಬ್ಯಾರಿಕೇಡ್ನಲ್ಲಿ ಮಿಲಿಟರಿ ವಾಹನಗಳ ಬೆಂಗಾವಲು ನಿಂತಿರುವುದನ್ನು ಕಂಡರು. ಪಾಕಿಸ್ತಾನಿ ಸೈನಿಕರು ಅವರ ನಿವಾಸಕ್ಕೆ ಪ್ರವೇಶಿಸಿದರು, ಸೈನ್ಯವು ಬಾಗಿಲುಗಳನ್ನು ಒದೆಯಲು ಪ್ರಾರಂಭಿಸಿ ಗೇಟ್ನ ಸರಪಳಿಗಳನ್ನು ಕಿತ್ತುಹಾಕಿದರು, ಅಧಿಕಾರಿಯೊಬ್ಬ ಗುಹತಕುರ್ತಾ ಅವರ ಮಗಳು ಮೇಘನಾಳ ಕೋಣೆಯ ಕಿಟಕಿಯನ್ನು ಒಡೆದು, ಸೊಳ್ಳೆ ಪರದೆಯನ್ನು ತಮ್ಮ ಬಯೋನೆಟ್ನಿಂದ ಕತ್ತರಿಸಿದ. ಪರದೆಯನ್ನು ಪಕ್ಕಕ್ಕೆ ಎಳೆಯುತ್ತಿದ್ದಂತೆ, ಶ್ರೀಮತಿ ಗುಹತಕುರ್ತಾ ತಮ್ಮ ಪತಿಗೆ ಬಂಧನಕ್ಕೆ ಸಿದ್ಧರಾಗುವಂತೆ ಸದ್ದಿಲ್ಲದೆ ಪಿಸುಗುಟ್ಟಿದರು. ಅಧಿಕಾರಿ ಅಡುಗೆಮನೆಯ ಬಾಗಿಲಿನಿಂದ ಪ್ರವೇಶಿಸಿ, ಕೆಲಸದಾಕೆಯನ್ನು ಪಕ್ಕಕ್ಕೆ ತಳ್ಳಿ, ವರಾಂಡಾಕ್ಕೆ ಕಾಲಿಟ್ಟ. ಮನೆಯವರನ್ನು ಪ್ರಶ್ನಿಸಿದ ನಂತರ, ಅವನು ಪ್ರೊಫೆಸರ್ ಜ್ಯೋತಿರ್ಮಯ್ ಗುಹತಕುರ್ತಾ ಅವರನ್ನು ತೋಟಕ್ಕೆ ಎಳೆದೊಯ್ದ. ಅಲ್ಲಿ, ಅವರ ಹೆಸರು ಮತ್ತು ಧರ್ಮವನ್ನು ಕೇಳಿದ ನಂತರ, ಎರಡು ಗುಂಡುಗಳನ್ನು ಹಾರಿಸಿದ – ಒಂದು ಕುತ್ತಿಗೆಗೆ ಮತ್ತು ಇನ್ನೊಂದು ಬೆನ್ನಿಗೆ. ಗುಂಡುಗಳು ಅವರನ್ನು ಪ್ರಜ್ಞಾಹೀನನಾಗುವಂತೆ ಮಾಡಿದವು . ಅವರು ಗೇಟ್ ಬಳಿ ನಿಶ್ಚಲವಾಗಿ ಮಲಗಿದರು.
ಮಿಲಿಟರಿ ಗುಪ್ತಚರ ಪ್ರಕಾರ, ವಿದ್ಯಾರ್ಥಿಗಳೊಂದಿಗೆ ಅವರ ನಿಕಟತೆಯನ್ನು ಅಪಾಯಕಾರಿ ಎಂದು ಗ್ರಹಿಸಿ ಅವರನ್ನು ಹತ್ಯೆ ಮಾಡಲಾಗಿತ್ತು. ಅವರನ್ನು “ಅತ್ಯಂತ ಅಪಾಯಕಾರಿ ವ್ಯಕ್ತಿ” ಎಂದು ವರ್ಗೀಕರಿಸಲಾಗಿತ್ತು. ಅವರು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂಬ ಕಾರಣಕ್ಕಾಗಿ ಅಲ್ಲ, ಬದಲಾಗಿ ಅವರು ವಿದ್ಯಾರ್ಥಿಗಳಲ್ಲಿ ಜನಪ್ರಿಯರಾಗಿದ್ದರು, ಬೌದ್ಧಿಕವಾಗಿ ಸಕ್ರಿಯರಾಗಿದ್ದರು, ವಿಶ್ವವಿದ್ಯಾಲಯದೊಳಗೆ ಪ್ರಭಾವಶಾಲಿ ಎಂದು ಪರಿಗಣಿಸಲ್ಪಟ್ಟಿದ್ದರು ಮತ್ತು ಮಾನವತಾವಾದಿ ವಿಚಾರಗಳ ಸ್ಥಾಪಕ ಎಂ.ಎನ್. ರಾಯ್ ಅವರಂತಹ ಜನರೊಂದಿಗೆ ಸಂಬಂಧ ಹೊಂದಿದ್ದರು. ದಮನದ ಸಮಯದಲ್ಲಿ ಪಾಕ್ ಸೇನೆಯು ಬುದ್ಧಿಜೀವಿ ಶಿಕ್ಷಕರನ್ನು ಬೆದರಿಕೆಯಾಗಿ ನೋಡಿತು. ಆಪರೇಷನ್ ಸರ್ಚ್ಲೈಟ್ ಸಶಸ್ತ್ರ ವಿರೋಧವನ್ನು ಹತ್ತಿಕ್ಕುವ ಬಗ್ಗೆ ಮಾತ್ರವಲ್ಲ, ಬಂಗಾಳಿ ಸಮಾಜದ ಬೌದ್ಧಿಕ ಅಡಿಪಾಯವನ್ನು ಕೆಡವುವ ಉದ್ದೇಶವನ್ನೂ ಹೊಂದಿತ್ತು. ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರನ್ನು ಗುರಿಯಾಗಿಸಿಕೊಂಡು, ಮಿಲಿಟರಿ ವಿಚಾರಗಳನ್ನು ಮೌನಗೊಳಿಸಲು, ನೈತಿಕತೆಯನ್ನು ಮುರಿಯಲು ಮತ್ತು ಕಲಿಕೆಯ ಸಂಸ್ಥೆಗಳಲ್ಲಿ ಭಯವನ್ನು ಹುಟ್ಟುಹಾಕುವ ಗುರಿಯನ್ನು ಹೊಂದಿತ್ತು.
ಶಿಕ್ಷಣವನ್ನು ವಿಧ್ವಂಸಕ ಮತ್ತು ಅಪಾಯಕಾರಿ ಎಂದು ಪರಿಗಣಿಸಲಾಗಿತ್ತು ಎಂಬುದಕ್ಕೆ ಪ್ರೊಫೆಸರ್ ಗುಹಥಕುರ್ತಾ ಅವರ ಮೇಲೆ ನಡೆಸಲಾದ ಗುಂಡಿನ ದಾಳಿಯೇ ಸಾಕ್ಷಿಯಾಗಿತ್ತು. ಅಲ್ಲಿ ಶಿಕ್ಷಣವನ್ನೇ ವಿಧ್ವಂಸಕ ಎಂದು ಪರಿಗಣಿಸಲಾಗಿತ್ತು ಮತ್ತು ಬೋಧನಾ ಕ್ರಿಯೆಯನ್ನು ತೆಗೆದುಹಾಕಲು ಕ್ರಮಕೈಗೊಳ್ಳಲಾಗಿತ್ತು.
ಆ ರಾತ್ರಿಯ ಮೊದಲು, ಜ್ಯೋತಿರ್ಮಯ್ ಗುಹಥಕುರ್ತಾ ಅವರ ಜೀವನವು ಪುಸ್ತಕಗಳು, ತರಗತಿ ಕೊಠಡಿಗಳು ಮತ್ತು ಕಲಿಕೆಯ ಸುತ್ತ ರೂಪುಗೊಂಡಿತ್ತು. ಜುಲೈ 10, 1920 ರಂದು ಆಗ ಬ್ರಿಟಿಷ್ ಭಾರತದ ಭಾಗವಾಗಿದ್ದ ಮೈಮೆನ್ಸಿಂಗ್ನಲ್ಲಿ ಜನಿಸಿದ ಅವರು ಶಿಕ್ಷಣವೇ ಪ್ರಧಾನವಾಗಿದ್ದ ಮನೆಯಲ್ಲಿ ಬೆಳೆದರು – ಅವರ ಪೋಷಕರು, ಕುಮುದ್ಚಂದ್ರ ಗುಹಥಕುರ್ತಾ ಮತ್ತು ಶ್ರೀಮತಿ ಸುಮತಿ ಇಬ್ಬರೂ ಶಾಲಾ ಶಿಕ್ಷಕರಾಗಿದ್ದರು. ಅವರು 1942 ರಲ್ಲಿ ಢಾಕಾ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ನಲ್ಲಿ ಬಿಎ ಗೌರವಗಳೊಂದಿಗೆ ಪದವಿ ಪಡೆದರು, ತಮ್ಮ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದರು ಮತ್ತು ಪೋಪ್ ಮೆಮೋರಿಯಲ್ ಚಿನ್ನದ ಪದಕವನ್ನು ಗಳಿಸಿದರು, ಅವರು 1949 ರಲ್ಲಿ ಢಾಕಾ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗಕ್ಕೆ ಸೇರಿದರು, ಅಲ್ಲಿ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳ ಜೊತೆ ಅವರು ನಿಕಟ ಸಂಪರ್ಕವನ್ನು ಹೊಂದಿದರು.ಮಾನವೀಯ ಶಿಕ್ಷಕರಾಗಿ, ವಿದ್ಯಾರ್ಥಿ ಜೀವನದಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದಾಗಿ ಅವರು ಸದಾ ಸ್ಮರಿಸಲ್ಪಡುತ್ತಾರೆ. 1963 ರಲ್ಲಿ, ಅವರು ನಾಟಕ ಸಾಹಿತ್ಯದಲ್ಲಿನ ಶಾಸ್ತ್ರೀಯ ಪುರಾಣಗಳ ಕುರಿತು ಡಾಕ್ಟರೇಟ್ ಸಂಶೋಧನೆ ನಡೆಸಲು ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿವೇತನದ ಮೇಲೆ ಲಂಡನ್ನ ಕಿಂಗ್ಸ್ ಕಾಲೇಜಿಗೆ ಪ್ರಯಾಣ ಬೆಳೆಸಿದರು. 1967 ರಲ್ಲಿ ಪಿಎಚ್ಡಿ ಮುಗಿಸಿದ ನಂತರ, ಅವರು ಢಾಕಾ ವಿಶ್ವವಿದ್ಯಾಲಯಕ್ಕೆ ಮರಳಿದರು ಮತ್ತು ನಂತರ ಜಗನ್ನಾಥ್ ಹಾಲ್ನ ಪ್ರೊವೋಸ್ಟ್ ಆದರು, ಈ ಪಾತ್ರವು ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯ ಅವಧಿಯಲ್ಲಿ ವಿದ್ಯಾರ್ಥಿಗಳೊಂದಿಗೆ ದೈನಂದಿನ ಸಂಪರ್ಕದಲ್ಲಿರಲು ಅವರಿಗೆ ಅವಕಾಶ ಮಾಡಿಕೊಟ್ಟಿತು, 1971 ರ ಮಾರ್ಚ್ 25 ರ ರಾತ್ರಿ ಗುಂಡು ಹಾರಿಸಿದ ನಂತರ, ಅವರು ತಕ್ಷಣ ಸಾಯಲಿಲ್ಲ. ಪಾರ್ಶ್ವವಾಯುವಿಗೆ ಒಳಗಾದರು ಆದರೆ ಪ್ರಜ್ಞೆ ಹೊಂದಿದ್ದ ಅವರಿಗೆ ಚಿಕಿತ್ಸೆ ನೀಡಲು ಸರಿಯಾದ ಆಸ್ಪತ್ರೆಗಳು ಇರಲಿಲ್ಲ. ಯಾಕೆಂದರೆ ಆಗ ನಗರಗಳಲ್ಲಿ ಕರ್ಫ್ಯೂ ಮತ್ತು ಭಯ ಆವರಿಸಿತ್ತು. ಆಸ್ಪತ್ರೆಗಳು ಸೀಮಿತ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದವು ಮತ್ತು ತುರ್ತು ವೈದ್ಯಕೀಯ ಆರೈಕೆಯನ್ನು ಪ್ರವೇಶಿಸುವುದು ಕಷ್ಟಕರವಾಗಿತ್ತು. ಮಾರ್ಚ್ 30, 1971ರಂದು, ಅವರು ನಿಧನರಾದರು, ಕಲಿಕೆ ಮತ್ತು ಬೋಧನೆಗೆ ಮೀಸಲಾದ ವೃತ್ತಿಜೀವನವನ್ನು ಹೊಂದಿದ್ದ ಶಿಕ್ಷಕನ ಜೀವನ ಅಲ್ಲಿಗೆ ಕೊನೆಗೊಂಡಿತು.
ಅವರ ಹತ್ಯೆಯು ಆಪರೇಷನ್ ಸರ್ಚ್ಲೈಟ್ನ ಭಾಗವಾಗಿ ನಡೆಯಿತು ಈ ಆಪರೇಷನ್ 50,000–200,000 ಬಂಗಾಳಿಗಳ ಸಾವಿಗೆ ಕಾರಣವಾಯಿತು ಮತ್ತು ವಿಮೋಚನಾ ಯುದ್ಧದ ಸಮಯದಲ್ಲಿ ಸುಮಾರು ಮೂರು ಮಿಲಿಯನ್ ಜನರನ್ನು ಕೊಂದಿತು. ಕುಲ್ನಾ ಜಿಲ್ಲೆಯ ಚುಕ್ನಗರದಂತಹ ಹತ್ಯಾಕಾಂಡಗಳು ಒಂದೇ ದಿನದಲ್ಲಿ 10,000 ಬಂಗಾಳಿಗಳನ್ನು ಕೊಂದವು ಮತ್ತು ಜಲ್ಲದ್ಖಾನಾ ಹತ್ಯಾಕಾಂಡದ ಕ್ಷೇತ್ರದಲ್ಲಿ 20,000–25,000 ಜನರನ್ನು ಸಮಾಧಿ ಮಾಡಲಾಯಿತು, ಇದು ದೇಶದ ಅತಿದೊಡ್ಡ ಹತ್ಯಾಕಾಂಡಗಳಲ್ಲಿ ಒಂದಾಗಿದೆ. ಈ ಕಾರ್ಯಾಚರಣೆಯ ವೇಳೆಯಲ್ಲಿ ಲೈಂಗಿಕ ಹಿಂಸಾಚಾರ ವ್ಯಾಪಕವಾಗಿ ಹರಡಿತು, ಪಾಕಿಸ್ತಾನಿ ಮಿಲಿಟರಿಯಿಂದ 202,527 ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದರು ಮತ್ತು 131,250 ಮಂದಿ ನಿರಾಶ್ರಿತರಾಗಿದ್ದರು. ಯುದ್ಧವು ಮಾನವೀಯ ಬಿಕ್ಕಟ್ಟನ್ನು ಉಂಟುಮಾಡಿತು, 10 ಮಿಲಿಯನ್ ಜನರು ಭಾರತಕ್ಕೆ ಓಡಿಬಂದರು, 20–30 ಮಿಲಿಯನ್ ಜನರು ಆಂತರಿಕವಾಗಿ ಸ್ಥಳಾಂತರಗೊಂಡರು ಮತ್ತು ಸುಮಾರು 5,000 ಯುದ್ಧ ಶಿಶುಗಳನ್ನು ದೇಶದ ಹೊರಗಿನ ಕ್ರಿಶ್ಚಿಯನ್ ಮಿಷನರಿಗಳು ಮತ್ತು ಅನಾಥಾಶ್ರಮಗಳು ದತ್ತು ಪಡೆದವು. ಈ ಘಟನೆಗಳು ಬಂಗಾಳಿ ಸಮಾಜವನ್ನು ದಿಕ್ಕು ದೆಸೆಯಿಲ್ಲದಂತೆ ಮಾಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


