ಅಬಾ ಸಾಹೇಬ್ ಗಾಯಕ್ವಾಡ್ ಮಹಾರಾಷ್ಟ್ರದ ಶೆತ್ಜಲಿ ಗ್ರಾಮದವರು, ಇವರದ್ದು ಕಂಡೆಕ್ಟರ್ ವೃತ್ತಿ. ಆದರೆ ಅಡಿಲೆಡ್ನಲ್ಲಿ ನಡೆದ ಆಸ್ಟ್ರೇಲಿಯಾ ಮಾಸ್ಟರ್ ಗೇಮ್ಸ್ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಡಿಸ್ಕಸ್ ಥ್ರೋ, ಹಮ್ಮರ್ ಥ್ರೋ ಮತ್ತು ಶಾಟ್ ಪುಟ್ ಈ ಮೂರು ವಿಭಾಗದಲ್ಲಿ ಪರಿಣಿತಿ ಹೊಂದಿರುವ ಇವರು, ಮೂರು ಬಂಗಾರದ ಪದಕ ತಮ್ಮದಾಗಿಸಿಕೊಂಡಿದ್ದಾರೆ. 30-35 ವಯೋಮಿತಿಯ ಕೆಟಗರಿಯಲ್ಲಿ ಆಡಿದ ಇವರು, 7 ದೇಶಗಳ ಸ್ಪರ್ಧಿಗಳನ್ನು ಸೋಲಿಸಿದ್ದಾರೆ.
ಅವರಿಗೆ ಈ ಯಶಸ್ಸು ಒಂದು ದಿನದಲ್ಲಿ ಧಕ್ಕಿದಲ್ಲ. ಅದರ ಹಿಂದೆ ಹತ್ತಾರು ವರ್ಷಗಳ ಪರಿಶ್ರಮವಿದೆ, ಕಠಿಣ ಅಭ್ಯಾಸವಿದೆ. ಮುಳ್ಳಿನ ಹಾದಿಯನ್ನು ಸವೆಸಿ ಅವರು ಬಂಗಾರದ ಪದಕಕ್ಕೆ ಮುತ್ತಿಕ್ಕಿದವರು.
ಜೀವನ ನಡೆಸಲು ಕಂಡೆಕ್ಟರ್ ವೃತ್ತಿ ನಡೆಸುವುದು ಅನಿವಾರ್ಯ. ಇಡೀ ದಿನ ಕೆಲಸ ಮಾಡಿ, ಯಾವುದೇ ಕೋಚ್ ಇಲ್ಲದೆಯೇ ಅಭ್ಯಾಸ ನಡೆಸ ಬೇಕಾದ ಅನಿವಾರ್ಯತೆ ಇವರದ್ದು. ವಿದೇಶಕ್ಕೆ ತೆರಳಲು ಆರ್ಥಿಕ ಸಂಕಷ್ಟ. ಹೀಗೆ ಕಷ್ಟದ ನಡುವೆಯೂ ತನ್ನ ಕ್ರೀಡಾಸ್ಫೂರ್ತಿಯನ್ನು ಬಿಡದೆ ಛಲದಂಕಮಲ್ಲನಂತೆ ಹೋರಾಡಿದರು. ಅದರ ಫಲಶ್ರುತಿ ಈಗ ಅವರಿಗೆ ದೊರೆತಿದೆ.
ಹಿತೈಷಿಗಳು, ಸ್ನೇಹಿತರು, ಸಾರಿಗೆ ಸಂಸ್ಥೆ ಸಂಗ್ರಹಿಸಿ ಕೊಟ್ಟ ಹಣದಿಂದ ಆಸ್ಟ್ರೇಲಿಯಾ ಮಾಸ್ಟರ್ ಗೇಮ್ಸ್ನಲ್ಲಿ ಪಾಲ್ಗೊಳ್ಳಲು ಅಡಿಲೇಡ್ಸ್ಗೆ ಪ್ರಯಾಣಿಸಿದರು. ಅವರಿಗೆ ಸಹಾಯವಾಗಲಿ ಎಂದೇ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಅವರನ್ನು ಹತ್ತಿರದ ಸ್ಥಳಗಳಿಗೆ ಮಾತ್ರ ಕರ್ತವ್ಯಕ್ಕೆ ಹಾಕುತ್ತಿದ್ದರು. ಇದರಿಂದ ಸಮಯದ ಉಳಿತಾಯವಾಗಿ ಅವರು ಅಭ್ಯಾಸ ಮಾಡಲಿ ಎಂಬ ಕಾರಣಕ್ಕೆ.
ತಮ್ಮವರ ಈ ಸಹಾಯವನ್ನು ಗಮನದಲ್ಲಿಟ್ಟು ಕಠಿಣ ಪರಿಶ್ರಮದಿಂದ ಅಭ್ಯಾಸ ನಡೆಸಿದ ಅವರು, ಮುಂಬಯಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡರು. ಬಳಿಕ ಸ್ನೇಹಿತರು ಹಣ ಸಂಗ್ರಹಿಸಿ 2.5 ಲಕ್ಷ ರೂಪಾಯಿಗಳನ್ನು ಅವರ ಕೈಗಿತ್ತರು. ಇದರ ಸಹಾಯದಿಂದ ಆಸ್ಟ್ರೇಲಿಯಾಗೆ ತೆರಳಿ ಮಾಸ್ಟರ್ ಗೇಮ್ಸ್ನಲ್ಲಿ ಪಾಲ್ಗೊಂಡು ಘಟಾನುಘಟಿ ಕ್ರೀಡಾಳುಗಳ ನಡುವೆ ಸ್ವ ಅಭ್ಯಾಸದಿಂದ ಮೇಲೆ ಬಂದ ಗಾಯಕ್ವಾಡ್ ಅದ್ಭುತ ಪ್ರದರ್ಶನ ನೀಡಿದರು. ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟರು. ಈ ಮೂಲಕ ಮನಸ್ಸಿದ್ದರೆ ಯಾವುದೂ ಅಸಾಧ್ಯವಲ್ಲ ಎಂದು ತೋರಿಸಿಕೊಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.