ಬೆಂಗಳೂರು: ಹಿಂದೂ- ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸುವ ಹೇಳಿಕೆಯನ್ನು ಜಮೀರ್ ಅಹ್ಮದ್ ಅವರು ನೀಡಿದ್ದಾರೆ ಎಂದು ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಅವರು ಆಕ್ಷೇಪಿಸಿದರು.
ಬೆಳವಾವಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಸ್ಪೀಕರ್ ಸ್ಥಾನದ ಕುರಿತು ಅಗೌರವದ ಮಾತುಗಳನ್ನು ಕಾಂಗ್ರೆಸ್ ಸರಕಾರ ಮಾಡಿದೆ. ಸ್ಪೀಕರ್ ಅವರು ಸಂವಿಧಾನದ ಕುರಿತು ಮಾತನಾಡಿ ಸಂವಿಧಾನ ಎಂದರೇನು? ಯಾಕೆ ಅದನ್ನು ಗೌರವಿಸಬೇಕು? ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್- ಹೀಗೆ ಯಾವುದೇ ಧರ್ಮ, ಜಾತಿ ಮೀರಿ ಎಲ್ಲ ಸದಸ್ಯರು ತಮ್ಮ ನಡವಳಿಕೆ ಮಾಡಬೇಕೆಂದು ತಿಳಿಸಿದ್ದರು. ಸ್ಪೀಕರ್ ಸ್ಥಾನ ಎಂದರೆ ನ್ಯಾಯಾಧೀಶರ ಸ್ಥಾನ. ಎಲ್ಲ ಸದಸ್ಯರಿಗಿಂತ ಮೇಲ್ಮಟ್ಟದ ಸ್ಥಾನ ಎಂದು ವಿಶ್ಲೇಷಿಸಿದರು.
ಡಾ.ಅಂಬೇಡ್ಕರರ ಸಂವಿಧಾನದಡಿ ಆ ಸ್ಥಾನಕ್ಕೆ ವಿಶೇಷ ಗೌರವ ಇದೆ. ಪೂಜ್ಯನೀಯ ಸ್ಥಾನ ಆ ಸ್ಥಾನದ್ದು. ಇಂಥ ಸಂದರ್ಭದಲ್ಲಿ ಈ ಮಂತ್ರಿಮಂಡಲದ ಸದಸ್ಯರಾದ ಜಮೀರ್ ಅಹ್ಮದ್ ಖಾನ್ ಅವರು ಮುಸ್ಲಿಮರ ಸಭೆಯಲ್ಲಿ, ‘ಕರ್ನಾಟಕದಲ್ಲಿ ಯಾರೂ ಕೂಡ ಇದುವರೆಗೆ ಮುಸ್ಲಿಮರನ್ನು ಸ್ಪೀಕರ್ ಮಾಡಿಯೇ ಇಲ್ಲ. ಪ್ರಥಮ ಬಾರಿಗೆ ನಾವು ಮಾಡಿದ್ದೇವೆ. ಆ ಸ್ಥಾನದಲ್ಲಿ ಕುಳಿತ ಸ್ಪೀಕರ್ ಅವರಿಗೆ ಎಲ್ಲ ಬಿಜೆಪಿ ನಾಯಕರು ಅಂದರೆ ಹಿಂದೂಗಳು ನಮಸ್ಕಾರ ಹಾಕಬೇಕಿದೆ. ಅಂಥ ಸ್ಥಾನ ಕೊಟ್ಟಿದ್ದೇವೆ’ ಎಂದಿದ್ದಾರೆ. ಮುಸ್ಲಿಮರು ಎಲ್ಲ ಧರ್ಮಕ್ಕಿಂತ ದೊಡ್ಡವರು, ಅವರ ಅಡಿಯಾಳಾಗಿ ಸಲಾಂ ಎಂದು ಕುಳಿತುಕೊಳ್ಳಬೇಕು ಎಂಬ ಭಾವನೆ ಅವರದು ಎಂದು ಟೀಕಿಸಿದರು.
ಹಿಂದೂ- ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸುವ ಹೇಳಿಕೆಯನ್ನು ಜಮೀರ್ ಅಹ್ಮದ್ ಅವರು ನೀಡಿದ್ದಾರೆ. ನಾವು ಸದನದಲ್ಲಿ ಪ್ರತಿಭಟನೆ ಮಾಡಿದ್ದೇವೆ. ಸಂವಿಧಾನದ ಪಾಠ ಮಾಡುವ ಸ್ಪೀಕರ್ ಅವರ ಬಾಯಿಯಲ್ಲಿ ಜಮೀರ್ ಅಹ್ಮದ್ ಅವರು ಮಾಡಿದ್ದು ತಪ್ಪು ಎಂದು ಬಂದಿಲ್ಲ. ಇದು ದುರದೃಷ್ಟಕರ ಎಂದು ನುಡಿದರು. ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡುವುದಾಗಿ ಸಿದ್ದರಾಮಯ್ಯರ ಸರಕಾರ ಹೇಳಿದೆ. ಇವತ್ತು ಮಸೂದೆಗಳನ್ನೂ ಮಂಜೂರು ಮಾಡಿದ್ದಾರೆ. ಸ್ಟ್ಯಾಂಪ್ ಡ್ಯೂಟಿ, ಚಾರಿಟಿ ಸಂಬಂಧ ಕಾರ್ಯಕ್ಕೂ ಹೆಚ್ಚು ಸುಂಕ ವಿಧಿಸಿದ್ದಾರೆ. ಮೌಲ್ವಿಗಳಿಗೆ 10 ಸಾವಿರ ಕೋಟಿ ನೀಡಲು ಹಣ ಸಂಗ್ರಹಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಸರಕಾರವು ಮತಕ್ಕಾಗಿ ಮುಸ್ಲಿಮರನ್ನು ಓಲೈಸುತ್ತಿದೆ. ಜಮೀರ್ ಅಹ್ಮದ್ ಅವರದು ಹುಚ್ಚು ಮತ್ತು ವಿಕೃತ ಹೇಳಿಕೆ; ಸಂವಿಧಾನಕ್ಕೆ ಇದು ಕಪ್ಪು ಚುಕ್ಕಿ. ಸರಕಾರ ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕಿತ್ತು. ಸ್ಪೀಕರ್ ಅವರೂ ಆ ಸ್ಥಾನದ ಗೌರವ ಎತ್ತಿ ಹಿಡಿದಿಲ್ಲ ಎಂದು ಆಕ್ಷೇಪಿಸಿದರು.
ಪ್ರಜಾಪ್ರಭುತ್ವ ದಮನ ಮಾಡುವ, ಮುಸ್ಲಿಮರನ್ನು ಓಲೈಸುವ ಸರಕಾರ ಇದು. ಇದರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಆರ್.ಅಶೋಕ್ ಅವರು ತಿಳಿಸಿದರು.
ಸದನವನ್ನು ಇನ್ನೊಂದು ವಾರ ವಿಸ್ತರಿಸಲು ಕೋರಿದ್ದೇವೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಜನಪ್ರತಿನಿಧಿಗಳಿಗೆ ಅರ್ಧರ್ಧ ದಿನ ಅವಕಾಶ ಕೊಡಲು ಕೋರಿದ್ದೇವೆ ಎಂದು ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 50 ವರ್ಷ ಆಡಳಿತ ನಡೆಸಿದೆ. ಬಿಜೆಪಿ ಆಡಳಿತ ಇದ್ದುದು ಕೇವಲ 9 ವರ್ಷ. 50 ವರ್ಷಗಳಲ್ಲಿ ನೀರಾವರಿ ಯೋಜನೆಗೆ ಎಷ್ಟು ಮೊತ್ತ ಕೊಟ್ಟಿದ್ದಾರೆ? ಕೃಷ್ಣೆಯ ಕಣ್ಣೀರು ಎಂಬ ಪುಸ್ತಕವನ್ನು ಎಚ್.ಕೆ.ಪಾಟೀಲರು ಬಿಡುಗಡೆ ಮಾಡಿದ್ದಾರೆ. ಕೃಷ್ಣೆ ಕಣ್ಣೀರು ಸುರಿಸುತ್ತಲೇ ಇದ್ದಾಳೆ. ಕಾಂಗ್ರೆಸ್ನವರು ತುಪ್ಪ ತಿನ್ನುತ್ತಿದ್ದಾರೆ ಎಂದರು.
ಪ್ರತಿವರ್ಷ 10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದರೂ ಕೊಡಲಿಲ್ಲ. ಮುಸ್ಲಿಮರಿಗೆ, ಮೌಲ್ವಿಗಳಿಗೆ 10 ಸಾವಿರ ಕೋಟಿ ಕೊಡುತ್ತಿದ್ದಾರೆ ಎಂದು ಟೀಕಿಸಿದರು. ಹಿಂದೂಗಳನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನೋಡುತ್ತಿದ್ದಾರೆ ಎಂದು ತಿಳಿಸಿದರು.
ಎಲ್ಲೆಡೆ ಬರ ಇದ್ದು, ರೈತರಿಗೆ ಎಕರೆಗೆ 25 ಸಾವಿರ ಕೊಡಬೇಕಿತ್ತು. 2 ಸಾವಿರವೂ ಇಲ್ಲ. ಅರ್ಧ ಎಕರೆಗೆ 500 ರೂ ಕೊಡುತ್ತಾರೆ. ಇದು ಕಟುಕರ ಸರಕಾರ. ಮೋಸದ ಸರಕಾರ; ಹಿಂದೂಗಳನ್ನು ದಮನ ಮಾಡುವ ಪ್ರಕ್ರಿಯೆ ಎಂದು ನುಡಿದರು.
ಯೇಸುವಿನ ಶಾಪದಿಂದ ಭೂಕಂಪ ಆಗಿದೆ ಎಂದಿದ್ದ ಸಚಿವರನ್ನು ಹಿಂದೆ ಎಸ್.ಎಂ.ಕೃಷ್ಣ ಅವರು ತಕ್ಷಣವೇ ಸಂಪುಟದಿಂದ ವಜಾ ಮಾಡಿದ್ದರು. ಕೇವಲ ಒಂದು ಗಂಟೆಯಲ್ಲಿ ಅವರನ್ನು ವಜಾ ಮಾಡಿದ್ದರು. ನಿಮ್ಮ ಸರಕಾರ ಹೀಗೆ ಮಾಡಿದೆಯೇ ಸಿದ್ದರಾಮಯ್ಯನವರೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.ಕಾಂಗ್ರೆಸ್ ಎಂ ಆಗಿದೆ ಎಂದ ಅವರು, ಸಂವಿಧಾನದ ಉಳಿವಿಗೆ ಹೋರಾಟ ಮುಂದುವರೆಸುತ್ತೇವೆ ಎಂದು ಪ್ರಕಟಿಸಿದರು. ಸಂವಿಧಾನ ಉಳಿಸಿ, ಸ್ಪೀಕರ್ ಸ್ಥಾನದ ಗೌರವ ಉಳಿಸಿ ಎಂದು ಆಗ್ರಹಿಸಿದರು. 2 ಕೋಟಿ ಹೆಚ್ಚು ಖರ್ಚಾದರೂ ಪರವಾಗಿಲ್ಲ; ಸದನದ ಅವಧಿ ವಿಸ್ತರಿಸಿ ಎಂದು ಆಗ್ರಹಿಸಿದರು.
ಜಮೀರ್ ಅಹ್ಮದ್ ಅವರ ಮಾತು ದುರಹಂಕಾರದ್ದು- ವಿಜಯೇಂದ್ರ
ಜಮೀರ್ ಅಹ್ಮದ್ ಅವರ ಪ್ರಕರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ಸಂವಿಧಾನ ಉಳಿಸಲು ಈ ಕ್ರಮ ಎಂದರು.
ಜಮೀರ್ ಅಹ್ಮದ್ ಅವರ ಮಾತು ದುರಹಂಕಾರದ್ದು. ಅವರ ಹೇಳಿಕೆಯ ಅರ್ಥ ಅವರಿಗೂ ಗೊತ್ತಿದೆ. ನಮಗೂ ಗೊತ್ತಿದೆ. ಜಮೀರ್ ಅಹ್ಮದ್ ಅವರ ಹೇಳಕೆ ಬಂದ 24 ಗಂಟೆಗಳಲ್ಲಿ ಅವರ ರಾಜೀನಾಮೆ ಪಡೆಯುವ ನಿರೀಕ್ಷೆ ಇತ್ತು. ಆದರೆ, ಅದಾಗಲಿಲ್ಲ. ಗೌರವಾನ್ವಿತ ಸಭಾಧ್ಯಕ್ಷರೂ ಗಟ್ಟಿ ನಿರ್ಧಾರ ಮಾಡಲಿಲ್ಲ. ಹಾಗಾಗಿ ಬಿಜೆಪಿ ಮತ್ತು ಜೆಡಿಎಸ್ ಜೊತೆಯಾಗಿ ಜಮೀರ್ ಅಹ್ಮದ್ ಅವರ ಹೇಳಿಕೆ ಖಂಡಿಸಿ ಸತ್ಯಾಗ್ರಹ ಮಾಡುತ್ತಿವೆ ಎಂದು ವಿವರಿಸಿದರು. ತಮ್ಮ ಹೇಳಿಕೆ ತಪ್ಪು ಎಂದು ಜಮೀರ್ ಅಹ್ಮದ್ ಅವರಿಗೆ ಅನಿಸದೇ ಇರುವುದು ದುರದೃಷ್ಟಕರ ಎಂದು ತಿಳಿಸಿದರು.
ಶಾಸಕರಾದ ಬಸವನಗೌಡ ಯತ್ನಾಳ್, ಅರಗ ಜ್ಞಾನೇಂದ್ರ, ಅರವಿಂದ್ ಬೆಲ್ಲದ, ಡಾ ಸಿ.ಎನ್.ಅಶ್ವಥ್ ನಾರಾಯಣ್, ಸುರೇಶ್ ಕುಮಾರ್ ಹಾಗೂ ಶಾಸಕರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.