ಉಡುಪಿ: ಗಣೇಶೋತ್ಸವ ಬಂದರೆ ಎಲ್ಲೆಡೆ ಸಾರ್ವಜನಿಕ ಗಣೇಶೊತ್ಸವ, ಮೆರವಣಿಗೆ ಲಕ್ಷಗಟ್ಟಲೇ ವೆಚ್ಚ ಮಾಡುತ್ತಾರೆ. ಆದರೆ ಉಡುಪಿಯ ಯುವಕ ಮಂಡಲದ ಯುವಕರು ಮಾತ್ರ ಗಣೇಶ ಹಬ್ಬದಲ್ಲಿ ಬಂದ ಹಣದಿಂದ ಆಶ್ರಯವಿಲ್ಲದ ಸ್ಮಶಾನ ಕಾಯುವ ಬಾಹುಕನಿಗೆ ಸೂರು ಕಲ್ಪಿಸಿ ಕೊಟ್ಟಿದ್ದಾರೆ.
ಗಣೇಶ ಹಬ್ಬ ಬಂದರೆ ಪ್ರತಿ ಮನೆ ಮನೆಯಲ್ಲಿ ಗಣೇಶನ ಮೂರ್ತಿ ಪೂಜೆ ಭಕ್ತಿಭಾವದಿಂದ ನಡೆಯುತ್ತದೆ. ಅಲ್ಲಲ್ಲಿ ಗಣಪನ ಕೂರಿಸಿ ಸಂಭ್ರಮಿಸುತ್ತಾರೆ. ಯುವಕರು, ಮಕ್ಕಳು ಎಲ್ಲರು ಗುಂಪು ಕಟ್ಟಿಕೊಂಡು ಶಕ್ತ್ಯಾನುಸಾರ ಗಣೇಶನನ್ನು ಪೂಜಿಸುತ್ತಾರೆ. ಲಕ್ಷ ಲಕ್ಷ ಹಣ ವೆಚ್ಚಮಾಡಿ ಮೆರವಣಿಗೆ, ಪೂಜೆ ಪುರಸ್ಕಾರಗಳು ಮನೊರಂಜನೆ ಕಾರ್ಯಕ್ರಮ ನಡೆಯುತ್ತದೆ.
ಆದರೆ ಉಡುಪಿಯ ಉದ್ಯಾವರದ ಯುವಕ ಮಂಡಲ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಾತ್ರ ಗಣೇಶ ಹಬ್ಬವನ್ನು ವಿಶಿಷ್ಟವಾಗಿ ಅರ್ಥಪೂರ್ಣವಾಗಿ ಆಚರಿಸಿ ಸಾರ್ಥಕತೆ ಮೆರೆದರು. ಯುವಕ ಮಂಡಲ 52 ವರ್ಷಗಳಿಂದ ಸಂಘಟಿತರಾಗಿ ಸಮಾಜಮುಖಿ ಕಾರ್ಯಕ್ರಮ ಕೈಗೊಂಡಿದೆ. ಚೌತಿಯ ಸಂದರ್ಭ ಸಂಗ್ರವಾದ ಹಣವನ್ನು ಸಮಾಜಕ್ಕೆ ವಿನಿಯೋಗಿಸುತ್ತ ಬಂದಿದೆ.
ಕಳೆದ ಎರಡು ವರ್ಷಗಳಿಂದ ಯುವಕ ಮಂಡಲವು ಹೊಸ ಯೋಜನೆಯೊಂದಿಗೆ ಉದ್ಯಾವರ ಗ್ರಾಮಕ್ಕೆ ಬೇಕಾದ ಮೈದಾನಕ್ಕಾಗಿ, ರಸ್ತೆ ನಿರ್ಮಾಣ, ಬಡವರ ಏಳಿಗೆಗಾಗಿ ಧನಸಹಾಯ ಮಾಡುತ್ತ ಬಂದಿದೆ. ಗಣೇಶೋತ್ಸವದಿಂದ ಸಂಗ್ರಹವಾದ ಹಣದಿಂದ ಬಡವರ ಬಾಳು ಬೆಳಗಿಸುವ ಕಾರ್ಯ ಮಾಡುವುದಕ್ಕೆ ವಿನಿಯೋಗಿಸುತ್ತಿದ್ದಾರೆ. ಅರ್ಹ ಫಲನುಭವಿಗಳನ್ನು ಗುರುತಿಸುವ ಕಾರ್ಯ ಮಾಡುತ್ತಾರೆ.
ರುದ್ರಭೂಮಿ ಕಾಯುವ ಸೂರು ಇಲ್ಲದ ಸೋಮಯ್ಯ ಪೂಜಾರಿಯವರಿಗೆ 4 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಟ್ಟಿದೆ. ಆದರೆ ಆ ಬಾಹುಕನ ಬದುಕು ಹೇಗಿರುತ್ತೆ ತಿರುಗಿ ನೋಡುವ ಮಂದಿ ಕಡಿಮೆ.
ಬಾಹುಕನ ಬದುಕಿಗೆ ಸ್ಮಶಾನದಲ್ಲಿ ಮಾಡುವ ಕೆಲಸಕ್ಕೆ ಸಿಗುವ ಪುಡಿಗಾಸೇ ಜೀವನಾಧಾರ. ಅಂತಹ ಬಾಹುಕನೇ ಇವರು. ಇವರ ಹೆಸರು ಸೋಮಯ್ಯ ಪೂಜಾರಿ. ಸ್ಮಸಾನ ಕಾಯೋ ಕುಟ್ಟಿ ಎಂದೆ ಪರಿಚಿತರು. ರುದ್ರಭೂಮಿಯೇ ಬದುಕಿಗೂ ಜೀವನ ಆಧಾರ. ಇದೇ ದುಡಿಮೆಯಲ್ಲಿ ಬಂದ ಪುಡಿಗಾಸಿನಿಂದ ಜೀವನ ಬಂಡಿ ತಳ್ಳುತ್ತಿದ್ದಾರೆ. ಇಷ್ಟು ದಿನ ಬಾಡಿಗೆ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದರು. ಸ್ಮಶಾನ ಕಾಯುವ ಕಾಯಕ 27 ವರ್ಷಗಳಿಂದ ತಪಸ್ಸಿನಂತೆ ಮಾಡುತ್ತಾ ಬಂದಿದ್ದಾರೆ.
ಆದರೆ ಆ ತಪಸ್ಸಿಗೆ ದೊರೆತ್ತಿದ್ದು ಬಡತನ ಎನ್ನುವ ಸಂಪತ್ತು ಮಾತ್ರ. ಸೋಮಯ್ಯ ಅವರಿಗೆ ನಾಲ್ವರು ಹೆಣ್ಣುಮಕ್ಕಳು. ತಿಂಗಳಿಗೆ 10-15 ಅಂತ್ಯಸಂಸ್ಕಾರ ಮಾಡಿದ ದುಡ್ಡಿನಲ್ಲಿ ಸಂಸಾರ ನಡೆಯುವ ಅನಿವಾರ್ಯತೆ ಇವರದ್ದು.
ವಯಸ್ಸು ಮೀರುತ್ತಿದಂತೆ ದೇಹ ಸೊರಗಿತ್ತು. ಉದ್ಯಾವರ ಸ್ಮಶಾನ ಕಾಯುತ್ತಲೇ ಬದುಕು ನಡೆಸುವ ಅನಿವಾರ್ಯತೆ ಒಂದು ಕಡೆಯಾದರೆ ಮತ್ತೊಂದು ಕಡೆ ಬಾಡಿಗೆ ಗುಡಿಸಲು ಆಶ್ರಯವಾಗಿತ್ತು. ಸೋಮಯ್ಯ ಕುಟುಂಬಕ್ಕೆ ಆಶ್ರಯವಾಗಿದ್ದ ಬಾಡಿಗೆ ಗುಡಿಸಲು ಆರು ತಿಂಗಳ ಹಿಂದೆ ಕೈತಪ್ಪಿಹೋಗಿತ್ತು. ಬದುಕು ನಡು ಬೀದಿಗೆ ಬಂದು ನಿಂತಿತ್ತು. ಅಷ್ಟು ನೋವಿನ ಜೊತೆ ಮದುವೆ ಮಾಡಿದ ಹಿರಿಯ ಹೆಣ್ಣುಮಕ್ಕಳ ಗಂಡದಿರು ತೀರಿಕೊಂಡು ಹಿರಿಯ ಜೀವಕ್ಕೆ ಮತ್ತಷ್ಟು ನೋವು ಹೃದಯದಲ್ಲಿ ಮಡುಗಟ್ಟಿಸಿತ್ತು. ವಿಶ್ರಾಂತಿ, ಬೆಚ್ಚನೇ ಸೂರು ಇಲ್ಲದ ಕೊರಗು ಬಾಧಿಸುತ್ತಿತು. ಸೂರು ಇಲ್ಲದೇ ನಡು ಬೀದಿಗೆ ಬಂದಾಗ ನೆರವಿಗೆ ಬಂದಿದ್ದು ಉದ್ಯಾವರ ಯುವಕ ಮಂಡಲ.
ಮನೆಯಿಲ್ಲದೇ ಬೀದಿಗೆ ಬಂದ ಸೋಮಯ್ಯ ಕಟುಂಬವನ್ನು ಆರು ತಿಂಗಳಿನಿಂದ ಆಶ್ರಯ ನೀಡಿದೆ ಯುವಕ ಮಂಡಲ. ರುದ್ರ ಭೂಮಿ ಕಾಯುವ ಸೋಮಯ್ಯ ಯಾನೆ ಕುಟ್ಟಿಗೆ 4 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ಹಸ್ತಾಂತರ ಮಾಡಿದ್ದಾರೆ. ಮನೆ ನಿರ್ಮಾಣಕ್ಕಾಗಿ ಯುವಕ ಮಂಡಲ ರಾತ್ರಿ, ಹಗಲು ಶ್ರಮವಹಿಸಿದ್ದಾರೆ. ದಾನಿಗಳು ಒಂದಿಷ್ಟು ಸಹಾಯಹಸ್ತ ಚಾಚಿದ್ದಾರೆ. ಇದರ ಫಲವಾಗಿ ಸುಂದರವಾದ ಪುಟ್ಟ ಮನೆಯೊಂದನ್ನು ಕೂಡ ನಿರ್ಮಾಣ ಮಾಡಿದ್ದಾರೆ.
26ನೇ ಸಾರ್ವಜನಿಕ ಗಣೇಶೋತ್ಸವಾದ ವೇಳೆ ಮನೆಯನ್ನು ಸೋಮಯ್ಯನ ಕುಟುಂಬಕ್ಕೆ ನೀಡಿದ್ದಾರೆ. ಪ್ರತಿ ವರ್ಷದ ಗಣೇಶನ ಹಬ್ಬ ಒಂದಷ್ಟು ಮಂದಿಗೆ ಭಕ್ತಿಭಾವ ಮೂಡಿಸಿ, ಮನೋರಂಜನೆಯನ್ನು ನೀಡಿದರೆ, ಈ ಬಾರಿ ಬಂದ ಗಣೇಶ ಹಬ್ಬ ರುದ್ರ ಭೂಮಿ ಕಾಯುವ ಸೋಮಯ್ಯನ ಬಾಳಿನಲ್ಲಿ ಸಂತಸ, ಬೆಳಕು ಮೂಡಿದೆ. ನೋವುಂಡು ಬದುಕುತ್ತಿದ್ದ ಬಡ ಕುಟುಂಬದ ಮೊಗದಲ್ಲಿ ಸಂತಸ ಮೂಡಿಸಿದೆ.
ಧಾರ್ಮಿಕ ಆಚರಣೆಗಳು ಆಡಂಬರ ಆಚರಣೆಯಾಗದೆ. ಮಾನವೀಯತೆ ನೆಲೆಯಲ್ಲಿ ಕೆಲಸ ಕೈಗೊಂಡರೆ ಆಚರಣೆ ಕೂಡ ಅರ್ಥ ಪೂರ್ಣವಾಗುತ್ತೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ಗಣೇಶನ ಹೆಸರಿನಲ್ಲಿ ದುಂದು ವೆಚ್ಚ ಮಾಡಿ ಸಂಭ್ರಮಿಸುವ ಬದಲು ಇಂತಹ ಮಾನವೀಯತೆ ಮೆರೆಯುವಂತಾಗಲಿ ಎಂಬುದು ಎಲ್ಲರ ಆಶಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.