ಬಂಟ್ವಾಳ : ತಾಲೂಕಿನ ನರಿಕೊಂಬು ಗ್ರಾ.ಪಂ.ವ್ಯಾಪ್ತಿಯ ಶಂಭೂರು ಗ್ರಾಮದಲ್ಲಿ ವಿತರಣೆಯಾಗುತ್ತಿರುವ ಪಡಿತರ ಆಹಾರ ಸಾಮಾಗ್ರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡದಂತೆ ಗ್ರಾಮಸ್ಥರು ಬಂಟ್ವಾಳ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ಶಂಭೂರು ಗ್ರಾಮದಲ್ಲಿ ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಸುಮಾರು ಇಪ್ಪತ್ತೊಂಭತ್ತು ವರ್ಷದಿಂದ ಪಡಿತರ ಆಹಾರ ಸಾಮಾಗ್ರಿಗಳನ್ನು ಶಂಭೂರಿನ ಸುವರ್ಣ ಗ್ರಾಮದಲ್ಲಿ ಮಂಜೂರಾತಿಯಾದ (ಗ್ರಂಥಾಲಯ) ಕಟ್ಟಡದಲ್ಲಿ ವಿತರಣೆ ಮಾಡುತ್ತಿದ್ದಾರೆ. ಆದರೆ ನರಿಕೊಂಬು ಗ್ರಾಮ ಪಂಚಾಯತಿಯ ಆಡಳಿತದವರು ಹಾಗೂ ಸ್ಥಾಪಿತ ಹಿತಾಸಕ್ತಿಯವರು ಶಂಭೂರು ಗ್ರಾಮದ ಪಂಚಾಯತ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಆ.1ಕ್ಕೆ ನಿರ್ಣಯ ಮಾಡಿ, ಪಡಿತರ ಸಾಮಾಗ್ರಿಯನ್ನು ತೆರವು ಮಾಡುವಂತೆ ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘಕ್ಕೆ ಒತ್ತಾಯ ಮಾಡಿದ್ದುದರಿಂದ ಪಡಿತರ ಆಹಾರ ಸಾಮಾಗ್ರಿ ಇರುವಾಗಲೇ, ನರಿಕೊಂಬು ಗ್ರಾಮ ಪಂಚಾಯತಿಯಲ್ಲಿರುವ ಗ್ರಂಥಾಲಯವನ್ನು ಶಂಭೂರಿನಲ್ಲಿ ವಿತರಣೆ ಮಾಡುತ್ತಿರುವ ಕಟ್ಟಡಕ್ಕೆ ಆ.೨೦ರಂದು ನರಿಕೊಂಬು ಗ್ರಾಮಪಂಚಾಯತ್ನವರು ಗ್ರಂಥಾಲಯ ಪಾಲಕಿಯ ಮುಖಾಂತರ ಸಾಮಾಗ್ರಿಗಳನ್ನು ಇಟ್ಟಿದ್ದಾರೆ.
ನರಿಕೊಂಬು ಗ್ರಾಮಪಂಚಾಯತ್ನವರು ಆಡಳಿತ ನಡವಳಿಕೆಯಿಂದ ಶಂಭೂರು ಗ್ರಾಮದ ಸುಮಾರು ನಾಲ್ನೂರು ಪಡಿತರ ಚೀಟಿಯವರು ತೊಂದರೆ ಅನುಭವಿಸುವಂತಾಗಿದೆ. ಆದುದರಿಂದ ಶಂಭೂರಿನಲ್ಲಿ ವಿತರಣೆಯಾಗುತ್ತಿರುವ ಪಡಿತರ ಸಾಮಾಗ್ರಿಗಳನ್ನು ಗ್ರಾಮದ ಜನರ ಹಿತದೃಷ್ಠಿಯಿಂದ ಬೇರೆಡೆಗೆ ಸ್ಥಳಾಂತರಗೊಳಿಸದಂತೆ ಗ್ರಾಮಸ್ಥರು ವಿನಂತಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.