ನೂತನ ಶೈಕ್ಷಣಿಕ ವರ್ಷದಿಂದ 8 ರಾಜ್ಯಗಳ 14 ಎಂಜಿನಿಯರಿಂಗ್ ಕಾಲೇಜುಗಳ ಆಯ್ದ ಶಾಖೆಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಕೋರ್ಸ್ ಗಳಲ್ಲಿ ಆರಂಭಿಸಲು ತೀರ್ಮಾನ ಕೈಗೊಂಡಿರುವುದಕ್ಕೆ ಅಭಿನಂದನೆಗಳು ಮತ್ತು ಸ್ವಾಗತಾರ್ಹ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಬಿ.ಟೆಕ್ ಕೋರ್ಸ್ಗಳಲ್ಲಿ 11 ಪ್ರಾದೇಶಿಕ ಭಾಷೆಗಳಾದ- ಹಿಂದಿ, ಮರಾಠಿ, ತಮಿಳು, ತೆಲುಗು, ಕನ್ನಡ, ಗುಜರಾತಿ, ಮಲಯಾಳಂ, ಬೆಂಗಾಳಿ, ಅಸ್ಸಾಮಿ, ಪಂಜಾಬಿ ಮತ್ತು ಒರಿಯಾಗಳಲ್ಲಿ ಬಳಕೆಗೆ ಅನುಮತಿ ನೀಡಿರುವುದಕ್ಕೆ ನನಗೆ ಸಂತಸವಾಗುತ್ತಿದೆ. ಇದು ಸರಿಯಾದ ದಿಕ್ಕಿನಲ್ಲಿ ಇಡುತ್ತಿರುವ ಹೆಜ್ಜೆ ಎಂದು ನಾನು ಬಲವಾಗಿ ನಂಬಿದ್ದೇನೆ.
ಇನ್ನೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ವಿಶೇಷವಾಗಿ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್ ಗಳನ್ನು ನಡೆಸುತ್ತಿರುವ ಸಂಸ್ಥೆಗಳು ಪ್ರಾದೇಶಿಕ ಭಾಷೆಗಳಲ್ಲಿ ಕೋರ್ಸ್ಗಳನ್ನು ನೀಡುವ ನಿಟ್ಟಿನಲ್ಲಿ ಮುಂದಡಿ ಇಡಬೇಕು, ಏಕೆಂದರೆ ಇಂತಹ ಉಪಕ್ರಮ ವಿದ್ಯಾರ್ಥಿಗಳಿಗೆ ವರದಾನವಾಗಿ ಪರಿಣಮಿಸುತ್ತದೆ.
ನಾವೆಲ್ಲಾ ತಿಳಿದಿರುವಂತೆ ಭಾಷೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ನಮ್ಮ ಮಾತೃ ಭಾಷೆ ಅಥವಾ ನಮ್ಮ ಸ್ಥಳೀಯ ಭಾಷೆ ನಮಗೆ ಅತ್ಯಂತ ವಿಶೇಷವಾದುದು, ಏಕೆಂದರೆ ಅದರೊಂದಿಗೆ ನಾವು ಕರಳುಬಳ್ಳಿ ಸಂಬಂಧವನ್ನು ಹಂಚಿಕೊಂಡಿದ್ದೇವೆ. ಇದು ನಮ್ಮ ಬಾಲ್ಯದಿಂದ ನಮಗೆ ಪರಿಚಯವಿರುವ ಮತ್ತು ಅತ್ಯಂತ ಗಾಢವಾದ ಭಾವನಾತ್ಮಕ ಸಂಬಂಧ ಹೊಂದಿರುವ ಭಾಷೆಯಾಗಿದೆ. ಭಾರತವು ಶ್ರೀಮಂತ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿದೆ ಹಾಗೂ ನೂರಾರು ಭಾಷೆಗಳು ಮತ್ತು ಸಾವಿರಾರು ಉಪಭಾಷೆಗಳಿಗೆ ನೆಲೆಯಾಗಿದೆ. ನಮ್ಮ ಭಾಷಾ ವೈವಿಧ್ಯವು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಮೂಲಾಧಾರವಾಗಿದೆ.
ಇತ್ತೀಚಿನ ಭಾಷಾ ಗಣತಿ ಪ್ರಕಾರ, ನಮ್ಮಲ್ಲಿ 19,500 ಭಾಷೆಗಳು ಮತ್ತು ಉಪಭಾಷೆಗಳಿವೆ. ವಾಸ್ತವವಾಗಿ ನಮ್ಮ ದೇಶದಲ್ಲಿ 10 ಸಾವಿರ ಅಥವಾ ಅದಕ್ಕೂ ಹೆಚ್ಚು ಜನರು ಮಾತನಾಡುವ 121 ಭಾಷೆಗಳಿವೆ. ನಮ್ಮ ಜೀವಂತ ಪರಂಪರೆಯ ಈ ಭಾಷಾ ಸಂಪತ್ತು, ಇನ್ನೂ ನಮ್ಮ ಶ್ರೀಮಂತ ಮತ್ತು ಭವ್ಯ ಗತಕಾಲದ ಅನಿಸಿಕೆಗಳನ್ನು ಒಳಗೊಂಡಿರುವುದರಲ್ಲಿ ಆಶ್ಚರ್ಯವಿಲ್ಲ.
“ಇಂಗ್ಲೀಷ್ ಕಲಿತ ವಿದ್ಯಾವಂತರು ಮಾಡಿದಂತೆ ಮತ್ತು ಈಗಲೂ ಮುಂದುವರಿಯುತ್ತಿರುವಂತೆ ಮಾತೃಭಾಷೆ ಕುರಿತ ನಿರ್ಲಕ್ಷ್ಯದಿಂದಾಗಿ, ತಮ್ಮ ಮಾತೃ ಭಾಷೆಯನ್ನು ಅರಿಯುವ ಭಾಷಾ ಹಸಿವು ಹಾಗೆಯೇ ಉಳಿದು ಬಿಡುತ್ತದೆ’’ ಎಂದು ಮಹಾತ್ಮಾಗಾಂಧಿ ಹೇಳಿದ್ದರು.
ವಿಶ್ವಸಂಸ್ಥೆಯ ಪ್ರಕಾರ, ಪ್ರತಿ ಎರಡು ವಾರಕ್ಕೊಮ್ಮೆ ಒಂದು ಭಾಷೆ ಕಣ್ಮರೆಯಾಗುತ್ತದೆ. ಅದರೊಂದಿಗೆ ಸಂಪೂರ್ಣ ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯೂ ಕೊನೆಯಾಗುತ್ತದೆ. ಜಗತ್ತಿನಲ್ಲಿ ಸದ್ಯ ಮಾತನಾಡುವ ಸುಮಾರು 6000 ಭಾಷೆಗಳಲ್ಲಿ ಕನಿಷ್ಠ ಶೇ.43 ರಷ್ಟು ಅಳಿವಿನ ಅಂಚಿನಲ್ಲಿವೆ. ಭಾಷಾ ವೈವಿಧ್ಯಕ್ಕೆ ಹೆಸರುವಾಸಿಯಾದ ಭಾರತವು ಅಳಿವಿನಂಚಿನಲ್ಲಿರುವ 196 ಭಾಷೆಗಳನ್ನು ಹೊಂದಿದೆ. ಈ ಸಂಖ್ಯೆ ಎಚ್ಚರಿಕೆಯ ಗಂಟೆಯಾಗಿದೆ. ಆದ್ದರಿಂದ ನಮ್ಮ ಭಾಷೆಗಳನ್ನು ರಕ್ಷಿಸಲು ನಾವು ಕ್ರಮಗಳನ್ನು ಕೈಗೊಳ್ಳುವುದು ಮತ್ತು ಸಾಮೂಹಿಕ ಪ್ರಯತ್ನಗಳನ್ನು ಮಾಡುವುದು ಕಡ್ಡಾಯವಾಗಿದೆ. ನಮ್ಮ ಸ್ಥಳೀಯ ಭಾಷೆಗಳನ್ನು ರಕ್ಷಿಸಲು ಮತ್ತು ಮಾತೃ ಭಾಷೆಯಲ್ಲಿ ಕಲಿಕೆಯನ್ನು ಉತ್ತೇಜಿಸಲು ಬಹುವಿಧದ ಕಾರ್ಯತಂತ್ರಗಳ ಅಳವಡಿಕೆಯ ಅಗತ್ಯವಿದೆ.
ನಮ್ಮ ಭಾಷೆಗಳನ್ನು ಉಳಿಸಲು ಮತ್ತು ಸಂರಕ್ಷಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತದೆ. ನೂತನ ಶಿಕ್ಷಣ ನೀತಿಯು ಕನಿಷ್ಠ 5ನೇ ತರಗತಿವರೆಗೆ ಮತ್ತು 8ನೇ ತರಗತಿ ಮತ್ತು ಆನಂತರದವರೆಗೆ ಐಚ್ಛಿಕವಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಮಾತೃಭಾಷೆ/ ಸ್ಥಳೀಯ ಭಾಷೆ/ಪ್ರಾದೇಶಿಕ ಭಾಷೆ/ ಮನೆ ಭಾಷೆಗಳಲ್ಲಿ ಶಿಕ್ಷಣ ಕಲಿಸುವುದನ್ನು ಉತ್ತೇಜಿಸುತ್ತದೆ. ಶಿಕ್ಷಣದ ಆರಂಭಿಕ ಹಂತಗಳಲ್ಲಿ ಮಾತೃಭಾಷೆಯಲ್ಲಿ ಬೋಧನೆ ಮಗುವಿನ ಆತ್ಮಗೌರವವನ್ನು ಹೆಚ್ಚಿಸುತ್ತದೆ ಮತ್ತು ಅವನ/ಅವಳ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಎಂಬುದು ವಿಶ್ವದ ಅನೇಕ ಅಧ್ಯಯನಗಳಿಂದ ದೃಢಪಟ್ಟಿದೆ. ಆದ್ದರಿಂದ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣವನ್ನು ನೀಡುವುದು ಮಕ್ಕಳಿಗೆ ಅನೇಕ ರೀತಿಯ ಪ್ರಯೋಜನಗಳನ್ನು ಉಂಟು ಮಾಡುವುದಷ್ಟೇ ಅಲ್ಲ, ಅವರ ಭವಿಷ್ಯವನ್ನೂ ಉಜ್ವಲಗೊಳಿಸುತ್ತದೆ.
ನಮ್ಮ ಭಾಷೆಗಳನ್ನು ಸಂರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಶಿಕ್ಷಣ ಸಚಿವಾಲಯದ ಮತ್ತೊಂದು ಉಪಕ್ರಮವೆಂದರೆ, ಅಳಿವಿನಂಚಿನಲ್ಲಿರುವ ಭಾಷೆಗಳ ಉಳಿವು ಮತ್ತು ಸಂರಕ್ಷಣೆಗಾಗಿ ಯೋಜನೆ (ಎಸ್ಪಿಪಿಇಎಲ್) ರೂಪಿಸಿರುವುದು. ಈ ಯೋಜನೆಯಡಿ ಅಳಿವಿನಂಚಿಲ್ಲಿರುವ ಅಥವಾ ಭವಿಷ್ಯದಲ್ಲಿ ಅಳಿವಿನಂಚಿಗೆ ಹೋಗಬಹುದಾದ ಭಾಷೆಗಳ ದಾಖಲೆಗಳನ್ನು ಸಂಗ್ರಹಿಸಿ, ಸಂರಕ್ಷಿಸಲಾಗುವುದು. ಆದರೆ ಸರ್ಕಾರದ ಉಪಕ್ರಮಗಳು ಮಾತ್ರದಿಂದ ನಿರೀಕ್ಷಿತ ಬದಲಾವಣೆಗಳು ಸಾಧ್ಯವಿಲ್ಲ, ನಮ್ಮ ಸುಂದರ ಭಾಷೆಯನ್ನು ರಕ್ಷಿಸಲು ಮತ್ತು ನಮ್ಮ ಭವಿಷ್ಯದ ಪೀಳಿಗೆಗೆ ಸಂಪರ್ಕದ ಎಳೆಯನ್ನು ಬಲಪಡಿಸಲು ಜನರ ಪಾಲ್ಗೊಳ್ಳುವಿಕೆ ಅತ್ಯಂತ ನಿರ್ಣಾಯಕವಾಗಿದೆ. ಪ್ರತಿಯೊಂದು ಭಾಷೆಯೂ ಮೌಲ್ಯಗಳು, ಪದ್ದತಿಗಳು, ಸಂಪ್ರದಾಯಗಳು, ಆಚರಣೆಗಳು, ಕತೆಗಳು, ನಡೆವಳಿಕೆ, ರೂಢಿಗಳ ಸಾಂಸ್ಕೃತಿಕ ಭಂಡಾರವಾಗಿದ್ದು, ಅವು ಗಾದೆಗಳು, ನಾಣ್ಣುಡಿಗಳು, ಹೇಳಿಕೆಗಳು ಮತ್ತು ಭಾಷಾ ವೈಶಿಷ್ಟ್ಯಗಳಿಂದ ತಂಬಿ ಸಮೃದ್ಧವಾಗಿರುತ್ತವೆ ಎಂಬುದನ್ನು ಇಲ್ಲಿ ಮುಖ್ಯವಾಗಿ ನೆನೆಪಿಟ್ಟುಕೊಳ್ಳಬೇಕಾಗಿದೆ.
ಜನರು ತಮ್ಮ ಮಾತೃಭಾಷೆಯಲ್ಲಿ ಸಂಭಾಷಣೆ ನಡೆಸಲು ಹಿಂಜರಿಯುವುದನ್ನು ನಾನು ಹೆಚ್ಚಾಗಿ ಗಮನಿಸಿದ್ದೇನೆ. ನಮ್ಮ ಮಾತೃಭಾಷೆಯಲ್ಲಿ ಮಾತನಾಡಲು ನಾವು ಹಮ್ಮೆ ಪಡಬೇಕು ಮತ್ತು ಮನೆಯಲ್ಲಿ ಮಾತ್ರವಲ್ಲದೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ನಾವು ಮಾತೃಭಾಷೆಯಲ್ಲಿ ಸಂವಹನ ನಡೆಸಬೇಕು ಎಂಬುದು ನನ್ನ ದೃಢ ನಂಬಿಕೆಯಾಗಿದೆ. ಭಾಷೆಯನ್ನು ನಾವು ವ್ಯಾಪಕವಾಗಿ ಬಳಸಿದಾಗ ಮಾತ್ರ ಅದು ಉಳಿಯುತ್ತದೆ ಮತ್ತು ಅಭಿವೃದ್ಧಿ ಹೊಂದುತ್ತದೆ.
ಮಾತೃಭಾಷೆಯನ್ನು ಕಲಿಯಬೇಕೆಂದು ನಾನು ಬಲವಾಗಿ ಪ್ರತಿಪಾದಿಸುತ್ತಿದ್ದರೆ ಅದರ ಅರ್ಥ, ನಾವು ಇತರೆ ಭಾಷೆಗಳನ್ನು ಕಲಿಯಬೇಕಾಗಿಲ್ಲವೆಂದು ಸೂಚಿಸುತ್ತಿದ್ದೇನೆಂದಲ್ಲ. ವಾಸ್ತವವಾಗಿ ಪ್ರತಿಯೊಬ್ಬರೂ ಎಷ್ಟು ಸಾಧ್ಯವೋ ಅಷ್ಟು ಭಾಷೆಗಳನ್ನು ಕಲಿಯಬೇಕು ಎಂದು ನಾನು ಹೇಳುತ್ತಲೇ ಇರುತ್ತೇನೆ, ಆದರೆ ಅದಕ್ಕೆ ಬೇಕಾಗಿರುವುದು ಮಾತೃಭಾಷೆಯಲ್ಲಿ ಭದ್ರವಾದ ಅಡಿಪಾಯ.
ಇಂದಿನ ಹೆಚ್ಚುತ್ತಿರುವ ಪರಸ್ಪರ ಸಂಪರ್ಕದ ಜಗತ್ತಿನಲ್ಲಿ, ವಿವಿಧ ಭಾಷೆಗಳಲ್ಲಿ ಪ್ರಾವೀಣ್ಯ ಒಂದು ವರದಾನವೇ ಆಗಿದೆ. ಅಲ್ಲದೆ, ನಾವು ಕಲಿಯುವ ಪ್ರತಿಯೊಂದು ಭಾಷೆಯಿಂದಾಗಿ ನಾವು ಇನ್ನೊಂದು ಸಂಸ್ಕೃತಿಯೊಂದಿಗೆ ಸಂಪರ್ಕವನ್ನು ಬೆಳೆಸುತ್ತೇವೆ. ಆದ್ದರಿಂದ ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರು, ಕನಿಷ್ಠ ಒಂದು ರಾಷ್ಟ್ರೀಯ ಹಾಗೂ ಒಂದು ಅಂತಾರಾಷ್ಟ್ರೀಯ ಭಾಷೆಯನ್ನು ಕಲಿಯಲು ಪ್ರೋತ್ಸಾಹಿಸಬೇಕು.
ಮಾತೃಭಾಷೆಯಲ್ಲಿ ಕಲಿಯುವುದು ಒಬ್ಬರ ಗ್ರಹಣಶಕ್ತಿ ಮತ್ತು ಕಲಿಕೆಯ ಸಾಮರ್ಥ್ಯದ ಮಟ್ಟವನ್ನು ಹೆಚ್ಚಿಸುತ್ತದೆ ಎಂಬುದನ್ನು ನಾವು ಗಮನಿಸಬೇಕಾಗಿದೆ. ಮತ್ತೊಂದು ಭಾಷೆಯಲ್ಲಿ ವಿಷಯವನ್ನು ಅರ್ಥ ಮಾಡಿಕೊಳ್ಳಲು, ಮೊದಲು ಆ ಭಾಷೆಯನ್ನು ಕಲಿಯಬೇಕು ಮತ್ತು ಕರಗತ ಮಾಡಿಕೊಳ್ಳಬೇಕು, ಅದಕ್ಕೆ ಸಾಕಷ್ಟು ಪರಿಶ್ರಮ ಬೇಕಾಗುತ್ತದೆ. ಆದರೆ, ತಮ್ಮದೇ ಆದ ಮಾತೃ ಭಾಷೆಯಲ್ಲಿ ಕಲಿಯುವಾಗ ಹೆಚ್ಚಿನ ಶ್ರಮದ ಅಗತ್ಯವಿಲ್ಲ. ಎಂಜಿನಿಯರಿಂಗ್, ವೈದ್ಯಕೀಯ, ಕಾನೂನಿನಂತಹ ಎಲ್ಲಾ ವೃತ್ತಿಪರ ಕೋರ್ಸ್ ಗಳನ್ನು ಮಾತೃಭಾಷೆಯಲ್ಲಿ ಕಲಿಸುವ ದಿನಗಳನ್ನು ನೋಡಬೇಕೆಂಬುದು ನನ್ನ ಅಪೇಕ್ಷೆ. ಆ ನಿಟ್ಟಿನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಉಪಕ್ರಮ ಶ್ಲಾಘನೀಯ.
ನಮ್ಮ ಉನ್ನತ ಶಿಕ್ಷಣದಲ್ಲಿ ಮಾತೃಭಾಷೆಯನ್ನು ಬಳಕೆ ಮಾಡುವುದು ನಮ್ಮ ಭಾಷೆಗಳನ್ನು ಸಂರಕ್ಷಿಸುವ ಮತ್ತು ಪ್ರಚುರ ಪಡಿಸುವಲ್ಲಿ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ನಾವು ಒಟ್ಟಾಗಿ ನಮ್ಮ ಭಾಷೆಗಳನ್ನು ಶ್ರೀಮಂತಗೊಳಿಸೋಣ ಮತ್ತು ಮತ್ತಷ್ಟು ಬಲಪಡಿಸೋಣ.
ಜೈ ಹಿಂದ್ ..!
8 ರಾಜ್ಯಗಳಾದ್ಯಂತ 14 ಎಂಜಿನಿಯರಿಂಗ್ ಕಾಲೇಜುಗಳು ಈಗ ಪ್ರಾದೇಶಿಕ ಭಾಷೆಗಳಲ್ಲಿ ಕೋರ್ಸ್ಗಳನ್ನು ನೀಡಲಿವೆ. ಇದು ನಮ್ಮ ಭಾಷೆಗಳನ್ನು ಸಂರಕ್ಷಿಸುವಲ್ಲಿ ಮತ್ತು ಪ್ರಚಾರ ಮಾಡುವಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಉನ್ನತ ಶಿಕ್ಷಣದಲ್ಲಿ ಮಾತೃಭಾಷೆಯ ಮಹತ್ವದ ಬಗ್ಗೆ ನನ್ನ ಫೇಸ್ಬುಕ್ ಪೋಸ್ಟ್ ಅನ್ನು ಇಲ್ಲಿ ಓದಿ… https://t.co/AdEcp5gLSh
— Vice-President of India (@VPIndia) July 21, 2021
✍️ ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿಗಳು
ಇವರ Facebook ನಲ್ಲಿ ಪ್ರಕಟವಾದ ಲೇಖನ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.