ಬೆಂಗಳೂರು: ಬಿಜೆಪಿ ಎರಡು ಪ್ರಮುಖ ಹೋರಾಟಗಳನ್ನು ಕೈಗೆತ್ತಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ನೀಡಿದರು. ನಿನ್ನೆ ದಿನ ಪಕ್ಷದ ಎಲ್ಲ ಹಿರಿಯರು ಚರ್ಚೆ ಮಾಡಿ ಹೋರಾಟದ ನಿರ್ಧಾರ ಮಾಡಿದ್ದೇವೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಬಳಿಕ ಕಳೆದ 20 ತಿಂಗಳಿನಲ್ಲಿ ಜನರಿಗೆ ಬೆಲೆ ಏರಿಕೆಯ ಗ್ಯಾರಂಟಿಯನ್ನು ದಯಪಾಲಿಸಿದ್ದಾರೆ. ಸರಕಾರದ ನಿರ್ಧಾರದಿಂದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆ ಉಂಟಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರಕಾರ ಹಾಲಿನ ದರ, ವಿದ್ಯುತ್ ದರ, ನೀರಿನ ದರ, ಪೆಟ್ರೋಲ್, ಡೀಸೆಲ್, ಸ್ಟಾಂಪ್ ಶುಲ್ಕ, ಮೆಟ್ರೊ ದರ ಏರಿಸುವ ಮೂಲಕ ಜನಸಾಮಾನ್ಯರಿಗೆ ಬದುಕು ಹೊರೆ ಎನಿಸುವಂತೆ ಮಾಡಿದೆ. ಬೆಲೆ ಏರಿಕೆ ನಿರಂತರವಾಗಿ ಸಾಗುತ್ತಿದೆ ಎಂದು ಆಕ್ಷೇಪಿಸಿದರು.
ಬೆಲೆ ಏರಿಕೆ ಸೇರಿ ರಾಜ್ಯ ಸರಕಾರದ ನೀತಿಗಳನ್ನು ಖಂಡಿಸಿ ಏ.2ರಂದು ಬೆಳಿಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ. ಬಿಜೆಪಿಯ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು, ರಾಜ್ಯದ ಎಲ್ಲ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು, ಕಾರ್ಯಕರ್ತರು ಭಾಗವಹಿಸುತ್ತಾರೆ. ದೊಡ್ಡ ಮಟ್ಟದಲ್ಲಿ ಈ ಹೋರಾಟ ನಡೆಯಲಿದೆ ಎಂದು ತಿಳಿಸಿದರು.
ಹಣಕಾಸು ಸಚಿವರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಚೆಗೆ ಸರಕಾರಿ ಕಾಮಗಾರಿಗಳಲ್ಲಿ ಮುಸಲ್ಮಾನರಿಗೆ ಶೇ 4 ಮೀಸಲಾತಿ ನೀಡಿದ್ದಾರೆ. ಇದು ಕಾಂಗ್ರೆಸ್ ಮತ್ತು ಮುಖ್ಯಮಂತ್ರಿಗಳ ಸಂವಿಧಾನ ವಿರೋಧಿ ನಡೆ ಮಾತ್ರವಲ್ಲ; ಹಿಂದೂಗಳಿಗೆ ಅಪಮಾನ ಮಾಡುವ ಕ್ರಮ ಎಂದು ಆಕ್ಷೇಪಿಸಿದರು. ಮತ್ತೊಂದು ಕಡೆ ಪರಿಶಿಷ್ಟ ಜಾತಿ- ಪಂಗಡಗಳ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟ ಸುಮಾರು 38 ಸಾವಿರ ಕೋಟಿ ಹಣವನ್ನು ಬೇರೆ ಬೇರೆ ಗ್ಯಾರಂಟಿಗಳಿಗೆ ವರ್ಗಾವಣೆ ಮಾಡುವ ಮೂಲಕ ರಾಜ್ಯ ಸರಕಾರ ಮತ್ತು ಸಿದ್ದರಾಮಯ್ಯನವರು ಆ ಶೋಷಿತ, ಪೀಡಿತ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಖಂಡಿಸಿದರು. ಸಿದ್ದರಾಮಯ್ಯನವರ ಸರಕಾರವು ಜನರು ಸೇವಿಸುವ ಗಾಳಿಯೊಂದನ್ನು ಬಿಟ್ಟು ಮತ್ತೆಲ್ಲದಕ್ಕೂ ತೆರಿಗೆ ಹಾಕುತ್ತಿದೆ ಎಂದು ಪುನರುಚ್ಚರಿಸಿದರು.
ಹಿಂದೂಗಳಿಗೆ ಅವಮಾನ, ಎಸ್ಇಪಿ, ಟಿಎಸ್ಪಿ ಹಣ ದುರ್ಬಳಕೆ ವಿಚಾರವನ್ನು ಮುಂದಿಟ್ಟು ಮೈಸೂರಿನಿಂದ ಏಪ್ರಿಲ್ 7ರಿಂದ ಎಲ್ಲ ಜಿಲ್ಲೆಗಳ ಪ್ರವಾಸ ‘ಜನಾಕ್ರೋಶ ಯಾತ್ರೆ’ ಮಾಡುತ್ತೇವೆ. ಪ್ರತಿ ಜಿಲ್ಲೆಗೂ ಯಾತ್ರೆ ತೆರಳಲಿದೆ. ಏಪ್ರಿಲ್ 7ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಾಯಿಯ ದರ್ಶನ ಪಡೆದು ಪಾದಯಾತ್ರೆ ಮೂಲಕ ಹೋರಾಟ ಆರಂಭಿಸುತ್ತೇವೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹೋರಾಟಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಯತ್ನಾಳ್ ಅವರು ಈಗ ಬಹಳ ಫ್ರೀಯಾಗಿದ್ದಾರೆ. ಅವರು ಆರೋಪ ಮಾಡಲಿ. ದಾಳಿ ಮಾಡಲಿ; ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ರಾಜ್ಯ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ನಾನು ಎಲ್ಲರ ಜೊತೆಗೂಡಿ ಹೋರಾಟ, ಜನಜಾಗೃತಿ ಮಾಡಲಿದ್ದೇನೆ. ಇವರ ಗ್ಯಾರಂಟಿ ಎಂದರೆ ಒಂದು ಕೈಯಿಂದ ಕೊಡುವುದು ಮತ್ತು ಇನ್ನೊಂದು ಕೈಯಿಂದ ಕಿತ್ತುಕೊಳ್ಳುವುದು. ಇದರಿಂದ ಜನರು ಇವತ್ತು ತತ್ತರಿಸಿ ಹೋಗಿದ್ದಾರೆ. ಇದೆಲ್ಲದರ ವಿರುದ್ಧ ಜನಜಾಗೃತಿಯನ್ನು ಬಿಜೆಪಿ ಮಾಡಲಿದೆ ಎಂದು ತಿಳಿಸಿದರು.
ಭಕ್ತರ ಪಾಲಿಗೆ ನಡೆದಾಡುವ ದೇವರು ಎನಿಸಿಕೊಂಡಿದ್ದ ಪರಮಪೂಜ್ಯ ಡಾ.ಶಿವಕುಮಾರ ಮಹಾಸ್ವಾಮೀಜಿಗಳ ಜಯಂತ್ಯುತ್ಸವವನ್ನು ಇವತ್ತು ನಾಡಿನಾದ್ಯಂತ, ದೇಶಾದ್ಯಂತ ಅರ್ಥಪೂರ್ಣವಾಗಿ ಜನರು ಆಚರಿಸುತ್ತಿದ್ದಾರೆ ಎಂದು ನುಡಿದರು. ಶಿವಕುಮಾರ ಮಹಾಸ್ವಾಮೀಜಿಗಳು ತೋರಿಸಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ನಡೆಯುವ ಮೂಲಕ ಅವರ ಜಯಂತ್ಯುತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿದ್ದೇವೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.