ದೇಶದ 24 ರಾಜ್ಯಗಳ 400 ಜಿಲ್ಲೆಗಳಲ್ಲಿ ಸಕ್ರಿಯವಾಗಿರುವ ಎಂಎಸ್ಎಂಇಗಳ ಅಖಿಲ ಭಾರತ ಸಂಘಟನೆಯಾದ ಲಘು ಉದ್ಯೋಗ ಭಾರತಿ ಕಳೆದ 25 ಗಳಿಂದ ದೇಶವ್ಯಾಪಿಯಾಗಿ ಸಣ್ಣ ಉದ್ಯಮಿಗಳ, ಕುಶಲಕರ್ಮಿಗಳ ಏಳ್ಗೆಗಾಗಿ ದುಡಿಯುತ್ತಿದೆ. ಲಘು ಉದ್ಯೋಗ ಭಾರತಿ ಕರ್ನಾಟಕ ಕೂಡ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಅತ್ಯಂತ ಸಕ್ರಿಯವಾದ ಕೊಡುಗೆಗಳನ್ನು ನೀಡುತ್ತಾ ಬಂದಿದೆ.
ಗ್ರಾಮ ಶಿಲ್ಪಿ ಉದ್ಯಮಿ ಪ್ರಕೋಷ್ಠ ಉಪಕ್ರಮದ ಅಡಿಯಲ್ಲಿ ಲಘು ಉದ್ಯೋಗ ಭಾರತಿ ಕರ್ನಾಟಕವು ಗ್ರಾಮ ಗ್ರಾಮಗಳಲ್ಲಿ ಇರುವ ಕುಶಲಕರ್ಮಿಗಳ ಜೀವನವನ್ನು ಭದ್ರಪಡಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಪಾರಂಪಾರಿಕ ಕೌಶಲ್ಯಗಳನ್ನು ಹೊಂದಿರುವ ಅನೇಕ ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಸ್ಥಳಿಯವಾಗಿ ಮಾರಾಟ ಮಾಡುತ್ತಿದ್ದಾರೆ. ಬಟ್ಟೆ, ಮಣ್ಣು, ಗಾಜು, ಮರ ಇತ್ಯಾದಿಗಳಿಂದ ತಯಾರಾದ ಇವರ ಉತ್ಪನ್ನಗಳು ನೋಡಲು ಆಕರ್ಷಕ ಮತ್ತು ಗುಣಮಟ್ಟದ್ದಾಗಿರುತ್ತದೆ. ಆದರೆ ಮಾರುಕಟ್ಟೆ ಸಮಸ್ಯೆ ಇವರನ್ನು ಅತಿಯಾಗಿ ಬಾಧಿಸುತ್ತದೆ. ಕುಶಲತೆ ಇದ್ದರೂ ಜೀವನ ನಿರ್ವಹಣೆ ಕಷ್ಟ ಎಂಬ ಪರಿಸ್ಥಿತಿಯಲ್ಲಿ ಇವರಿರುತ್ತಾರೆ. ಹೀಗಾಗಿ ತಮ್ಮ ಪಾರಂಪರಿಕ ಕೌಶಲ್ಯವನ್ನು ತೊರೆದು ಇನ್ಯಾವುದೋ ಕೆಲಸ ಮಾಡುವ ಅನಿವಾರ್ಯತೆಗೆ ಇವರು ದೂಡಲ್ಪಡುತ್ತಿದ್ದಾರೆ.
ಇಂತಹ ಗ್ರಾಮೀಣ ಕುಶಲಕರ್ಮಿಗಳ ಸಹಾಯಕ್ಕೆ ಧಾವಿಸಿದೆ ಲಘು ಉದ್ಯೋಗ ಭಾರತಿ ಕರ್ನಾಟಕ. ಕರ್ನಾಟಕದ ಉತ್ತರ ಭಾಗದ 11 ಜಿಲ್ಲೆಗಳಲ್ಲಿ ಸಮೀಕ್ಷೆಯನ್ನು ನಡೆಸಿರುವ ಇದು, 130 ಕುಶಲಕರ್ಮಿಗಳನ್ನು ಗುರುತಿಸಿದೆ. ಅವರಿಂದ ದತ್ತಾಂಶಗಳನ್ನು ಸಂಗ್ರಹ ಮಾಡಿದೆ. ಯಾವ ಜಿಲ್ಲೆ, ಯಾವ ತಾಲೂಕು, ಅವರ ಉತ್ಪನ್ನ ಯಾವುದು ಎಂಬಿತ್ಯಾದಿ ವಿವರಗಳನ್ನು ಕಲೆ ಹಾಕಿದೆ. ಕಳೆದ ಮೂರು ತಿಂಗಳಿನಿಂದ ಈ ಕಾರ್ಯದಲ್ಲಿ ತೊಡಗಿದೆ ಲಘು ಉದ್ಯೋಗ ಭಾರತಿ.
ಇದೀಗ ಈ ಕುಶಲಕರ್ಮಿಗಳನ್ನು ಒಂದೆಡೆ ಸೇರಿಸಿ ʼಗ್ರಾಮ ಶಿಲ್ಪಿ ಮೇಳʼ ನಡೆಸಲು ಲಘು ಉದ್ಯೋಗ ಭಾರತಿ ಕರ್ನಾಟಕ ಮುಂದಾಗಿದೆ. ಎಪ್ರಿಲ್ 9, 10, 11ರಂದು ಮೂರು ದಿನಗಳ ಕಾಲ ಹುಬ್ಬಳ್ಳಿಯ ಗೋಕುಲ್ ರಸ್ತೆಯ ಸಾಮ್ರಾಟ್ ಹಾಲ್ನಲ್ಲಿ ಈ ಮೇಳ ನಡೆಯಲಿದ್ದು, ಕಣ್ಣೇರಿ ಮಠದ ಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳು ಇದರ ಉದ್ಘಾಟನೆ ನೆರವೇರಿಸಲಿದ್ದಾರೆ. ಕೇಂದ್ರ ಸಚಿವರುಗಳಾದ ಪ್ರಲ್ಹಾದ್ ಜೋಶಿ, ಜಗದೀಶ್ ಶೆಟ್ಟರ್ ಮತ್ತು ರಾಜ್ಯ ಸಚಿವೆ ಶಶಿಕಲಾ ಜೊಲ್ಲೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಮೂರು ದಿನಗಳ ಮೇಳದಲ್ಲಿ ಬೇರೆ ಬೇರೆ ಕಾರ್ಯಕ್ರಮಗಳು ನಡೆಯಲಿದೆ. ಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು, ಪ್ರದರ್ಶಿಸಲು ಬೂತ್ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತದೆ. ಇನ್ನೊಂದೆ ತರಬೇತಿ ನೀಡುವ ಕಾರ್ಯ ನಡೆಯಲಿದೆ. ಮತ್ತೊಂದೆಡೆ ಅವರಿಗೆ ಈಗಿನ ಮಾರುಕಟ್ಟೆ ವ್ಯವಸ್ಥೆ, ಈಗಿನ ಟ್ರೆಂಡ್, ನಾವೀನ್ಯತೆ, ಬ್ಯಾಂಕಿಂಗ್ ಸೌಲಭ್ಯ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡುವ ಕಾರ್ಯ ನಡೆಯಲಿದೆ. ವರ್ಕ್ಶಾಪ್ ಆಯೋಜನೆಗೊಳ್ಳಲಿದೆ. ಎಪ್ರಿಲ್ 11ರಂದು ಸಮಾರೋಪ ನಡೆಯಲಿದೆ.
ಕೊರೋನಾ ನಿಯಮಾವಳಿಗಳ ಅಡಿಯಲ್ಲಿ ಮೇಳ ನಡೆಯುತ್ತಿರುವ ಕಾರಣ ಹೆಚ್ಚು ಜನ ಭಾಗಿಯಾಗುವಂತಿಲ್ಲ. ಹೀಗಾಗಿ ಭಾಗಿಯಾಗುತ್ತಿರುವ ಕುಶಲಕರ್ಮಿಗಳ ಉತ್ಪನ್ನಗಳಿಗೆ ಧೀರ್ಘಕಾಲದ ಮಾರುಕಟ್ಟೆ ಸೌಲಭ್ಯ ಒದಗಿ ಬರುವಂತೆ ಮಾಡಲು ಪ್ರತಿಯೊಬ್ಬ ಕುಶಲಕರ್ಮಿಯ ಸುಮಾರು 6-7 ನಿಮಿಷಗಳ ವಿಡಿಯೋ ಶೂಟ್ ಮಾಡಲಾಗುತ್ತದೆ. ಇದರಲ್ಲಿ ಆತನ ಉತ್ಪನ್ನ, ಅದರ ವಿಶಿಷ್ಟತೆ, ಪ್ರಯೋಜನ ಇತ್ಯಾದಿಗಳ ವಿವರ ಇರಲಿದೆ. ಇಂಗ್ಲೀಷ್ ಸಬ್ ಟೈಟಲ್ ಹೊಂದಿರುವ ಈ ವಿಡಿಯೋವನ್ನು ಯುಟ್ಯೂಬ್ ಸೇರಿದಂತೆ ವಿವಿಧ ಆನ್ಲೈನ್ ವೇದಿಕೆಯಲ್ಲಿ ಹಂಚಿಕೊಳ್ಳುವುದರಿಂದ ದೇಶವ್ಯಾಪಿಯಾಗಿ ಉತ್ಪನ್ನಕ್ಕೆ ಪ್ರಚಾರ ಸಿಗಲಿದೆ.
ಇಡೀ ದೇಶದಲ್ಲೇ ಮೊದಲ ಬಾರಿಗೆ ಲಘು ಉದ್ಯೋಗ ಭಾರತಿಯ ವತಿಯಿಂದ ಇಂತಹ ವಿಶಿಷ್ಟ ಕಾರ್ಯಕ್ರಮ ನಡೆಯುತ್ತಿದೆ. ಆತ್ಮಭಾರತದ ದೃಷ್ಟಿಗೆ ಅನುಗುಣವಾಗಿ ನಡೆಯುತ್ತಿರುವ ಈ ಕಾರ್ಯಕ್ರಮ, ಸ್ಥಳಿಯತೆಗೆ ಧ್ವನಿಯಾಗುವ ಮೂಲಕ ಗ್ರಾಮೀಣ ಕುಶಲಕರ್ಮಿಗಳ ಭವಿಷ್ಯವನ್ನು ಭದ್ರಗೊಳಿಸುವ ಮಹತ್ವದ ದೂರದೃಷ್ಟಿಯನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.