ಅಮರ ಚಿತ್ರಕಥಾ, ಟಿಂಕಲ್ ಸಹಿತ ವಿವಿಧ ಮಕ್ಕಳ ಕಥಾ ಪುಸ್ತಕ ಮಾಲಿಕೆಯನ್ನು ಹೊರತಂದು, ಮಕ್ಕಳ ಮನಸ್ಸಿನಲ್ಲಿ ಕಥೆಯ ಸಾರ ಸ್ಥಾಯಿಯಾಗಿ ನಿಲ್ಲುವಂತೆ ಮಾಡಿದವರು ಕಾರ್ಕಳ ಮೂಲದ ಅನಂತ ಪೈ. ಮಕ್ಕಳ ಮನಪುಳಕಿಸುವ ಚಿತ್ರಗಳ ಜೊತೆ ಸಾರಾಂಶಯುಕ್ತ ಕಥೆಗಳನ್ನು ಹೊಂದಿರುತ್ತಿದ್ದ ಕಥಾ ಮಾಲಿಕೆಗಳು ಟಿ.ವಿ. ಇರದ ಕಾಲಘಟ್ಟದಲ್ಲಿ ಎಲ್ಲರ ಮನ ಗೆದ್ದಿದ್ದವು. ದೇಶದಲ್ಲಿದ್ದ ಕಥೆ ಹೇಳುವ ಪರಂಪರೆಯನ್ನು ಮುಂದುವರಿಸಿದವರು ಅನಂತ ಪೈ ಎಂದರೆ ತಪ್ಪಲ್ಲ. ಕಥೆಯ ಮೂಲಕ ಮಕ್ಕಳ ಮನಸಲ್ಲಿ ಧನಾತ್ಮಕ ಅಂಶಗಳನ್ನು ತುಂಬಿಸುವುದು ಇವರ ಉದ್ದೇಶವಾಗಿತ್ತು. ಭಾರತೀಯ ಶಿಕ್ಷಣ ಕ್ಷೇತ್ರಕ್ಕೆ ನೀತಿಕಥೆಗಳ ಮೂಲಕ ಕೊಡುಗೆ ನೀಡಿದ ಇವರು ಭಾರತೀಯ ಕಾಮಿಕ್ ಪುಸ್ತಕಗಳ ಜನಕ ಎಂದು ಹೇಳಬಹುದು. ಪುಸ್ತಕ ಪ್ರೀತಿ ಬೆಳೆಸಿಕೊಂಡ ಮಕ್ಕಳಿಂದ ಅಂಕಲ್ ಪೈ ಎಂದು ಕರೆಯಿಸಿಕೊಂಡಿದ್ದ ಇವರು ಬಹುಮುಖಿಯೂ ಹೌದು. ಪೌರಾಣಿಕ, ಐತಿಹಾಸಿಕ ಸಂಗತಿಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಚಿತ್ರಕಥೆ ಸಂಭಾಷಣೆಗಳ ಮೂಲಕ ಮುಂದಿಡುತ್ತಿದ್ದ ಇವರು ಎಳೆ ಮನಸ್ಸುಗಳ ಜತೆ ಉತ್ತಮ ಸಂವಾಹಕರಾಗಿ ಕಥಾಕಾರರಾಗಿ ಮೆರೆದರು.
ಸೆ. 17 ಸೆಪ್ಟೆಂಬರ್ 1929 ರಲ್ಲಿ ಅಂದಿನ ಮದ್ರಾಸು ಸಂಸ್ಥಾನದ ಪಶ್ಚಿಮ ಕರಾವಳಿಯ ಕಾರ್ಕಳದ ಕೊಂಕಣಿ ಭಾಷಿಗ ಮನೆತನದಲ್ಲಿ ಅನಂತ ಪೈ ಜನಿಸಿದರು. ತಮ್ಮ ಎಳೆ ವಯಸ್ಸಿನಲ್ಲಿ ತಂದೆ, ತಾಯಿಯನ್ನು ಕಳೆದುಕೊಂಡ ಇವರು ತಮ್ಮ ಅಜ್ಜನ ಆಶ್ರಯದಲ್ಲಿ ಬೆಳೆದು, ವಿದ್ಯಾಭ್ಯಾಸ ಗಳಿಸಿ, ಸಾಧನೆಯ ಶಿಖರವನ್ನೇರಿದರು. ಎಳೆ ವಯಸ್ಸಿನಲ್ಲಿ ಮಾತಾ ಪಿತರನ್ನು ಕಳೆದುಕೊಂಡರೂ ತಮ್ಮ ಹಿರಿಯರಿಂದ ಹೆಚ್ಚಾಗಿ ಕಥೆಗಳನ್ನು ಆಲಿಸುತ್ತಾ ಬೆಳೆದ ಪೈ ಮುಂದೆ ಉತ್ತಮ ಕಥೆಗಾರರಾಗಿ ಯುವ ಸಮೂಹಕ್ಕೆ ಮಾರ್ಗದರ್ಶಿ ಎನಿಸಿದರು. ಪೈ ಅಂಕಲ್, ವಾಲ್ಟ್ ಡಿಸ್ನಿ ಆಫ್ ಇಂಡಿಯಾ ಮೊದಲಾದ ಹೆಸರುಗಳಿಂದ ಪ್ರಖ್ಯಾತರಾದ ಅನಂತ ಪೈ, ಮುಂಬೈ ವಿಶ್ವ ವಿದ್ಯಾನಿಲಯದ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ಸಂಸ್ಥೆಯಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು.
ರಾಮಾಯಣ, ಮಹಾಭಾರತದ ಸಾರಗಳನ್ನು ಅಮರ ಚಿತ್ರಕಥೆ ಪುಸ್ತಕಗಳ ಮೂಲಕ ಮಕ್ಕಳಿಗೆ ತಲುಪುವಂತೆ ಮಾಡಿದ ಇವರು ಅದಕ್ಕೂ ಮೊದಲು ಪತ್ರಕರ್ತರಾಗಿ ವೃತ್ತಿ ಜೀವನ ನಡೆಸುತ್ತಿದ್ದರು. 1970 ರ ಆಜುಬಾಜಿನಲ್ಲಿ ಇವರು ತಮ್ಮ ಸ್ವಂತ ಶಕ್ತಿಯಿಂದ ಆರಂಭಿಸಿದ ಸಂಸ್ಥೆಯಲ್ಲಿ ತಾವೇ ಲೇಖಕರಾಗಿ, ಸಂಪಾದಕರಾಗಿ ನಂತರ ಪ್ರಕಾಶಕರಾಗಿಯೂ ಸಲ್ಲಿಸಿದರು. ಕೆಲವೇ ವರ್ಷಗಳಲ್ಲಿ 440 ವಿವಿಧ ಶೀರ್ಷಿಕೆಯೊಂದಿಗೆ ಹೊರಬಂದ ಅಮರ ಚಿತ್ರಕಥಾ ಮಾಲಿಕೆಯ 8 ಕೋಟಿಗೂ ಅಧಿಕ ಪ್ರತಿಗಳು ಮಾರಾಟವಾಗಿವೆ. ರಾಮು- ಶಾಮು, ಕಪೀಶ, ಲಿಟಲ್ರಾಜು, ಸುಪಾಂಡಿ ಮೊದಲಾದ ಪಾತ್ರಗಳ ಮೂಲಕ ಎಳೆಮನಸನ್ನು ಗೆದ್ದ ಟಿಂಕಲ್ ಮಾಸಪತ್ರಿಕೆ, ಮಕ್ಕಳ ಪುಸ್ತಕ ವಿಭಾಗಗಳಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಪೈ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಪಾರ್ಥ ಇನ್ಸ್ಟಿಟ್ಯೂಟ್ ಆಫ್ ಡೆವಲಪಮೆಂಟ್ ಎಂಬ ಸಂಸ್ಥೆಯನ್ನು 1978 ರನ್ನು ಆರಂಭಿಸಿದ್ದರು.
ಬಹುಮುಖಿ ವ್ಯಕ್ತಿತ್ವದ ಪೈ ಅವರು ಎರಡು ಸಿನಿಮಾಗಳನ್ನು ನಿರ್ದೇಶಿಸಿ, ನಿರ್ಮಿಸಿದ್ದರು. ವೇದ ಸ್ವರೂಪದಲ್ಲಿ ದೇವರನ್ನು ಕಲಿಸುವ ʼಏಕಂ ಸತ್ʼ ಹಾಗೂ ʼಸಿಕ್ರೇಟ್ ಆಫ್ ಸಕ್ಸಸ್ʼ ಎಂಬ ಎರಡು ಸಿನಿಮಾಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿ ಬಂದಿದ್ದವು. ಹಲವು ಕಥೆಗಳು ದೂರದರ್ಶನದಲ್ಲಿ ಮೂಡಿಬಂದಿದ್ದು ಅಮರ ಕಥೆಗಳ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಅಮರ ಚಿತ್ರಕಥಾ ಸರಣಿಯಲ್ಲಿ ಮೊಘಲರ ದಾಳಿ ಮಾತ್ರವಲ್ಲದೆ ಶಿವಾಜಿ ರಾಜರ ಪರಾಕ್ರಮವನ್ನು ಬಿಂಬಿಸಲಾಗಿತ್ತು ಎಂಬುದು ವಿಶೇಷ. ಇದರ ಹೊರತಾಗಿ ಜಾತಕ ಕಥೆಗಳು, ಜಾನಪದ ಕಥೆಗಳನ್ನು ಸರಣಿಯಾಗಿ ಪುಸ್ತಕದಲ್ಲಿ ಬಿತ್ತರಿಸಲಾಯಿತು. ತೆನಾಲಿ ರಾಮಕೃಷ್ಣನ ಬಗ್ಗೆಯೂ ಕಥಾ ಮಾಲಿಕೆಯನ್ನು ಅಳವಡಿಸಿ ತೆನಾಲಿಯ ಬುದ್ಧಿವಂತಿಕೆಯ ನಡೆಯನ್ನು ಮಕ್ಕಳಿಗೆ ಆಪ್ತವಾಗುವಂತೆ ಮಾಡಲಾಯಿತು. ಮಕ್ಕಳ ಬಗ್ಗೆ ವಿಶೇಷ ಪ್ರೀತಿ ಒಲವು ಹೊಂದಿದ್ದ ಅಂಕಲ್ ಪೈ ಅವರು 2011 ರ ಫೆ. 24 ರಲ್ಲಿ ಮುಂಬೈಯ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದರು.
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.