ಸ್ವಾತಂತ್ರ್ಯ ದೊರೆತ ನಂತರದ ಇತಿಹಾಸವನ್ನು ಗಮನಿಸಿದಾಗ ಮೊನ್ನೆ 72 ನೇ ಗಣರಾಜ್ಯೋತ್ಸವದಂದು ಕೆಂಪುಕೋಟೆಯಲ್ಲಿ ನಡೆದ ಘಟನೆ ದೇಶದ ಇತಿಹಾಸದ ಪುಟದಲ್ಲಿ ಅತ್ಯಂತ ಕರಾಳ ದಿನವಾಗಿದೆ. ಪ್ರಸ್ತುತ ಭಾರತ ವಿಶ್ವಕ್ಕೆ ಮಾದರಿಯಾಗುವತ್ತ ಹೆಜ್ಜೆ ಇಟ್ಟಿರುವ ಸಂದರ್ಭದಲ್ಲಿ ಈ ಘಟನೆ ಅಪಮಾನಕರವಾಗಿ ಪರಿಣಮಿಸಿದೆ. ರೈತ ಪ್ರತಿಭಟನೆ ಎನ್ನುವ ಹೆಸರಿನಲ್ಲಿ ದೇಶವನ್ನು ಜಗತ್ತಿನೆದುರು ನಕಾರಾತ್ಮಕವಾಗಿ ತೋರಿಸಬೇಕೆನ್ನುವ ವಿರೋಧಿ ಷಡ್ಯಂತ್ರದ ಪ್ರಯತ್ನಗಳು ಇಂದು ಜಗತ್ತಿನೆದುರು ಬೆತ್ತಲಾಗಿ ನಿಂತಿವೆ. ಈ ಪ್ರತಿಭಟನಾಕಾರರ ಮಾನ ಉಳಿಸಲು ಈ ದೇಶದ ಮೋದಿ ವಿರೋಧಿಗಳು ಒಣ ಸಮರ್ಥನೆಯೆಂಬ ಬಟ್ಟೆಯಲ್ಲಿ ಅವರು ಪಾಪ ಮುಚ್ಚಲು ಪ್ರಯತ್ನಿಸುತ್ತಿವೆ.
ದೆಹಲಿಯಲ್ಲಿರುವ ಕೆಂಪು ಕೋಟೆಯು ಮೊಘಲರು, ಬ್ರಿಟಿಷರು, ಸಿಖ್ಖರು, ಜಾಟಾರು ಗುರ್ಜಾರರು, ಮರಾಠರು ಮುಂತಾದವರಿಂದ ದಾಳಿಗೊಳಗಾಗಿ ಕೊನೆಯದಾಗಿ ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಆಗಸ್ಟ್ 15 ರಂದು ಈ ಕೆಂಪುಕೋಟೆಯಲ್ಲಿ ದೇಶದ ಧ್ವಜವನ್ನು ಪ್ರಥಮವಾಗಿ ಹಾರಿಸಲಾಯಿತು. ಇಂತಹ ಹಿನ್ನಲೆ ಇರುವ ಕೆಂಪುಕೋಟೆಯ ಇತಿಹಾಸ 21 ನೇ ಶತಮಾನದಲ್ಲೂ ದೇಶ ವಿರೋಧಿಗಳ ದಾಳಿಗೆ ಒಳಗಾಗಿದ್ದು ದುರಾದೃಷ್ಟದ ಸಂಗತಿ.
ಭಾರತದ ಮೇಲಿನ ಗೌರವ ಇರುವ ಯಾವೊಬ್ಬ ಪ್ರಜೆಯು ರಾಷ್ಟ್ರಧ್ವಜಕ್ಕೆ ಅಗೌರವ ಸೂಚಿಸುವಂತ ವರ್ತನೆ ಎಂದಿಗೂ ತೋರಲಾರ, ಆದರೆ ಈ ಪ್ರತಿಭಟನಾಕಾರರು ಮಾಡಿದ್ದೇನು ? ತ್ರಿವರ್ಣ ಧ್ವಜ ಹಾರುವಲ್ಲಿ ಪ್ರತ್ಯೇಕವಾದಿಗಳ ಖಲೀಸ್ಥಾನ್ ಧ್ವಜವನ್ನು ಹಾರಿಸಿದರು, ತ್ರಿವರ್ಣ ಧ್ವಜವನ್ನು ಎಸೆದರು. ಇದು ಈ ದೇಶದ ಗೌರವಕ್ಕೆ ಮಾಡಿದ ಅವಮಾನವಲ್ಲವೇ? ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಗಣರಾಜ್ಯೋತ್ಸವದಂದೇ ಈ ಅಸಾಂವಿಧಾನಿಕ ನಡೆ ಸ್ವೀಕಾರಾರ್ಹವೇ ? ಖಂಡಿತ ಅಲ್ಲವೇ ಅಲ್ಲ. ಯಾವುದೋ ಶತ್ರು ರಾಷ್ಟ್ರದವರು ಎಸಗುವ ಹೇಯಕೃತ್ಯದಂತೆ ಕಾಣುವ ಈ ಎಲ್ಲಾ ಘಟನಾವಳಿಗಳನ್ನು ಸಮರ್ಥಿಸುವ ನೀಚಪ್ರಯತ್ನಗಳು ಸಹ ಆಗುತ್ತಿರುವುದು ಶೋಚನೀಯ.
ಸಂವಿಧಾನದ ಬಗ್ಗೆ ಎಲ್ಲಿ ಯಾರು ಹೇಗೆ ಏನು ಮಾತಾಡುತ್ತಾರೋ? ಎಂದು ಬಕ ಪಕ್ಷಿಯಂತೆ ಕಾದು ಕುಳಿತುಕೊಳ್ಳುವ ಮತ್ತದನ್ನು ತಮಗೆ ಬೇಕಾದಂತೆ ತಿರುಚಿ ಸಂವಿಧಾನ ಅಪಾಯದಲ್ಲಿದೆ ಎಂದು ಅರಚಿಕೊಳ್ಳುತ್ತಿದ್ದ ಪಂಥ, ಇಂದು ಈ ದೇಶದಲ್ಲಿ ನಡೆದ ಈ ಘಟನೆಯನ್ನು ಖಂಡಿಸುತ್ತಿಲ್ಲ. ಇದುವೇ ಅವರ ಸಂವಿಧಾನವೋ? ಎಂಬ ಪ್ರಶ್ನೆ ಸದ್ಯ ಎಲ್ಲರ ಮನಸ್ಸಿನಲ್ಲಿಯೂ ಮೂಡುತ್ತಿದೆ ಎಂದರೆ ಅದು ತಪ್ಪಾಗಲಾರದೇನೋ. ತಮ್ಮನ್ನು ತಾವೇ ಪ್ರಬುದ್ಧರೆಂದುಕೊಂಡಿರುವ ಸಿನೆಮಾ ನಿರ್ದೇಶಕರುಗಳು, ಸಾಹಿತಿಗಳು, ಪತ್ರಕರ್ತರು ಕಾಗಕ್ಕ ಗೂಬಕ್ಕನ ಕತೆಯಂತೆ ಇಂದು ಸಮರ್ಥನೆಗಿಳಿದಿದ್ದಾರೆ. ರೈತರ ಆಕ್ರೋಶ, ಬಿಜೆಪಿಯ ಕುತಂತ್ರ ಮುಂತಾದ ಕಥೆಗಳನ್ನು ಜನರೆದುಗಿಡುತ್ತಿದ್ದಾರೆ ಮತ್ತು ಚೀ, ಥೂ ಎಂದು ಉಗಿಸಿಕೊಳ್ಳುತಿದ್ದಾರೆ ಕೂಡ. ಈ ಎಲ್ಲಾ ಘಟನೆಗಳು ಯಾಕಾಯಿತು? ಎಂದು ಮೂಲ ಹುಡುಕಿದರೆ, ಪಾಕಿಸ್ಥಾನ ಸಂಭ್ರಮಿಸುವ ವಾತಾವರಣ ನಿರ್ಮಿಸುವ ಪೂರ್ವ ನಿಯೋಜಿತ ದೇಶದ್ರೋಹಿಗಳ ಕೃತ್ಯವೆನ್ನುವುದು ಯಾರಿಗೂ ಗೊತ್ತಿಲ್ಲದ ವಿಚಾರವಲ್ಲ ಬಿಡಿ.
ಮೋದಿಯನ್ನು ವಿರೋಧಿಸುವ ಬಣಗಳಿಗೆ ದೊಡ್ಡದಾಗಿ ವಿರೋಧಿಸುವ ಗಟ್ಟಿ ಅಂಶ ದೊರಕಿದ್ದು ಈ ಕೃಷಿ ಕಾಯ್ದೆಗಳಿಂದಾಗಿ, ಎಲ್ಲಿ ತಾವೇ ಕಟ್ಟಿದ್ದ ಸುಳ್ಳಿನ ಕತೆಗಳ ಪ್ರೇರಿತ ಪ್ರತಿಭಟನೆ ನಿಂತು ಹೋಗುತ್ತದೋ ಎನ್ನುವ ವಿಕೃತ ಭಯದಿಂದ. ದೇಶವನ್ನು ಅಪಮಾನಿಸುವ ಘಟನೆಗಳು ನಡೆದರೂ ಇದರಲ್ಲಿ ರೈತರದ್ದೇನು ತಪ್ಪಿಲ್ಲ. ಎಲ್ಲಾ ತಪ್ಪುಗಳು ಕೇಂದ್ರ ಮೋದಿ ಸರ್ಕಾರದ್ದೇ ಎನ್ನುವ ಸಮರ್ಥನೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಅಪಾಯಕಾರಿ ನಡೆಯನ್ನು ಕೆಲವರು ಅನುಸರಿಸುತ್ತಿದ್ದಾರೆ. ಇದರ ಹಿಂದಿನ ಉದ್ದೇಶ ಪ್ರಧಾನಿ ಮೋದಿ ಎಂಬ ವ್ಯಕ್ತಿಯನ್ನು ವಿರೋಧಿಸುವುದೇ ಹೊರತು, ಬೇರೇನಲ್ಲ.
✍️ ವಿಶ್ವಾಸ್ ಅಡ್ಯಾರ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.