ಬ್ರಿಟಿಷ್ ಇಂಡಿಯಾದ ಕೇವಲ 21 ಮಂದಿ ಸಿಖ್ಖ್ ರೆಜಿಮೆಂಟ್ ಸೈನಿಕರು ಹಿಂದೂಕುಷ್ ಪರ್ವತಶ್ರೇಣಿಯ ಸಾರಾಗ್ರಹಿಯಲ್ಲಿ ತಮ್ಮ ಪರಾಕ್ರಮವನ್ನು ತೋರಿಸಿದ ‘ಕೇಸರಿ’ ಸಿನಿಮಾ ನೋಡಿದ ಮೇಲೆ ಅದರಲ್ಲೂ ‘ಬೋಲೆ ಸೋ ನಿಹಾಲ್ ಸತ್ ಶ್ರೀ ಅಕಾಲ್’ ಘೋಷವನ್ನು ಕೇಳಿದ ಮೇಲೆ ದೇಶದ ವಿವಿಧ ಸೈನಿಕ ತುಕಡಿಗಳ ಸಮರಘೋಷಗಳ ನೆನಪಾಯಿತು. 1897 ರ ಈ ಯುದ್ಧ ನಡೆದಿದ್ದು ಭಾರತೀಯ ಸಿಖ್ಖ್ ರೆಜಿಮೆಂಟ್ ಸೈನಿಕ ತುಕಡಿ ಹಾಗೂ ಪಶ್ತೂನ್ ದಂಡಾಳುಗಳ ಮಧ್ಯೆ. ಕೇವಲ 21 ಮಂದಿ ಸಿಖ್ಖ್ ರೆಜಿಮೆಂಟ್ ಸೈನಿಕರು ಸುಮಾರು ಹತ್ತು ಸಾವಿರ ಮಂದಿ ಪಶ್ತೂನಿಗಳ ವಿರುದ್ಧ ಹೋರಾಡಿದ್ದು ವೀರಾವೇಶದಿಂದ, ತಮ್ಮ ಪರಾಕ್ರಮದಿಂದ, ಶೌರ್ಯ ಹಾಗೂ ಕೆಚ್ಚೆದೆಯಿಂದ. ಬ್ರಿಟಿಷ್ ಸೈನಿಕರಾದರೂ ಸ್ವಾತಂತ್ರ್ಯವನ್ನು ಬಯಸುತ್ತಿದ್ದ ಇವರು ಗುಲಾಮಿತನವನ್ನು ಹೋಗಲಾಡಿಸಬೇಕು ಎಂಬ ಮನಸ್ಥಿತಿ ಉಳ್ಳವರಾಗಿದ್ದರು. ಕದನದಲ್ಲಿ ಅವರಿಗೆ ಪ್ರೇರಣೆಯಾದುದು ಹತ್ತನೇ ಸಿಖ್ಖರ ಗುರು ಗೋವಿಂದ ಸಿಂಹರ ಉದಾತ್ತ ವಾಣಿ ‘ಬೋಲೆ ಸೋ ನಿಹಾಲ್’.
ಪ್ರಸ್ತುತ ದೇಶದ ಸೈನಿಕ ಶಕ್ತಿ ಭಾರತದ ಸಾರ್ವಭೌಮತೆ ಮತ್ತು ಪರಾಕ್ರಮದ ಸಂಕೇತ. ವಿಶೇಷವೆಂದರೆ ದೇಶದ ಎಲ್ಲಾ ರೆಜಿಮೆಂಟಿಗಳಿಗೂ ಅದರದ್ದೇ ಆದ ಸಮರ ಘೋಷವಿದೆ. ಈಶಾನ್ಯ ಭಾರತದ ಗೋರ್ಖಾ ರೆಜಿಮೆಂಟ್ ಆಗಲಿ, ದಕ್ಷಿಣದ ಮದ್ರಾಸ್ ರೆಜಿಮೆಂಟ್ ಆಗಲಿ ಅಥವಾ ಉತ್ತರದ ಕಾಶ್ಮೀರ ರೆಜಿಮೆಂಟ್ ಆಗಲಿ. ಕೆಲ ವರ್ಷಗಳ ಹಿಂದೆ ಗಡಿ ಚಕಮಕಿಯಲ್ಲಿ ವೀರ ಮೃತ್ಯು ಪಡೆದು ತ್ರಿವರ್ಣ ಧ್ವಜದೊಂದಿಗೆ ಶ್ರದ್ಧಾಂಜಲಿಗೆ ಅಣಿಯಾಗಿದ್ದ ಸೈನಿಕನ ಪಾರ್ಥಿವ ಶರೀರದ ಮುಂದೆ ಆತನ ಮಗಳು ಸೆಲ್ಯೂಟ್ ಹೊಡೆದು ನಂತರ ಉದ್ಘೋಷಿಸಿದ್ದು ಸಮರಘೋಷವೇ ಆಗಿತ್ತು. ಗೋರ್ಖಾ ರೆಜಿಮೆಂಟಿನ ಆ ಘೋಷ ಹಲವರನ್ನು ರೋಮಾಂಚನಗೊಳಿಸಿತ್ತು ಮಾತ್ರವಲ್ಲ ಕಣ್ಣನ್ನು ಒದ್ದೆಯಾಗಿಸಿತ್ತು. ಹೀಗೆ ಕೆಲ ಮುಖ್ಯ ರೆಜಿಮೆಂಟ್ ಹಾಗೂ ಸೈನಿಕ ತುಕಡಿಗಳ ಸಮರ ಘೋಷ ಆ ತುಕಡಿಗಳ ಸೈನಿಕರಿಗೆ ಮಾತ್ರವಲ್ಲದೆ ಭಾರತೀಯರಾದ ನಮಗೆಲ್ಲ ಒಂದು ವಿಶೇಷ ಸಂಚಲನವನ್ನು ಮೂಡಿಸುತ್ತದೆ. ಗಣರಾಜ್ಯೋತ್ಸವದ ಸಂದರ್ಭ ಇಂತಹ ಕೆಲ ರೆಜಿಮೆಂಟುಗಳ ಸಮರ ಘೋಷ ಯಾ ವಾರ್ ಕ್ರೈಗಳನ್ನು ನೆನಪಿಸಿಕೊಳ್ಳೋಣ.
ಇಂಕ್ವಿಲಾಬ್ ಜಿಂದಾಬಾದ್, ಭಾರತ್ ಮಾತಾ ಕೀ ಜೈ, ವಂದೇ ಮಾತರಂ ನಂತಹ ಮಂತ್ರಗಳು ದೇಶದ ಅಸಂಖ್ಯಾತ ಜನಸಾಮಾನ್ಯರು ಮತ್ತು ದೇಶದ ಸ್ವಾತಂತ್ರ್ಯ ಸಮರವೀರರಿಗೆ ಪ್ರೇರಣೆಯಾಗಿತ್ತು ಎಂಬುದನ್ನು ಸ್ಮರಿಸಬೇಕಾದುದೆ. ಇಂತಹ ಉದ್ಘೋಷಗಳು ಇಂದಿಗೂ ಜನಮಾನಸಕ್ಕೆ ಸತ್ಪಪ್ರೇರಣೆಯಾಗಿದೆ. ದೇಶದಲ್ಲಿ ಗೋರ್ಖಾ, ಪಂಜಾಬ್ ರೆಜಿಮೆಂಟ್, ಮದ್ರಾಸ್ ರೆಜಿಮೆಂಟ್, ರಜಪೂತನ,ಬಿಹಾರ್, ಮರಾಠಾ ರೆಜಿಮೆಂಟ್ ಗಳು ಹೆಸರುವಾಸಿ.
ಇವುಗಳ ಸಮರ ಉದ್ಘೋಷ ಹೀಗಿವೆ
🔹ಗೋರ್ಖಾ ರೆಜಿಮೆಂಟ್ – ಜೈ ಮಹಾಕಾಳಿ, ಆಯೋ ಗೋರ್ಖಾಲಿ
🔹ಜಮ್ಮು ಕಾಶ್ಮೀರ್ ಲೈಟ್ ಇನ್ಫಾಂಟ್ರಿ – ಭಾರತ್ ಮಾತಾ ಕಿ ಜೈ
🔹ಪಂಜಾಬ್ ರೆಜಿಮೆಂಟ್ – ಬೋಲೆ ಸೋನಿಹಾಲ್, ಸತ್ ಶ್ರೀ ಅಕಾಲ್
🔹ಜಮ್ಮು ಆ್ಯಂಡ್ ಕಾಶ್ಮೀರ್ ರೈಫಲ್ಸ್ – ದುರ್ಗಾ ಮಾತಾ ಕಿ ಜೈ
🔹ಡೋಗ್ರಾ ರೆಜಿಮೆಂಟ್ – ಜ್ವಾಲಾ ಮಾತಾ ಕಿ ಜೈ
🔹ಬಿಹಾರ್ ರೆಜಿಮೆಂಟ್ – ಜೈ ಬಜರಂಗ ಬಲಿ, ಬಿರ್ಸಾ ಮುಂಡಾ ಕಿ ಜೈ
🔹ರಜಪೂತ್ ರೆಜಿಮೆಂಟ್ – ಜೈ ಬಜರಂಗ್ ಬಲಿ
🔹ಗರ್ವಾಲ್ ರೈಫಲ್ಸ್ – ಬದ್ರಿ ವಿಶಾಲ್ ಕಿ ಜೈ
🔹11 ಗೋರ್ಖಾ ರೈಫಲ್ಸ್ – ಜೈ ಮಹಾ ಕಾಳಿ
🔹ದಿ ಗ್ರೆನೆಡಿಯರ್ಸ್ – ಸರ್ವದಾ ಶಕ್ತಿಶಾಲಿ
🔹ರಜಪೂತನ ರೈಫಲ್ಸ್ – ರಾಜಾ ರಾಮಚಂದ್ರ ಕಿ ಜೈ
🔹ಮಹಾರ್ ರೆಜಿಮೆಂಟ್ – ಬೋಲೊ ಹಿಂದೂಸ್ಥಾನ್ ಕಿ ಜೈ
🔹ಮರಾಠಾ ಲೈಟ್ ಇನ್ಫಾಂಟ್ರಿ – ಬಲ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಕಿ ಜೈ
🔹ನಾಗಾ ರೆಜಿಮೆಂಟ್ – ಜೈ ದುರ್ಗಾ ನಾಗಾ
🔹ಅಸ್ಸಾಂ ರೆಜಿಮೆಂಟ್ – ರಿನೋ ಚಾರ್ಜ್
🔹ಮದ್ರಾಸ್ ರೆಜಿಮೆಂಟ್ – ವೀರ ಮದ್ರಾಸಿ, ಅಡಿ ಕೊಲ್ಲು ಅಡಿ ಕೊಲ್ಲ್
🔹ಕೊಮಾವೊನ್ ರೆಜಿಮೆಂಟ್ – ಕಾಲಿಕಾ ಮಾತಾ ಕಿ ಜೈ
ಹೀಗೆ ಹೆಸರು ಬಿಟ್ಟು ಹೋದ ಕೆಲ ರೆಜಿಮೆಂಟ್ ಹಾಗೂ ಅವುಗಳ ಉದ್ಘೋಷಗಳಿರಬಹುದು. ಇವೆಲ್ಲವೂ ನಮ್ಮ ಸೈನಿಕರ ಸಮರ ಕೂಗು, ಅವರ ಅಂತರಾಳದ ಶಕ್ತಿ. ಕೆಚ್ಚೆದೆಗೆ ಮತ್ತಷ್ಟೂ ಬಲ ನೀಡುವ ಘೋಷಣೆಗಳು. ಸಮರ ಕಲಿಗಳ ಇಂತಹ ಕೂಗು ಯುವ ಸಮೂಹವನ್ನು ದೇಶ ಸೇವೆಗೆ ಅಣಿಯಾಗಿಸುವಂತೆ ಮಾಡಲಿ.
ಇಂತಹ ಎಲ್ಲ ಸೈನಿಕ ತುಕಡಿಗಳ ಸಮರ ವಾಣಿಯ ಶಕ್ತಿ ಶತಮಾನಗಳ ಹಿಂದೆ ದೇಶದ ಹಲವು ಪ್ರಾಂತ್ಯಗಳನ್ನಾಳುತ್ತಿದ್ದ ರಾಜವಂಶಗಳು ಹಾಗೂ ಅವುಗಳ ಪದಾತಿ ದಳಗಳು. ಅವರು ನಂಬುತ್ತಿದ್ದ ಯುದ್ಧೋನ್ಮಾದವನ್ನು ಹೆಚ್ಚಿಸುತ್ತಿದ್ದ ದೈವಿಕತೆ. ದೇಶದ ಗಡಿ ಕಾಯುವ ಪ್ರತಿಯೊಬ್ಬ ಸೈನಿಕರಿಗೂ ಅವರ ಸಮರ ಉದ್ಘೋಷ ಅವರಿಗೆ ಇಮ್ಮಡಿ ಉತ್ಸಾಹ ಪ್ರೇರಣೆ ನೀಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಎಲ್ಲರಿಗೂ ಗಣತಂತ್ರ ದಿನದ ಶುಭಾಶಯಗಳು. ಜೈ ಹಿಂದ್ !
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.