ಪ್ರಧಾನಿಯಾದ ಬಳಿಕ ನರೇಂದ್ರ ಮೋದಿಜಿಯವರು ಅನೇಕ ಬಾರಿ ಸ್ವಾವಲಂಬಿ ಭಾರತದ ಕುರಿತಾಗಿ ಮಾತನಾಡಿದ್ದಾರೆ. ಈ ಬಾರಿ ಅವರು ಒಂದು ಹೆಜ್ಜೆ ಮುಂದುವರೆದು “ಆತ್ಮನಿರ್ಭರ ಭಾರತ”ದ ಕುರಿತಾದ ತಮ್ಮ ಕನಸನ್ನು ದೇಶದ ಜನರ ಮುಂದೆ ಬಿಚ್ಚಿಟ್ಟರು. ಮೋದಿಜಿಯ ನಡೆ ನುಡಿಗಳನ್ನು ಎಚ್ಚರಿಕೆಯಿಂದ ಗಮನಿಸುವವರಿಗೆ ಈ ವಿಚಾರದ ಕುರಿತಾಗಿ ಘೋಷಣೆಯಾದಾಗ ಯಾವುದೇ ಅಚ್ಚರಿಯಾಗಿರಲು ಸಾಧ್ಯವಿಲ್ಲ, ಯಾಕೆಂದರೆ ಅವರು ನಿಧಾನವಾಗಿ ಭಾರತವನ್ನು ಸ್ವಾವಲಂಬಿಯಾಗಿಸುವತ್ತ ಪುಟ್ಟ ಹೆಜ್ಜೆಗಳನ್ನು ಊರಲು ಬಹಳ ಹಿಂದೆಯೇ ಪ್ರಾರಂಭಿಸಿದ್ದರು. ಅದು ರಕ್ಷಣಾ ಕ್ಷೇತ್ರದಲ್ಲಿರಬಹುದು ಅಥವಾ ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಇರಬಹುದು ಅಥವಾ ಬಾಹ್ಯಕಾಶ ಕ್ಷೇತ್ರದಲ್ಲೇ ಇರಬಹುದು, ಅವರು ಹೊಸ ಆವಿಷ್ಕಾರಗಳಿಗೆ ಹಾಗೂ ಹೊಸ ಮೈಲುಗಲ್ಲನ್ನು ಸ್ಥಾಪಿಸುವ ಪ್ರಯತ್ನಗಳಿಗೆ ಬೆನ್ನೆಲುಬಾಗಿ ನಿಂತು ಹುರಿದುಂಬಿಸುತ್ತಿದ್ದರು.
ದೀಪಾವಳಿಯ ಸಂದರ್ಭದಲ್ಲಿ ಚೈನಾ ವಸ್ತುಗಳ ಬಳಕೆಯು ಇಂದು ನಿನ್ನೆಯ ತೊಂದರೆಯಲ್ಲ. ಈ ತಪ್ಪು ಅನೇಕ ವರ್ಷಗಳಿಂದಲೂ ನಡೆದು ಬರುತ್ತಿದೆ. ಚೀನಾ ದೇಶವು ಮುಸುಕಲ್ಲಿ ಯುದ್ಧ ನಡೆಸುವುದು, ಮಾವೋವಾದಿ ನಕ್ಸಲರಿಗೆ ಬೆಂಬಲ ನೀಡುವುದು, ಕುತಂತ್ರಿ ಪಾಕಿಸ್ಥಾನಕ್ಕೆ ಮತ್ತು ಅಲ್ಲಿನ ಭಯೋತ್ಪಾದಕರಿಗೆ ಶಸ್ತ್ರಗಳನ್ನು ಸರಬರಾಜು ಮಾಡುವುದು ಇಂತಹ ಕಾರ್ಯಗಳನ್ನು ಹಲವಾರು ವರ್ಷಗಳಿಂದ ನಡೆಸುತ್ತಾ ಬರುತ್ತಿದೆ. ಮಾತ್ರವಲ್ಲದೆ, ವಿಶ್ವ ಸಂಸ್ಥೆಯಲ್ಲಿ ಪಾಕಿಸ್ಥಾನದ ಉಗ್ರನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಭಾರತದ ಪ್ರಯತ್ನಕ್ಕೆ ಅಡ್ಡಗಾಲು ಹಾಕುತ್ತಿರುವುದು ಕೂಡಾ ಧೂರ್ತ ಚೀನಾ ಎಂಬುದೂ ಎಲ್ಲರಿಗೂ ತಿಳಿದಿದೆ. ಇದೇ ಕಾರಣಕ್ಕಾಗಿ ಚೀನಾ ವಸ್ತುಗಳ ಬಳಕೆಯನ್ನು ನಿಲ್ಲಿಸಬೇಕು ಮತ್ತು ಚೀನಾ ವಸ್ತುಗಳ ಬಳಕೆಗೆ ನಿಷೇಧವನ್ನು ಹೇರಬೇಕು ಎಂದು ಹಲವು ದೇಶಪ್ರೇಮಿಗಳು ಅನೇಕ ವರ್ಷಗಳಿಂದ ಒತ್ತಾಯಿಸುತ್ತಾ, ಆಗ್ರಹಿಸುತ್ತಾ ಬಂದಿದ್ದಾರೆ. ಮಾತ್ರವಲ್ಲದೆ ಜನರ ಮನದಲ್ಲಿ ಈ ಕುರಿತಾಗಿ ಜಾಗೃತಿಯನ್ನು ಮೂಡಿಸುವ ಪ್ರಯತ್ನದಲ್ಲೂ ತೊಡಗಿದ್ದಾರೆ..
ಕೋವಿಡ್-19 ಎಂಬ ಮಹಾಮಾರಿಯ ಸೃಷ್ಟಿಗೆ ಕಾರಣವಾಗಿ ,ಸಂಪೂರ್ಣ ಜಗತ್ತು ಕೊರೋನಾದ ಮುಷ್ಟಿಯಲ್ಲಿ ಸಿಕ್ಕಿ ನರಳುತ್ತಿರುವ ಸಂದರ್ಭದಲ್ಲೇ ಚೀನಾ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸುವ ಉದ್ದಟತನ ತೋರಿತ್ತು, ಇಷ್ಟು ಮಾತ್ರವಲ್ಲದೆ ಕದನ ವಿರಾಮದ ನಿಯಮಗಳನ್ನು ಪಾಲಿಸುತ್ತಿದ್ದ ನಿರಾಯುಧ ಭಾರತೀಯ ಯೋಧರ ಮೇಲೆ ಆಯುಧಗಳಿಂದ ಪೀಪಲ್ ಲಿಬರೇಷನ್ ಆರ್ಮಿಯ ಯೋಧರು ಹಲ್ಲೆ ನಡೆಸಿದ್ದರು. ಗ್ಯಾಲ್ವನ್ ವ್ಯಾಲಿಯಲ್ಲಿ ಜೂನ್ ತಿಂಗಳಲ್ಲಿ ನಡೆದ ಈ ಘಟನೆಯಲ್ಲಿ 20 ಭಾರತೀಯ ವೀರ ಯೋಧರು ಹುತಾತ್ಮರಾಗಿದ್ದರು. ಈ ಘಟನೆಯು ಮಲಗಿದ್ದ ಸ್ವಾಭಿಮಾನಿ, ದೇಶಭಕ್ತ ಭಾರತೀಯರನ್ನು ಬಡಿದೆಬ್ಬಿಸಿತು. ಪ್ರತಿಯೊಬ್ಬ ಭಾರತೀಯನ ಮನದಲ್ಲೂ ಚೀನಾದ ವಿರುದ್ಧ ಆಕ್ರೋಶ ಮುಗಿಲು ಮುಟ್ಟಿತ್ತು.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ, ಆತ್ಮನಿರ್ಭರ ಭಾರತದ ಕನಸನ್ನು ಜನರ ಮುಂದಿಟ್ಟು, ಸ್ಥಳೀಯ ವಸ್ತುಗಳಿಗೆ ದನಿಯಾಗಿ (ವೋಕಲ್ ಫಾರ್ ಲೋಕಲ್) ಎಂಬ ಕರೆಯನ್ನೂ ನೀಡಿದರು. ಈ ಬಾರಿ ಸಾಮಾಜಿಕ ಜಾಲ ತಾಣಗಳಲ್ಲಿ ಈ ಕುರಿತಾದ ಕ್ರಾಂತಿಯೇ ಜರಗಿತು. ಬಹಳಷ್ಟು ಯುವ ಹೃದಯಗಳು ತಾವೂ ಸ್ಥಳೀಯ ಉತ್ಪನ್ನಗಳನ್ನೂ ಬಳಸುವುದಾಗಿಯೂ, ಇತರರನ್ನು ಈ ನಿಟ್ಟಿನಲ್ಲಿ ಪ್ರೋತ್ಸಾಹಿಸುವುದಾಗಿಯೂ ಪಣ ತೊಟ್ಟರು. ಟೀಕಾಕಾರರು ಆತ್ಮನಿರ್ಭರ ಭಾರತದ ಕಲ್ಪನೆಯನ್ನು ಕನಸು ಎಂದು ಟೀಕಿಸುತ್ತಾ ಕಾಲಹರಣ ಮಾಡುತ್ತಿದ್ದರೆ, ದೇಶಭಕ್ತರು ಚೈನಾ ವಸ್ತುಗಳ ಬಳಕೆಯಿಂದ ಆಗುವ ಆರ್ಥಿಕ ನಷ್ಟ ಹಾಗೂ, ಸ್ವದೇಶೀ ವಸ್ತುಗಳ ಬಳಕೆಯಿಂದ ದೇಶದ ಆರ್ಥಿಕತೆಗಾಗಬಹುದಾದ ಲಾಭಗಳ ಕುರಿತಾಗಿ ಸರಳವಾಗಿ ಜಾಗೃತಿಯನ್ನು ಮೂಡಿಸುವ ಕಾರ್ಯಗಳಲ್ಲಿ ತೊಡಗಿಕೊಂಡರು. ಈ ನಿಟ್ಟಿನಲ್ಲಿ ಅನೇಕ ಸಂಘಗಳು, ಸಂಸ್ಥೆಗಳು ಕೂಡಾ ಕೈಜೋಡಿಸಿತು.
ಈ ಬಾರಿಯ ದೀಪಾವಳಿ ದೇಶದ ನಾಗರೀಕರು ಮನಸ್ಸು ಮಾಡಿದಲ್ಲಿ ಎಲ್ಲವೂ ಸಾಧ್ಯ ಎಂಬುದಕ್ಕೆ ಉದಾಹರಣೆಯನ್ನು ಬರೆಯಿತು. ದೇಶದ ವೀರ ಪುತ್ರರು ಹುತಾತ್ಮರಾದ ನೆನಪು ಮತ್ತು ದುಃಖ ಇನ್ನೂ ಭಾರತೀಯರ ಮನದಲ್ಲಿ ಮಡುಗಟ್ಟಿದೆ ಹಾಗೂ ಚೀನಾದ ಮೇಲಿನ ಆಕ್ರೋಶ ತಣ್ಣಗಾಗಿಲ್ಲ ಎಂದು ಸ್ಪಷ್ಟವಾಯಿತು. ಪ್ರತಿಯೊಂದು ಮನೆಯಲ್ಲೂ, ಚೀನಾದ ವಿದ್ಯುತ್ ಬಲ್ಬ್ ಗಳ ಬದಲಾಗಿ ಸ್ವದೇಶೀ ಹಣತೆಗಳು ಬೆಳಕನ್ನು ನೀಡಿತು. ಕೆಲವು ಸರಕಾರಗಳೇ ಚೈನಾ ಪಟಾಕಿಗಳನ್ನು ನಿಷೇಧಿಸಿದರೆ, ಬಹಳಷ್ಟು ಜನರು ಸ್ವಯಂ ಪ್ರೇರಿತರಾಗಿ ನಿಷೇಧವನ್ನು ಹೇರಿಕೊಂಡರು. ಇವೆಲ್ಲದರ ಪರಿಣಾಮ ಇಂದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಬಾರಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶದ 71% ಜನರು ಚೈನಾದ ಉತ್ಪನ್ನಗಳನ್ನು ಕೊಂಡುಕೊಳ್ಳಲು ನಿರಾಕರಿಸಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಮಾಹಿತಿಗಳ ಪ್ರಕಾರ ಚೀನಾ ದೇಶಕ್ಕೆ 40 ಸಾವಿರ ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ. ಖಾದಿ ವಸ್ತ್ರಗಳು ಈ ಬಾರಿ ಮಾರಾಟದಲ್ಲಿ ದಾಖಲೆಯನ್ನು ನಿರ್ಮಿಸಿದೆ. ಇದೆಲ್ಲ ಸಾಧ್ಯವಾದದ್ದು ನಮ್ಮೆಲ್ಲರ ಸಹಕಾರ ಹಾಗೂ ನಮ್ಮೆಲ್ಲ ಧೃಢ ನಿಶ್ಚಯದಿಂದ. ಚೀನಾ ವಸ್ತುಗಳನ್ನು ಬಳಕೆ ಮಾಡದಿರುವ ನಮ್ಮ ನಿರ್ಧಾರ ಸರಿಯಾದ ಪ್ರತಿಫಲವನ್ನೇ ನೀಡುತ್ತಿದೆ. ಈ ಬಾರಿ ಸ್ವಾವಲಂಬಿ ಭಾರತದೆಡೆಗೆ ದೊಡ್ಡದೊಂದು ಹೆಜ್ಜೆಯನ್ನು ಇರಿಸಿದ್ದೇವೆ. ನೆನಪಿರಲಿ ಕ್ರಮಿಸಬೇಕಾದ ಹಾದಿಯು ಬಹಳಷ್ಟಿದೆ..
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.