ಆತ್ಮನಿರ್ಭರ ಅಭಿಯಾನಕ್ಕೆ ಮಹತ್ವದ ಉತ್ತೇಜನವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಮಕ್ಕಳ ಆಟಿಕೆಗಳು ಮತ್ತು ಆಟಗಳ ಕ್ಷೇತ್ರವನ್ನು ಕೂಡ ಇದರಲ್ಲಿ ಒಳಪಡಿಸುವ ಆಲೋಚನೆಯನ್ನು ಅವರು ವಿಸ್ತರಿಸಿದ್ದಾರೆ. ಆಟಿಕೆಗಳ ಉಪಯುಕ್ತತೆಯನ್ನು ಮಗುವಿನ ಮನೋ ವಿಕಾಸ ಮತ್ತು ಅರಿವಿನ ಕೌಶಲ್ಯಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸುವ ಸಾಧನವೆಂದು ಪರಿಗಣಿಸಲಾಗುತ್ತದೆ. ಮಕ್ಕಳ ಸಾಮಾಜಿಕ ಮೌಲ್ಯವನ್ನು ಹೆಚ್ಚಿಸುವಲ್ಲಿಯೂ ಇದು ಸಹಕಾರಿ. ಹೀಗಾಗಿಯೇ ಆಟಿಕೆಗಳ ಕ್ಷೇತ್ರವನ್ನು ಆತ್ಮನಿರ್ಭರಗೊಳಿಸುವ ಸಲಹೆಯನ್ನು ಪ್ರಧಾನಿ ನೀಡಿದ್ದಾರೆ. ಆಟಿಕೆ ಉದ್ಯಮ ತುಂಬಾ ವಿಸ್ತಾರವಾದುದು, ಇದನ್ನು ಸಂಪೂರ್ಣವಾಗಿ ಭಾರತೀಯಗೊಳಿಸುವುದರಿಂದ ಸಾಕಷ್ಟು ಪ್ರಯೋಜನವಿದೆ.
ಆಟಿಕೆಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಭಾರತೀಯ ಆಟಿಕೆಗಳ ಪಾತ್ರವನ್ನು ಜಾಗತೀಕೃತ ರೂಪಕ್ಕೆ ಪರಿವರ್ತಿಸುವ ಮಾರ್ಗಗಳನ್ನು ಮೋದಿಯವರ ಕರೆಯ ಬಳಿಕ ಹೆಚ್ಚು ಹೆಚ್ಚು ಚರ್ಚಿಸಲಾಗುತ್ತಿದೆ. ಗುರಿಯನ್ನು ಸಾಧಿಸುವಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆಯ ಬಳಕೆಯನ್ನು ಪ್ರಧಾನಿ ಸದಾ ಒತ್ತಿ ಹೇಳುತ್ತಾರೆ. ಆಟಿಕೆಯ ವಿಷಯದಲ್ಲೂ ಅವರು ಅದನ್ನೇ ಹೇಳಿದ್ದಾರೆ. ಸರಿಯಾದ ವಿನ್ಯಾಸದೊಂದಿಗೆ ಆಟಿಕೆಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಯುವಕರಿಗೆ ಹ್ಯಾಕಥಾನ್ಗಳನ್ನು ಅವರು ಸೂಚಿಸಿದ್ದಾರೆ ಮತ್ತು ಇದು ಭಾರತೀಯ ಯುವಕರ ನವೀನ ಶಕ್ತಿಯ ಅಭಿವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಸತ್ಯ ಅವರಿಗೆ ತಿಳಿದಿದೆ. ಅಂತಹ ಕಾರ್ಯಕ್ರಮಗಳ ಭಾಗವಾಗಿ ಆನ್ಲೈನ್ ಆಟಗಳನ್ನು ಸಹ ಪ್ರಸ್ತಾಪಿಸಲಾಗಿದೆ.
ಆಟಿಕೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸರ್ಕಾರ ಕೈಗೊಂಡ ಉಪಕ್ರಮವು ಮೆಚ್ಚುಗೆಗೆ ಅರ್ಹವಾಗಿದೆ. ವಾಸ್ತವವಾಗಿ, ಆಟಿಕೆಗಳು ಕೇವಲ ಮನೋರಂಜನೆಯ ಸಾಧನಗಳಲ್ಲ, ಅವುಗಳು ಅನೇಕ ಇತರ ಉದ್ದೇಶಗಳನ್ನು ಕೂಡ ಪೂರೈಸುತ್ತವೆ. ಅವು ಸಂಸ್ಕೃತಿಯ ಪ್ರತಿಬಿಂಬ, ಅವು ರಾಷ್ಟ್ರವು ಅನುಸರಿಸುವ ಮೌಲ್ಯಗಳನ್ನು ಪ್ರದರ್ಶಿಸುತ್ತವೆ ಮತ್ತು ಅವು ಒಂದು ಅಸ್ತಿತ್ವದ ಆವಿಷ್ಕಾರದ ಉತ್ಪನ್ನವಾಗಿದೆ. ಈ ವೈಶಿಷ್ಟ್ಯಗಳೊಂದಿಗೆ, ಆಟಿಕೆಗಳು ಸಮಾಜವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳುವುದು ತಪ್ಪಾಗಲಾರದು. ಅದು ಮಕ್ಕಳನ್ನು ರೂಪಿಸುತ್ತದೆ. ಆಟಿಕೆಗಳು ಸಂಸ್ಕೃತಿ ಅಥವಾ ಚಿಂತನೆಯನ್ನು ಉತ್ತೇಜಿಸುವ ಪರಿಪೂರ್ಣ ಮಾರ್ಗವಾಗಿ ಕಾರ್ಯನಿರ್ವಹಿಸುತ್ತವೆ.
ಹೀಗಾಗಿ ಭಾರತೀಯ ಮಗುವಿಗೆ ಭಾರತೀಯ ಮೌಲ್ಯಗಳ ಸಾರುವ ಆಟಿಕೆಗಳನ್ನು ನಿರ್ಮಾಣ ಮಾಡಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಚೀನಾದ ಆಟಿಕೆಗಳು ತುಂಬಿ ತುಳುಕುತ್ತಿರುವ ನಮ್ಮ ಮಾರುಕಟ್ಟೆಯನ್ನು ಭಾರತೀಯತೆಗೆ ಪರಿವರ್ತಿಸುವ ಅಗತ್ಯವಿದೆ. ಚೀನಾವು ಕಡಿಮೆ ಬೆಲೆಗೆ ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಇತ್ಯಾದಿಗಳನ್ನು ಬಳಸಿ ಮಕ್ಕಳಿಗೆ ಆಟಿಕೆ ನಿರ್ಮಾಣ ಮಾಡುತ್ತದೆ. ಇಂತಹ ಕಳಪೆ ಗುಣಮಟ್ಟದ ಆಟಿಕೆಗಳು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಉತ್ತಮವಾದುದಲ್ಲ. ಭಾರತದಲ್ಲಿ ಅತ್ಯುತ್ತಮ ಗುಣಮಟ್ಟದ ಮರ ಮತ್ತು ಇತ್ಯಾದಿಗಳನ್ನು ಬಳಸಿ ಮಾಡಿದ ಆಟಿಕೆಗಳು ಲಭ್ಯವಿದೆ. ಇವುಗಳ ತಯಾರಿಕೆಗೆ ಇನ್ನಷ್ಟು ಉತ್ತೇಜನ ನೀಡಿದರೆ ಸ್ವಾವಲಂಬನೆ ಸಾಧಿಸಲು ಸಾಧ್ಯವಿದೆ. ಚನ್ನಪಟ್ಟಣದ ಗೊಂಬೆಗಳು ತುಂಬಾ ಪ್ರಸಿದ್ಧವಾದುದು, ಆದರೆ ಅದನ್ನು ನಿರ್ಮಾತೃಗಳ ಬದುಕು ಹಸನಾಗಿಲ್ಲ. ಇದಕ್ಕೆ ಕಡಿಮೆ ಬೇಡಿಕೆಯೇ ಕಾರಣ. ಸರ್ಕಾರ ಇಮತಹ ಅಟಿಕೆ ತಯಾರಿಕರಿಗೆ ಹೆಚ್ಚಿನ ಪ್ರೋತ್ಸಾಹಕಗಳನ್ನು ನೀಡಿದರೆ, ಪ್ರಚಾರಗಳನ್ನು ನೀಡಿದರೆ ಈ ಉದ್ಯಮ ಖಂಡಿತವಾಗಿಯೂ ಬೆಳೆಯುತ್ತದೆ ಎಂಬುದರಲ್ಲಿ ಅನುಮಾನವೇ ಬೇಡ.
ಭಾರತೀಯ ಮಗು ಭಾರತೀಯ ಆಟಿಕೆಗಳೊಂದಿಗೆ ಆಟವಾಡಿದರೆ ಅದರ ಚಿಂತನೆಗಳೂ ಭಾರತೀಯಗೊಳ್ಳುತ್ತದೆ. ನಮ್ಮ ಸಂಸ್ಕೃತಿಯ ವೈಭವದ ಬಗ್ಗೆ, ಸೌಂದರ್ಯದ ಬಗ್ಗೆ ಅದಕ್ಕೆ ಎಳವೆಯಲ್ಲೇ ಪರಿಚಯವಾಗುತ್ತದೆ. ಹೀಗಾಗಿ ಆಟಿಕೆ ಕ್ಷೇತ್ರ ಆತ್ಮನಿರ್ಭರಗೊಳ್ಳಲು ಎಲ್ಲರೂ ಕೈಜೋಡಿಸಬೇಕಿದೆ.
✍️ ಶರಣ್ಯ ಶೆಟ್ಟಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.