ಡಾ.ಎಪಿಜೆ ಅಬ್ದುಲ್ ಕಲಾಂ, ಭಾರತ ಕಂಡ ಅದ್ಭುತ ವಿಜ್ಞಾನಿ, ಜನಾನುರಾಗಿ ರಾಷ್ಟ್ರಪತಿ, ದಣಿವರಿಯದ ಶಿಕ್ಷಕ. ಭಾರತವನ್ನು ಬಲಿಷ್ಠಗೊಳಿಸಬೇಕು, ಸದೃಢಗೊಳಿಸಬೇಕು ಎಂಬ ಏಕಮಾತ್ರ ಗುರಿ ಹೊಂದಿ ಅದಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಮಹಾನ್ ಚೇತನ.
ತಮಿಳನಾಡಿನ ರಾಮೇಶ್ವರಂನ ಅತೀ ಬಡ ಕುಟುಂಬದಲ್ಲಿ ಹುಟ್ಟಿ, ದೇಶದ ರಾಷ್ಟ್ರಪತಿಯಾಗುವವರೆಗೆ ಅವರು ಸವೆಸಿದ ಹಾದಿ ಮುಳ್ಳಿನ ಮೇಲಿನ ನಡಿಗೆ. ಜೈನುಲಾಬುದ್ದೀನ್ ಮತ್ತು ಆಶಿಯಮ್ಮ ಅವರ ಮಗನಾಗಿ ಅಕ್ಟೋಬರ್ 15, 1931ರಲ್ಲಿ ಜನಿಸಿದ ಇವರ ಪೂರ್ಣ ಹೆಸರು ಅವುಲ್ ಪಕೀರ್ ಜೈನುಲಾಬುದ್ದೀನ್ ಅಬ್ದುಲ್ ಕಲಾಂ. ತಂದೆಗೆ ದೋಣಿ ನಡೆಸುವ ಕಾಯಕ. ಅಷ್ಟೊಂದು ಆದಾಯವಿಲ್ಲದ ಕುಟುಂಬ ಬಡತನದಲ್ಲೇ ಜೀವನ ಸಾಗಿಸಬೇಕಾಗಿತ್ತು. ಆದರೆ ಬಡತನವೆಂಬುದು ಕಲಾಂ ಅವರ ಮಹತ್ವಾಕಾಂಕ್ಷೆಗೆ ಅಡ್ಡಿಯುಂಟು ಮಾಡಲಿಲ್ಲ. ಶಾಲೆಗೆ ಹೋಗುತ್ತಲೇ ಮನೆಮನೆಗೆ ಪೇಪರ್ ಹಾಕಿ ಆ ಮೂಲಕ ಕುಟುಂಬದ ಆದಾಯಕ್ಕೆ ತಮ್ಮ ಕೊಡುಗೆ ನೀಡಿ ಶಿಕ್ಷಣವನ್ನೂ ಮುಂದುವರೆಸಿದರು.
ಅತ್ಯಂತ ಚುರುಕು ಮತ್ತು ಶ್ರಮಜೀವಿ ವಿದ್ಯಾರ್ಥಿಯಾಗಿದ್ದ ಕಲಾಂ ವಿದ್ಯಾರ್ಥಿ ಜೀವನದ ಒಂದೊಂದೇ ಘಟ್ಟವನ್ನು ಪೂರೈಸಿ 1955ರಲ್ಲಿ ಮದ್ರಾಸ್ನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ಪದವಿ ಪಡೆದರು. ಬಳಿಕ ಅವರು ಡಿಆರ್ಡಿಓದಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಮುಂದೊಂದು ದಿನ ಅದರ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದರು. ಇಸ್ರೋದಲ್ಲೂ ಏರೋಸ್ಪೇಸ್ ಎಂಜಿನಿಯರ್ ಆಗಿ ಅವರು ಕಾರ್ಯನಿರ್ವಹಿಸಿದ್ದಾರೆ. ಭಾರತಕ್ಕೆ ರಾಕೆಟ್ ಮತ್ತು ಕ್ಷಿಪಣಿಗಳನ್ನು ಪರಿಚಯಿಸಿದ ಅವರನ್ನು ಕ್ಷಿಪಣಿ ಜನಕ (ಮಿಸೈಲ್ ಮ್ಯಾನ್ ಆಫ್ ಇಂಡಿಯಾ) ಎಂದೇ ಕರೆಯಲಾಗುತ್ತದೆ.
ಜಗತ್ತಿಗೆ ತಿಳಿಯದಂತೆ ಅಣ್ವಸ್ತ್ರ ಪರೀಕ್ಷೆ ನಡೆಸಿ ಭಾರತವನ್ನು ಸದೃಢ ಮತ್ತು ಬಲಿಷ್ಠ ದೇಶವನ್ನಾಗಿಸುವಲ್ಲಿ ಕಲಾಂ ನಿರ್ವಹಿಸಿದ ಪಾತ್ರ ಮಹತ್ವದ್ದು, ಪೋಕ್ರಾನ್ನಲ್ಲಿ ನಡೆದ ಅಣ್ವಸ್ತ್ರ ಪರೀಕ್ಷೆ ಯಾರಿಗೂ ತಿಳಿಯಬಾರದು ಎಂಬ ಕಾರಣಕ್ಕಾಗಿಯೇ ಕಲಾಂ ಸಾಲು ಸಾಲು ಕ್ಷಿಪಣಿ, ರಾಕೆಟ್, ಪ್ರಾಯೋಗಿಕ ಬಾಂಬ್ಗಳನ್ನು ಎಸೆದು ಪತ್ತೆದಾರರ ಕಣ್ಣು ತಪ್ಪಿಸಿದ್ದರು. ಇಂದು ನಮ್ಮ ದೇಶ ಅಣ್ವಸ್ತ್ರ ದೇಶ ಎಂಬ ಹೆಸರು ಪಡೆದಿದ್ದರೆ ಅದು ಕಲಾಂ ಮತ್ತು ಅವರ ಸಂಗಡಿಗ ವಿಜ್ಞಾನಿಗಳಿಂದ.
ವಿಜ್ಞಾನ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಗಮನಿಸಿಯೇ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಲಾಂ ಹೆಸರನ್ನು ರಾಷ್ಟ್ರಪತಿ ಹುದ್ದೆಗೆ ಶಿಫಾರಸ್ಸು ಮಾಡಿದ್ದರು. 2002ರ ಜುಲೈ 25ರಂದು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಅವರು ಜನರ ರಾಷ್ಟ್ರಪತಿ ಎಂದೇ ಖ್ಯಾತರಾದವರು. ಅದುವರೆಗೆ ಜನಸಾಮಾನ್ಯನ ಪಾಲಿಗೆ ಗಗನಕುಸುಮದಂತಿದ್ದ ರಾಷ್ಟ್ರಪತಿ ಭವನ ಕಲಾಂ ಅವರಿಂದಾಗಿ ಸಾಮಾನ್ಯನಿಗೂ ಎಟಕುವಂತಾಯಿತು. ರಾಷ್ಟ್ರಪತಿಗಳ ಕಾಲಿಗೆ ಶೂ ಹಾಕಲು ಆಳುಗಳಿದ್ದಾರೆ. ಆದರೆ ತನ್ನ ಶೂ ಅನ್ನು ನಾನೇ ಧರಿಸುತ್ತೇನೆ ಎಂದು ಆ ಸಂಪ್ರದಾಯಕ್ಕೆ ತಿಲಾಂಜಲಿ ಹಾಕಿದವರು ಕಲಾಂ. ಅಲ್ಲದೇ ನನ್ನ ಊಟಕ್ಕೆ ಕಾಯದೆ ನೀವು ಊಟ ಮಾಡಿ ಎಂದು ರಾಷ್ಟ್ರಪತಿ ಭವನದ ಇತರ ಆಳುಗಳಿಗೆ ಅವರು ಸೂಚನೆ ನೀಡುತ್ತಿದ್ದರು. ಇದು ಅವರ ಸರಳ, ಸಜ್ಜನಿಕೆಗೆ ಹಿಡಿದ ಕೈಗನ್ನಡಿ.
ವ್ಯಕ್ತಿ ಎತ್ತರಕ್ಕೆ ಏರಿದಂತೆ ಗಗನಕುಸುಮವಾಗುತ್ತಾನೆ, ಆದರೆ ಕಲಾಂ ಎತ್ತರಕ್ಕೆ ಏರಿದಷ್ಟೂ ಸರಳತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದರು. ರಾಷ್ಟ್ರಪತಿಯಾಗಿ ನಿವೃತ್ತಿ ಪಡೆದ ಬಳಿಕವೂ ವಿಶ್ರಾಂತಿ ಪಡೆದವರು ಅವರಲ್ಲ. ದೇಶದ ಯುವ ಜನತೆಯನ್ನು, ಮಕ್ಕಳನ್ನು ಸದಾ ಪ್ರೇರೇಪಿಸುತ್ತಾ, ಮಕ್ಕಳೊಂದಿಗೆ ಮಕ್ಕಳಾಗಿರುತ್ತಿದ್ದರು. ಶಿಕ್ಷಕ ವೃತ್ತಿಯನ್ನು ಅತೀವ ಪ್ರೀತಿಸುತ್ತಿದ್ದ ಅವರು ವಿವಿಧ ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದವರು. ಸಭೆ, ಸಮಾರಂಭಗಳಿಗೆ ತೆರಳಿ ಪ್ರೇರಣಾದಾಯಕ ಮಾತುಗಳನ್ನಾಡುತ್ತಿದ್ದರು. ವಿಜ್ಞಾನ ಕ್ಷೇತ್ರವನ್ನು ಬಲಿಷ್ಠಗೊಳಿಸುವಂತೆ ಕರೆ ನೀಡುತ್ತಿದ್ದರು. ಮಕ್ಕಳೊಂದಿಗೆ ಸಂವಾದ ನಡೆಸುತ್ತಿದ್ದ ಅವರು, ಮಕ್ಕಳ ಮುಗ್ಧ ಪ್ರಶ್ನೆಗಳಿಗೆ ಅತೀವ ಸಂಯಮದಿಂದ ಉತ್ತರಿಸುತ್ತಿದ್ದರು.
ಭಾರತ ಪ್ರಜ್ಜಲಿಸಬೇಕು ಎಂಬ ಮಹಾನ್ ಗುರಿ ಹೊಂದಿದ್ದ ಅವರು, ‘ಇಂಡಿಯಾ 2020’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಮೈ ಜರ್ನಿ, ದಿ ಲೈಫ್ ಟ್ರಿ, ಚಿಲ್ಡ್ರನ್ ಆಸ್ಕ್ ಎಂಬಿತ್ಯಾದಿ ಪುಸ್ತಕಗಳನ್ನು ಅವರು ರಚಿಸಿದ್ದಾರೆ. ದಿ ವಿಂಗ್ಸ್ ಆಫ್ ಫಯರ್ ಎಂಬುದು ಅವರ ಆತ್ಮಕಥೆ. ಭವ್ಯ ಭಾರತದ ಕನಸನ್ನು ಕಟ್ಟಿಕೊಡುವ ಪ್ರಯತ್ನವನ್ನು ಅವರು ತಮ್ಮ ಪುಸ್ತಕದಲ್ಲಿ ಮಾಡಿದ್ದಾರೆ. ಕನಸು ಕಾಣಿ ಎಂಬ ಸಂದೇಶವನ್ನು ನೀಡಿದ್ದಾರೆ. ಪದ್ಮಭೂಷಣ, ಪದ್ಮವಿಭೂಷಣ, 40ಕ್ಕೂ ಹೆಚ್ಚು ಡಾಕ್ಟರೇಟ್ಗಳು ಅವರಿಗೆ ದೊರೆತಿದೆ. ಭಾರತ ರತ್ನದಂತಹ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.
ಕಾರ್ಯ ಮಾಡುತ್ತಲೇ ನಾನು ಅಗಲಬೇಕು, ನನ್ನ ದೇಹ ಎಂದಿಗೂ ನಿರರ್ಥಕವಾಗಿ ಭೂಮಿಗೆ ಭಾರವಾಗಬಾರದು ಎಂಬುದು ಕಲಾಂ ಹೆಬ್ಬಯಕೆಯಾಗಿತ್ತು. ಅಂತೆಯೇ ಅವರು ಸಂವಾದ ನಡೆಸುತ್ತಲೇ ವಿಧಿವಶರಾಗಿದ್ದಾರೆ. ನಿಜವಾದ ರಾಷ್ಟ್ರವಾದಿಯಾಗಿ, ರಾಷ್ಟ್ರಭಕ್ತನಾಗಿ ದೇಶದ ಪ್ರಗತಿಗೆ ಅನನ್ಯ ಕೊಡುಗೆ ನೀಡಿದ ಆ ಮಹಾನ್ ಚೇತನ ಇಂದು ನಮ್ಮೊಂದಿಗಿಲ್ಲ. ಆದರೆ ಅವರು ಕೊಟ್ಟ ಸಂದೇಶ, ಬಿಟ್ಟು ಹೋದ ನೆನಪು, ಮಾಡಿದ ಸಾಧನೆ, ನೀಡಿದ ಕೊಡುಗೆ, ಅವರ ಆದರ್ಶ ಜೀವನ ನಮಗೆ ಸದಾ ಪ್ರೇರಣೆಯಾಗಲಿ.
ಕಲಾಂ ನುಡಿಗಳು:
ಸೋಲೆಂಬ ಕಾಯಿಲೆಯನ್ನು ಕೊಲ್ಲಲು ವಿಶ್ವಾಸ ಮತ್ತು ಶ್ರಮದಾನ ಅತ್ಯಂತ ಪ್ರಭಾವಶಾಲಿ ಔಷಧಿ, ಆ ಔಷಧಿ ನಿಮ್ಮನ್ನು ಯಶಸ್ವಿ ಮನುಷ್ಯನನ್ನಾಗಿಸುತ್ತದೆ.
ಕನಸೆಂಬುದು ನಿದ್ರೆಯಲ್ಲಿ ಕಾಣುವುದಲ್ಲ, ನಿಮ್ಮನ್ನು ನಿದ್ರಿಸದಂತೆ ಮಾಡುವುದೇ ಕನಸು.
ನಾನು ಹ್ಯಾಂಡಸಮ್ ಮನುಷ್ಯನಲ್ಲ, ಆದರೆ ನನ್ನ ಹ್ಯಾಂಡನ್ನು ಸಹಾಯದ ಅಗತ್ಯವಿರುವವರಿಗೆ ನೀಡಬಲ್ಲೆ. ಸೌಂದರ್ಯವೆನ್ನುವುದು ಮುಖದಲ್ಲಿಲ್ಲ, ಹೃದಯದಲ್ಲಿದೆ.
ನಿಮಗೆ ಭವಿಷ್ಯವನ್ನು ಬದಲಿಸಲು ಸಾಧ್ಯವಿಲ್ಲ, ಆದರೆ ಅಭ್ಯಾಸಗಳನ್ನು ಬದಲಿಸಬಹುದು. ಖಂಡಿತ, ಅಭ್ಯಾಸಗಳು ನಿಮ್ಮ ಭವಿಷ್ಯವನ್ನು ಬದಲಿಸುತ್ತದೆ.
ಒಂದು ಪುಸ್ತಕ ನೂರು ಉತ್ತಮ ಸ್ನೇಹಿತರಿಗೆ ಸಮಾನ, ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.