ಬಿಜೆಪಿ (ಭಾರತೀಯ ಜನತಾ ಪಕ್ಷ) ದಲ್ಲಿ ಕುಟುಂಬ ರಾಜಕಾರಣಕ್ಕೆ ಆಸ್ಪದವಿಲ್ಲ. ಇಲ್ಲಿ ಪಕ್ಷಕ್ಕಾಗಿ ಯಾರು ನಿಷ್ಠೆಯಿಂದ ದುಡಿಯುತ್ತಾರೋ, ಯಾರು ಪಕ್ಷದ ಬಲವರ್ಧನೆಗಾಗಿ ತಾನು-ತನ್ನದು ಎಂಬ ಭಾವವನ್ನು ಬಿಟ್ಟು ಕೆಲಸ ಮಾಡುತ್ತಾರೆಯೋ ಅವರಿಗೆ ಮನ್ನಣೆ ಸಿಗುತ್ತದೆ ಎಂಬುದಕ್ಕೆ ಅನೇಕ ಸಾಕ್ಷ್ಯ ಸಿಗುತ್ತದೆ. ಎಲೆಮರೆಯ ಕಾಯಿಯಂತೆ ಮುನ್ನೆಲೆಗೆ ಬರದೇ ಹೋದರೂ ಪಕ್ಷ ಅವರನ್ನು ಗುರುತಿಸುವ ಕೆಲಸವನ್ನು ಮಾಡುತ್ತದೆ. ಇದಕ್ಕೆ ಸಾಕ್ಷಿ ಸಾಮಾನ್ಯ ಚಹಾ ಮಾರುವ ವ್ಯಕ್ತಿಯಾಗಿದ್ದ ಮೋದಿ ಅವರು ಇಂದು ಭಾರತವನ್ನು ಮುನ್ನಡೆಸುವ ಶಕ್ತಿಯಾಗಿರುವುದು, ಸಾಮಾನ್ಯ ವ್ಯಕ್ತಿಯೊಬ್ಬ ರಾಷ್ಟ್ರಪತಿ ಸ್ಥಾನಕ್ಕೇರಿರುವುದು. ಇದು ಉದಾಹರಣೆಯಷ್ಟೇ. ಇಂತಹ ಹಲವಾರು ಸಾಮಾನ್ಯ ವ್ಯಕ್ತಿಗಳು ಬಿಜೆಪಿಯಲ್ಲಿ ಕೆಲಸ ಮಾಡಿ, ಯಾವುದೇ ಅಪೇಕ್ಷೆ ಹೊಂದದೇ, ಯಾವುದೇ ಲಾಭಿ ನಡೆಸದೆಯೇ ಉನ್ನತ ಸ್ಥಾನಕ್ಕೇರಿರುವುದು. ಇಂತಹ ಅಸಂಭವಗಳು ಸಂಭವಿಸುವುದು.ಕೇವಲ ಬಿಜೆಪಿಯಲ್ಲಿ ಮಾತ್ರ.
ಕರ್ನಾಟಕದಿಂದ ವಿಧಾನ ಪರಿಷತ್ ಗೆ 5 ಜನರ ನಾಮನಿರ್ದೇಶನ ವನ್ನು ಬಿಜೆಪಿ ಸರ್ಕಾರ ನಿನ್ನೆಯಷ್ಟೇ ಮಾಡಿದೆ. ಇದರಲ್ಲಿ ಬುಡಕಟ್ಟು ಕ್ಷೇತ್ರದಿಂದ ಶಿರಸಿಯ ಯಲ್ಲಾಪುರದ ಹಿತ್ಲಳ್ಳಿಯ 55 ವರ್ಷದ ಶಾಂತರಾಂ ಬುಡನ ಸಿದ್ಧಿ ಅವರನ್ನು ಆಯ್ಕೆ ಮಾಡಲಾಗಿದೆ. ಅವರೊಬ್ಬ ಪರಿಸರವಾದಿ, ಸಾಮಾಜಿಕ ಕಾರ್ಯಕರ್ತ, ನಿರರ್ಗಳ ಭಾಷಣಕಾರ, ಎಲ್ಲಕ್ಕೂ ಹೆಚ್ಚಾಗಿ ಅವರೊಬ್ಬ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ. ಇವರು ಭಾರತದಾದ್ಯಂತ ಅನೇಕ ವನವಾಸಿ ಸಮುದಾಯಗಳ ಕಲ್ಯಾಣಕ್ಕಾಗಿ ಗಮನಾರ್ಹ ಕೆಲಸಗಳನ್ನು ಮಾಡುವ ಮೂಲಕ ಅವುಗಳ ಏಳಿಗೆಗಾಗಿ ಶ್ರಮಿಸಿದವರು.
ಇವರ ಹಿನ್ನೆಲೆಯನ್ನು ಗಮನಿಸಿದರೆ, ಇವರದ್ದೇನೂ ಆರ್ಥಿಕವಾಗಿ ಸಶಕ್ತವಾದ ಕುಟುಂಬವಲ್ಲ. ಸಾಮಾಜಿಕವಾಗಿಯೂ ಅನೇಕ ಏಳುಬೀಳುಗಳನ್ನು ಕಂಡುಕೊಂಡೇ ಬಂದ ಸಿದ್ಧಿ ಜನಾಂಗದ ಒಬ್ಬ ಹುಡುಗನಿಗೆ ಶಿಕ್ಷಣವೂ ಕೈಗೆಟಕುವ ಹಣ್ಣಾಗಿರಲಿಲ್ಲ. ಆದರೆ ತಾನು ಶಿಕ್ಷಣ ಪಡೆಯಲೇ ಬೇಕು, ಸುಶಿಕ್ಷಿತನಾಗಿ ಗುರುತಿಸಿಕೊಳ್ಳಬೇಕು ಎಂದು ದೃಢ ನಿಶ್ಚಯ ಮಾಡಿದ ಅವರು ಅದಕ್ಕಾಗಿ ಶ್ರಮ ವಹಿಸುತ್ತಾರೆ. ಮನೋಭಿಲಾಶೆಯಂತೆ ಪದವಿ ಶಿಕ್ಷಣವನ್ನು ಪಡೆದು ಸಿದ್ದಿ ಸಮುದಾಯದಲ್ಲೇ ಪದವೀಧರನಾದ ಮೊದಲ ವ್ಯಕ್ತಿಯಾಗಿ ಗುರುತಿಸಿಕೊಂಡವರು ಶಾಂತಾರಾಂ ಸಿದ್ದಿ ಅವರು.
ಪದವಿಯ ಬಳಿಕ ಅನೇಕ ಉದ್ಯೋಗಾವಕಾಶಗಳು ಅವರನ್ನು ಹುಡುಕಿಕೊಂಡು ಬಂದರೂ, ಅವೆಲ್ಲವನ್ನೂ ಬಿಟ್ಟು ಅವರು ತಮ್ಮ ಮಾರ್ಗದರ್ಶಕರಾದ ಪ್ರಕಾಶ್ ಕಾಮತ್ ಅವರ ಮಾರ್ಗದರ್ಶನದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡೇ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ, ಆ ಸಮುದಾಯದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವತ್ತ ಚಿತ್ತ ಹೊರಳಿಸುತ್ತಾರೆ. ಪ್ರಕಾಶ್ ಜಿ ಅವರ ಮಾತುಗಳು ಶಾಂತರಾಂ ಸಿದ್ದಿ ಅವರನ್ನು ಸಾಮಾಜಮುಖಿ ಕೆಲಸಗಳಿಗೆ ಪ್ರೇರೇಪಿಸಿತು.
ಶಾಂತಾರಾಂ ಅವರು 1989 ರಿಂದ ತೊಡಗಿದಂತೆ ವನವಾಸಿ ಕಲ್ಯಾಣ ಆಶ್ರಮದ ಜೊತೆಗೆ ಒಡನಾಟ ಹೊಂದಿದ್ದಾರೆ. ಜಂಜತಿ ಜನರ ಕಲ್ಯಾಣಕ್ಕಾಗಿ, ಅವರನ್ನೂ ಸಮಾಜದ ಮುಖ್ಯ ಭೂಮಿಕೆಗೆ ತರುವ ನಿಟ್ಟಿನಲ್ಲಿಯೂ ಶಾಂತಾರಾಂ ಸಿದ್ದಿ ಅವರ ಕೆಲಸ ಅಭಿನಂದನೀಯ. ಸಿದ್ದಿಗಳು, ಗೌಲಿ, ಲಂಬಾಣಿ ಸೇರಿದಂತೆ ಇನ್ನಿತರ ಬುಡಕಟ್ಟು ಜನಾಂಗಗಳ ಉನ್ನತಿಯನ್ನು ಗಮನದಲ್ಲಿಟ್ಟುಕೊಂಡು ಅನೇಕ ಸಮಾಜಸ್ನೇಹಿ ಕೆಲಸಗಳನ್ನು ಅವರು ಮಾಡಿದ್ದಾರೆ.
ಅಪ್ಪಿಕೋ ಚಳುವಳಿ, ಬೆಡ್ಡಿ ರಿವರ್ ವ್ಯಾಲಿ ಕನ್ಸರ್ವೇಶನ್ ಚಳುವಳಿ, ವೃಕ್ಷ ಲಕ್ಷ ಆಂದೋಲನದಂತಹ ಅನೇಕ ಸಮಾಜಮುಖಿ ಚಳುವಳಿಗಳಲ್ಲಿಯೂ ಶಾಂತಾರಾಂ ಸಿದ್ದಿ ಅವರು ಗುರುತಿಸಿಕೊಂಡಿದ್ದಾರೆ. ಇದರೊಂದಿಗೆ ಡಾ. ಎಲ್ಲಪ್ಪ ರೆಡ್ಡಿ ಅವರ ಮಾರ್ಗದರ್ಶನದಲ್ಲಿ USES AND APPLICATIONS OF MEDICINAL PLANTs ಎಂಬ ವಿಷಯದ ಸಂಶೋಧನೆಯಲ್ಲಿಯೂ ಸಹಕರಿಸಿದ್ದಾರೆ. ಇವರನ್ನು ಕರ್ನಾಟಕ ಸರ್ಕಾರ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ಸದಸ್ಯರಾಗಿಯೂ ನೇಮಕ ಮಾಡಿತ್ತು. ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಶಾಂತಾರಾಂ ಸಿದ್ದಿ ಕಾರ್ಯ ನಿರ್ವಹಿಸಿದ್ದಾರೆ. ವನವಾಸಿ ಕಲ್ಯಾಣ ಆಶ್ರಮದ ಕಾರ್ಯಕರ್ತರಾಗಿ, ಹಾಸ್ಟೆಲ್ ವಾರ್ಡನ್ ಆಗಿ, ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಸಿದ್ದಿ ಅವರಿಗಿದೆ. ಪ್ರಸ್ತುತ ಸಂಸ್ಥೆಯ ಸೆಕ್ರೆಟರಿಯಾಗಿ, ಪ್ರಾಂತ ಹಿತರಕ್ಷಣಾ ಪ್ರಮುಖರಾಗಿ ಸಮಾಜಮುಖಿ ಕಾರ್ಯಗಳಲ್ಲಿ ಶಾಂತಾರಾಂ ಸಿದ್ದಿ ಅವರು ತೊಡಗಿಸಿಕೊಂಡಿದ್ದಾರೆ. ಇವರ ಈ ಸೇವೆಯನ್ನು ಗಮನಿಸಿರುವ ಬಿಜೆಪಿ ಪಕ್ಷ ಅವರನ್ನು ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡುವ ಮೂಲಕ ಅವರ ನಿಸ್ವಾರ್ಥ ಸೇವೆಗೆ, ಸಮಾಜಮುಖಿ ಕೆಲಸಗಳಿಗೆ ಸರಿಯಾದ ಗೌರವವನ್ನು ಒದಗಿಸಿಕೊಟ್ಟಿದೆ.
ಬಿಜೆಪಿಯಲ್ಲಿ ಕುಟುಂಬ ರಾಜಕಾರಣ, ಆರ್ಥಿಕ ಶ್ರೀಮಂತರೇ ನಾಯಕರಾಗಬೇಕು ಎಂಬ ಯಾವುದೇ ನೀತಿಗಳಿಲ್ಲ. ಅಥವಾ ಅಂತಹ ಭ್ರಷ್ಟ ರಾಜಕಾರಣಕ್ಕೆ ಪಕ್ಷ ಎಂದಿಗೂ ಸೊಪ್ಪು ಹಾಕುವುದಿಲ್ಲ. ಇಲ್ಲಿ ಸಾಮಾನ್ಯ ವ್ಯಕ್ತಿಗೂ ಸ್ಥಾನವಿದೆ. ಆತ ಮಾಡಿದ ಸಾಧನೆ, ಸಮಾಜಮುಖಿ ಕಾರ್ಯಗಳಿಗೆ ಮಾತ್ರ ಬಿಜೆಪಿ ಯಲ್ಲಿ ಮನ್ನಣೆ. ಪಕ್ಷದಲ್ಲಿ ಮೇಲು ಕೀಳಿನ ಭಾವವಿಲ್ಲ, ಬಡವ ಬಲ್ಲಿದನೆಂಬ ಬೇಧವಿಲ್ಲ. ಯಾರಿಗೆ ಸಾಮರ್ಥ್ಯವಿದೆಯೋ ಅವನು ಯಾರೇ ಆಗಿದ್ದರೂ ಸರಿಯಾದ ಸ್ಥಾನ ನೀಡುವ ಕೆಲಸವನ್ನು ಪಕ್ಷ ಮಾಡುತ್ತದೆ. ಏಕೆಂದರೆ ಬಿಜೆಪಿ ವ್ಯಕ್ತಿ ಕೇಂದ್ರಿತ ಪಕ್ಷವಲ್ಲ. ಬದಲಾಗಿ ಪಕ್ಷನಿಷ್ಟೆಯೇ ಪರಮ ಧ್ಯೇಯ, ದೇಶ ಸೇವೆಯೇ ಪರಮ ಗುರಿ ಎಂದುಕೊಂಡಿರುವ ಪಕ್ಷ. ಇದಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದ್ದು ಶಾಂತಾರಾಂ ಸಿದ್ದಿ ಅವರನ್ನು ಮೇಲ್ಮನೆಗೆ ನಾಮನಿರ್ದೇಶನ ಮಾಡಿದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.