ವೀರಪ್ಪನ್ ವಿರೋಧಿ ಕಾರ್ಯಾಚರಣೆಗಾಗಿ ನನಗೆ ಸಿಕ್ಕ ಬಹುಮಾನದ ಮೊತ್ತವನ್ನು ಸಮಾಜದ ಒಳಿತಿಗಾಗಿ ಬಳಸಿದ್ದರು ಶಂಕರ್ ಬಿದರಿ. ಈ ಕುರಿತು ಇದೀಗ ಅವರು ತಮ್ಮ ಫೇಸ್ಬುಕ್ನಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ.
ಶಂಕರ್ ಬಿದರಿ ಅವರು ಫೇಸ್ಬುಕ್ನಲ್ಲಿ ಬರೆದ ವಿಷಯದ ಅನುವಾದ ಹೀಗಿದೆ…
1993 ರಿಂದ 1996 ರವರೆಗೆ ನಾವು ನಡೆಸಿದ ವೀರಪ್ಪನ್ ವಿರೋಧಿ ಕಾರ್ಯಾಚರಣೆಯಲ್ಲಿ ನಮ್ಮ ಕಾರ್ಯಕ್ಷಮತೆಯನ್ನು ಗಮನಿಸಿ 8 ಕೋಟಿ ರೂಪಾಯಿಗಳು ನಮ್ಮ ತಂಡಕ್ಕೆ ಬಹುಮಾನವಾಗಿ ಬಂದಿತ್ತು. ಆಗಿನ ಮುಖ್ಯಮಂತ್ರಿಗಳಾದ ಎಚ್. ಡಿ. ದೇವೇಗೌಡ ಅವರು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರೊಂದಿಗೆ ಸಮಾಲೋಚಿಸಿ, ಈ ಮೊತ್ತವನ್ನು 1995 ರಲ್ಲಿ ನೀಡಲು ನಿರ್ಧರಿಸಿದರು. ಆದರೆ ಕಾರ್ಯಾಚರಣೆ ಪೂರ್ಣಗೊಳ್ಳದೆ ಈ ಬಹುಮಾನದ ಮೊತ್ತವನ್ನು ಸ್ವೀಕರಿಸುವುದು ಸಮಂಜಸವಲ್ಲ ಎಂದು ನಾನು ಭಾವಿಸಿದೆ. ಇದರನ್ವಯ, ಕಾರ್ಯಾಚರಣೆ ಮುಗಿದ ಬಳಿಕವೇ ಬಹುಮಾನ ಹಂಚುವಂತೆ ಸರಕಾರಕ್ಕೆ ಮನವಿ ಮಾಡಿದೆ. 1996ರ ಜುಲೈ ತಿಂಗಳಲ್ಲಿ ಟಾಸ್ಕ್ ಫೋರ್ಸ್ ಕಮಾಂಡರ್ ಹುದ್ದೆಯಿಂದ ವರ್ಗಾವಣೆಯಾದೆ. ಆದರೆ ಕಾರ್ಯಾಚರಣೆ ಪೂರ್ಣಗೊಳ್ಳಲು ಧೀರ್ಘ ಸಮಯವೇ ಬೇಕಾಯಿತು ಮತ್ತು 2004 ರ ಅಕ್ಟೋಬರ್ 18 ರಂದು ಪೂರ್ಣಗೊಂಡಿತು. ಬಳಿಕ ನಾನು ಬಹುಮಾನ ಪ್ರಸ್ತಾವನೆಯನ್ನು ಸಲ್ಲಿಸಿದೆ ಮತ್ತು ಸರಕಾರವು 8 ಕೋಟಿ ಬಹುಮಾನ ಮೊತ್ತವನ್ನು ಬಿಡುಗಡೆ ಮಾಡಿತು.
ಬಿಡುಗಡೆಯಾದ ಬಹುಮಾನ ಹಣದಲ್ಲಿ ನಾನು 6.40 ಕೋಟಿ ರೂಪಾಯಿಗಳನ್ನು ನನ್ನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಮಾಹಿತಿದಾರರು, ನನ್ನೊಂದಿಗೆ ಕೆಲಸ ಮಾಡಿದ ಅರಣ್ಯ ಸಿಬ್ಬಂದಿಗಳು, ನಾಗರಿಕರು ಸೇರಿದಂತೆ ವೀರಪ್ಪನ್ ಮತ್ತು ಆತನ ಗ್ಯಾಂಗ್ನಿಂದಾಗಿ ಅಸುನೀಗಿದ ಮತ್ತು ಗಾಯಗೊಂಡ ಸಂತ್ರಸ್ತರ ಕುಟುಂಬಗಳಿಗೆ ವಿತರಣೆ ಮಾಡಿದೆ.
ನಾನು 1.60 ಕೋಟಿ ರೂಪಾಯಿಗಳನ್ನು ಪಡೆದುಕೊಂಡೆ. ಈ ಮೊತ್ತವನ್ನು ನಾನು ಈ ಕೆಳಗಿನ ಕಾರಣಗಳಿಗಾಗಿ ಬಳಕೆ ಮಾಡಿಕೊಂಡಿದ್ದೇನೆ.
1. ಬೆಂಗಳೂರಿನ ಇಂದಿರಾ ನಗರದಲ್ಲಿ ಪುರಂದರ ಭವನ ಸ್ಥಾಪನೆಗೆ 5 ಲಕ್ಷ ರೂಪಾಯಿ ದಾನ.
2. ಮೈಸೂರಿನ ಬಸಪ್ಪ ಮೆಮೋರಿಯಲ್ ಹಾಸ್ಪಿಟಲ್ಗೆ 10 ಲಕ್ಷ ರೂಪಾಯಿಗಳ ದಾನ. ನನ್ನ ಅವಧಿಯಲ್ಲಿ ಗಾಯಗೊಂಡ ಸಿಬ್ಬಂದಿಗಳಿಗೆ ಮತ್ತು ನಾಗರಿಕರಿಗೆ ಅಲ್ಲಿ ಉಚಿತ ಚಿಕಿತ್ಸೆ ನೀಡಲಾಗಿತ್ತು. ಹೀಗಾಗಿ ಕೃತಜ್ಞತೆಯ ಸಂಕೇತವಾಗಿ ಹಣವನ್ನು ನೀಡಿದೆ.
3. ನನ್ನ ಕಾರ್ಯಾಚರಣೆಗಳಿಗೆ ಪ್ರೇರಣೆಯಾದ ಐಎಎಸ್ ದಿವಂಗತ ಎನ್.ಎ ಮುತ್ತಣ್ಣ ಅವರ ಗೌರವಾರ್ಥ ಧಾರವಾಡದ ಕರ್ನಾಟಕ ಗಾರ್ಮೆಂಟ್ ರೆಸಿಡೆನ್ಷಿಯಲ್ ಸ್ಕೂಲ್ಗೆ 50 ಲಕ್ಷ ರೂಪಾಯಿಗಳನ್ನು ನೀಡಿದೆ. ನನ್ನ ವಿನಂತಿಯಂತೆ ಶಾಲೆಗೆ ಅವರ ಹೆಸರನ್ನು ಇಡಲಾಯಿತು.
4. ನಾಲ್ಕು ವರ್ಷಗಳ ಅವಧಿಯಲ್ಲಿ ನನ್ನ ಪತ್ನಿ ಸಾಕಷ್ಟು ಪರಿತಪಿಸಿದ್ದಾಳೆ. ಹೀಗಾಗಿ ಆಕೆಗೆ 25 ಲಕ್ಷ ರೂಪಾಯಿಗಳನ್ನು ನೀಡಿದ್ದೇನೆ.
5. ರೂ. 50 ಲಕ್ಷವನ್ನು ಕಾರ್ಯಾಚರಣೆಯ ವೇಳೆ ನನಗೆ ಗ್ಯಾಂಗ್ ಬಗ್ಗೆ ಅತ್ಯಂತ ಮಹತ್ವದ ಮಾಹಿತಿಗಳನ್ನು ನೀಡಿದ ಮೂರು ಖಾಸಗಿ ವ್ಯಕ್ತಿಗಳಿಗೆ ಮತ್ತು ನ್ಯಾಯಾಲಯಗಳಲ್ಲಿ ಸಲ್ಲಿಕೆಯಾದ ನೂರಾರು ಅರ್ಜಿಗಳ ವಿಚಾರಣೆಯಲ್ಲಿ ಮತ್ತು ಜಸ್ಟಿಸ್ ಸದಾಶಿವ ಕಮಿಷನ್ ತನಿಖೆ ವೇಳೆ ನಮ್ಮನ್ನು ಸಮರ್ಥಿಸಿಕೊಂಡ ವಕೀಲರುಗಳಿಗೆ ನೀಡಿದ್ದೇನೆ.
6. ಕಾರ್ಯಾಚರಣೆಯುದ್ದಕ್ಕೂ ದೇವಾನುದೇವತೆಗಳು ನನ್ನನ್ನು ಮತ್ತು ನನ್ನ ತಂಡವನ್ನು ಸಾವಿನಿಂದ ರಕ್ಷಿಸಿದ್ದಾರೆ. ಭಕ್ತಿಯ ದ್ಯೋತಕವಾಗಿ ನಾನು ಒಂದು ಕಿಲೋ ತೂಕದ ಬಂಗಾರದ ಖಡ್ಗವನ್ನು ಮೈಸೂರಿನ ಮಾತೆ ಚಾಮುಂಡೇಶ್ವರಿಗೆ ಅರ್ಪಣೆ ಮಾಡಿದ್ದೇನೆ. ಒಂದು ಕಿಲೋ ಬಂಗಾರದ ತ್ರಿಶೂಲವನ್ನು ಶ್ರಿ ಮಲೆ ಮಹದೇಶ್ವರನಿಗೆ ಅರ್ಪಣೆ ಮಾಡಿದ್ದೇನೆ, ಒಂದು ಕಿಲೋ ತೂಕದ ಖಡ್ಗವನ್ನು ತಮಿಳುನಾಡಿನ ಪೆರಿಯಾರ್ ಜಿಲ್ಲೆಯ ಮಾತ ಬಣ್ಣರಿ ಅಮ್ಮಾನ್ ಅವರಿಗೆ ಅರ್ಪಿಸಿದ್ದೇನೆ. ದೇವರಿಗೆ ನೀಡಿದ ಈ ಅರ್ಪಣೆಗಳಿಗೆ ನನಗೆ 2006ರಲ್ಲಿ ತಗುಲಿದ ವೆಚ್ಚ 22 ಲಕ್ಷ ರೂಪಾಯಿ.
ಒಟ್ಟಾರೆಯಾಗಿ ನಾನು ಬಹುಮಾನವಾಗಿ ಪಡೆದ ಮೊತ್ತ 160 ಲಕ್ಷ ರೂಪಾಯಿ. ಆದರೆ ನನಗೆ ತಗುಲಿದ ಒಟ್ಟು ವೆಚ್ಚ ಇದಕ್ಕಿಂತ 1 ಲಕ್ಷ ರೂಪಾಯಿ ಹೆಚ್ಚು.
ಬಹುಮಾನದ ಮೊತ್ತ ತೆರಿಗೆ ಮುಕ್ತವಾಗಿರುವುದರಿಂದ ಕೆಲವರು ನನ್ನನ್ನು ಮೂರ್ಖ ಎಂದು ಕರೆದರು. ಆದರೆ ನಾನು ಸಂತೋಷವನ್ನು ಪಡೆದುಕೊಂಡೆ ಹಾಗೂ ಕೃತಾರ್ಥನಾದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.