ಆತನ ಹೆಸರು ಗೆದುನ್ ಚೋಕಿ ನ್ಯೀಮಾ. ಟಿಬೇಟ್ನ ನಾಗ್ಚು ಪ್ರಾಂತದ ಲಾರಿ ಜಿಲ್ಲೆಯಲ್ಲಿ 1989 ನಲ್ಲಿ ಹುಟ್ಟಿದ ಬಾಲಕ ವಿಶೇಷವಾಗಿದ್ದ. ಇವನನ್ನು ಗಮನಿಸಿದ ತಾಶಿ ಲಾಮೋ ಬೌದ್ಧ ಮಠದ ಮುಖ್ಯಸ್ಥರಾದ ಚಾದ್ರೆಲ್ ರಿಂಪೋಚೆ, ಇವನ ಬಗ್ಗೆ ಟಿಬೇಟ್ನ ಪರಮೋಚ್ಚ ಧರ್ಮಗುರು ದಲಾಯಿ ಲಾಮಾ ಅವರ ಗಮನಕ್ಕೆ ತಂದರು. ಆಗ ಈ ಬಾಲಕನಿಗೆ ಆರು ವರ್ಷ. ಎಲ್ಲ ಧಾರ್ಮಿಕ ವಿಧಿ ವಿಧಾನಗಳ ಅಧ್ಯಯನದ ನಂತರ ದಲಾಯಿ ಲಾಮಾ ಅವರು ಮೇ 14, 1995 ರಂದು ಈ ಬಾಲಕನನ್ನು 10 ನೇ ಪಂಚೇನ್ ಲಾಮಾ ಅವರ ಪುನರವತಾರ ಎಂದು, 11 ನೇ ಪಂಚೇನ್ ಲಾಮಾ ಎಂದು ನೇಮಕ ಮಾಡಿ ಘೋಷಣೆ ಮಾಡಿದರು.
ಇದಾದ ಕೇವಲ 3 ದಿನಗಳಲ್ಲಿಯೇ ಅಂದರೆ ಮೇ 17, 1995 ರಂದು ಚೀನಾ ಸರಕಾರದ ಅಧಿಕಾರಿಗಳು ಈ ಬಾಲಕನ್ನು ಮತ್ತು ಆತನ ತಂದೆ ತಾಯಿಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಒಂದು ಅಜ್ಞಾತ ಸ್ಥಳಕ್ಕೆ ಕೊಂಡ್ಯೊಯಿತು. ನಂತರ ಸ್ವಲ್ಪ ದಿನಗಳಲ್ಲಿ 11 ನೇ ಪಂಚೇನ್ ಲಾಮಾ ಗುರುತಿಸುವಿಕೆ ಸಮಿತಿ ಮುಖ್ಯಸ್ಥರಾಗಿದ್ದ ಚಾದ್ರೆಲ್ ರಿಂಪೋಚೆ ಅವರನ್ನು ಕೂಡ ಚೀನಾ ಸರಕಾರ ಬಂಧಿಸಿತು. ಅಂದಿನಿಂದ ಚೀನಾ ಅವರು ಇರುವ ಸ್ಥಳದ ಬಗ್ಗೆ ತೃಪ್ತಿಕರ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಿದೆ. ಬದಲಾಗಿ, ಚೀನಾ ತನ್ನದೇ ಕಮ್ಯುನಿಸ್ಟ್ ಪಕ್ಷದ ಸದಸ್ಯರ ಮಗ ಗ್ಯಾಲ್ಸೆನ್ ನಾರ್ಬೋನನ್ನು ಚೀನಾದ ಪಂಚೆನ್ ಲಾಮಾ ಎಂದು ಧರ್ಮಬಾಹೀರವಾಗಿ ಪಟ್ಟಕ್ಕೇರಿಸಿತು.
ವಿಶ್ವದ ಕಿರಿಯ ರಾಜಕೀಯ ಖೈದಿಯಾಗಿದ್ದ 11 ನೇ ಪಂಚೇನ್ ಲಾಮಾ ಗೆಧುನ್ ಚೋಕಿ ನೈಮಾ ಕಣ್ಮರೆಯಾಗಿದ್ದು, ಟಿಬೆಟ್ನಲ್ಲಿ ಕಳೆದ ಆರು ದಶಕಗಳಲ್ಲಿ ಚಾಲ್ತಿಯಲ್ಲಿರುವ ಟಿಬೆಟಿಯನ್ನರ ಮಾನವ ಹಕ್ಕುಗಳ ಉಲ್ಲಂಘನೆಯ ಅತ್ಯುತ್ತಮ ಉದಾಹರಣೆಯಾಗಿದೆ. 1.2 ದಶಲಕ್ಷಕ್ಕೂ ಹೆಚ್ಚು ಟಿಬೆಟಿಯನ್ನರು ಕೊಲ್ಲಲ್ಪಟ್ಟರು; 6,000 ಕ್ಕೂ ಹೆಚ್ಚು ಬೌದ್ಧ ಮಠಗಳನ್ನು ನಾಶ ಮಾಡಲಾಯಿತು. ಒಂದೊಂದು ಮಠವೂ ನಲಂದಾ ಪರಂಪರೆಯ ಜ್ಞಾನದ ಭಂಡಾರದಂತಿದ್ದವು. ಮೊದ ಮೊದಲು ಚೀನಾ ಪಂಚೇನ್ ಲಾಮಾ ಅಪಹರಣದ ಆರೋಪವನ್ನು ವಿಶ್ವ ಸಂಸ್ಥೆಯಂತಹ ವೇದಿಕೆಗಳಲ್ಲಿ ನಿರಾಕರಿಸಿತಾದರೂ ಒಂದು ವರ್ಷದ ನಂತರ ಇದನ್ನು ಒಪ್ಪಿಕೊಂಡು, ಪಂಚೇನ್ ಲಾಮಾ ಅವರನ್ನು “ರಕ್ಷಣಾತ್ಮಕ ಪಾಲನೆ”ಯಲ್ಲಿ ಇರಿಸಿದ್ದೇವೆ ಎಂದು ಸಬೂಬು ಹೇಳಿತು.
ಪಂಚೇನ್ ಲಾಮಾ : ಟಿಬೇಟ್ ಬೌದ್ಧ ಪರಂಪರೆಯಲ್ಲಿ ದಲಾಯಿ ಲಾಮಾ ಪ್ರಥಮ ಸ್ಥಾನದಲ್ಲಿದ್ದರೆ ಪಂಚೇನ್ ಲಾಮಾ ದ್ವಿತೀಯ ಸ್ಥಾನ ಹೊಂದಿರುತ್ತಾರೆ. ಇಬ್ಬರು ಟಿಬೇಟಿಯನ್ನರ ಮಟ್ಟಿಗೆ ಸೂರ್ಯ-ಚಂದ್ರರಿದ್ದ ಹಾಗೆ. ಎರಡು ನಿಸ್ಸಂದೇಹವಾಗಿ ಟಿಬೇಟಿಯನ್ ಸಮುದಾಯದಲ್ಲಿ ಪೂಜ್ಯತೆ, ಪ್ರಭಾವ ಹಾಗೂ ನಿಯಂತ್ರಣ ಹೊಂದಿರುವ ಸ್ಥಾನಮಾನಗಳಾಗಿವೆ. ಎರಡೂ ಸ್ಥಾನಗಳು ಪುನರ್ಜನ್ಮದ ಮೂಲಕ ಧಾರ್ಮಿಕ ಪರಂಪರೆಯ ಅಧಿಕೃತ ಮುದ್ರೆಯೊಂದಿಗೆ ನಿರ್ಧರಿಸಲ್ಪಡುತ್ತವೆ. ಈಗಿನ ದಲಾಯಿ ಲಾಮಾ, ದಲಾಯಿ ಲಾಮಾ ಪರಂಪರೆಯ 14 ನೇ ಅವತಾರವಾಗಿದ್ದಾರೆ. ಹಾಗೆಯೇ ಅಪಹರಿಸಲ್ಪಟ್ಟ ಪಂಚೇನ ಲಾಮಾ, ಆ ಪರಂಪರೆಯ 11 ನೇ ಅವತಾರವಾಗಿದ್ದಾರೆ. ಹಾಗೆಯೇ ಇನ್ನೊಂದು ಪ್ರಮುಖ ಪರಂಪರೆ “ಕರ್ಮಾಪಾ” ಅವರದ್ದು. ಈಗಿನ 17 ನೇ ಕರ್ಮಾಪಾ ಅವರನ್ನು ಚೀನಾ ಮಾನ್ಯ ಮಾಡಿ ಅವರನ್ನು ತನ್ನ ನಿಯಂತ್ರಣದಲ್ಲಿರಿಸಿಕೊಳ್ಳಲು ಪ್ರಯತ್ನಿಸಿತು. ಆದರೆ 1999 ರಲ್ಲಿ 17 ನೇ ಕರ್ಮಪಾ ಚೀನಾದ ಕಣ್ಣುತಪ್ಪಿಸಿ, ಭಾರತಕ್ಕೆ ಬಂದು ಸೇರಿಕೊಂಡರು.
ಮುಖ್ಯವಾಗಿ ಹೇಗೆ ಪಂಚೇನ್ ಲಾಮಾ ಗುರುತಿಸುವಿಕೆಯಲ್ಲಿ ದಲಾಯಿ ಲಾಮಾ ಅವರ ಪಾತ್ರ ಮುಖ್ಯವೋ, ಹಾಗೆಯೇ ಮುಂದಿನ ದಲಾಯಿ ಲಾಮಾ ಯಾರಾಗುತ್ತಾರೆ ಎಂಬ ವಿಷಯದ ನಿರ್ಧಾರದಲ್ಲಿ ಪಂಚೇನ್ ಲಾಮಾ ಅವರ ಪಾತ್ರವೂ ಮುಖ್ಯ. ಈ ಒಂದು ಕಾರಣದಿಂದಾಗಿ ಮುಂದಿನ ದಲಾಯಿ ಲಾಮಾ ನಿರ್ಧಾರದ ಸಂದರ್ಭದಲ್ಲಿ ಪಂಚೇನ್ ಲಾಮಾ ಆಗಿರುವವರು ತನ್ನ ಕೈಗೊಂಬೆಯಾಗಿರಬೇಕು ಹಾಗೂ ಆ ನಿರ್ಣಯದಲ್ಲಿ ಚೀನಾದ ತಾಳಕ್ಕೆ ತಕ್ಕಂತೆ ಕುಣಿಯುವರಾಗಿರಬೇಕು ಎಂಬುದು ಚೀನಾದ ಷಡ್ಯಂತ್ರ. ಆದರೆ ಇದು ಅದಕ್ಕೆ ಸಾಧ್ಯವಾಗಿಲ್ಲ. ಅದರ ಕುತಂತ್ರ ಯೋಜನೆ ಜಗತ್ತಿನೆದರು ಬಟಾಬಯಲಾಗಿದೆ.
ಅದಕ್ಕಾಗಿಯೇ ಚೀನಾ ಮುಂದಿನ ದಲಾಯಿ ಲಾಮಾ ನಿರ್ಧಾರದ ಸಂದರ್ಭದಲ್ಲಿ ತನ್ನ ಅಭಿಪ್ರಾಯವನ್ನು ಮನ್ನಿಸಬೇಕೆಂದು ಆಗಾಗ ಧ್ವನಿ ಏರಿಸುತ್ತಿರುತ್ತದೆ. ಏಕೆಂದರೆ ಈ ಒಂದು ನಿರ್ಧಾರದಲ್ಲಿ ಭಾರತದಲ್ಲಿನ ಹಿಮಾಲಯ ಪ್ರದೇಶದ ಬೌದ್ಧ ಮಠಗಳ ಪಾತ್ರವೂ ಇದೆ. ಹೀಗಾಗಿ ಎಲ್ಲಿ ಭಾರತ ಈ ವಿಷಯದಲ್ಲಿ ಮೇಲಗೈ ಸಾಧಿಸಿಬಿಡುತ್ತದೆ ಎಂಬುದು ಚೀನಾದ ಆಂತರಿಕ ಅಂಜಿಕೆಯಾಗಿದೆ. 6ನೇ ದಲಾಯಿ ಲಾಮಾ ಅವರು ಅರುಣಾಚಲ ಪ್ರದೇಶದ ತವಾಂಗ್ ಬೌದ್ಧ ಮಠಕ್ಕೆ ಸೇರಿದವರಾಗಿದ್ದರು. ಈ ಕಾರಣದಿಂದಾಗಿ ಅರುಣಾಚಲ ಪ್ರದೇಶದ ಬಗ್ಗೆ ಆಗಾಗ ಚೀನಾ ಕಿತಾಪತಿ ಮಾಡುತ್ತಲೇ ಇರುತ್ತದೆ.
ಮೇ 17 20202, ಬರೊಬ್ಬರಿ ಕಾಲು ಶತಮಾನ ಕಳೆದಿದೆ. ಇನ್ನು ಕೂಡ 11 ನೇ ಪಂಚೇನ್ ಲಾಮಾ ಬಗ್ಗೆ ಜಗತ್ತಿಗೆ ಏನೂ ಮಾಹಿತಿ ಇಲ್ಲ. ವಿಶ್ವ ಸಂಸ್ಥೆ, ಮಾನವ ಹಕ್ಕು ಸಂಸ್ಥೆ ಇತ್ಯಾದಿಗಳಿಗೆ ತನ್ನ ಪ್ರಭಾವದ ಮೂಲಕ ಸುಳ್ಳಿನ ಸರಮಾಲೆ ಕಟ್ಟುತ್ತ ಚೀನಾ ಕಾಲ ಕಳೆಯುತ್ತಿದೆ. ಸಮಾನತೆ, ಮಾನವ ಹಕ್ಕು, ಸಮಾಜವಾದ ಮಣ್ಣು ಮಸಿ ಅಂತ ಜಗತ್ತಿನ ರಕ್ಷಕರು ನಮ್ಮ ಮಾವೂ, ನಮ್ಮ ಸ್ಟ್ಯಾಲಿನ್, ನಮ್ಮ ಲೆನಿನ್ ಎಂದು ತೌಡು ಕುಟ್ಟುತ್ತ ತಮ್ಮದೇ “ಗಾಂಜಾ” ಲೋಕದಲ್ಲಿರುವ ಜಗತ್ತಿನೆಲ್ಲೆಡೆಯ ಕಮ್ಯುನಿಷ್ಟರು ಎಂದಾದರೂ ಈ ಬಾಲಕನ ಮಾನವ ಹಕ್ಕಿನ ವಿಷಯದಲ್ಲಿ ಧ್ವನಿ ಎತ್ತಿದಾರಾ? ವಿಶ್ವಾಸಾರ್ಹತೆ ದೃಷ್ಟಿಯಿಂದ ಚೀನಾ ಇಂದು ಏನೂ ಆಗದ ಮಾನಗೇಡಿ ರೀತಿಯಲ್ಲಿ ವಿಶ್ವದೆದುರೇ ಬೆತ್ತಲಾಗಿ ನಿಂತಿದೆ.
ವಿಶ್ವಾಸದ್ರೋಹ, ಕುತಂತ್ರ, ಬರ್ಬರತೆ, ರಾಕ್ಷಸಿಪ್ರವೃತ್ತಿ, ಅಧಿಕಾರ ದಾಹ ಇವೆಲ್ಲಾ ಚೀನಾದ ಮೂಲ ಗುಣಸ್ವಭಾವವಲ್ಲ. ಆದರೆ ನಾವು ನೋಡುತ್ತಿರುವುದು ಅಲ್ಲಿ ಕಳೆದ 7 ದಶಕಗಳಿಂದ ಅಧಿಕಾರ ಹಾಗೂ ಹುಚ್ಚು ಸಿದ್ಧಾಂತದ ಪಿತ್ತ ನೆತ್ತಿಗೇರಿ ಹುಚ್ಚನಂತೆ ನರ್ತಿಸುತ್ತಿರುವ ಕಮ್ಯೂನಿಸಂನ ನಿಜಾವತಾರ.
ಅಮೃತ ಜೋಶಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.