ಪ್ರತಿ ವರ್ಷ ಡಿಸೆಂಬರ್ 7 ರಂದು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ದಿನ ಭಾರತೀಯ ನಾಗರಿಕರು ರಾಷ್ಟ್ರಕ್ಕಾಗಿ ಅಪ್ರತಿಮ ಸೇವೆ ಮತ್ತು ತ್ಯಾಗವನ್ನು ಮಾಡುವ ವಾಯುಸೇನೆ ಯೋಧರಿಗೆ, ಭೂಸೇನೆ ಯೋಧರಿಗೆ ಮತ್ತು ನೌಕಾಸೇನೆಯ ಯೋಧರಿಗೆ ಕೊಡುಗೆಗಳನ್ನು ನೀಡಿ ಆ ಮೂಲಕ ಕೃತಾರ್ಥರಾಗುವ ಅವಕಾಶವನ್ನು ಪಡೆಯುತ್ತಾರೆ. ಹುತಾತ್ಮರ ಕುಟುಂಬಗಳಿಗೆ ಮತ್ತು ಮಾಜಿ ಸೈನಿಕರುಗಳಿಗೆ ತಮ್ಮಿಂದಾದಷ್ಟು ಕೊಡುಗೆಗಳನ್ನು ನೀಡುವ ಅವಕಾಶಗಳನ್ನು ಈ ದಿನ ಎಲ್ಲಾ ನಾಗರಿಕರಿಗೂ ಮಾಡಿಕೊಡುತ್ತದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಶಸ್ತ್ರ ಪಡೆಗಳ ಧ್ವಜ ದಿನದಂದು ಮಾಜಿ ಯೋಧರು ಆರ್ಮ್ಡ್ ಫೋರ್ಸ್ಸ್ ಫ್ಲ್ಯಾಗ್ ಡೇ ಫಂಡ್ಗೆ ಕೊಡುಗೆಗಳನ್ನು ನೀಡುವಂತೆ ಜನರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ಆರ್ಮ್ಡ್ ಫೋರ್ಸಸ್ ವೆಲ್ಫೇರ್ ಫಂಡ್ ಕಾರ್ಪೊರೇಟ್ ಸೋಶಲ್ ರೆಸ್ಪಾನ್ಸಿಬಿಲಿಟಿ ಕಾನ್ಕ್ಲೇವ್ 2019ನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಸೈನಿಕರ, ದಿವ್ಯಾಂಗ ಸೈನಿಕರ, ಹುತಾತ್ಮ ಸೈನಿಕರ ಕುಟುಂಬಗಳ ಕಲ್ಯಾಣಕ್ಕಾಗಿ ನಮ್ಮ ಕರ್ತವ್ಯಗಳನ್ನು ನಿಭಾಯಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಭಾರತ್ ಕೆ ವೀರ್ ಅಭಿಯಾನದ ಬಗೆಗಿನ ತನ್ನ ಅನುಭವವನ್ನು ಹಂಚಿಕೊಂಡ ಅವರು, ರಾಷ್ಟ್ರೀಯ ಸ್ವಾಭಿಮಾನಕ್ಕೆ ಸಂಬಂಧಿಸಿದ ವಿಷಯ ಬಂದಾಗ ದೇಶದ ಜನರು ಅತ್ಯಂತ ಉದಾರಿಗಳಾಗಿ ಕೊಡುಗೆಗಳನ್ನು ನೀಡುತ್ತಾರೆ. ಸಶಸ್ತ್ರ ಪಡೆಗಳ ಧ್ವಜ ದಿನ ದೇಣಿಗೆಗೂ ಈ ಮಾತು ಅನ್ವಯವಾಗುತ್ತದೆ. ಭಾರತ್ ಕೆ ವೀರ್ ಫಂಡ್ ಅನ್ನು ಕೇಂದ್ರ ಶಶಸ್ತ್ರ ಪೊಲೀಸ್ ಪಡೆಗಳ ಹುತಾತ್ಮ ಸಿಬ್ಬಂದಿಗಳ ಕುಟುಂಬಗಳಿಗೆ ಸಲಹೆ ಸೂಚನೆಗಳನ್ನು ನೀಡುವ ಕಾರ್ಪೊರೇಟ್ ವಲಯದ ಸಹಕಾರದೊಂದಿಗೆ ಸ್ಥಾಪನೆ ಮಾಡಲಾಗಿದೆ. ನಾನು ಗೃಹ ಸಚಿವಾಲಯದಿಂದ ಹೊರಬಂದಾಗ ಭಾರತ್ ಕೆ ವೀರ್ ಫಂಡ್ನಲ್ಲಿ 300 ಕೋಟಿ ರೂಪಾಯಿಗಳ ದೇಣಿಗೆ ಸಂಗ್ರಹವಿದೆ ಎಂಬ ಬಗ್ಗೆ ನನಗೆ ತೃಪ್ತಿ ಇದೆ ಎಂದು ರಾಜನಾಥ ಸಿಂಗ್ ಹೇಳಿದ್ದಾರೆ. ಇದಕ್ಕೆ ಹೆಚ್ಚುವರಿಯಾಗಿ ಯೋಧರ ಕುಟುಂಬಗಳಿಗೆ ನೆರವು ನೀಡುವ ಸಲುವಾಗಿ ವ್ಯವಸ್ಥೆಗಳನ್ನು ತರಬೇಕಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಹುತಾತ್ಮರ ಕುಟುಂಬಗಳಿಗೆ ದೇಣಿಗೆಯನ್ನು ನೀಡುವುದು ದೇಶ ಸೇವೆಯ ನಿಟ್ಟಿನಲ್ಲಿ ನಾಗರಿಕರ ಜವಾಬ್ದಾರಿಯನ್ನು ಪ್ರತಿಬಿಂಬಿಸುತ್ತದೆ. ಇದು ಪ್ರತಿಯೊಬ್ಬನಿಗೂ ಹೆಮ್ಮೆಯ ವಿಚಾರವೂ ಕೂಡ ಆಗಿದೆ. ಹಲವು ವಲಯಗಳ ಮುಖಂಡರುಗಳು ಮಾಜಿ ಸೈನಿಕರುಗಳಿಗೆ ಮತ್ತು ಹುತಾತ್ಮ ಯೋಧರ ಕುಟುಂಬಗಳಿಗೆ ಬೇಕಾದ ನೆರವು ನೀಡುತ್ತಿದ್ದಾರೆ. ಕಷ್ಟಕರವಾದ ಸಂದರ್ಭದಲ್ಲಿ ಈ ಕುಟುಂಬಗಳೊಂದಿಗೆ ನಿಲ್ಲುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿರುತ್ತದೆ.
ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಅಪ್ರತಿಮ ತ್ಯಾಗವನ್ನು ಮಾಡಿದಂತಹ ಅಸ್ಫಾಕುಲ್ಲಾ ಖಾನ್, ಚಂದ್ರಶೇಖರ್ ಆಜಾದ್ ಮುಂತಾದ ವೀರರನ್ನು ಸ್ಮರಿಸಿದ ರಾಜನಾಥ್ ಸಿಂಗ್ ಅವರು, ಇವರ ಸೇವೆ ಸ್ಮರಣೀಯವಾದುದು ಎಂದಿದ್ದಾರೆ. ತಾನು ಕೂಡ ಸೇನೆಯನ್ನು ಸೇರಲು ಉತ್ಸುಕವಾಗಿದ್ದೆ ಆದರೆ ಕೌಟುಂಬಿಕ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ. ಸೇನೆಗೆ ಸೇರುವುದು ಕೇವಲ ವೃತ್ತಿಗಾಗಿ ಅಲ್ಲ, ದೇಶಕ್ಕಾಗಿ ಅಪ್ರತಿಮ ತ್ಯಾಗ ಮತ್ತು ಬಲಿದಾನಗಳನ್ನು ಮಾಡುವ ಉದ್ದೇಶದಿಂದ ಎಂದು ಅವರು ಹೇಳಿದ್ದಾರೆ.
ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಕಾನ್ಕ್ಲೇವ್ ಮಾಜಿ ಸೈನಿಕರ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುವ ಅತ್ಯಂತ ವಿಭಿನ್ನ ಕಾರ್ಯಕ್ರಮವಾಗಿದೆ. ಮಾಜಿ ಸೈನಿಕರು ಎದುರಿಸುವ ಸವಾಲುಗಳ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಮತ್ತು ಅವರ ಪುನರ್ವಸತಿ ಮತ್ತು ಕಲ್ಯಾಣದಲ್ಲಿ ಕಾರ್ಪೊರೇಟ್ ವಲಯ ಯಾವ ರೀತಿಯ ಪಾತ್ರಗಳನ್ನು ವಹಿಸಬಹುದು ಎಂಬ ಎಂಬುದನ್ನು ತಿಳಿಸುವ ಬಗೆಗಿನ ಕಾರ್ಯಕ್ರಮ ಇದಾಗಿದೆ.
ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರುಗಳು ಕಳೆದ ವರ್ಷ ಸಶಸ್ತ್ರ ಪಡೆಗಳ ಧ್ವಜ ದಿನ ಫಂಡ್ಗೆ ಅತೀ ಹೆಚ್ಚು ಕೊಡುಗೆಗಳನ್ನು ನೀಡಿದ 13 ಮಂದಿ ಕಾರ್ಪೊರೇಟ್ ವಲಯದ ಪ್ರತಿನಿಧಿಗಳಿಗೆ ಸನ್ಮಾನವನ್ನು ಮಾಡಿದರು. ಕೆಲವರು ಅಲ್ಲೇ ಮಾಜಿ ಸೈನಿಕರ ಕಲ್ಯಾಣಕ್ಕಾಗಿ ಕೊಡುಗೆಗಳನ್ನು ನೀಡಿದ್ದಾರೆ.
ಒಟ್ಟಿನಲ್ಲಿ ಈ ಕಾನ್ಕ್ಲೇವ್ ಯೋಧರ ಕಲ್ಯಾಣಕ್ಕಾಗಿ ಕೊಡುಗೆಗಳನ್ನು ನೀಡುವ ಬಗ್ಗೆ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿನ ಅತ್ಯುತ್ತಮ ಕಾರ್ಯಕ್ರಮವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.