ನಮ್ಮ ನಾಡು ಪ್ರಾಚೀನ ಕಾಲದಿಂದಲೂ ಋಷಿ-ಮುನಿಗಳ, ಸಾಧು-ಸಂತರ ನೆಲೆವೀಡು. ಕನಕದಾಸರು ಸಂತರು, ಹರಿದಾಸರು ಮತ್ತು ಕವಿಗಳು. ಈ ನಾಡಿನ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಉನ್ನತಿಗೆ ಇವರ ಕೊಡುಗೆ ಅನುಪಮವಾದದ್ದು. ಇವರು ತಮ್ಮ ಕೀರ್ತನೆಗಳಲ್ಲಿ ಅನನ್ಯ ಭಕ್ತಿಯಿಂದ ಭಗವಂತನನ್ನು ಕೊಂಡಾಡಿ ದಾಸಶ್ರೇಷ್ಠರೆಂದು ಕರೆಯಿಸಿಕೊಂಡರು. ಅಲ್ಲದೆ ಅವರು ಹರಿಭಕ್ತಿಸಾರ, ಮೋಹನ ತರಂಗಿಣಿ, ನಳ ಚರಿತ್ರೆ, ರಾಮಧಾನ್ಯಚರಿತೆಗಳಂತಹ ಉತ್ತಮ ಕೃತಿಗಳನ್ನು ರಚಿಸಿ ಕವಿಶ್ರೇಷ್ಠರೆಂದು ಪ್ರಸಿದ್ಧರಾದರು. ಹುಟ್ಟಿನಿಂದ ಕೆಳವರ್ಗಕ್ಕೆ ಸೇರಿದ ಕನಕದಾಸರು ತಮ್ಮ ವಿಶಿಷ್ಟಗುಣಗಳಿಂದ, ಭಕ್ತಿ ವೈರಾಗ್ಯ ಕಾವ್ಯರಚನೆಯಿಂದ ವ್ಯಾಸರಾಯರ ಪ್ರಿಯಶಿಷ್ಯರಲ್ಲಿ ಒಬ್ಬರಾಗುವ ಯೋಗ್ಯತೆಯನ್ನು ಗಳಿಸಿಕೊಂಡು ದಾಸವರೇಣ್ಯರೆಂಬ ಗೌರವಕ್ಕೆ ಪತ್ರರಾದರು.
ಕನಕದಾಸರು ಜನಿಸಿದ್ದು ಬಾಡ ಎಂಬ ಗ್ರಾಮದಲ್ಲಿ. ನೆಲೆಸಿದ್ದು ಕಾಗಿನೆಲೆಯಲ್ಲಿ. ಆದಿಕೇಶವನ ಅಂಕಿತ. ಕುರುಬ ಜನಾಂಗಕ್ಕೆ ಸೇರಿದ ಇವರ ತಂದೆ ತಾಯಿ ಬೀರಪ್ಪ ಹಾಗೂ ಬಚ್ಚಮ್ಮ ವಿಭೂತಿ ಧರಿಸಿ ಶೈವಧರ್ಮವನ್ನು ಅನುಸರಿದರೂ ತಿರುಪತಿ ತಿಮ್ಮಪ್ಪನಲ್ಲಿ ಅಪಾರ ಭಕ್ತಿ. ತಿಮ್ಮಪ್ಪ ನಾಯಕನೆಂದೇ ಮಗನಿಗೆ ಹೆಸರಿಟ್ಟಿದ್ದರು.
ತಿಮ್ಮಪ್ಪ ನಾಯಕ ಕನಕನಾಯಕನಾದದ್ದು ಪವಾಡದ ರೀತಿಯಲ್ಲಿ. ತಮ್ಮ ಜೀವಿತದಲ್ಲಿಯೇ ವಿಜಯನಗರ ಸಾಮ್ರಾಜ್ಯದ ಏಳು-ಬೀಳುಗಳನ್ನು ಕಂಡವರು ಇವರು. ಕನಕದಾಸರು ಸ್ವತಃ ಪಾಳೆಯಗಾರನಾಗಿ ಧನಸಂಪತ್ತನ್ನು, ವೈಭವವನ್ನು, ಅಧಿಕಾರವನ್ನು ಅನುಭವಿಸಿದರು. ಆದರೆ ನಂತರದ ತಮ್ಮ ಜೀವನದಲ್ಲಿ ಇವುಗಳ ನಿಷ್ಪ್ರಯೋಜಕತೆಯನ್ನೂ, ಅನಿತ್ಯತೆಯನ್ನೂ ಮನಗಂಡು ಹರಿಗೆ ಶರಣಾಗಿ ಹರಿದಾಸರಾದರು.
ಕನಕದಾಸರ ಕೀರ್ತನೆಗಳು ಭಾವಪೂರ್ಣವಾಗಿವೆ. ಈ ಕೀರ್ತನೆಗಳ ಮೂಲಕ ಭಗವಂತನಲ್ಲಿ ಭಕ್ತಿಯನ್ನು ಸಾರುವುದರ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಕೆಲವು ಅಸಾಂಪ್ರದಾಯಿಕ ಆಚರಣೆಗಳನ್ನು ಒರೆಗಲ್ಲಿಗೆ ಹಚ್ಚಿ ಪ್ರಶ್ನಿಸಿದ್ದಾರೆ. ಸ್ವಸ್ಥಸಮಾಜದ ನಿರ್ಮಾಣಕ್ಕಾಗಿ ಪ್ರತಿಯೊಬ್ಬರಿಗೂ ಮಾನಸಿಕ ನೆಮ್ಮದಿಯ ಅವಶ್ಯಕತೆ ಇದೆ. ಅದು ಭಗವದ್ಭಕ್ತಿಯಿಂದ ಲಭಿಸುವುದು. ನಾಸ್ತಿಕತೆಯು ಮನುಷ್ಯನಲ್ಲಿ ತಲ್ಲಣವನ್ನು, ನಿರಾಸೆಯನ್ನು, ಭ್ರಮೆಯನ್ನು, ಹತಾಶೆಯನ್ನು ಉಂಟು ಮಾಡುತ್ತದೆ. ದೇವರಲ್ಲಿ ಅನನ್ಯ ಭಕ್ತಿಯನ್ನು ಸಾರುವ- ’ತಲ್ಲಣಿಸದಿರು ಕಂಡ್ಯ ತಾಳು ಮನವೆ, ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ’, ಮಂತಾದ ಅನೇಕ ಕೀರ್ತನೆಗಳನ್ನು ಕಾಣಬಹುದು. ಆದರೆ ಡಾಂಬಿಕ ಭಕ್ತಿಯನ್ನು ಅವರು ಎಂದೂ ಒಪ್ಪುತ್ತಿರಲಿಲ್ಲ. ‘ಜಪವಮಾಡಿದರೇನು ತಪವಮಾಡಿದರೇನು, ವಿಪರೀತ ಕಪಟಗುಣಕಲುಷವಿದ್ದವರು’ ಎಂದು ದೂಷಿಸಿದ್ದಾರೆ.
ಕನಕದಾಸರು ಸಮಾಜದ ಒಳಿತಿಗೆ ಧರ್ಮಾಚರಣೆಯ ಅಗತ್ಯತೆಯನ್ನು ಒತ್ತಿಹೇಳಿದ್ದಾರೆ. ಸಮಾಜದಲ್ಲಿ ಸತ್ಯ, ಧರ್ಮಗಳು ಮಾಯವಾಗುತ್ತಿರುವುದನ್ನು ನೋಡಿ ಮರುಗಿದ್ದಾರೆ:
ಧರ್ಮವಿಲ್ಲದ ಅರಸು ಮುರಿದಕಾಲಿನ ಹೊರಸು
ನಿರ್ಮಲವಿಲ್ಲದ ಮನಸು ಅದು ಕಜ್ಜಿ ತಿನಿಸು.
ಸತ್ಯಧರ್ಮಗಳೆಲ್ಲ ಎತ್ತ ಪೋದವೊ ಕಾಣೆ
ಉತ್ತಮರ ಜೀವನಕೆ ದಾರಿಯಿಲ್ಲ
ನಿತ್ಯದಲಿ ಕಳವು ವ್ಯಭಿಚಾರವುಳ್ಳವರೆಲ್ಲ
ಅರ್ಥಸಂಪದರಾಗಿ ಅನುಭವಿಸುತಿಹರು.
ಹುಟ್ಟಿದ ಕುಲ ಮುಖ್ಯವಲ್ಲ ಗುಣಮುಖ್ಯ. ಉತ್ತಮ ಗುಣಗಳಿದ್ದರೆ ದೇವರು ಅಂಥವರ ಉದ್ಧಾರ ಮಾಡುತ್ತಾನೆ ಎಂಬುದನ್ನು ಸ್ವ ಅನುಭವದ ಮೂಲಕ ಜಗತ್ತಿಗೆ ತೋರಿಸಿಕೊಟ್ಟ ಮಹಾಮಹಿಮರು ಕನಕದಾಸರು. ಅದನ್ನು ಮಾರ್ಮಿಕವಾಗಿ ನಮ್ಮನ್ನು ಎಚ್ಚರಿಸಿದ ಪರಿಯಿದು.
ಕುಲಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯನೇನಾದರೂ ಬಲ್ಲಿರಾ?
ಕುಲಕುಲ ಕುಲವೆನ್ನುತಿಹರೋ
ಕುಲವಾವುದು ಸತ್ಯ ಸುಜನರಿಗೆ
ಮೋಸದ ಜೀವನವನ್ನು, ಅನ್ಯಾಯದ ಜೀವನವನ್ನು ಕನಕದಾಸರು ಒಪ್ಪಿದವರಲ್ಲ. ಅಂತಹ ಜೀವನ ಅವನನ್ನೇ ನಾಶ ಮಾಡುತ್ತದೆ ಎಂದು ವಿಡಂಬನೆ ಮಾಡಿದ್ದಾರೆ:
ಮೋಸದಿ ಜೀವರ ಘಾಸಿ ಮಾಡಿದ ಪಾಪ
ಕಾಶಿಗೆ ಹೋದರೆ ಹೋದೀತೆ
ಶ್ರೀಶನ ಭಕುತರ ದೂಷಿಸಿದಾ ಫಲ
ಕಾಸು ಕೊಟ್ಟರೆ ಬಿಟ್ಟೀತೇ
ಭಾಷೆಯ ಕೊಟ್ಟು ನಿರಾಶೆಯಮಾಡಿದ ಫಲ
ಕ್ಲೇಶಗೊಳಿಸದೆ ಬಿಟ್ಟೀತೆ
ಭೂಸುರಸ್ವವ ಹ್ರಾಸ ಮಾಡಿದ ಫಲ
ಏಸೇಸು ಜನುಮಕು ಬಿಟ್ಟೀತೆ.
ನ್ಯಾಯವ ಬಿಟ್ಟನ್ಯಾಯವ ಪೇಳಲು
ನಾಯಿಗೆ ನರಕವು ತಪ್ಪೀತೆ.
ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯದ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ಹಾಗಾಗಿ ಇಂದು ಗಳಿಸಿದ ಸಂಪತ್ತನ್ನು ಅಸಹಾಯಕರಿಗೆ ದಾನಮಾಡಿದರೆ ಮುಂದೆಯೂ ಸುಖವಾಗಿರಬಹುದೆಂದು ದಾನದ ಮಹತ್ವವನ್ನು ತಿಳಿ ಹೇಳಿದ್ದಾರೆ.
ಇಷ್ಟ ಸಂಪತ್ತನ್ನು ಬಡವರಾ ಕರೆತಂದು
ಕೊಟ್ಟು ಮಾಡಿದ ಪುಣ್ಯಫಲ ತನ್ನದೋ
ಸೃಷ್ಟಿಯೊಳು ಕಾಗಿನೆಲೆಯಾದಿಕೇಶವನಂಘ್ರಿ
ಮುಟ್ಟಿ ಮನದಲಿ ಭಜಿಸೊ ಭ್ರಷ್ಟ ಜೀವನವೆ.
ತೊಂಬತ್ತು ವರ್ಷಗಳ ಕಾಲ ಸುದೀರ್ಘ ಸಾರ್ಥಕ ಜೀವನ ನಡೆಸಿದವರು ಕನಕದಾಸರು. ಅವರು ರಚಿಸಿದ ಕೀರ್ತನೆಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನರ್ಘ್ಯ ಮಾಣಿಕ್ಯಗಳೇ ಸರಿ. ನಿತ್ಯನೂತನತೆಯಿಂದ ಕೂಡಿರುವ ಈ ಕೀರ್ತನೆಗಳು ನಮಗೆ ಮಾರ್ಗದರ್ಶಕಗಳಾಗಿವೆ.
✍ ಡಾ. ವೆಂಕಟರಮಣ ದೇವರು ಭಟ್ಟ
ಸಂಸ್ಕೃತ ಅಧ್ಯಾಪಕರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.