ಮಂಗಳೂರು : ರಾಮಕೃಷ್ಣ ಮಿಶನ್ ಮಾರ್ಗದರ್ಶನದಲ್ಲಿ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಸ್ವಚ್ಛತಾ ಅಭಿಯಾನದ 5ನೇ ಹಂತದ 42ನೇ ಭಾನುವಾರದ ಪ್ರಯುಕ್ತ ಕಪಿತಾನಿಯೋ ಹಾಗೂ ದೇರೆಬೈಲ್ ಪರಿಸರಗಳಲ್ಲಿ ಎರಡು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ದಿನಾಂಕ 22-9-19 ರಂದು ಬೆಳಿಗ್ಗೆ ಕಪಿತಾನಿಯೋ ಶಾಲೆಯ ಎದುರಿಗೆ ಬಾಲಕೃಷ್ಣ ಕೊಟ್ಟಾರಿ, ಆಡಳಿತ ಮೊಕ್ತೇಸರರು ಶ್ರೀಸೂರ್ಯನಾರಾಯಣ ದೇವಸ್ಥಾನ ಮರೋಳಿ ಇವರು ಹಾಗೂ ಡಾ. ರಾಹುಲ್ ತೋನ್ಸೆ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು.
ಮತ್ತೊಂದೆಡೆ ಬೆಳಿಗ್ಗೆ 8 ಗಂಟೆಗೆ ದೇರೆಬೈಲ್ ಚರ್ಚ್ ಹಾಲ್ ಮುಂಭಾಗದಲ್ಲಿ ಫಾದರ್ ಆಸ್ಟೀನ್ ಪ್ಯಾರಿಸ್ ಹಾಗೂ ಬೇಲ್ಜಿಯಂ ಪ್ರಜೆ ಆನ್ ಕಾರ್ಡಿನಲ್ ಜಂಟಿಯಾಗಿ ಶ್ರಮದಾನವನ್ನು ಶುಭಾರಂಭಗೊಳಿಸಿದರು.
ಈ ಸಂದರ್ಭದಲ್ಲಿ ಶ್ರೀಕಾಂತ ರಾವ್, ಎಡ್ವರ್ಡ್ ಕೊಯಿಲೋ, ಲಿಜ್ಜಿ ಫರ್ನಾಂಡಿಸ್, ವಿನಯ ಡಿಸೋಜ, ವಿನಯ ಪೂಜಾ ರಾಜ್, ನಳಿನಿ ಭಟ್, ಲೋಕೇಶ್ ಕೊಟ್ಟಾರ್, ಸುಜಿತ್ ಭಂಡಾರಿ, ಸುಭದ್ರಾ ಭಟ್ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು. ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಗಸ್ಟಿನ್ ಆಲ್ಮೇಡ್ ಅವರು ಮಹಾತ್ಮಾ ಗಾಂಧೀಜಿಯವರ ವೇಷ ಧರಿಸಿಕೊಂಡು ಶ್ರಮದಾನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಬಾಲಕೃಷ್ಣ ಕೊಟ್ಟಾರಿ ಮಹಾತ್ಮಾ ಗಾಂಧಿಜಿಯವರ ರಾಮರಾಜ್ಯ ಕಲ್ಪನೆ ಸಾಕಾರಗೊಳ್ಳಬೇಕಾದರೆ ಅದಕ್ಕೆ ಸ್ವಚ್ಛತೆಯೇ ಅಡಿಗಲ್ಲು. ಆದ್ದರಿಂದ ಸ್ವಚ್ಛತೆಗೆ ನಾವೆಲ್ಲರೂ ಆದ್ಯತೆ ನೀಡಬೇಕಿದೆ. ಇಂತಹ ಕಾರ್ಯದಲ್ಲಿ ಸಾರ್ವಜನಿಕರಿಗೆ ಭಾಗಿಯಾಗಲು ಅವಕಾಶ ಕಲ್ಪಿಸಿಕೊಡುತ್ತಿರುವ ರಾಮಕೃಷ್ಣ ಮಿಷನ್ ಸೇವೆ ಅನ್ಯಾದೃಶವಾದುದು. ಈ ಕಾರ್ಯ ದೇವತಾ ಕಾರ್ಯಕ್ಕೆ ಸಮಾನವಾದುದು ಎಂದು ಭಾವಿಸಿದಾಗ ಈ ಶ್ರಮದಾನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ದೇರೆಬೈಲ್ನಲ್ಲಿ ಸಂದೇಶ ನೀಡಿದ ಫಾದರ್ ಆಸ್ಟೀನ್ ಪ್ಯಾರಿಸ್ ಸ್ವಚ್ಛತೆ ಎಂಬುದು ಪವಿತ್ರತೆಯ ಸಂಕೇತ. ಸ್ವಚ್ಛತೆ ಇರುವಲ್ಲಿ ದೇವರ ಸಾನಿಧ್ಯವಿರುತ್ತದೆ. ಪ್ರತಿಯೊಬ್ಬರು ಇದನ್ನರಿತು ವರ್ತಿಸಬೇಕು. ಯಾವುದೇ ಯೋಜನೆಯನ್ನು ಘೋಷಿಸುವುದು ಮತ್ತು ಆರಂಭಿಸುವುದು ಸುಲಭ. ಆದರೆ ಅದನ್ನು ನಿರಂತರವಾಗಿ ಅಭಿಯಾನದ ರೂಪದಲ್ಲಿ ಮುಂದುವರೆಸಿಕೊಂಡು ಬರುತ್ತಿರುವ ರಾಮಕೃಷ್ಣ ಮಿಷನ್ ಸೇವಾ ಚಟುವಟಿಕೆ ಶ್ಲಾಘನೀಯ. ಮನೆ ಮಟ್ಟದಲ್ಲಿಯೇ ಕಸ ನಿರ್ವಹಣೆಯಾಗಬೇಕು. ಹಸಿಕಸ ಒಣಕಸಗಳ ವಿಂಗಡಣೆ ಮತ್ತು ಸಾವಯವ ಗೊಬ್ಬರ ತಯಾರಿಕೆಯ ವಿಧಾನಗಳನ್ನು ಮನೆಗಳಲ್ಲಿ ಹೆಚ್ಚು ಜನರು ಅಳವಡಿಕೊಂಡಾಗ ಸ್ವಚ್ಛತಾ ಅಭಿಯಾನ ನೈಜ ಅರ್ಥದಲ್ಲಿ ಯಶಸ್ವಿಯಗುತ್ತದೆ ಎಂದು ತಿಳಿಸಿದರು.
ಶ್ರಮದಾನ: ಕಪಿತಾನಿಯೋ ಶಾಲೆಯ ಎದುರಿಗೆ ಚಾಲನೆ ನೀಡಿದ ಬಳಿಕ ಕಾರ್ಯಕರ್ತರು ಪಂಪವೆಲ್ನಿಂದ ಆರಂಭಿಸಿ ಒಟ್ಟು ಆರು ತ್ಯಾಜ್ಯ ಬೀಳುತ್ತಿದ್ದ ಸ್ಥಳಗಳನ್ನು ಗುರುತಿಸಿ ಆರು ತಂಡಗಳನ್ನು ರಚಿಸಿಕೊಂಡು ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಪಡೀಲ್ ಜಂಕ್ಷನ್, ಫಾರ್ಚುನ್ ಅಪಾರ್ಟಮೆಂಟ್ ಎದುರಿಗೆ, ನಾಗುರಿ ಅಮರ ಆಳ್ವ ಬಸ್ ತಂಗುದಾಣದ ಬದಿ, ಮರೋಳಿ ಸೂರ್ಯನಾರಾಯಣ ದೇವಸ್ಥಾನಕ್ಕೆ ಹೋಗುವ ರಸ್ತೆ, ಕಪಿತಾನಿಯೋ ಶಾಲೆಯ ಎದುರು ಹಾಗೂ ಪಂಪವೆಲ್ ವೃತ್ತದ ಬಳಿಯ ತ್ಯಾಜ್ಯ ಬೀಳುತ್ತಿದ್ದ ಆರು ಸ್ಥಳಗಳಲ್ಲಿನ ತ್ಯಾಜ್ಯ ತೆಗೆದು ಸ್ವಚ್ಛಗೊಳಿಸಲಾಯಿತು. ಬಳಿಕ ಅಲ್ಲಲ್ಲಿ ಅಲಂಕಾರಿಕ ಗಿಡಗಳನ್ನಿಟ್ಟು ಅಂದಗೊಳಿಸಲಾಯಿತು. ಪ್ರವೀಣ ಶೆಟ್ಟಿ, ಬಾಲಕೃಷ್ಣ ಭಟ್, ಉಮಾಕಾಂತ ಸುವರ್ಣ, ರಾಜಗೋಪಾಲ ಶೆಟ್ಟಿ, ಹಿಮ್ಮತ್ ಸಿಂಗ್, ಅವಿನಾಶ್ ಅಂಚನ್ ಹಾಗೂ ಹಲವು ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು. ಸಾಮಾಜಿಕ ಕಾರ್ಯಕರ್ತ ಸೌರಜ್ ನೇತೃತ್ವದಲ್ಲಿ ಕಂಕನಾಡಿ, ಕಪಿತಾನಿಯೋ, ಮರೋಳಿ, ಪಂಪವೆಲ್ ಇನ್ನಿತರ ಕಡೆಗಳಲ್ಲಿ ಹಾಕಲಾಗಿದ್ದ ಪ್ಲೆಕ್ಸ್-ಬ್ಯಾನರ್ಗಳನ್ನು ತೆಗೆದುಹಾಕಲಾಯಿತು.
ಸ್ವಚ್ಛತೆ: ದೇರೆಬೈಲ್ ಚರ್ಚ್ಹಾಲ್ ಬದಿಯ ಸ್ಥಳದಲ್ಲಿ ಹಾಕಲಾಗಿದ್ದ ತ್ಯಾಜ್ಯರಾಶಿಯನ್ನು ಮೊಹಬೂಬ್ ಖಾನ್ ಹಾಗೂ ಬ್ರಿಗೇಡ್ ಪಿನಾಕಲ್ ನಿವಾಸಿಗಳು ಹಸನು ಮಾಡಿದರೆ, ನಿಟ್ಟೆ ಫಿಸಿಯೋಥೆರಫಿ ಕಾಲೇಜಿನ ಸ್ವಚ್ಛತಾ ಸೇನಾನಿಗಳು ಕುಂಟಿಕಾನ ಪ್ಲೈಒವರ್ ಬಳಿಯ ಬಸ್ ತಂಗುದಾಣದ ಎದುರಿನ ಜಾಗೆಯನ್ನು ಶುಚಿಮಾಡಿದರು. ದೇರೆಬೈಲ್ ಚರ್ಚ್ ವ್ಯಾಪ್ತಿಯ ಕ್ರೈಸ್ತ ಬಾಂಧವರು ರಸ್ತೆ ವಿಭಾಜಕಗಳನ್ನು ಸ್ವಚ್ಛಗೊಳಿಸಿದರು. ನಾಲ್ಕನೇ ತಂಡ ಕೊಂಚಾಡಿಯಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡಿತು. ಬೆಸೆಂಟ್ ಸಂಧ್ಯಾ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಕೈಜೋಡಿಸಿದರು. ಹರೀಶ್ ಪ್ರಭು, ಮೋಹನ್ ಕೊಟ್ಟಾರಿ, ಕಿರಣ ಫರ್ನಾಂಡಿಸ್, ಶುಭೋದಯ ಆಳ್ವ ಇನ್ನಿತರ ಹಿರಿಯ ಸ್ವಯಂಸೇವಕರು ನೇತೃತ್ವವನ್ನು ವಹಿಸಿಕೊಂಡಿದ್ದರು. ಸುಧೀರ್ ನರೋಹ್ನ ಕಾರ್ಯಕ್ರಮವನ್ನು ಸಂಘಟಿಸಿದರು. ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಎಲ್ಲ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.